ಸೈನೈಡ್ ಹೆಂಡ್ತಿಗೆ ಹಳೆ ಕೈದಿ ಗಾಳ
ಫಾಸಿ ಶಿಕ್ಷೆಗೆ ಗುರಿಯಾಗಿರುವ ಸರಣಿ ಹಂತಕ ಸೈನೈಡ್ ಮೋಹನನ ಪತ್ನಿ, ಹಳೆ ಕೈದಿ ಜತೆ ಪರಾರಿಯಾಗಿದ್ದಾಳೆ. ಇಂಥ ಒಂದು ...
ಕನ್ನಡಪ್ರಭ ವಾರ್ತೆ ಮಂಗಳೂರು ಜ.20
ಫಾಸಿ ಶಿಕ್ಷೆಗೆ ಗುರಿಯಾಗಿರುವ ಸರಣಿ ಹಂತಕ ಸೈನೈಡ್ ಮೋಹನನ ಪತ್ನಿ, ಹಳೆ ಕೈದಿ ಜತೆ ಪರಾರಿಯಾಗಿದ್ದಾಳೆ. ಇಂಥ ಒಂದು ಸಂಬಂಧ ಕುದುರಲು ಕಾರಣವಾಗಿರುವುದು ಮೊಬೈಲ್ ಎಂದರೆ ನೀವು ನಂಬಲೇಬೇಕು!
20 ಯುವತಿಯರನ್ನು ಕೊಂದ ಮೋಹನ್ ಯಾವುದೇ ಹಂತದಲ್ಲೂ ಮೊಬೈಲ್ ಬಳಸಿರಲಿಲ್ಲ. ಆದರೆ, ಜೈಲಿನಲ್ಲಿ ಮೋಹನ್ ತನ್ನ ಪ್ರಿಯ ಹಾಗೂ ಮೂರನೇ ಪತ್ನಿ ಶ್ರೀದೇವಿ ಜತೆ ಮಾತನಾಡಲು ಮೊಬೈಲ್ ಬಳಸಿದ್ದು, ಈ ಯಡವಟ್ಟಿಗೆ ಕಾರಣವಾಗಿದೆ.
ಶ್ರೀದೇವಿಗೂ ಮೋಹನ್ ಮೇಲೆ ಅಕ್ಕರೆ ಇತ್ತು. ಜೈಲ್‌ಗೆ ಬಂದು ಊಟೋಪಚಾರ ಮಾಡುತ್ತಿದ್ದಳು. ಆಗಾಗ ಗಂಡನ ಜತೆಯಲ್ಲಿ ಮೊಬೈಲ್‌ನಲ್ಲಿಯೂ ಮಾತನಾಡುತ್ತಿದ್ದಳು. ಆಕೆಯ ಜತೆ ಮಾತನಾಡಲು ಮೋಹನ್ ತನ್ನ ಸಹ ಕೈದಿಯಾಗಿದ್ದ ಖೋಟಾ ನೋಟು ಆರೋಪಿ ಸಂತೋಷ್ ಶೆಟ್ಟಿಗಾರ್‌ನ ಮೊಬೈಲ್ ಬಳಸುತ್ತಿದ್ದ.
ಮೊಬೈಲ್ ಜೋಡಿಸಿದ ಸಂಬಂಧ: ಜೈಲ್‌ನಲ್ಲಿ ಮೊಬೈಲ್ ನಿರ್ಬಂಧ ಇದೆ. ಆದರೆ ಹೆಚ್ಚಿನ ಕೈದಿಗಳು ಮೊಬೈಲ್ ಅಡಗಿಸಿಟ್ಟು ನಿತ್ಯವೂ ಪ್ರೀತಿ ಪಾತ್ರರ ಜತೆ ಮಾತನಾಡುತ್ತಾರೆ. ಅದೇ ರೀತಿ, ಸಂತೋಷ್ ಹತ್ತಿರವಿದ್ದ ಮೊಬೈಲ್ ಮೂಲಕ ಮೋಹನ್ ತನ್ನ ಹೆಂಡತಿ ಜತೆ ಮಾತನಾಡುತ್ತಿದ್ದ. ಈ ಅವಕಾಶವನ್ನು ಬಳಸಿಕೊಂಡ ಸಂತೋಷ್, ಆಕೆಯ ನಂಬರ್ ಅನ್ನು ಸೇವ್ ಮಾಡಿಕೊಂಡಿದ್ದ. 4 ತಿಂಗಳ ಹಿಂದೆ ಜಾಮೀನು ಮೂಲಕ ಹೊರಬಂದವನೇ ನೇರವಾಗಿ ಸೈನೈಡ್ ಮೋಹನ್ ಪತ್ನಿ ಶ್ರೀದೇವಿ ಜತೆ ವ್ಯವಹಾರ ಕುದುರಿಸಿದ್ದಾನೆ. ಉನ್ನತ ಶಿಕ್ಷಣ ಸಂಸ್ಥೆಗಳಿರುವ ದೇರಳಕಟ್ಟೆಯಲ್ಲಿ 42 ಸೆಂಟ್ಸ್ ಬೆಲೆ ಬಾಳುವ ಜಾಗ ಇತ್ತು.
ಈ ಜಾಗವನ್ನು ಮಾರಾಟ ಮಾಡುವ ಬಗ್ಗೆ ಶ್ರೀದೇವಿಯ ಮನ ಒಲಿಸಿದ್ದಾನೆ. ಹತ್ತಿರ ಹತ್ತಿರ ಕೋಟಿ ಮೌಲ್ಯದ ಜಾಗವನ್ನು ಮಾರಾಟ ಮಾಡಿದ್ದಾರೆ. ಇದಕ್ಕೆ ಬ್ರೋಕರ್ ಆದವನೇ ಸಂತೋಷ್. ಅಲ್ಲಿಂದ ಇಬ್ಬರ ಜಂಟಿ ಹಣಕಾಸು ಸಂಬಂಧ ಜಂಟಿಯಾಗಿ ಬದುಕು ನಡೆಸುವವರೆಗೂ ಮುಂದುವರಿಯಿತು!
ಶ್ರೀದೇವಿ ಜತೆ ವಾಸ: ಜಾಗ ಮಾರಾಟದಿಂದ ಬಂದ ಹಣದಿಂದಲೇ ಇಲ್ಲಿಯ ಬಸ್ ನಿಲ್ದಾಣ ಫೈನಾನ್ಸ್ ವ್ಯವಹಾರ ಮಾಡುತ್ತಿದ್ದಾನೆ ಸಂತೋಷ್. ನಗರದಲ್ಲಿ ಫ್ಲ್ಯಾಟ್ ಖರೀದಿಸಿ ಶ್ರೀದೇವಿ ಜತೆ ವಾಸಿಸುತ್ತಿದ್ದಾನೆ. ಸೈನೈಡ್ ಮೋಹನ್‌ಗೆ ಮರಣದಂಡನೆ ವಿಧಿಸಿದ ಬಳಿಕ ಇಬ್ಬರು ತಮ್ಮ ಸಂಬಂಧಕ್ಕೆ ಅಧಿಕೃತ ಮುದ್ರೆ ನೀಡುವ ಬಗ್ಗೆ ಆಲೋಚಿಸುತ್ತಿದ್ದಾರೆ. ಸಂತೋಷ್ ಶೆಟ್ಟಿಗಾರ್ ವಿವಾಹಿತ. ಮೊದಲ ಪತ್ನಿ ಮಾಡರ್ನ್ ಸುಂದರಿ. ಈತನ ಅಪರಾಧಿ ಕೃತ್ಯಗಳಿಂದ ಬೇಸತ್ತು ವಿಚ್ಛೇದನ ನೀಡಿ ವಿದೇಶದಲ್ಲಿ ವಾಸವಾಗಿದ್ದಾಳೆ. ಒಂಟಿಯಾಗಿದ್ದ ಸಂತೋಷ್‌ಗೆ ಈಗ ಜಂಟಿ ಸಂಭ್ರಮ.
ಮೂವರು ಪತ್ನಿಯರು !
ಸೈನೈಡ್ ಮೋಹನ್‌ನ ಮೊದಲ ಪತ್ನಿ ಶಿರಾಡಿಯವಳು. ಎರಡನೆಯವಳು ಉಪ್ಪಳದವಳು. ಮೂರನೆಯವಳೇ ದೇರಳೆಕಟ್ಟೆಯ ಶ್ರೀದೇವಿ. ಈಕೆ ಗಂಡನನ್ನು ನೋಡಲು ಆಗಾಗ ಜೈಲ್‌ಗೆ ಹೋಗಿ ಬರುತ್ತಿದ್ದಳು. ಯುವತಿಯರನ್ನು ಕೊಲೆ ಮಾಡಿದ ಬಳಿಕ ಚಿನ್ನಾಭರಣವನ್ನು ಮೋಹನ್ ಆಕೆಗೆ ನೀಡುತ್ತಿದ್ದ.ವಿಚಾರಣೆ ವೇಳೆಯೂ ಈಕೆ ಗಂಡನ ಜತೆ ಬಂದು ಮಾತನಾಡುತ್ತಿದ್ದಳು. ಅಲ್ಲಿ ಆಕೆಗೆ ಪೊಲೀಸರು ಸುಳ್ಳು ಕೇಸ್ ದಾಖಲಿಸಿದ್ದಾರೆ ಎಂದೇ ನಂಬಿಸುತ್ತಿದ್ದ. ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಸುದ್ದಿಗಳು ಬಂದರೂ ಪತ್ನಿ ಕ್ಯಾರೇ ಎಂದಿರಲಿಲ್ಲ. ಮೊಬೈಲ್, ಹಣ ಎಲ್ಲವನ್ನೂ ಈಗ ಮರೆಸಿದೆ.
-ಜಿತೇಂದ್ರ ಕುಂದೇಶ್ವರ