ಪರ್ಯಾಯದಲ್ಲಿ ಒಗ್ಗಟ್ಟು ಮಂತ್ರ ಜಪಿಸಿದ ಅಷ್ಟಮಠಾಧೀಶರು
ಉಡುಪಿ: ಪರ್ಯಾಯ ಕಾಣಿಯೂರು ಶ್ರೀಗಳ ನಾಜೂಕು ನಡೆಯಿಂದ ಈ ಬಾರಿ ಪರ್ಯಾಯೋತ್ಸವದಲ್ಲಿ ಅಷ್ಟ ಮಠಾಧೀಶರು ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಕಳೆದ ಪರ್ಯಾಯದಲ್ಲಿ ಸಾಗರೋಲ್ಲಂಘನ ಮಾಡಿ ವಿದೇಶಕ್ಕೆ ತೆರಳಿದ ಕಾರಣಕ್ಕೆ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ಸ್ವಾಮೀಜಿಗೆ ಪರ್ಯಾಯೋತ್ಸವಕ್ಕೆ ಸೋದೆ ಸ್ವಾಮೀಜಿ ಆಹ್ವಾನ ನಿರಾಕರಿಸಿದ್ದರು. ಇದರಿಂದ ಸಿಟ್ಟಿಗೆದ್ದ ಪುತ್ತಿಗೆ ಶ್ರೀಗಳು ವಿಶ್ವ ಮನುಜ ಮಠ ಸ್ಥಾಪಿಸಿ, ವಿಶ್ವ ಪರ್ಯಾಯ ನಡೆಸುವುದಾಗಿ ಗುಡುಗಿದ್ದರು. ಪೇಜಾವರ ಶ್ರೀಗಳ ಸಂಧಾನದಿಂದಲೂ ಭಿನ್ನಮತ ಶಮನವಾಗಿರಲಿಲ್ಲ.
ಈ ಬಾರಿ ಪುತ್ತಿಗೆ ಶ್ರೀಗಳಿಗೆ ಕಾಣಿಯೂರು ಸ್ವಾಮೀಜಿ ಪರ್ಯಾಯಕ್ಕೆ ಆಹ್ವಾನ ನೀಡಿದ್ದಾರೆ. ಹೀಗಾಗಿ ಭಿನ್ನಮತ ಹುಟ್ಟಿಲ್ಲ. ಆದರೆ, ವಿವಾದ ಆಗದಿರಲು ಪುತ್ತಿಗೆ ಶ್ರೀಗಳು ಮೆರವಣಿಗೆ ಮತ್ತು ದರ್ಬಾರ್ನಿಂದ ದೂರ ಇದ್ದಾರೆ. ಎಂದಿನಂತೆ ಅದಮಾರು ಸ್ವಾಮೀಜಿ ಪರ್ಯಾಯ ಮೆರವಣಿಗೆಯಲ್ಲಿ ಭಾಗವಹಿಸಿಲ್ಲ. ನಿಯಮದಂತೆ ಸೋದೆ ಸ್ವಾಮೀಜಿ ಮಠದಲ್ಲಿಯೇ ಇದ್ದು, ಸ್ವಾಮೀಜಿಗಳನ್ನು ಸ್ವಾಗತಿಸುವುದು ವಾಡಿಕೆ. ಪೇಜಾವರ ಶ್ರೀಗಳಿಗೆ ಮಾತ್ರ ಪಟ್ಟ ಶಿಷ್ಯರಿದ್ದಾರೆ. ಹೀಗಾಗಿ 5 ಮಠಗಳ ಆರು ಯತಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡರು. ಆದರೆ, ಜ.18ರಂದು ಸಂಜೆ ಪುತ್ತಿಗೆ ಶ್ರೀಗಳಿಗಾಗಿಯೇ ವಿಶೇಷ ಸನ್ಮಾನ ಸಮಾರಂಭ ಆಯೋಜಿಸಿದ್ದಾರೆ. ಈ ಮೂಲಕ ಪುತ್ತಿಗೆ ಶ್ರೀಗಳಿಗೂ ಗೌರವ ಸಲ್ಲಿಸುವ ಪ್ರಯತ್ನ ನಡೆದಿದೆ.
'ಕನ್ನಡಪ್ರಭ' ಜತೆ ಮಾತನಾಡಿದ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, 'ಕಳೆದ ಸೋದೆ ಪರ್ಯಾಯದಲ್ಲಿ ಪುತ್ತಿಗೆ ಮಠದ ದೇವರ ದರ್ಶನ ಪಡೆಯದೆ, ಆಹ್ವಾನ ನೀಡದೆ ಪೀಠಕ್ಕೆ ಅವಮಾನ ಮಾಡಿದ್ದರು. ಆ ಕಾರಣಕ್ಕೆ ಕಟು ನುಡಿಯಬೇಕಾಯಿತು. ಕಾಣಿಯೂರು ಸ್ವಾಮೀಜಿ ಪರ್ಯಾಯದ ಎಲ್ಲ ಕಾರ್ಯಕ್ರಮಗಳಿಗೂ ಆಹ್ವಾನ ನೀಡಿದ್ದಾರೆ. ಸಾರ್ವಜನಿಕ ಸಮಾರಂಭಕ್ಕೆ ವಿಶೇಷ ಅಹ್ವಾನ ನೀಡಿದ್ದಾರೆ. ಪರ್ಯಾಯ ಸಮಾರಂಭದಲ್ಲಿ ಸಂತೋಷದಿಂದ ಭಾಗವಹಿಸುತ್ತೇನೆ. ಪಲ್ಲಕ್ಕಿ ಮೆರವಣಿಗೆಯಲ್ಲಿ ಭಾಗವಹಿಸುವುದು, ಬಿಡುವುದು ನನ್ನ ಇಚ್ಛೆಗೆ ಬಿಟ್ಟದ್ದು' ಎಂದರು.
ವಿವಾದ ರಹಿತಕ್ಕೆ ಪೇಜಾವರ ಶ್ರೀ ಸಂತಸ: ಪೇಜಾವರಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಈ ಬಾರಿ ಪರ್ಯಾಯ ವಿವಾದ ರಹಿತವಾಗಿ ಒಗ್ಗಟ್ಟಲ್ಲಿ ನಡೆಯುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ. 800 ವರ್ಷಗಳಿಂದ ಅಷ್ಟಮಠಗಳಲ್ಲಿ ಪೂಜೆ, ಆಡಳಿತ ನಿರಂತರವಾಗಿ ಹಸ್ತಾಂತರವಾಗಿ ದಾಖಲೆ ನಿರ್ಮಿಸಿದೆ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಇದ್ದರೂ ಶಮನವಾಗಿದೆ. ಲಿಂಗಾಯತ ಮಠಗಳಲ್ಲಿ ಪಲ್ಲಕಿಯನ್ನು ಅಡ್ಡವಾಗಿ ಹೊರುತ್ತಾರೆ. ಆಗ ಎಲ್ಲರಿಗೂ ಮುಖದರ್ಶನವಾಗುತ್ತದೆ. ಅಷ್ಟಮಠ ಸಂಪ್ರದಾಯದಲ್ಲಿ ನೇರ ಪಲ್ಲಕಿ, ಇದರಲ್ಲಿ ಅಕ್ಕಪಕ್ಕದಲ್ಲಿದ್ದವರಿಗೆ ಮಾತ್ರ ದರ್ಶನವಾಗುತ್ತದೆ. ಪಲ್ಲಕಿಯನ್ನು ಹೊರುವುದು ಈ ಕಾಲದಲ್ಲಿ ಸರಿ ಅಲ್ಲ. ಇಂದಲ್ಲ ನಾಳೆ ನಿಷೇಧ ಆಗಲೇ ಬೇಕು ಅದಕ್ಕೆ ಮುಂಚಿತವಾಗಿಯೇ ರದ್ದು ಮಾಡಿದೆವು. ಪರ್ಯಾಯ ವಿವಾದ ಇಲ್ಲದೆ ಸುಗಮವಾಗಿ ನಡೆದು ಮಾದರಿಯಾಗಿದೆ ಎಂದರು.
ಶಿರೂರು ಶ್ರೀಗಳ ಪ್ರಕಾರ, 'ಪಲ್ಲಕ್ಕಿ ಹೊರುವುದು ಶೋಷಣೆ ಸಂಕೇತವಲ್ಲ. ಹಾಗೆ ಹೇಳಿದರೆ ಹಿಂದಿನ 224 ಯತಿಗಳೂ ಪಲ್ಲಕಿ ಏರಿ ಶೋಷಣೆ ಮಾಡಿದ್ದಾರೆ ಎಂದ ಹಾಗಾಗುತ್ತದೆ. ಪೇಜಾವರ ಶ್ರೀಗಳು ಪಲ್ಲಕಿ ಹೊರುವುದು ಬೇಡ ಎಂದು ಹೇಳಿದ್ದಾರೆ. ಅದಕ್ಕೆ ಸಹಮತ ಇದೆ. ಆದರೆ ನಾನು ಪಲ್ಲಕಿಯಲ್ಲಿ ಹೋಗದೆ ತೆರೆದ ಜೀಪಿನಲ್ಲಿ ತೆರಳಲು ನಿರ್ಧಾರ ಮಾಡಿದೆ' ಎಂದಿದ್ದಾರೆ.
ಪೇಜಾವರ ಶ್ರೀಗಳು ಏನು ಹೇಳುತ್ತಾರೋ ಹಾಗೆ ನಡೆಯುತ್ತೇವೆ. ಹೀಗಾಗಿ ಮೆರವಣಿಗೆ, ದರ್ಬಾರ್ನಲ್ಲಿ ಭಾಗವಹಿಸಲು ನಿರ್ಧರಿಸಿದೆವು ಎಂದು ಪಲಿಮಾರು ವಿದ್ಯಾಧೀಶ ಸ್ವಾಮೀಜಿ, ಕೃಷ್ಣಾಪುರ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಪೇಜಾವರ ಕಿರಿಯ ಪಟ್ಟ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ. ಮೆರವಣಿಗೆಯಲ್ಲಿ ಭಾಗವಹಿಸದೆ ಇರುವುದು ನನಗೆ ಸಂಬಂಧ ಪಟ್ಟ ವಿಚಾರ ಎಂದು ಅದಮಾರು ವಿಶ್ವಪ್ರಿಯತೀರ್ಥ ಸ್ವಾಮೀಜಿ ಹೇಳಿದ್ದಾರೆ.
'ಎಲ್ಲ ಮಠಾಧೀಶರಿಗೂ ಆಹ್ವಾನ ನೀಡಿದ್ದೇವೆ. ಪರ್ಯಾಯ ದರ್ಬಾರ್, ಮೆರವಣಿಗೆಗೆ ಖುಷಿಯಿಂದ ಬಂದಿದ್ದಾರೆ. ಕೆಲವು ಸ್ವಾಮೀಜಿಗೆ ಶನಿವಾರ ಸಂಜೆ ಬಹಿರಂಗ ಸಭೆಯಲ್ಲಿ ಗೌರವಿಸುತ್ತೇವೆ. ಯಾರನ್ನೂ ನೋಯಿಸುವ ಉದ್ದೇಶ ಇಲ್ಲ, ವಿವಾದ ರಹಿತ ಪರ್ಯಾಯೋತ್ಸವ ಆಗಿದೆ' ಎಂದು ಕಾಣಿಯೂರು ಪರ್ಯಾಯ ಪೀಠದ ವಿದ್ಯಾವಲ್ಲಭ ಶ್ರೀಗಳು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
- ಜಿತೇಂದ್ರ ಕುಂದೇಶ್ವರ