ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಉಗ್ರ ರಿಯಾಜ್ ಸಂಪರ್ಕದಲ್ಲಿದ್ದ ಇಬ್ಬರು ಪೊಲೀಸರು!

Vishwanath S
Updated On : 20 Jan 2014, 12:43 pm

ಶಿವಮೊಗ್ಗ: ಕಳೆದ ವಾರ ಸ್ಫೋಟಕ ವಸ್ತುಗಳಿದ್ದ ಬ್ಯಾಗ್‌ಗಳು ಪತ್ತೆಯಾದ ಪ್ರಕರಣದ ನಂತರ ಪೊಲೀಸ್ ಇಲಾಖೆಯ ಮೂಲಗಳಿಂದ ಬೆಚ್ಚಿಬೀಳಿಸುವ ಅನುಮಾನಾಸ್ಪದ ಮಾಹಿತಿಗಳು ಹೊರ ಬರುತ್ತಿವೆ.
ಜಿಲ್ಲೆಯ ಇಬ್ಬರು ಪೊಲೀಸ್ ಸಿಬ್ಬಂದಿ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ನಾಯಕ ರಿಯಾಜ್ ಭಟ್ಕಳ್‌ನೊಂದಿಗೆ ಸಂಪರ್ಕ ಹೊಂದಿದ್ದರು ಎಂಬ ಮಾತು ಪೊಲೀಸ್ ವಲಯದಲ್ಲೇ ಹರಿದಾಡಲಾರಂಭಿಸಿದೆ. ಒಂದೇ ಕೋಮಿಗೆ ಸೇರಿದ ಇಬ್ಬರ ಪೈಕಿ ಒಬ್ಬಾತ ಸದ್ಯ ಸೇವೆಯಿಂದ ಅಮಾನತುಗೊಂಡಿದ್ದು, ಮತ್ತೊಬ್ಬ ಜಿಲ್ಲಾ ವಿಶೇಷ ಪೊಲೀಸ್ ತಂಡದಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ರಿಯಾಜ್ ಭಟ್ಕಳ್ ಮತ್ತು ಆತನ ತಂಡಕ್ಕೆ ಇವರಿಬ್ಬರು ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆ. ಅವರ ತಂಡಕ್ಕೆ ಸಾಕಷ್ಟು ಸಹಕಾರ ನೀಡುತ್ತಾ ಬಂದಿದ್ದಾರೆ ಎಂಬ ಗಂಭೀರ ಅನುಮಾನವಿದೆ ಎಂದು ಪೊಲೀಸ್ ಸಿಬ್ಬಂದಿಯೇ 'ಕನ್ನಡಪ್ರಭ'ಕ್ಕೆ ಖಚಿತಪಡಿಸಿದ್ದಾರೆ.
ನಾವು ಇಲಾಖೆಯೊಳಗಿದ್ದು ಏನು ಹೇಳಲು ಸಾಧ್ಯವಿಲ್ಲ. ನಮ್ಮ ಬಾಯಿ ಕಟ್ಟಿಹೋಗಿದೆ. ಇದು ದೇಶದ ಪ್ರಶ್ನೆ. ಹೀಗಾಗಿ ತನಿಖೆ ನಡೆಸಿದರಷ್ಟೇ ಸತ್ಯ ಹೊರಬರುತ್ತದೆ ಎಂದು ಹಿರಿಯ ಪೊಲೀಸ್ ಸಿಬ್ಬಂದಿ ಆತಂಕದಲ್ಲೇ 'ಕನ್ನಡಪ್ರಭ'ಕ್ಕೆ ವಿವರಿಸಿದರು.
ತನಿಖೆಯಿಂದ ಸತ್ಯ ಬಹಿರಂಗ: ಮುಂಬೈ ಬಾಂಬ್ ಸ್ಫೋಟದ ಪ್ರಮುಖ ರೂವಾರಿಯಾದ ರಿಯಾಜ್ ಭಟ್ಕಳ್ ಟಾಪ್ 50 ಉಗ್ರರ ಪಟ್ಟಿಯಲ್ಲಿ ಒಬ್ಬನಾಗಿದ್ದ. ಆತನೊಂದಿಗೆ ಇವರ ಸಂಬಂಧ ಎಂತಹದ್ದು ಎಂಬುದು ತನಿಖೆಯಿಂದ ಬೆಳಕಿಗೆ ಬರಬೇಕಷ್ಟೆ. ಇಬ್ಬರು ಪೊಲೀಸರು ಶಿವಮೊಗ್ಗದ ಸಮಾಜಘಾತಕ ಶಕ್ತಿಗಳ ಜತೆಗೆ ಕೈಜೋಡಿಸಿರುವುದು ನಗರದ ಹಲವು ಪೊಲೀಸರಿಗೆ ಗೊತ್ತಿಲ್ಲದ ವಿಚಾರವೇನಲ್ಲ. ಒಂದು ಕೋಮಿಗೆ ಸೇರಿದವರ ಎಲ್ಲಾ ವಿಚಾರಗಳಲ್ಲೂ ಮೂಗು ತೂರಿಸಿಕೊಂಡು ಬಂದು ಅವರನ್ನು ರಕ್ಷಿಸುತ್ತಾ ಬಂದಿದ್ದಾರೆ. ಅವರ ಮೇಲೆ ಕಠಿಣ ಕ್ರಮವಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಗಲಭೆ ಸಂದರ್ಭದಲ್ಲೂ ಇವರಿಬ್ಬರು ಸಾಕಷ್ಟು ಕೆಲಸ ಮಾಡಿಕೊಂಡು ಬಂದಿದ್ದಾರೆ ಎಂದು ವಿವರಿಸಿದರು.
ಕೈವಾಡ: ಜಿಲ್ಲೆಯ ಕ್ವಾರಿಗಳಲ್ಲಿ ಅಪಾರ ಪ್ರಮಾಣದ ಜಿಲೆಟಿನ್ ಕಡ್ಡಿಗಳು ಸಂಗ್ರಹವಾಗಿದ್ದು ಬಹುಚರ್ಚಿತ ವಿಷಯ. ಈ ವಿಚಾರದಲ್ಲೂ ಈ ಇಬ್ಬರು ಪೊಲೀಸರ ಕೈವಾಡ ಇದ್ದೇ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಭಯೋತ್ಪಾದಕ ಸಂಘಟನೆಗಳಿಗೆ ಗುಪ್ತವಾಗಿ ಪೊಲೀಸ್ ಇಲಾಖೆಯ ಮಾಹಿತಿಯ ರವಾನೆ, ಸ್ಫೋಟಕ ವಸ್ತು ರವಾನೆ, ಸ್ಥಳೀಯ ನೆಲದಲ್ಲಿ ಆಶ್ರಯ ಕೊಡುವಂತಹ ಹಲವು ಕಾನೂನುಬಾಹಿರ ಹಾಗೂ ದೇಶವಿರೋಧಿ ಕೃತ್ಯಗಳಲ್ಲಿ ತೊಡಗಿರುವ ಸಾಧ್ಯತೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement