ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ರಾಜ್ಯದ 164 ಗ್ರಾಪಂಗಳಿಗೆ ಪಟ್ಟಣ ಪಂಚಾಯ್ತಿ ಭಾಗ್ಯ

Vishwanath S
Updated On : 20 Jan 2014, 1:14 am

ಬಿಜಾಪುರ: ರಾಜ್ಯದ 164 ಗ್ರಾಮ ಪಂಚಾಯ್ತಿಗಳನ್ನು ಪಟ್ಟಣ ಪಂಚಾಯ್ತಿಗೆ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಸರ್ಕಾರದ ಮುಂದಿದ್ದು, ಶೀಘ್ರವೇ ಈ ಗ್ರಾಮ ಪಂಚಾಯ್ತಿಗಳಿಗೆ ಪಟ್ಟಣ ಪಂಚಾಯಿತಿ ಆಗುವ ಯೋಗಾಯೋಗ ಕೂಡಿ ಬಂದಿದೆ.
ಈಗಾಗಲೇ ರಾಜ್ಯ ಸರ್ಕಾರ ತುಮಕೂರ, ಶಿವಮೊಗ್ಗ ಹಾಗೂ ಬಿಜಾಪುರ ನಗರಸಭೆಗಳನ್ನು ಮಹಾನಗರ ಪಾಲಿಕೆಗಳನ್ನಾಗಿ ಮೇಲ್ದರ್ಜೆಗೇರಿಸಿದ್ದು, ಗ್ರಾಮ ಪಂಚಾಯ್ತಿಗಳನ್ನು ಪಟ್ಟಣ ಪಂಚಾಯ್ತಿಗಳನ್ನಾಗಿ ಮೇಲ್ದರ್ಜೆಗೇರಿಸಲು ರಾಜ್ಯದ ಎಲ್ಲ ಜಿಲ್ಲೆಗಳಿಂದ ಸರ್ಕಾರ ವರದಿ ತರಿಸಿಕೊಂಡಿದೆ. ಕೆಲವು ಜಿಲ್ಲೆಗಳಲ್ಲಿನ ಪ್ರಸ್ತಾವನೆಯಲ್ಲಿನ ಕೆಲವೊಂದು ಅಂಶಗಳ ಬಗ್ಗೆ ರಾಜ್ಯ ಸರ್ಕಾರ ಮತ್ತೆ ಸ್ಪಷ್ಟನೆ ಕೇಳಿ ಪರಿಷ್ಕೃತ ವರದಿ ಸಲ್ಲಿಸುವಂತೆ ಸೂಚಿಸಿದೆ. ಪರಿಷ್ಕೃತ ವರದಿ ಸರ್ಕಾರದ ಕೈ ತಲುಪಿದ ನಂತರ ಯಾವುದೇ ಸಮಯದಲ್ಲಿ ಈ ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಗಳನ್ನಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಬಹುದಾಗಿದೆ.
2011ರ ಜನಗಣತಿ ಪ್ರಕಾರ ಯಾವುದೇ ಗ್ರಾಮ ಪಂಚಾಯ್ತಿಯಲ್ಲಿ 10 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಪಂಗಳನ್ನು ಪಟ್ಟಣ ಪಂಚಾಯ್ತಿಗಳನ್ನಾಗಿ ಮೇಲ್ದರ್ಜೆಗೇರಿಸಬೇಕು ಎಂಬ ಮಾನದಂಡ ಅನುಸರಿಸಿ ಸರ್ಕಾರ ಈ ಪಟ್ಟಿಯನ್ನು ಸಿದ್ಧಪಡಿಸಿದೆ.
ಪ್ರಸ್ತಾವನೆ ಸಲ್ಲಿಕೆ: ಬಿಜಾಪುರ ಜಿಲ್ಲೆಯಲ್ಲಿ ಸರ್ಕಾರದ ಮಾನದಂಡದ ಪ್ರಕಾರ ಒಟ್ಟು 14 ಗ್ರಾಮ ಪಂಚಾಯಿತಿಗಳು ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೇರುವ ಅರ್ಹತೆ ಪಡೆದಿವೆ ಎಂಬುವುದರ ಬಗ್ಗೆ ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಈ ಬಗ್ಗೆ ಅಂತಿಮವಾಗಿ ಸರ್ಕಾರದ ಉನ್ನತ ಮಟ್ಟದಲ್ಲಿ ಎಷ್ಟು ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೇರಿಸಬೇಕು ಎಂಬುವುದು ನಿರ್ಧಾರವಾಗಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹೇಳಿದ್ದಾರೆ.
ಪಪಂ ಪಟ್ಟಿಯಲ್ಲಿನ ಗ್ರಾಪಂಗಳು
ಬೆಂಗಳೂರು ನಗರ ಜಿಲ್ಲೆ-3, ರಾಮನಗರ-1, ಚಿತ್ರದುರ್ಗ-2, ದಾವಣಗೆರೆ-4, ತುಮಕೂರು-1, ಚಾಮರಾಜನಗರ-3, ಚಿಕ್ಕಮಗಳೂರು-3, ದಕ್ಷಿಣ ಕನ್ನಡ- 3, ಮಂಡ್ಯ-4, ಮೈಸೂರು-1, ಉಡುಪಿ-7, ಬಾಗಲಕೋಟೆ-8, ಬೆಳಗಾವಿ-41, ಬಿಜಾಪುರ-14, ಧಾರವಾಡ-5, ಗದಗ-5, ಹಾವೇರಿ- 4, ಉತ್ತರ ಕನ್ನಡ- 7, ಬೀದರ- 7, ಬಳ್ಳಾರಿ- 11, ಗುಲ್ಬರ್ಗ- 7, ಯಾದಗಿರಿ- 5, ಕೊಪ್ಪಳ- 7, ರಾಯಚೂರು- 11 ಗ್ರಾಪಂಗಳು ಪಟ್ಟಣ ಪಂಚಾಯ್ತಿಗಳಾಗಿ ಮೇಲ್ದರ್ಜೆಗೇರುವ ಪಟ್ಟಿಯಲ್ಲಿ ಸೇರಿವೆ.


-ರುದ್ರಪ್ಪ ಆಸಂಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement