ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸಾಮಾಜಿಕ ಹೋರಾಟಕ್ಕೆ ಸಿಕ್ಕಿತು, ಪರೇಡ್ ವೀಕ್ಷಣೆ ಭಾಗ್ಯ

ನವದೆಹಲಿಯಲ್ಲಿ ಜ.26ರಂದು ನಡೆಯುವ ಗಣರಾಜ್ಯೋತ್ಸವ ಸಮಾರಂಭ ವೀಕ್ಷಿಸಲು ಬುಡಕಟ್ಟು ವ್ಯವಹಾರಗಳ ಮಂತ್ರಾಲಯದಿಂದ...

Vishwanath S
Updated On : 20 Jan 2014, 1:11 am

ಕನ್ನಡಪ್ರಭ ವಾರ್ತೆ, ಬೀಳಗಿ, ಜ. 17
ನವದೆಹಲಿಯಲ್ಲಿ ಜ.26ರಂದು ನಡೆಯುವ ಗಣರಾಜ್ಯೋತ್ಸವ ಸಮಾರಂಭ ವೀಕ್ಷಿಸಲು ಬುಡಕಟ್ಟು ವ್ಯವಹಾರಗಳ ಮಂತ್ರಾಲಯದಿಂದ ತಾಲೂಕಿನ ಸಿದ್ದಾಪುರ ಗ್ರಾಮದ ಪರಿಶಿಷ್ಟ ಪಂಗಡದ ಶ್ರೀಶೈಲ ರುದ್ರಪ್ಪ ಅಂಟಿನ್ ಅವರಿಗೆ ವಿಶೇಷ ಆಹ್ವಾನ ಬಂದಿದೆ.
ಶಿಕ್ಷಣ, ಮೂಢನಂಬಿಕೆ, ಸಮಾಜ ಸುಧಾರಣೆ ನಿಟ್ಟಿನಲ್ಲಿ ಪ್ರಜಾ ಪರಿವರ್ತನಾ ವೇದಿಕೆಯ ಮೂಲಕ ಶ್ರೀಶೈಲ ಅವರು ದಶಕಗಳಿಂದಲೂ ನಡೆಸಿರುವ ಹೋರಾಟದ ಫಲವಾಗಿ ಈ ಭಾಗ್ಯ ಒಲಿದು ಬಂದಿದೆ. ಗಣರಾಜ್ಯೋತ್ಸವದ ಕಾರ್ಯಕ್ರಮಗಳು, ಪರೇಡ್ ವೀಕ್ಷಣೆ ಜೊತೆಗೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಹಾಗೂ ಕೇಂದ್ರ ಬುಡಕಟ್ಟು ಸಚಿವರನ್ನು ಭೇಟಿಯಾಗುವ ಅವಕಾಶವೂ ಇವರಿಗೆ ದೊರೆಯಲಿದೆ. ಅಂದು ಮಧ್ಯಾಹ್ನ ರಾಷ್ಟ್ರಪತಿಯೊಂದಿಗೆ ವಿಶೇಷ ಔತಣಕೂಟದಲ್ಲಿ ಭಾಗವಹಿಸಲಿದ್ದಾರೆ. ನಂತರ ಫೆ.2ರವರೆಗೆ ನವದೆಹಲಿ ಸೇರಿದಂತೆ ದೇಶದ ಪ್ರಸಿದ್ಧ ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸಲಿದ್ದಾರೆ.
ಯಾರಿವರು?: ಬೀಳಗಿ ತಾಲೂಕಿನ ಸಿದ್ದಾಪುರ ಗ್ರಾಮದ ರುದ್ರಪ್ಪ ಅಂಟಿನ್ ಅವರ ಪುತ್ರರಾದ ಶ್ರೀಶೈಲ ಅವರ ಅಜ್ಜ ನಿಂಗಪ್ಪ ಅಂಟಿನ್ ಸ್ವಾತಂತ್ರ್ಯ ಹೋರಾಟಗಾರ. ಬಡಜನರ ಅನುಕೂಲಕ್ಕಾಗಿ 15 ಖಾದಿ ಕೇಂದ್ರಗಳನ್ನು ಸ್ಥಾಪಿಸಿದ್ದರು. ಸ್ವಾತಂತ್ರ್ಯ ನಂತರ ಸರ್ವೋದಯ ಕಾರ್ಯಕರ್ತರರಾಗಿದ್ದ ನಿಂಗಪ್ಪನವರು ಅಂದು ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿದ್ದರಿಂದ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಸ್ಥಾಪನೆಯಾದ ಖಾದಿ ಕೇಂದ್ರಕ್ಕೆ ತಮ್ಮ ಮನೆ ಬಿಟ್ಟುಕೊಟ್ಟು ತಮ್ಮ ಏಳು ಮಕ್ಕಳೊಂದಿಗೆ ಗುಡಿಸಲಲ್ಲಿ ವಾಸವಾಗಿದ್ದರು.
ಶ್ರೀಶೈಲ ಅವರೂ ಅಜ್ಜ, ತಂದೆಯಂತೆ ಸಾಮಾಜಿಕ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇಂಡಸ್ಟ್ರೀಯಲ್ ಪ್ರೊಡಕ್ಷನ್ ವಿಭಾಗದಲ್ಲಿ ಬಿಇ ಪದವಿ ಪಡೆದಿರುವ ಇವರು ಸರ್ಕಾರಿ ನೌಕರಿಯತ್ತ ಆಕರ್ಷಿತರಾಗದೇ, ಸಾಮಾಜಿಕ ಮೌಢ್ಯಗಳ ವಿರುದ್ಧ ಹೋರಾಡುವಲ್ಲಿ ಸಕ್ರಿಯರಾಗಿದ್ದಾರೆ.
ಶಿಕ್ಷಣದ ಕೊರತೆಯಿಂದ ಗ್ರಾಮೀಣ ಭಾಗದ ಜನರಲ್ಲಿ ಬೇರೂರಿದ್ದ ಮೂಢನಂಬಿಕೆ ತೊಲಗಿಸಲು ತಮ್ಮ ಜೀವನ ಮುಡುಪಾಗಿರಿಸಲು ನಿಶ್ಚಯಿಸಿ, ಈ ಅನಿಷ್ಟದ ವಿರುದ್ಧ ಹೋರಾಡುತ್ತಿದ್ದಾರೆ.
ರಾಜ್ಯ ಗಿರಿಜನ ಸಂಶೋಧನಾ ಸಂಸ್ಥೆ ನನ್ನ ಕಾರ್ಯ ಗುರುತಿಸಿ ಗಣರಾಜ್ಯೋತ್ಸವ ಸಮಾರಂಭಕ್ಕೆ ಆಹ್ವಾನಿಸಿದ್ದು ಸಂತಸ ತಂದಿದೆ. ಪ್ರತಿವರ್ಷ ಪರಿಶಿಷ್ಟ ವರ್ಗದ ಇಬ್ಬರಿಗೆ ಈ ಅವಕಾಶ ದೊರೆಯಲಿದ್ದು, ಈ ಬಾರಿ ಬಾಗಲಕೋಟೆ ಹಾಗೂ ಮೈಸೂರು ಜಿಲ್ಲೆಗೆ ಈ ಭಾಗ್ಯ ದೊರೆತಿದೆ. ಜ.22ರಂದು ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ನವದೆಹಲಿಗೆ ತೆರಳುತ್ತಿದ್ದೇನೆ.
- ಶ್ರೀಶೈಲ ಅಂಟಿನ್, ಹೋರಾಟಗಾರ



-ಎಸ್.ಆರ್.ಜಡಿಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement