ಲೋಕ ಕಾಳಗದ ಕಿಚ್ಚು ಹಚ್ಚಿದ ರಾಹುಲ್, ಮೋದಿ ವಿರುದ್ಧ ವಾಗ್ದಾಳಿ, ಸುಧಾರಣಾವಾದಕ್ಕೆ ಜೈ ಎಂದ ಕಾಂಗ್ರೆಸ್ ಉಪಾಧ್ಯಕ್ಷ
ಸಾರ್ವತ್ರಿಕ ಚುನಾವಣಾ ಮಹಾಸಮರಕ್ಕೆ ರಣ ಕಹಳೆ ಮೊಳಗಿಸಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರತಿಪಕ್ಷ ಬಿಜೆಪಿ ಹಾಗೂ...
ಕನ್ನಡಪ್ರಭ ವಾರ್ತೆ, ನವದೆಹಲಿ, ಜ.17-
ಸಾರ್ವತ್ರಿಕ ಚುನಾವಣಾ ಮಹಾಸಮರಕ್ಕೆ ರಣ ಕಹಳೆ ಮೊಳಗಿಸಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರತಿಪಕ್ಷ ಬಿಜೆಪಿ ಹಾಗೂ ಆ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಪಕ್ಷ ಯಾವ ದಾರಿಯಲ್ಲಿ ಸಾಗುತ್ತದೆಂಬುದರ ಮುನ್ಸೂಚನೆಯನ್ನೂ ಚುನಾವಣಾ ಪ್ರಚಾರದ ನೇತೃತ್ವ ವಹಿಸಲಿರುವ ರಾಹುಲ್ ನೀಡಿದ್ದಾರೆ. ತಮ್ಮನ್ನು ಪ್ರಧಾನಿ ಅಭ್ಯರ್ಥಿ ಆಗಿ ಏಕೆ ಆಯ್ಕೆ ಮಾಡಿಲ್ಲ ಎಂಬುದಕ್ಕೂ ಅವರು ಸಮರ್ಥ ಸಮಜಾಯಿಷಿ ನೀಡಿದರು.
ಮುಂಬರುವ ದಿನಗಳಲ್ಲಿ ಪಕ್ಷದಲ್ಲಿ ಮತ್ತಷ್ಟು ಸುಧಾರಣೆ ತರುವುದಾಗಿಯೂ ಘೋಷಿಸಿದ ರಾಹುಲ್, ಮಹಿಳೆಯರ ಪ್ರಾತಿನಿಧ್ಯ ಹೆಚ್ಚಿಸುವ ಹಾಗೂ ಅಭ್ಯರ್ಥಿ ಆಯ್ಕೆಯಲ್ಲಿ ಕಾರ್ಯಕರ್ತರ ನೇರ ಆಯ್ಕೆಗೆ ಅವಕಾಶ ನೀಡುವ ಪ್ರಯೋಗ ಮಾಡುವುದಾಗಿಯೂ ತಿಳಿಸಿದರು.
'ಪ್ರತಿಪಕ್ಷದವರಿಗೆ ತಮ್ಮನ್ನು ತಾವು ಹೇಗೆ ಮಾರುಕಟ್ಟೆ ಮಾಡಿಕೊಳ್ಳಬೇಕೆಂಬುದು ಗೊತ್ತಿದೆ, ಅದಕ್ಕಾಗಿ ಅವರು, ಹಾಡುತ್ತಾರೆ. ಕುಣಿಯುತ್ತಾರೆ. ಏನು ಬೇಕಾದರೂ ಮಾಡುತ್ತಾರೆ' ಎಂದು ಲೇವಡಿ ಮಾಡಿದ್ದಾರೆ.
ಪದೇ ಪದೇ ಸಂಸತ್ ಕಲಾಪಕ್ಕೆ ಅಡ್ಡಿ ಮಾಡುವ ಮೂಲಕ ಪ್ರತಿಪಕ್ಷಗಳು ಪ್ರಮುಖ ಮಸೂದೆಗಳ ಅಂಗೀಕಾರಕ್ಕಾಗಿ ಅಡ್ಡಿಪಡಿಸುತ್ತಿವೆ. ಕಾಂಗ್ರೆಸ್ನ ಇಚ್ಛಾಶಕ್ತಿಯಿಂದಾಗಿ ಲೋಕಪಾಲ್ ಮಸೂದೆ ಅಂಗೀಕಾರವಾಗಿದೆ. ಇನ್ನೂ ಆರು ಪ್ರಮುಖ ಮಸೂದೆಗಳು ಅಂಗೀಕಾರವಾಗಬೇಕಿದೆ. ಪ್ರತಿಪಕ್ಷಗಳ ಅಸಹಕಾರದಿಂದಾಗಿ ಸಾಧ್ಯವಾಗಿಲ್ಲ ಎಂದು ದೂರಿದ ರಾಹುಲ್, ಬರುವ ಅಧಿವೇಶನದಲ್ಲಿ ಅವುಗಳ ಅಂಗೀಕಾರ ಪಡೆಯುವಂತೆ ಪ್ರಧಾನಿಗಳಿಗೆ ಮನವಿ ಮಾಡಿದರು.
ಪ್ರಜಾಪ್ರಭುತ್ವ ಎಂದರೆ ಒಬ್ಬ ವ್ಯಕ್ತಿಯಿಂದ ಆಳಲ್ಪಡುವುದಲ್ಲ. ಇಡೀ ದೇಶದಿಂದ ಆಳಲ್ಪಡುವುದು.
ನಮ್ಮದು ಪ್ರಜಾಪ್ರಭುತ್ವವಾದಿ ಪಕ್ಷ. ಸರ್ವಾಧಿಕಾರಿ ಪಕ್ಷವಲ್ಲ ಎಂದು ಮೋದಿ ಅವರನ್ನು ಕಟಕಿದರು. ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹ ಉದ್ದೀಪಿಸುವಂತ ದಿಟ್ಟ ಭಾಷಣ ಮಾಡಿದ ರಾಹುಲ್, 'ಈ ಯುದ್ದವನ್ನು(ಚುನಾವಣೆ) ಎಲ್ಲರೂ ಧೀರ ಸೈನಿಕರಾಗಿ ಹೋರಾಡೋಣ. ನಾವು ಹಿಂತಿರುಗಿ ನೋಡುವುದು ಬೇಡ. ನಾವು ಯಾರು ಮತ್ತು ಯಾವುದಕ್ಕಾಗಿ ಹೋರಾಟ ಮಾಡುತ್ತಿದ್ದೇವೆ ಎಂಬುದು ನಮಗೆ ಗೊತ್ತಿದೆ. ನಮ್ಮ ಗುರಿ ಅಧಿಕಾರ ಅಲ್ಲ. ಈ ದೇಶದ ಜನರ ಉದ್ಧಾರ' ಎಂದರು. ಸುದೀರ್ಘ ಭಾಷಣವನ್ನೇನೂ ಮಾಡದ ರಾಹುಲ್, ಚಿಕ್ಕದಾಗಿ, ಚೊಕ್ಕದಾಗಿ, ಕೆಲ ಕ್ಷಣ ಆವೇಶದಿಂದ, ಕೆಲ ಕ್ಷಣ ಶಾಂತಚಿತ್ತರಾಗಿ ತಮ್ಮ ಚಿಂತನೆಗಳನ್ನು ಹಂಚಿಕೊಂಡರು. ಅವರ ಭಾಷಣದುದ್ದಕ್ಕೂ ಕಾಂಗ್ರೆಸ್ ಕಾರ್ಯಕರ್ತರ ಚಪ್ಪಾಳೆಗಳ ಸುರಿಮಳೆಯಾಗುತ್ತಲೇ ಇತ್ತು. ನಾವು ಕೋಮುದಳ್ಳುರಿ ಹಚ್ಚಿ ಪ್ರತಿಕ್ರಿಯಿಸುವುದಿಲ್ಲ. ಪ್ರೀತಿ, ವಿಶ್ವಾಸ, ಸಮಾನತೆ, ಏಕತಾಭಾವ ನಮ್ಮ ಪಕ್ಷದ ಚಿಂತನೆ. ಅಶೋಕ, ಅಕ್ಬರ್, ಗುರುನಾನಕ್ ಸೇರಿದಂತೆ ಮಹಾನ್ ಮಾನವತಾವಾದಿಗಳೆಲ್ಲರದ್ದೂ ಇದೇ ಚಿಂತನೆಯಾಗಿತ್ತು. ನಮ್ಮ ಪಕ್ಷದ ಚಿಂತನೆ ಅಳಿಸಲು ಯತ್ನಿಸಿದವರೆಲ್ಲ ಅವರಾಗೇ ಅಳಿದುಹೋಗಿದ್ದಾರೆ ಎಂದರು.
ಬಿಜೆಪಿಯವರು ಎಂಥ ಕಿಲಾಡಿಗಳೆಂದರೆ, ಬೋಳುತಲೆಯವರಿಗೆ ಬಾಚಣಿಕೆ ಮಾರುತ್ತಿದ್ದರು. ಈಗ ಆಮ್ ಆದ್ಮಿ ಪಕ್ಷದವರು ಬೋಳು ತಲೆಯವರಿಗೆ ಕೂದಲು ಕಟ್ ಮಾಡಲು ಹೊರಟಿದ್ದಾರೆ.
- ರಾಹುಲ್ ಗಾಂಧಿ
ಕಾಂಗ್ರೆಸ್ ಉಪಾಧ್ಯಕ್ಷ
ರಾಹುಲ್ ಹೇಳಿದ್ರು, ಮೊಯ್ಲಿ ಕೇಳಿದ್ರು
ಅಧಿವೇಶನದಲ್ಲಿ ರಾಹುಲ್ ಮಾತನಾಡುವ ಸಂದರ್ಭದಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರತ್ತ ನೋಡಿ 'ಪ್ರಧಾನಿಗಳೇ ಈಗ ನೀವು ಸಬ್ಸಿಡಿ ಸಹಿತ 9 ಅಡುಗೆ ಅನಿಲ ಸಿಲಿಂಡರ್ ಕೊಡುತ್ತಿದ್ದೀರಿ. ಆದರೆ ನಮಗೆ 12 ಸಿಲಿಂಡರ್ ಬೇಕು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ' ಎಂದರು. ಕಾಂಗ್ರೆಸ್ ಉಪಾಧ್ಯಕ್ಷ ತನ್ನ ಮಾತು ಪೂರ್ಣಗೊಳಿಸುತ್ತಿರುವಂತೆಯೇ ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿ 'ಹೌದು. ಅಡುಗೆ ಅನಿಲ ಸಿಲಿಂಡರ್ ಮಿತಿಯನ್ನು ಹೆಚ್ಚಿಸಲಿದ್ದೇವೆ. ಹಾಲಿ 9 ರಿಂದ 12ಕ್ಕೆ ಹೆಚ್ಚಿಸಲಿದ್ದೇವೆ' ಎಂದು ಘೋಷಿಸಿಯೇ ಬಿಟ್ಟರು. ಈ ಬಗ್ಗೆ ಶೀಘ್ರದಲ್ಲೇ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ಬೇಕೇ ಬೇಕು...ರಾಹುಲ್ ಬೇಕೇ ಬೇಕು
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಪ್ರಕಟಿಸದೇ ಇದ್ದದ್ದು ಕಾಂಗ್ರೆಸ್ ಕಾರ್ಯಕರ್ತರಲ್ಲಿ, ಮುಖಂಡರಲ್ಲಿ ನಿರಾಶೆ ತಂದಿತ್ತು. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮಾತನಾಡುವ ವೇಳೆ ಹಲವಾರು ಮಂದಿ 'ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಲೇಬೇಕು'. 'ರಾಹುಲ್ಗೆ ಜಯವಾಗಲಿ' ಎಂದು ಕೂಗು ಹಾಕುತ್ತಿದ್ದರು. ಆದರೆ ಸೋನಿಯಾ ಮಾತ್ರ ಕಾಂಗ್ರೆಸ್ ವರ್ಕಿಂಗ್ ಕಮಿಟಿಯಲ್ಲಿ ನಿರ್ಧಾರವಾದದ್ದು ಅಂತಿಮ. ಯಾವುದೇ ಬದಲಿಲ್ಲ ಎಂದರು. ಕಡೆಗೆ ರಾಹುಲ್ ಅವರೇ ಸಮಾಧಾನ ಮಾಡಿದರು.
ಯಾವುದೇ ಕಾರಣಕ್ಕೂ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಲಾರರು. ಒಂದು ವೇಳೆ ಅವರು ಇಲ್ಲಿ ಚಹಾ ಮಾರಲು ಇಚ್ಛಿಸುವುದಿದ್ದರೆ ನಾವು ಅದಕ್ಕೆ ಅವಕಾಶ ಮಾಡಿಕೊಡುತ್ತೇವೆ.
- ಮಣಿಶಂಕರ ಅಯ್ಯರ್, ಕಾಂಗ್ರೆಸ್ ನಾಯಕ
ಒಂದು ರುಪಾಯಿಯಲ್ಲಿ ಕೇವಲ 15 ಪೈಸೆ ಬಡವರಿಗೆ ತಲುಪುತ್ತಿತ್ತು ಎಂಬ ರಾಜೀವ್ ಗಾಂಧಿ ಅವರನ್ನು ರಾಹುಲ್ ನೆನಪಿಸಿಕೊಂಡರು. ಆದರೆ 10 ವರ್ಷದ ಹಗರಣಗಳು ನೆನಪಿಗೆ ಬರಲಿಲ್ಲವೇ?
- ರಾಜೀವ್ ಚಂದ್ರಶೇಖರ್, ರಾಜ್ಯಸಭಾ ಸದಸ್ಯರು
- ರೇಣುಕಾಪ್ರಸಾದ್ ಹಾಡ್ಯ