ನೀಲ ಗಗನದಲಿ ಪತಂಗದ ವೈಯಾರ
ಕನ್ನಡಪ್ರಭ ವಾರ್ತೆ , ಬೆಳಗಾವಿ , ಜ.19
ರಾಕೆಟ್ನೊಂದಿಗೆ ಸರಸ... ಲಾರ್ಡ್ ಗಣೇಶನೊಂದಿಗೆ ಗೆಳೆತನ... ಟಡ್ಡಿಬೇರ್ಗಳೊಂದಿಗೆ ಬ್ರೇಕ್ ಡ್ಯಾನ್ಸ್ ಮಾಡುವ ಹೆಬ್ಬಯಕೆಯಿಂದ ಸಾವಿರಾರೂ ಮಕ್ಕಳು ಮುಗಿಲೆತ್ತರಕ್ಕೆ ಜಿಗಿದು ಸಂಭ್ರಮಿಸಿದರು. ಇದು ನಗರದ ಪರಿವರ್ತನಾ ಪರಿವಾರ ನಾನಾವಾಡಿಯ ಮೈದಾನದಲ್ಲಿ ಏರ್ಪಡಿಸಿರುವ ಅಂತಾರಾಷ್ಟ್ರೀಯ ಪಂತಗ ಉತ್ಸವದ ಎರಡನೇ ದಿನ ಭಾನುವಾರದ ಸಂಭ್ರಮ.
ಭಾನುವಾರದ ಉತ್ಸವಕ್ಕೆ ಗೋವಾ, ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಿಂದಲ್ಲದೇ, ರಾಜ್ಯದ ನಾನಾ ಜಿಲ್ಲೆಗಳಿಂದ ಜನಸಾಗರವೇ ಹರಿದು ಬಂದಿತ್ತು. ವಿಶೇಷವೆಂದರೆ ಒಂದು ವರ್ಷದ ಮಗುವಿನಂದ ಹಿಡಿದು ವಯೋವೃದ್ಧರ ಮುಖದಲ್ಲಿ ಗಗನದಲ್ಲಿ ತೇಲಾಡಿದಷ್ಟು ಸಂಭ್ರಮ ಕುಣಿದಾಡುತ್ತಿತ್ತು. ದೇಶ, ವಿದೇಶದ ಪರಿಣತರು ಒಂದೊಂದೆ ಗಾಳಿಪಟ ನಬಕ್ಕೆ ನಕರ ಮಾಡುತ್ತ ಏರುತ್ತಿದ್ದಂತೆ ವೀಕ್ಷರಲ್ಲಿ ಸಂಭ್ರಮದ ಎಲ್ಲೆ ಮೀರುತ್ತಿತ್ತು.
ಇನ್ನು ಗಾಳಿಪಟ ಸರದಾರ ಪ್ರಶಸ್ತಿ ಪುರಸ್ಕೃತ ಬೆಂಗಳೂರಿನ ವಿ.ಕೃಷ್ಣರಾವ್ ತಂಡವು ಹಾರಿಸುತ್ತಿದ್ದ ರಾಕೆಟ್ ಪತಂಗಗಳು ಪ್ರೇಕ್ಷಕರ ಮನೆ ಗೆದ್ದವು. ಉತ್ಸವದಲ್ಲಿ ಭಾಗವಹಿಸಿದ್ದ 9 ವಿದೇಶಿ ತಂಡಗಳು ಹಾರಿಸಿದ ಪತಂಗವೂ ಜನಮನ ಮುದಗೊಳಿಸಿದ್ದವು. ಅದರಲ್ಲೂ ಇಸ್ಟೋನಿಯಾದ ಪತಂಗ ಪರಿಣತರು ಹಾರಿಸಿದ ಟೆಟ್ಟಿಬೇರ್, ಕಾರ್ ಪತಂಗಗಳು ಮಕ್ಕಳ ಖುಷಿ ಬುಗ್ಗಿಯಾಗಿದ್ದವು..
ಹಾಯ್ ಅನಿಸುವ ವ್ಯವಸ್ಥೆ: ಇನ್ನು ಪರಿವರ್ತನ ಪರಿವಾರದ 200 ಸದಸ್ಯರ ತಂಡವು ಅಚ್ಚುಕಟ್ಟಾದ ಪತಂಗ ಉತ್ಸವಕ್ಕೆ ಶ್ರಮಿಸಿರುವುದು ಕಂಡುಬರುತ್ತಿತ್ತು. ಆಹಾರ ಮಳಿಗೆಯಲ್ಲಿ ಎಲ್ಲಿಯೂ ಕಸ ಬಿಳದಂತೆ, ಪಾರ್ಕಿಂಗ್ ಸಮಸ್ಯೆ ಎದುರಾಗದಂತೆ, ಮಿಲ್ಟ್ರಿ ಮಾಹಾದೇವ ಉದ್ಯಾನ ವನದಿಂದ ಉತ್ಸವಕ್ಕೆ ಆಗಮಿಸುವ ಜನರನ್ನು ಕರೆದೊಯ್ಯಲು ಉಚಿತ ವಾಹನಗಳ ವ್ಯವಸ್ಥೆ ಕಲ್ಪಿಸಿರುವುದು ಹಾಗೂ ಗಾಳಿಪಟ ಹಾರಿಸುವ ಮೈದಾನದ ನಾಲ್ಕು ದಿಕ್ಕುಗಳಲ್ಲಿ ಕುಳಿತು ಗಾಳಿಪಟಗಳನ್ನು ವೀಕ್ಷಿಸಲು ವ್ಯವಸ್ಥೆ ಮಾಡಿದ ಆಯೋಜಕರು ಕಾರ್ಯಕ್ಕೆ ಜನರಿಂದ ಅಪಾರ ಮೆಚ್ಚುಗೆ ವ್ಯಕ್ತವಾಯಿತು.
ಈ ಮೊದಲು ಗಾಳಿಪಟ ಉತ್ಸವ ನೋಡಬೇಕೆಂದರೆ ನಾವು ಗುಜರಾತ್ಗೆ ಹೋಗಬೇಕಿತ್ತು. ಈಗ ಬೆಳಗಾವಿಯಲ್ಲಿ ಕಳೆದ 4 ವರ್ಷಗಳಿಂದ ಅಭಯ್ ಪಾಟೀಲ್ ನೇತೃತ್ವದಲ್ಲಿ ಪತಂಗ ಉತ್ಸವ ನಡೆಸಲಾಗುತ್ತಿದೆ. ಹೀಗಾಗಿ ದೇಶ-ವಿದೇಶ ಪರಿಣತರು ಹಾರಿಸುವ ಗಾಳಿಪಟಗಳನ್ನು ಕುಟುಂಬ ಸಮೇತ ಪ್ರತ್ಯಕ್ಷವಾಗಿ ನೋಡಿ ಖುಷಿ ಪಡುತ್ತಿದ್ದೇವೆ.
- ಸೀಯಾ ಶ್ರೀಧರ ಮುತಗೇಕರ ದಂಪತಿ
ವರ್ಷದಿಂದ ವರ್ಷಕ್ಕೆ ಗಾಳಿಪಟದ ವ್ಯಾಪಾರ ಹೆಚ್ಚಾಗುತ್ತಿದೆ. ನಮ್ಮ ಮಳಿಗೆಯಲ್ಲಿ ತರಹೇವಾರಿ 50 ಸಾವಿರಕ್ಕೂ ಹೆಚ್ಚು ಗಾಳಿಪಟಗಳು ಲಭ್ಯ.
- ಸಂಜಯ ಶಹಾ, ಪತಂಗ ಮಾರಾಟ ಮಳಿಗೆಯ ಮಾಲೀಕ
-ಶ್ರೀಧರ ಕೋಟಾರಗಸ್ತಿ