ಅಂತೂ ಬಸವಂತಪ್ಪ ಕುಟುಂಬಕ್ಕೆ ಸಿಕ್ತು 5 ಲಕ್ಷ ಪರಿಹಾರದ ಚೆಕ್!
ಗುಲ್ಬರ್ಗ: ಪರಿಹಾರ ಪಡೆಯಲು ಗುಲ್ಬರ್ಗದಿಂದ ಬೆಂಗಳೂರುವರೆಗೆ ದಶಕ ಕಾಲ ಕಚೇರಿ ಅಲೆದು ಸುಸ್ತಾಗಿದ್ದ ಎಎಸ್ಐ ಬಸವಂತಪ್ಪರ ಕುಟುಂಬಕ್ಕೆ 5 ಲಕ್ಷ ಪರಿಹಾರ ಚೆಕ್ ಅನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮೀತ್ ಸಿಂಗ್ ಮಂಗಳವಾರ ವಿತರಿಸಿದರು.
ಪರಿಹಾರ ಧನ ಪಡೆಯಲು ಬಸವಂತಪ್ಪ ಕುಟುಂಬ ಪಟ್ಟ ಕಷ್ಟದ ಬಗ್ಗೆ 'ಕನ್ನಡಪ್ರಭ' ಜ.19ರ ಸಂಚಿಕೆಯ ಮುಖಪುಟದಲ್ಲಿ 'ಎಎಸ್ಐ ಕೊಲೆಯಾಗಿ ಹತ್ತು ವರ್ಷವಾಯಿತು, ಪರಿಹಾರಕ್ಕೆ ಕಚೇರಿ ಸುತ್ತಿ ಸುಸ್ತಾಯಿತು!' ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಮಂಗಳವಾರ ಬಸವಂತಪ್ಪ ಕುಟುಂಬದ ಸದಸ್ಯರನ್ನು ತಮ್ಮ ಕಚೇರಿಗೆ ಕರೆಸಿಯಿಸಿಕೊಂಡ ಎಸ್ಪಿ ಅಮೀತ್ ಸಿಂಗ್ ಅವರು, 5 ಲಕ್ಷ ಪರಿಹಾರ ಚೆಕ್ ಅನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, 'ನಮ್ಮ ಕಚೇರಿಯಲ್ಲಿಯೇ ಇರುವ ಕೆಲವು ಸಿಬ್ಬಂದಿ ಮಾಡಿರುವ ತಪ್ಪಿನಿಂದ ಈ ಅನಾಹುತವಾಗಿದೆ. ಇದೀಗ ಸರಿಯಾಗಿದೆ. ತಪ್ಪಾಯ್ತು, ಕ್ಷಮಿಸಿ. ಯಾವುದೇ ಸಂಕೋಚವಿಲ್ಲದೆ ಕಚೇರಿಯ ಸಂಪರ್ಕದಲ್ಲಿದ್ದು, ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಸಲಹೆ ನೀಡಿದರು ಎಂದು ದಿ. ಬಸವಂತಪ್ಪ ಪುತ್ರ ವಿಜಯಕುಮಾರ್, ಪತ್ನಿ ಕಸ್ತೂರಿಬಾಯಿ 'ಕನ್ನಡಪ್ರಭ' ತಿಳಿಸಿದ್ದಾರೆ.
2004ರಲ್ಲಿ ಆಟೋ ಚಾಲಕನೊಬ್ಬ ಚಾಕು ಇರಿದು ಎಎಸ್ಐ ಬಸವಂತಪ್ಪ ಅವರನ್ನು ಕೊಲೆ ಮಾಡಿದ್ದ. ಕರ್ತವ್ಯ ನಿರತವಾಗಿರುವಾಗಲೇ ಸಾವಿಗೀಡಾಗಿದ್ದರಿಂದ ಕಾನೂನಿನ ಪ್ರಕಾರ ಬಸವಂತಪ್ಪ ಕುಟುಂಬಕ್ಕೆ ಸರ್ಕಾರ 5 ಲಕ್ಷ ಪರಿಹಾರ ನೀಡಬೇಕಿತ್ತು. ಆದರೆ, ಅಂದಿನಿಂದ ಇಂದಿನವರೆಗೂ ಬಸವಂತಪ್ಪ ಕುಟುಂಬಕ್ಕೆ ಪರಿಹಾರ ಮರೀಚಿಕೆಯಾಗಿತ್ತು.