ಯಾಸಿನ್ ಬಿಡುಗಡೆಗೆ ನಡೆದಿದೆ ಕಂದಹಾರ್ ಸಂಚು
ಬೆಂಗಳೂರು ಪೊಲೀಸರ ವಶದಲ್ಲಿರುವ ಇಂಡಿಯನ್ ಮುಜಾಹಿದೀನ್ ಸಂಸ್ಥಾಪಕ ಯಾಸಿನ್ ಭಟ್ಕಳ್ ಬಿಡುಗಡೆಗಾಗಿ ವಿಮಾನ ಹೈಜಾಕ್ ...
ನವದೆಹಲಿ: ಬೆಂಗಳೂರು ಪೊಲೀಸರ ವಶದಲ್ಲಿರುವ ಇಂಡಿಯನ್ ಮುಜಾಹಿದೀನ್ ಸಂಸ್ಥಾಪಕ ಯಾಸಿನ್ ಭಟ್ಕಳ್ ಬಿಡುಗಡೆಗಾಗಿ ವಿಮಾನ ಹೈಜಾಕ್ ಮಾಡಲು ಉಗ್ರರು ಸಂಚು ರೂಪಿಸಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
1999ರಲ್ಲಿ ಕಂದಹಾರ್ ವಿಮಾನವನ್ನು ಅಪಹರಿಸಿದಂತೆಯೇ ಈಗ ಕೂಡ ಭಾರತಕ್ಕೆ ಸೇರಿದ ವಿಮಾನವೊಂದನ್ನು ಅಪಹರಿಸುವುದು ಅಥವಾ ವಿಮಾನದಲ್ಲೇ ಬಾಂಬ್ ಇಡುವುದು. ವಿಮಾನವನ್ನು ಬಿಡಲು ಯಾಸೀನ್ ಭಟ್ಕಳ್ ಮತ್ತು ಅಸಾದುಲ್ಲಾ ಅಖ್ತರ್ರನ್ನು ಬಿಡುಗಡೆ ಮಾಡಿ ಎಂದು ಭಾರತ ಸರ್ಕಾರವನ್ನು ಬ್ಲ್ಯಾಕ್ಮೇಲ್ ಕುರಿತಂತೆ ಸಂಚು ರೂಪಿಸಲಾಗಿದೆ ಎಂದು ಗುಪ್ತಚರ ದಳ ಮಾಹಿತಿ ನೀಡಿದೆ. ಈ ಕಾರ್ಯಾಚರಣೆಯನ್ನು 21 ರಿಂದ 26ರ ನಡುವೆ ನಡೆಸಲು ಉಗ್ರರು ಯೋಜಿಸಿದ್ದಾರೆ. ಹೀಗಾಗಿ ದೇಶದ ವಿಮಾನ ನಿಲ್ದಾಣಗಳಲ್ಲಿ ಗರಿಷ್ಠ ಪ್ರಮಾಣದ ಭದ್ರತೆ ಕೈಗೊಳ್ಳಬೇಕು ಎಂದು ಅದು ಎಚ್ಚರಿಕೆ ನೀಡಿದೆ.
ಗುಪ್ತಚರ ಇಲಾಖೆ ಎ ಗ್ರೇಡ್ ಅಲರ್ಟ್ ನೀಡಿದೆ. ಅಂದರೆ ಇದು ಅತ್ಯಂತ ಗಂಭೀರವಿಚಾರ ಎಂಬ ರೀತಿಯಲ್ಲಿ ಎಚ್ಚರಿಕೆ ನೀಡಲಾಗಿದೆ. ತುಸು ಯಾಮಾರಿದರೂ ದೊಡ್ಡ ಅಪಾಯವೇ ಕಾದಿದೆ ಎಂಬ ಅರ್ಥದಲ್ಲಿ ಈ ಅಲರ್ಟ್ ಹೊರಬಿದ್ದಿದೆ.
ಇದಷ್ಟೇ ಅಲ್ಲದೆ ದೇಶದಲ್ಲಿನ ದೊಡ್ಡ ನಗರಗಳಲ್ಲಿ ಬಾಂಬ್ ಸ್ಫೋಟ ನಡೆಸುವುದು ಈ ಸಂಚಿನ ಒಂದು ಭಾಗವಾಗಿದೆ ಎಂದು ಗುಪ್ತಚರ ಇಲಾಖೆ ಮೂಲಗಳು ಹೇಳಿವೆ. ಇದು ದೆಹಲಿ ಉಗ್ರ ಸಂಘಟನೆಗಳ ಯೋಜನೆಯಾಗಿದೆಯಾದ್ದರಿಂದ ದೆಹಲಿ ಏರ್ಪೋರ್ಟ್ನಲ್ಲಿ ಇನ್ನೂ ಹೆಚ್ಚಿನ ಭದ್ರತೆ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.
1993ರಲ್ಲಿ ಏನಾಗಿತ್ತು?: 1999ರಲ್ಲಿ ಕಂದಹಾರ್ಗೆ ತೆರಳಲಿದ್ದ ಇಂಡಿಯನ್ ಏರ್ಲೈನ್ಸ್ ವಿಮಾನವನ್ನು ಉಗ್ರರು ಅಪಹರಿಸಿದ್ದರು. ಈ ಸಂದರ್ಭದಲ್ಲಿ ಅವರು ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನ ಮಸೂದ್ ಅಜರ್ ಮತ್ತು ಇತರೆ ಇಬ್ಬರನ್ನು ಬಿಡುಗಡೆ ಮಾಡಿದರಷ್ಟೇ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಇಂಥದ್ದೇ ಯೋಜನೆಗೆ ಮುಂದಾಗಿರುವ ಉಗ್ರರು ಯಾಸೀನ್ ಮತ್ತು ಅಸಾದುಲ್ಲಾ ಅಖ್ತರ್ ಬಿಡುಗಡೆಗಾಗಿ ಸಂಚು ರೂಪಿಸಿದ್ದಾರೆ ಎನ್ನಲಾಗಿದೆ.
ಕರಾಚಿಯಲ್ಲೇ ದಾವೂದ್
ಭೂಗತ ಪಾತಕಿ ಮತ್ತು 1993ರ ಮುಂಬೈ ಸರಣಿ ಸ್ಫೋಟದ ಅಪರಾಧಿ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಬಂದರು ನಗರ ಕರಾಚಿಯಲ್ಲೇ ಇದ್ದಾನೆ ಎಂದು ಅಮೆರಿಕ ಸ್ಪಷ್ಟವಾಗಿ ಹೇಳಿದೆ. ದಾವೂದ್ನನ್ನು ಪಾಕಿಸ್ತಾನದಿಂದ ರಹಸ್ಯವಾಗಿ ಹೊರಗೆ ಕರೆದುಕೊಂಡು ಹೋಗುವುದು ಅಥವಾ ರಹಸ್ಯವಾಗಿ ಹತ್ಯೆ ಮಾಡುವುದೊಂದೇ ಉಳಿದಿರುವ ಏಕೈಕ ಮಾರ್ಗ ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ವರದಿ ಮಾಡಿವೆ. ಕೇಂದ್ರ ಗೃಹ ಸಚಿವಾಲಯ ಮತ್ತು ಭಾರತೀಯ ಗುಪ್ತಚರ ಸಂಸ್ಥೆಗಳು ದಾವೂದ್ ಪತ್ತೆಗಾಗಿ ಅಮೆರಿಕದ ಎಫ್ಬಿಐಗೆ ಮನವಿ ಮಾಡಿದ್ದವು. ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಅಮೆರಿಕ ಈ ಮಾಹಿತಿ ನೀಡಿದೆ.
ಟಾರ್ಗೆಟ್ ದೆಹಲಿ ಸಿಎಂ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಅಪಹರಿಸಲೂ ಇಂಡಿಯನ್ ಮುಜಾಹಿದೀನ್ ಸಂಚು ರೂಪಿಸುತ್ತಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ. ಕನಿಷ್ಠ ಭದ್ರತೆಯೊಂದಿಗೆ ವಾಸಿಸುತ್ತಿರುವ ಕೇಜ್ರಿವಾಲ್ರನ್ನು ಅಪಹರಿಸಿ, ಇವರ ಬದಲಾಗಿ ಯಾಸೀನ್ ಭಟ್ಕಳ್ ಮತ್ತು ಅಸಾದುಲ್ಲಾ ಅಖ್ತರ್ರನ್ನು ಬಿಡುಗಡೆ ಮಾಡಿ ಎಂದು ಕೇಳುವ ಬಗ್ಗೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದೆ. ಈ ಸಂಬಂಧ ದೆಹಲಿ ನಗರ ಪೊಲೀಸ್ ಇಲಾಖೆಯ ಹೆಚ್ಚುವರಿ ಆಯುಕ್ತರು ಕೇಜ್ರಿವಾಲ್ರನ್ನು ಭೇಟಿ ಮಾಡಲಿದ್ದು, ಭದ್ರತೆ ತೆಗೆದುಕೊಳ್ಳುವಂತೆ ಮನವಿ ಮಾಡಲಿದ್ದಾರೆ. ಆದರೆ ಕೇಜ್ರಿವಾಲ್ ಅವರು ಯಾವುದೇ ಕಾರಣಕ್ಕೂ ಭದ್ರತೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.