ಸುನಂದಾ ತರೂರ್ದು ಅಸಹಜ, ಹಠಾತ್ ಸಾವು ದೇಹದಲ್ಲಿ ಗಾಯ ಪತ್ತೆ
ಸುನಂದಾ ಪುಷ್ಕರ್ ಸಾವಿಗೆ ಕಾರಣವೇನು? ಉತ್ತರ ಇನ್ನೂ ಸಿಕ್ಕಿಲ್ಲ. ಆದರೆ, ಮರಣೋತ್ತರ ಪರೀಕ್ಷೆ ನಡೆಸಿದ ಅಖಿಲ ಭಾರತ ವೈದ್ಯಕೀಯ...
ನವದೆಹಲಿ/ ತಿರುವನಂತಪುರ/ಇಸ್ಲಾಮಾಬಾದ್: ಸುನಂದಾ ಪುಷ್ಕರ್ ಸಾವಿಗೆ ಕಾರಣವೇನು? ಉತ್ತರ ಇನ್ನೂ ಸಿಕ್ಕಿಲ್ಲ. ಆದರೆ, ಮರಣೋತ್ತರ ಪರೀಕ್ಷೆ ನಡೆಸಿದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ವೈದ್ಯರು 'ಹಠಾತ್, ಅಸ್ವಾಭಾವಿಕ ಸಾವು' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುನಂದಾ ದೇಹದಲ್ಲಿ ಗಾಯದ ಗುರುತುಗಳಿವೆ. ಸದ್ಯದ ಪರಿಸ್ಥಿತಿಯಲ್ಲಿ ಅದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗದು ಎಂದು ತಿಳಿಸಿದ್ದಾರೆ.
ಮುಖದಲ್ಲಿವೆ ಗಾಯಗಳು...: ಮೂಲಗಳ ಪ್ರಕಾರ ಕೇಂದ್ರ ಸಚಿವರ ಪತ್ನಿಯ ಮುಖ ಮತ್ತು ಕೈಯಲ್ಲಿ ಗಾಯದ ಗುರುತುಗಳು ಪತ್ತೆಯಾಗಿವೆ. ಆದರೆ ಇದರಿಂದಲೇ ಸುನಂದಾ ಅವರ ಸಾವು ಸಂಭವಿಸಿದೆ ಎಂದು ಸಾಧಿಸಲು ಸಾಧ್ಯವಿಲ್ಲ ಎಂಬುದು ಹೆಸರು ಹೇಳಲು ಬಯಸದ ವೈದ್ಯರ ಹೇಳಿಕೆ. ಅವರು ಶುಕ್ರವಾರ ಮಧ್ಯಾಹ್ನ 1 ರಿಂದ ರಾತ್ರಿ 7ರ ಅವಧಿಯಲ್ಲಿ ಅಸುನೀಗಿರಬಹುದೆಂದು ವೈದ್ಯರ ತಂಡ ಊಹಿಸಿದೆ.
ವಿಷ ಪ್ರಾಶನ ಸಾಧ್ಯತೆ: ಸುನಂದಾ ಪುಷ್ಕರ್ ಸಾವಿಗೆ ವಿಷ ಪ್ರಾಶನ ಕಾರಣವಾಗಿರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಏಮ್ಸ್ನ ವಿಧಿ ವಿಜ್ಞಾನ ವಿಭಾಗದ ಡಾ.ಆದರ್ಶ ಕುಮಾರ್ ಅವರು 'ಘಟನೆಗೆ ಅದೂ ಕೂಡ ಕಾರಣವಿರಬಹುದು' ಎಂದು ಹೇಳಿದ್ದಾರೆ.
ಹೀಗಾಗಿ, ಸುನಂದಾ ಪುಷ್ಕರ್ ಸಾವಿನ ಪ್ರಕರಣ ಮತ್ತಷ್ಟು ನಿಗೂಢವಾಗುವಂತೆ ಮಾಡಿದೆ. ಇದೇ ವೇಳೆ ಏಮ್ಸ್ನ ಹಿರಿಯ ವೈದ್ಯರ ತಂಡವೊಂದು ಸುನಂದಾ ಅವರ ಹೃದಯ, ಪಿತ್ತಕೋಶ, ಕೂದಲು ಮತ್ತು ಚರ್ಮದ ಮಾದರಿಯನ್ನು ಹೆಚ್ಚಿನ ಪರೀಕ್ಷೆಗಾಗಿ ಪಡೆದುಕೊಂಡಿದೆ.
ಕರುಳಿನ ಕ್ಷಯ, ಅಂಗಾಂಶ ಕಾಯಿಲೆ?ಸುನಂದಾ ಪುಷ್ಕರ್ ಅವರು ಕರುಳಿನ ಕ್ಷಯ ಮತ್ತು ಅಂಗಾಂಶ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ. ಇತ್ತೀಚೆಗಷ್ಟೇ ಸುನಂದಾ ಅವರು ಫ್ರಾನ್ಸ್ನಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದರು ಎಂದು ಹೇಳಲಾಗಿದೆ. ಆದರೆ ಈ ವಾದ ಅಲ್ಲಗಳೆದಿರುವ ತಿರುವನಂತಪುರದಲ್ಲಿರುವ ಕೇರಳ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕೆಐಎಂಎಸ್)ಯ ಹಿರಿಯ ವೈದ್ಯ ಡಾ.ಜಿ.ವಿಜಯರಾಘವನ್, ವಾರದ ಹಿಂದಷ್ಟೇ ಅವರು ಸಂಪೂರ್ಣ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದರು. ಕೆಲವೊಂದು ಸಣ್ಣ ಪುಟ್ಟ ಔಷಧಿಗಳನ್ನು ಅವರಿಗೆ ತೆಗೆದುಕೊಳ್ಳಲು ಸೂಚಿಸಲಾಗಿತ್ತು. ಗಂಭೀರ ಆರೋಗ್ಯ ಸಮಸ್ಯೆ ಕಂಡುಬಂದಿರಲಿಲ್ಲ' ಎಂದು ಅವರು ಹೇಳಿದ್ದಾರೆ. ಆದರೆ ಏಮ್ಸ್ ವೈದ್ಯಾಧಿಕಾರಿಗಳು ಸುನಂದಾಗೆ ಕರುಳಿನ ಕ್ಷಯ ಮತ್ತು ಅಂಗಾಂಶ ಕಾಯಿಲೆ ಇರುವುದನ್ನು ಖಚಿತಪಡಿಸಿದ್ದು, ಈ ಹಿನ್ನೆಲೆಯಲ್ಲಿ ವರದಿ ಕೇಳಿದ್ದಾಗಿ ತಿಳಿಸಿದ್ದಾರೆ.
2-3 ದಿನ ಬೇಕು: ಸಂಪೂರ್ಣ ಮರಣೋತ್ತರ ಪರೀಕ್ಷೆ ವರದಿ ಪೂರ್ಣಗೊಳ್ಳಲು 2-3 ದಿನ ಬೇಕಾಗುತ್ತದೆ ಎಂದು ವೈದ್ಯರ ತಂಡ ತಿಳಿಸಿದೆ.
ಏಮ್ಸ್ಗೆ ದಾಖಲಾಗಿದ್ದ ತರೂರ್: ಕೇಂದ್ರ ಸಚಿವ ತರೂರ್ ಅವರನ್ನೂ ಏಮ್ಸ್ಗೆ ದಾಖಲಿಸಲಾಗಿತ್ತು. ಅವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಐಸಿಯುಗೆ ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ ಅವರಿಗೆ ಹಲವು ಪರೀಕ್ಷೆಗಳನ್ನು ನಡೆಸಲಾಯಿತು. ಶನಿವಾರ ಮಧ್ಯಾಹ್ನದ ನಂತರ ಅವರನ್ನು ಡಿಸ್ಚಾರ್ಜ್ ಮಾಡಲಾಯಿತು.
ಪುತ್ರನಿಂದ ಅಂತ್ಯ ಸಂಸ್ಕಾರ
ಸುನಂದಾ ಅವರ ಪುತ್ರ ಶಿವ ಮೆನನ್ ಅಂತ್ಯ ಸಂಸ್ಕಾರ ನೆರವೇರಿಸಿದರು. ಈ ಸಂದರ್ಭದಲ್ಲಿ ಸಚಿವ ತರೂರ್, ಸುನಂದಾ ಪುಷ್ಕರ್ ಅವರ ಕುಟುಂಬ ವರ್ಗದ ಸದಸ್ಯರು ಹಾಜರಿದ್ದರು. ನವದೆಹಲಿಯ ಲೋಧಿ ರಸ್ತೆಯ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಯಿತು.
ಇ-ಮೇಲ್ ಕೊಟ್ಟ ಕುತೂಹಲ
ಮೆಹರ್ ತರಾರ್ ಮತ್ತು ಶಶಿ ತರೂರ್ ನಡುವಿನ ಇ-ಮೇಲ್ ಬಹಿರಂಗವಾಗಿದೆ. ಅದರಲ್ಲಿ ತರಾರ್-ತರೂರ್ ನಡುವಿನ ಟ್ವೀಟ್ಗಳ ಬಳಿಕ ಸುನಂದಾ ಪುಷ್ಕರ್ ಕೋಪೋದ್ರಿಕ್ತರಾಗಿದ್ದ ಬಗ್ಗೆ ಹೆಚ್ಚಿನ ಪುಷ್ಟಿ ನೀಡಿದೆ. ಮೆಹರ್ ತರಾರ್ ಶಶಿ ತರೂರ್ಗೆ ಬರೆದ ಇ-ಮೇಲ್ನಲ್ಲಿ ತಮಗೆ ನೈತಿಕ ಬೆಂಬಲ ನೀಡಿದ್ದ ತರೂರ್ಗೆ ಧನ್ಯವಾದ ಸಮರ್ಪಿಸಿದ್ದಾರೆ. ತರೂರ್ರಿಂದಾಗಿ ತಮ್ಮ ಜೀವನದಲ್ಲಿ ಆಗಿದ್ದ ಧನಾತ್ಮಕ ಬದಲಾವಣೆಗೆ ಕೃತಜ್ಞರಾಗಿರುವುದಾಗಿ ತಿಳಿಸಿದ್ದರು. ಒಬ್ಬ ಪುರುಷ ಮತ್ತು ಮಹಿಳೆಯ ನಡುವಿನ ಸಂಬಂಧ ಬಗ್ಗೆ ಯಾವತ್ತೂ ತಪ್ಪಾಗಿಯೇ ತಿಳಿಯಲಾಗುತ್ತದೆ ಎಂದು ಬರೆಯುವ ಮೂಲಕ ಸುನಂದಾ ಅವರ ಕೋಪಕ್ಕೆ ತುತ್ತಾಗಿದ್ದುದನ್ನು ತರಾರ್ ಒಪ್ಪಿಕೊಂಡಿದ್ದರು.
ಡ್ರಗ್ ಓವರ್ಡೋಸ್?
ಮತ್ತೊಂದು ಮೂಲಗಳ ಪ್ರಕಾರ ಸುನಂದಾ ಸಾವಿಗೆ ಡ್ರಗ್ ಓವರ್ಡೋಸ್ ಕಾರಣ ಎಂದು ಹೇಳಲಾಗುತ್ತಿದೆ. ಮೆಹರ್ ಪ್ರಕರಣ ಬಹಿರಂಗವಾಗುವುದಕ್ಕೆ ಮುನ್ನ ತಿರುವನಂತಪುರದಿಂದ ನವದೆಹಲಿಗೆ ಪ್ರಯಾಣಿಸುತ್ತಿದ್ದ ವೇಳೆ ವಿಮಾನದಲ್ಲಿ ತರೂರ್ ಮತ್ತು ಸುನಂದಾ ನಡುವೆ ವಾಕ್ಸಮರ ನಡೆದಿತ್ತು ಎಂದೂ ಹೇಳಲಾಗಿದೆ.