ಪ್ಲೀಸ್, ಬೇಗ ತನಿಖೆ ನಡೆಸಿ
ಪತ್ನಿ ಸುನಂದಾ ಪುಷ್ಕರ್ ಸಾವಿನ ಕುರಿತಂತೆ ಶೀಘ್ರಗತಿಯಲ್ಲಿ ತನಿಖೆ ನಡೆಸಬೇಕು ಎಂದು ಕೇಂದ್ರ ಸಚಿವ ಶಶಿ ತರೂರ್ ಅವರು, ಕೇಂದ್ರ ಗೃಹ ಸಚಿವಾಲಯಕ್ಕೆ...
ನವದೆಹಲಿ: ಪತ್ನಿ ಸುನಂದಾ ಪುಷ್ಕರ್ ಸಾವಿನ ಕುರಿತಂತೆ ಶೀಘ್ರಗತಿಯಲ್ಲಿ ತನಿಖೆ ನಡೆಸಬೇಕು ಎಂದು ಕೇಂದ್ರ ಸಚಿವ ಶಶಿ ತರೂರ್ ಅವರು, ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ಅವರಿಗೆ ಪತ್ರ ಬರೆದಿರುವ ತರೂರ್ ಅವರು, ಪತ್ನಿ ಸಾವಿನ ಕುರಿತಂತೆ ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳಿಂದ ಬೇಸತ್ತಿದ್ದೇನೆ. ಒಂದೊಂದು ವರದಿಯಲ್ಲೂ ಹಲವಾರು ಆಯಾಮಗಳಿವೆ. ಹೀಗಾಗಿ ಉನ್ನತ ಸಂಸ್ಥೆಯಿಂದ ತನಿಖೆ ನಡೆಸಿ ನಿಜಾಂಶ ಬಯಲು ಮಾಡಿ. ಈ ಕೆಲಸ ಶೀಘ್ರಗತಿಯಲ್ಲಿ ಆಗಲಿ ಎಂದು ವಿನಂತಿಸಿದ್ದಾರೆ.
ಸುನಂದಾ ಪುಷ್ಕರ್ ಅವರೊಂದಿಗೆ ತರೂರ್ ಜಗಳವಾಡಿಕೊಂಡಿದ್ದಾರೆ. ಇವರ ಸಾವಿನಲ್ಲಿ ಪಾಕಿಸ್ತಾನದ ಐಎಸ್ಐ ಕೈವಾಡವಿರಬಹುದು ಎಂಬ ಸಂಗತಿಗಳೂ ಸೇರಿದಂತೆ ಹಲವಾರು ಸುದ್ದಿಗಳು ಮಾಧ್ಯಮಗಳಲ್ಲಿ ವರದಿಯಾಗಿದ್ದವು.
ತರೂರ್ ಹೇಳಿಕೆ ದಾಖಲು: ಸುನಂದಾ ಅವರ ಸಾವಿನ ಕುರಿತಂತೆ ವಿಚಾರಣೆ ನಡೆಸುತ್ತಿರುವ ಸಬ್ ಡಿವಿಜನಲ್ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಮುಂದೆ ಶಶಿ ತರೂರ್ ಹೇಳಿಕೆ ದಾಖಲಿಸಿದ್ದಾರೆ. ಪಾಕ್ ಪತ್ರಕರ್ತೆ ಮೆಹರ್ ತರಾರ್ ಅವರ ಪ್ರಕರಣದಲ್ಲಿ ಆದ ವಿವಾದವೂ ಸೇರಿದಂತೆ ಸುನಂದಾ ಸಾವಿನ ಘಟನೆ ಸಂಭವಿಸುವ ವರೆಗೆ ಆಗಿರುವ ಎಲ್ಲಾ ಘಟನೆಗಳ ಬಗ್ಗೆಯೂ ಹೇಳಿಕೆ ದಾಖಲಿಸಿದ್ದಾರೆ ಎನ್ನಲಾಗಿದೆ.
ಇದಕ್ಕೂ ಮುನ್ನ ಪತ್ರಕರ್ತೆ ಹಾಗೂ ಸುನಂದಾ ತರೂರ್ ಅವರ ಸ್ನೇಹಿತೆ ನಳಿನಿ ಸಿಂಗ್ ಕೂಡ ಹೇಳಿಕೆ ದಾಖಲಿಸಿದ್ದಾರೆ. ಸಾವಿಗೂ ಮುನ್ನ ತಮ್ಮ ಜೊತೆ ಸುನಂದಾ ನಡೆಸಿದ್ದ ಮಾತುಕತೆಯ ವಿವರಗಳನ್ನು ನಳಿನಿ ಸಿಂಗ್ ಅವರು ಹಂಚಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಮಾತುಕತೆಯ ವಿವರಗಳು ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು. ಈ ಸಂದರ್ಭದಲ್ಲಿ ನಳಿನಿ ಸಿಂಗ್ ಭಾನುವಾರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗುವುದಾಗಿ ಹೇಳಿದ್ದರು. ಇದೇ ವೇಳೆ ಸುನಂದಾ ಸಾವಿನ ಕುರಿತಂತೆ ಸಿಬಿಐ ತನಿಖೆಯಾಗಬೇಕು ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ.