ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮಗುವಿಗೆ ಆಲ್ಕೋಹಾಲ್ ಕುಡಿಸಿದ ದೊಡ್ಡಪ್ಪ!

Vishwanath S
Updated On : 20 Jan 2014, 1:16 am

ಹಾವೇರಿ: ಮೂರು ವರ್ಷದ ಮಗುವಿಗೆ ಆತನ ದೊಡ್ಡಪ್ಪನೇ ಮದ್ಯ ಕುಡಿಸಿದ ಪ್ರಸಂಗ ಭಾನುವಾರ ಜಿಲ್ಲೆಯ ಸವಣೂರಿನಲ್ಲಿ ನಡೆದಿದ್ದು, ಮಕ್ಕಳಿಗೆ ಕಿಡಿಗೇಡಿಗಳು ಹೀಗೆ ಮದ್ಯ ಕುಡಿಸುವ ಪ್ರಸಂಗಗಳು ಜಿಲ್ಲೆಯಲ್ಲಿ ಹೆಚ್ಚುತ್ತಿವೆ. ಆ ಮೂಲಕ ಜಿಲ್ಲೆಯ ಅನಧಿಕೃತ ಮದ್ಯದಂಗಡಿಗಳ ಮತ್ತೊಂದು ಮುಖ ಬಿಚ್ಚಿಕೊಳ್ಳುತ್ತಿದೆ.
ಸವಣೂರಿನ ಜಲ್ಲಾಪುರದ 3 ವರ್ಷದ ಮಗುವೊಂದಕ್ಕೆ ಕಿಡಿಗೇಡಿಗಳು ಮದ್ಯ ಕುಡಿಸಿದ್ದರು. ತಲೆ ಸುತ್ತಿ ಬಿದ್ದ ನಂತರ ಮಗುವನ್ನು ಪೋಷಕರು ಸವಣೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಅಸ್ವಸ್ಥಗೊಂಡ ಈ ಹಾಲುಗಲ್ಲದ ಮಗುವಿನ್ನೂ ಅಮಲಿನ ಅವಸ್ಥೆಯಿಂದ ಹೊರಬರಲಾಗದೆ ನಿದ್ರಾವಸ್ಥೆಯಲ್ಲಿದೆ. ಮಗುವಿಗೆ ಮದ್ಯ ಕುಡಿಸಿದ್ದನ್ನು ವೈದ್ಯರೂ ದೃಢಪಡಿಸಿದ್ದಾರೆ.
ಘಟನೆ ಏನು?: ಸವಣೂರು ಪಟ್ಟಣದಿಂದ ಅನತಿ ದೂರದಲ್ಲಿ ಜಲ್ಲಾಪುರ ಗ್ರಾಮವಿದೆ. ಗ್ರಾಮದಲ್ಲಿ ಅನಧಿಕೃತ ಮದ್ಯದಂಗಡಿಗಳ ಸಂಖ್ಯೆಯೂ ಹೆಚ್ಚುತ್ತಿವೆ. ಯಾವುದೇ ಪಾನ್ ಬೀಡಾ ಅಂಗಡಿಯಲ್ಲಿ ಕೇಳಿದರೂ ಮದ್ಯ ಲಭ್ಯವಿದೆ. ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಜೀವನ್ (3) ಎಂಬ ಬಾಲಕನಿಗೆ ಯಾರೋ ಕಿಡಿಗೇಡಿಗಳು ತಂಪು ಪಾನೀಯದಲ್ಲಿ ಮದ್ಯ ಬೆರೆಸಿ ಕುಡಿಸಿದ್ದರು. ಸ್ವಲ್ಪ ಹೊತ್ತಿನಲ್ಲಿಯೇ ತಾಯಿ ಇದ್ದಲ್ಲಿಗೆ ಬಂದ ಮಗು ಹೊರಳಾಡಿದೆ. ಕೇಳಿದಾಗ ದೊಡ್ಡಪ್ಪ ಜ್ಯೂಸ್ ಕುಡಿಸಿದ್ದಾನೆ ಎಂದು ಹೇಳಿದೆ. ನಂತರ ತಲೆ ಸುತ್ತಿ ಬಿದ್ದ ಮಗುವಿನ ಬಾಯಿ ಮೂಸಿದಾಗ ಮದ್ಯ ಕುಡಿಸಿರುವುದು ಖಚಿತವಾಗಿದ್ದು, ಮಗುವನ್ನು ಆಸ್ಪತ್ರೆಗೆ ಸೇರಿಸಲಾಯಿತು.
ಗ್ರಾಮದ ಅನೇಕರಿಗೆ ಕುಡಿಸಿದ್ದಾರೆ: ಜಲ್ಲಾಪುರ ಗ್ರಾಮದಲ್ಲೇ 15ಕ್ಕೂ ಹೆಚ್ಚು ಅನಧಿಕೃತ ಮದ್ಯದಂಗಡಿಗಳಿವೆ. ಈ ಹಿಂದೆಯೂ ನಮ್ಮ ಮಗುವಿಗೆ ಮೂರು ಬಾರಿ ಮದ್ಯ ಕುಡಿಸಿದ್ದಾರೆ ಎಂದು ಮಗುವಿನ ತಂದೆ ಹನುಮಂತಪ್ಪ ಹಾಗೂ ತಾಯಿ ರುಚಿತಾ ಶಿಗ್ಗಾಂವಿ ಕಣ್ಣೀರಿಡುತ್ತಾರೆ.
ಅಲ್ಲದೇ ಗ್ರಾಮದ ಶಾಲೆಗೆ ಹೋಗುವ ಅನೇಕ ಮಕ್ಕಳನ್ನು ಕರೆದು ಜ್ಯೂಸ್, ತಂಪು ಪಾನೀಯದಲ್ಲಿ ಮದ್ಯ ಹಾಕಿ ಕುಡಿಸಿದ ಅನೇಕ ಉದಾಹರಣೆಗಳಿವೆ. ಇಂಥವರಿಂದ ಗ್ರಾಮದ ಮಕ್ಕಳು ಹಾಳಾಗುತ್ತಿದ್ದಾರೆ ಎಂದು ಜೀವನ್ ಪೋಷಕರು ಆತಂಕ ವ್ಯಕ್ತಪಡಿಸಿದ್ದು, ಸವಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಗ್ರಾಮದಲ್ಲಿ ಕುಡುಕರ ಕಾಟ ಹೆಚ್ಚಾಗಿದೆ. ಬಹುತೇಕ ಪಾನ್ ಅಂಗಡಿಗಳಲ್ಲಿ ಮದ್ಯ ಸಿಗುತ್ತಿದೆ. ಇದರಿಂದ ಗ್ರಾಮದ ಮರ್ಯಾದೆ ಹಾಳಾಗುತ್ತಿದೆ. ಸಂಬಂಧಪಟ್ಟವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮದ ಮನೋಜ್ ಗೌಳಿ ಆಗ್ರಹಿಸಿದ್ದಾರೆ.
ಇಲಾಖೆಯಿಂದ ನಿರಂತರವಾಗಿ ಅನಧಿಕೃತ ಮದ್ಯದಂಗಡಿಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಆದರೆ ಕಾನೂನಿನ ಸಣ್ಣ ಲೋಪವನ್ನೇ ಕೆಲವರು ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಆದರೂ ಮಗುವಿಗೆ ಮದ್ಯ ಕುಡಿಸಿರುವುದನ್ನು ಸಹಿಸುವುದಿಲ್ಲ. ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಲು ಸವಣೂರು ಇನ್ಸ್‌ಪೆಕ್ಟರ್‌ಗೆ ಸೂಚಿಸುವೆ.
- ನಾಗರಾಜ್, ಅಬಕಾರಿ ಉಪಾಯುಕ್ತ
ನಾನು ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರಿಂದ ಆಸ್ಪತ್ರೆಯಲ್ಲಿರಲಿಲ್ಲ. ಡಾ. ಸಾದಿಕ್ ಮಗುವನ್ನು ಪರೀಕ್ಷಿಸಿದ್ದಾರೆ. ಮಗುವಿಗೆ ಮದ್ಯ ಕುಡಿಸಿರುವುದು ದೃಢಪಟ್ಟಿದೆ. ಸದ್ಯ ಮಗು ಚೇತರಿಸಿಕೊಳ್ಳುತ್ತಿದ್ದು, ಆತಂಕವಿಲ್ಲ.
- ಡಾ. ಎಸ್.ಕೆ. ಅವರೆಡ್ಡಿ
ಸವಣೂರು ಆಸ್ಪತ್ರೆ ವೈದ್ಯಾಧಿಕಾರಿ


-ನಾರಾಯಣ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement