ರಾಜಧಾನೀಲಿ ಕೇಜ್ರಿ ರೋಡ್ ಶೋ, ರಸ್ತೆಗಿಳಿಯಿತು ದಿಲ್ಲಿ ಶಾಹಿ; ಜನರ ನೆಮ್ಮದಿಗೆ ಬಿತ್ತು ಕಲ್ಲು
ರಾಜಧಾನಿ ದೆಹಲಿಯ ರಾಜಬೀದಿಗಳು ಸೋಮವಾರ ಆಮ್ ಆದ್ಮಿ ಪಕ್ಷದ 'ಕ್ರೇಜಿ' ನಾಟಕಕ್ಕೆ ಸಾಕ್ಷಿಯಾದವು. ಐವರು ದೆಹಲಿ ಪೊಲೀಸರನ್ನು...
ಪಿಟಿಐ, ನವದೆಹಲಿ, ಜ.20-
ರಾಜಧಾನಿ ದೆಹಲಿಯ ರಾಜಬೀದಿಗಳು ಸೋಮವಾರ ಆಮ್ ಆದ್ಮಿ ಪಕ್ಷದ 'ಕ್ರೇಜಿ' ನಾಟಕಕ್ಕೆ ಸಾಕ್ಷಿಯಾದವು. ಐವರು ದೆಹಲಿ ಪೊಲೀಸರನ್ನು ಅಮಾನತು ಅಥವಾ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ಸ್ವತಃ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರೇ ಬೀದಿಯಲ್ಲಿ ಪ್ರತಿಭಟನೆಗೆ ಕುಳಿತದ್ದರಿಂದ ಮುಖ ಮುಖ ನೋಡಿಕೊಳ್ಳುವ ಸನ್ನಿವೇಶ ಜನ ಮತ್ತು ಪೊಲೀಸರದ್ದಾಯಿತು.
ಬೇಡಿಕೆ ಇಟ್ಟ ತಕ್ಷಣ ಪೊಲೀಸರನ್ನು ಅಮಾನತು ಮಾಡಲು ಹೇಗೆ ಸಾಧ್ಯ? ಲೆಫ್ಟಿನೆಂಟ್ ಗವರ್ನರ್ ಅವರೇ ತನಿಖೆಯಾಗಲಿ, ಬಳಿಕ ಕ್ರಮ ತೆಗೆದುಕೊಳ್ಳೋಣ ಎಂದು ಹೇಳಿದ್ದಾರಲ್ಲ, ಪ್ರತಿಭಟನೆ ಬಿಡಿ ಎಂಬ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ಅವರ ಮನವಿಯನ್ನೂ ತಳ್ಳಿಹಾಕಿದ ಅರವಿಂದ ಕೇಜ್ರಿವಾಲ್ ಮತ್ತು ಅವರ ಸಚಿವ ಸಂಪುಟದ ಸದಸ್ಯರು ದೆಹಲಿ ಜನ ಜೀವನವನ್ನೇ ಅಸ್ತವ್ಯಸ್ತ ಮಾಡಿದರು.
ಏನಾಯ್ತು?
3 ದಿನಗಳ ಹಿಂದೆ ಗೃಹ ಸಚಿವ ಶಿಂದೆ ಅವರನ್ನು ಭೇಟಿ ಮಾಡಿದ್ದ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ದೆಹಲಿಯ ಐವರು ಪೊಲೀಸರನ್ನು ಅಮಾನತು ಮಾಡುವಂತೆ ಆಗ್ರಹಿಸಿದ್ದರು. ಈ ಸಂದರ್ಭದಲ್ಲಿ ಶಿಂದೆ ಈ ಕುರಿತಂತೆ ತನಿಖೆಗೆ ಆದೇಶಿಸಲಾಗಿದೆ. ವರದಿ ಬರಲಿ, ಬಳಿಕ ಕ್ರಮ ತೆಗೆದುಕೊಳ್ಳೋಣ ಎಂದಿದ್ದರು. ಆದರೆ ಇದಕ್ಕೆ ಒಪ್ಪದ ಕೇಜ್ರಿವಾಲ್ ಸೋಮವಾರದಿಂದ 10 ದಿನಗಳ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದರು.
ಬೆಳಗ್ಗೆಯೇ ಪ್ರತಿಭಟನೆ
ಶಿಂದೆಗೆ ಎಚ್ಚರಿಕೆ ನೀಡಿದಂತೆ ಕೇಜ್ರಿವಾಲ್, ಸಂಪುಟ ಸಹೋದ್ಯೋಗಿಗಳು ಪ್ರತಿಭಟನೆಗಾಗಿ ಬೆಳಗ್ಗೆಯೇ ಗೃಹ ಸಚಿವಾಲಯದತ್ತ ಹೊರಟರು. ಆದರೆ ಪೊಲೀಸರು ಸಂಸತ್ ಸುತ್ತಮುತ್ತ ಸೆಕ್ಷನ್ 144 ಜಾರಿ ಮಾಡಿ, ಕಾರುಗಳನ್ನು ತಡೆದರು. ಹೀಗಾಗಿ ಕೇಜ್ರಿವಾಲ್ ಮತ್ತು ಅವರ ತಂಡ ರೇಲ್ವೆ ಭವನದ ಹತ್ತಿರವೇ ಪ್ರತಿಭಟನೆ ನಡೆಸಿತು.
ದಿನದ ಬೆಳವಣಿಗೆ
- ಕೇಜ್ರಿವಾಲ್ ನೇತೃತ್ವದಲ್ಲಿ ಪ್ರತಿಭಟನೆ ಆರಂಭ, ಸಂಪುಟದ ಎಲ್ಲಾ ಸಹೋದ್ಯೋಗಿಗಳು ಸಾಥ್
- ದೆಹಲಿಯ ಪ್ರಾಮಾಣಿಕ ಪೊಲೀಸರು ಪ್ರತಿಭಟನೆಗೆ ಸಾಥ್ ನೀಡಲು ಒತ್ತಾಯ
- ಬೀದಿಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿರುವ ಮೊದಲ ದೆಹಲಿ ಮುಖ್ಯಮಂತ್ರಿ
- ದೆಹಲಿಯಲ್ಲಿನ ಎಲ್ಲಾ ಪೊಲೀಸರ ರಜೆ ರದ್ದು
- ಬೀದಿಯಲ್ಲೇ ಕುಳಿತು ಫೈಲ್ಗಳಿಗೆ ಸಹಿ
- 4 ಮೆಟ್ರೋ ಸ್ಟೇಷನ್ ಮುಚ್ಚಿದ ಇಲಾಖೆ
- ಪೊಲೀಸ್-ಎಎಪಿ ಕಾರ್ಯಕರ್ತರ ಸಂಘರ್ಷ
- ಶಾಸಕ ಸೇರಿ ಕೆಲವರ ಮೇಲೆ ಪೊಲೀಸರಿಂದ ಥಳಿತ - ಎಎಪಿ ಆರೋಪ
- ನಾವು ಬಂಧಿಸಿಯೇ ಇಲ್ಲ, ಯಾರಿಗೂ ಹೊಡೆದಿಲ್ಲ ಎಂದ ಪೊಲೀಸರು