ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕಾಲ್ತುಳಿತಕ್ಕೆ 18 ಸಾವು

ವಾಣಿಜ್ಯ ನಗರಿಯಲ್ಲಿ ಕಾಲ್ತುಳಿತ ಸಂಭವಿಸಿ 18 ಮಂದಿ ಅಸುನೀಗಿ, 40 ಮಂದಿ ಗಾಯಗೊಂಡ ಘಟನೆ ಶನಿವಾರ ನಡೆದಿದೆ. ಶುಕ್ರವಾರ ಕೊನೆಯುಸಿರೆಳೆದ ದಾವೂದಿ ಬೊಹ್ರಾ ಸಮುದಾಯದ...

Vishwanath S
Updated On : 19 Jan 2014, 1:35 am

ಮುಂಬೈ/ನವದೆಹಲಿ:  ವಾಣಿಜ್ಯ ನಗರಿಯಲ್ಲಿ ಕಾಲ್ತುಳಿತ ಸಂಭವಿಸಿ 18 ಮಂದಿ ಅಸುನೀಗಿ, 40 ಮಂದಿ ಗಾಯಗೊಂಡ ಘಟನೆ ಶನಿವಾರ ನಡೆದಿದೆ. ಶುಕ್ರವಾರ ಕೊನೆಯುಸಿರೆಳೆದ ದಾವೂದಿ ಬೊಹ್ರಾ ಸಮುದಾಯದ ಧಾರ್ಮಿಕ ನಾಯಕ ಸಯ್ಯದ್ನ ಮೊಹಮ್ಮದ್ ಬರ್ಹಾನುದ್ದೀನ್ (102) ಅವರಿಗೆ ಅಂತಿಮ ನಮನ ಸಲ್ಲಿಸುವ ವೇಳೆ ಈ ದುರಂತ ನಡೆದಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಅಧಿಕೃತ ನಿವಾಸದ ಸಮೀಪವೇ ಈ ಸಾವುನೋವು ಸಂಭವಿಸಿದ್ದು ಗಮನಾರ್ಹ.
ಮುಂಬೈನ ಮಲಬಾರ್ ಹಿಲ್ಸ್ ಪ್ರದೇಶದಲ್ಲಿ ಶನಿವಾರ ಬೆಳಗಿನ ಜಾವ ಈ ದುರಂತ ನಡೆದಿದೆ. ಸಾವಿರಾರು ಮಂದಿ ಬರ್ಹಾನುದ್ದೀನ್ ಅವರಿಗೆ ಅಂತಿಮ ನಮನ ಸಲ್ಲಿಸಲು ಆಗಮಿಸಿದ್ದ ಹಿನ್ನೆಲೆಯಲ್ಲಿ ನೂಕುನುಗ್ಗಲು ಉಂಟಾಯಿತು. ಇದರಿಂದಾಗಿ ಜನರ ನಡುವೆ ಉಸಿರುಕಟ್ಟುವ ವಾತಾವರಣ ಉಂಟಾಯಿತು. ಇದರಿಂದಾಗಿಯೇ ಹೆಚ್ಚಿನ ಮಂದಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಖಂಡರೇ ಕಾರಣ: ಅಗಲಿದ ನಾಯಕನ ಅಂತಿಮ ದರ್ಶನಕ್ಕೆ ಸಾವಿರಾರು ಮಂದಿ ಆಗಮಿಸುವ ನಿರೀಕ್ಷೆ ಇದ್ದರೂ ದಾವೂದಿ ಬೊಹ್ರಾ ಸಮುದಾಯದ ಮುಖಂಡರು ಸೂಕ್ತ ವ್ಯವಸ್ಥೆ ಕಲ್ಪಿಸಲಿಲ್ಲ. ಈ ಅವ್ಯವಸ್ಥೆಯೇ ದುರಂತಕ್ಕೆ ಕಾರಣ ಎಂದು ಮುಂಬೈ ಪೊಲೀಸ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿಯೂ ಈ ಅಂಶವನ್ನು ಉಲ್ಲೇಖಿಸಲಾಗಿದೆ. ಪೊಲೀಸರ ಜತೆ ಚರ್ಚಿಸದೆ  ಸಮುದಾಯದ ಮುಖಂಡರು ನಾಯಕನ ನಿಧನದ ಬಗ್ಗೆ ಮಾಹಿತಿ ನೀಡಿದ್ದರು ಎಂದು ಅವರು  ತಿಳಿಸಿದ್ದಾರೆ.
ಕಿರಿದಾದ ಓಣಿ: ಮಲಬಾರ್ ಹಿಲ್ಸ್‌ನ ಓಣಿಗಳು ಕಿರಿದಾಗಿವೆ. ಅಲ್ಲಿಗೆ ಶುಕ್ರವಾರ ರಾತ್ರಿ 9ರಿಂದ ಸಾವಿರಾರು ಮಂದಿ ಅಂತಿಮ ದರ್ಶನಕ್ಕೆ ಆಗಮಿಸುತ್ತಿದ್ದರು. ರಾತ್ರಿಯಾಗುತ್ತಿದ್ದಂತೆ ಅವರ ಸಂಖ್ಯೆ ಹೆಚ್ಚಾಯಿತು. ಇದರಿಂದಾಗಿ  ಬರ್ಹಾನುದ್ದೀನ್ ನಿವಾಸದ ಗೇಟ್ ಮುಚ್ಚಬೇಕಾಯಿತು ಎಂದು ಮೂಲಗಳು ತಿಳಿಸಿವೆ.
ಹೀಗಾಗಿ, ಜನಜಂಗುಳಿ ಸೇರಿ, ಕಾಲ್ತುಳಿತ ಉಂಟಾಯಿತು ಎಂದು ಹೇಳಲಾಗಿದೆ. ದುರಂತ ನಡೆದರೂ ಅಗಲಿದ ಧಾರ್ಮಿಕ ನಾಯಕನ ಅಂತ್ಯಸಂಸ್ಕಾರ ನೆರವೇರಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement