ಇಂದಿನಿಂದ ಅಧಿವೇಶನ
ವಿಧಾನ ಮಂಡಲದ 2014ನೇ ಸಾಲಿನ ಅಧಿವೇಶನಕ್ಕೆ ಬುಧವಾರ ಚಾಲನೆ ಸಿಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ...
ಕನ್ನಡಪ್ರಭ ವಾರ್ತೆ ಬೆಂಗಳೂರು ಜ.21
ವಿಧಾನ ಮಂಡಲದ 2014ನೇ ಸಾಲಿನ ಅಧಿವೇಶನಕ್ಕೆ ಬುಧವಾರ ಚಾಲನೆ ಸಿಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ರಾಜ್ಯಪಾಲರ ಮೂಲಕ ತನ್ನ ಮುಂದಿನ ಮಾರ್ಗಸೂಚಿಗಳನ್ನು ಪ್ರಕಟಿಸಲಿದೆ.
ಬುಧವಾರ ಮಧ್ಯಾಹ್ನ 12 ಗಂಟೆಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ವಿಧಾನಸಭೆ ಸಭಾಂಗಣದಲ್ಲಿ ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಭಾಷಣ ಮಾಡುವ ಮೂಲಕ ಹೊಸ ವರ್ಷದ ಅಧಿವೇಶನಕ್ಕೆ ನಾಂದಿ ಹಾಡಲಿದ್ದಾರೆ.
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ತಿಂಗಳು ಸರ್ಕಾರ 2014-15ನೇ ಸಾಲಿನ ಆಯವ್ಯಯ ಮಂಡಿಸಲಿರುವುದರಿಂದ ಅದಕ್ಕೆ ಪೂರಕವಾದ ಅಂಶಗಳನ್ನು ರಾಜ್ಯಪಾಲರ ಭಾಷಣದಲ್ಲಿ ಪ್ರಕಟಿಸಲಿದ್ದು, ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ಪ್ರಕಟಿಸುವ ಮುನ್ಸೂಚನೆಯನ್ನು ನೀಡಲಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯಪಾಲರು ಜಂಟಿ ಅಧಿವೇಶನವನ್ನುದ್ದೇಶಿಸಿ ಮಾಡಿದ ಮೊದಲ ಭಾಷಣದಲ್ಲಿ ಹಿಂದಿನ ಸರ್ಕಾರದ ಟೀಕೆಗೆ ಹೆಚ್ಚು ಒತ್ತು ನೀಡಿದ್ದರಿಂದಾಗಿ ಸರ್ಕಾರ ತೀವ್ರ ತರಾಟೆಗೆ ಒಳಗಾಗಿತ್ತು. ಆದರೆ, ಈ ಬಾರಿ ಅಂತಹ ಟೀಕೆಗಳಿಗೆ ಭಾಷಣದಲ್ಲಿ ಅವಕಾಶ ಇರುವುದಿಲ್ಲ. ಬದಲಾಗಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆಗಿರುವ ಸಾಧನೆಗಳು ಹಾಗೂ ಮುಂದಿನ ಒಂದು ವರ್ಷದ ಯೋಜನೆಗಳ ಬಗ್ಗೆ ಮಾತ್ರ ಪ್ರಸ್ತಾಪ ಇರುತ್ತದೆ.
ಪ್ರತಿಪಕ್ಷ ಸಿದ್ಧ: ಬರ ಪರಿಸ್ಥಿತಿ, ರೈತರಿಗೆ ಪರಿಹಾರ ವಿತರಣೆ, ಗುಲ್ಬರ್ಗದಲ್ಲಿ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ದುರಂತ ಅಂತ್ಯ ಪ್ರಕರಣ, ಸಿಇಟಿ ವಿವಾದ, ಮರಳು ವಿವಾದ, ವಿವಿಧ ಇಲಾಖೆಗಳಲ್ಲಿ ಆಗುತ್ತಿರುವ ಸಮಸ್ಯೆಗಳು ಸೇರಿದಂತೆ ಹಲವು ವಿಚಾರಗಳನ್ನು ಕೈಗೆತ್ತಿಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಿದ್ಧವಾಗಿವೆ. ಅದರಲ್ಲೂ ಮಲ್ಲಿಕಾರ್ಜುನ ಬಂಡೆ ಸಾವು ಪ್ರಕರಣವನ್ನು ಕೈಗೆತ್ತಿಕೊಂಡು ಸರ್ಕಾರದ ವಿರುದ್ಧ ಸಮರ ಸಾರಲು ಬಿಜೆಪಿ ತುದಿಗಾಲಲ್ಲಿ ನಿಂತಿದೆ. ಈಗಾಗಲೇ ಪ್ರಕರಣದ ಕುರಿತು ಸಿಬಿಐ ತನಿಖೆಗೆ ಆದೇಶಿಸುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಗ್ರಹಿಸಿದ್ದು, ಸದನದಲ್ಲೂ ಬಿಜೆಪಿ ಇದನ್ನು ಪ್ರಸ್ತಾಪಿಸಲಿದೆ.
ಐದು ದಿನ ಮಾತ್ರ: ಒಟ್ಟು ಏಳು ದಿನ ಅಧಿವೇಶನ ಇದೆಯಾದರೂ ಮೊದಲ ಎರಡು ದಿನಗಳು ರಾಜ್ಯಪಾಲರ ಭಾಷಣ ಮತ್ತು ಸಂತಾಪ ಸೂಚನೆ ನಿರ್ಣಯಕ್ಕೆ ಮೀಸಲು. ಇನ್ನುಳಿದ ಐದು ದಿನಗಳಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆ ಜತೆಗೆ ಪ್ರಶ್ನೋತ್ತರ ಅವಧಿಯೂ ಇರಲಿದ್ದು, ಇನ್ನುಳಿದ ಸಮಯದಲ್ಲಿ ಈ ಎಲ್ಲಾ ಅಂಶಗಳನ್ನು ಪ್ರಸ್ತಾಪಿಸಬೇಕಾಗುತ್ತದೆ. ಹೀಗಾಗಿ ಪ್ರತಿಪಕ್ಷಗಳು ಪ್ರಸ್ತಾಪಿಸುವ ವಿಚಾರಗಳ ಬಗ್ಗೆ ಚರ್ಚೆಗೆ ಹೆಚ್ಚು ಕಾಲಾವಕಾಶವಾಗುವ ಸಾಧ್ಯತೆ ಕಡಿಮೆ.
ರಾಜ್ಯಪಾಲರ ಭಾಷಣದ ವೇಳೆ ಎಚ್‌ಡಿಕೆ ಪ್ರತಿಪಕ್ಷ ನಾಯಕ : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕೆಜೆಪಿಯ ಇತರೆ ಮೂವರು ಶಾಸಕರ ಸೇರ್ಪಡೆಯಿಂದಾಗಿ ಬಿಜೆಪಿ ವಿಧಾನಸಭೆಯಲ್ಲಿ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆಯಾದರೂ ಬುಧವಾರ ರಾಜ್ಯಪಾಲರ ಭಾಷಣದ ವೇಳೆ ಜೆಡಿಎಸ್ ಪ್ರಮುಖ ಪ್ರತಿಪಕ್ಷವಾಗಿ ಮತ್ತು ಎಚ್.ಡಿ. ಕುಮಾರಸ್ವಾಮಿ ಪ್ರತಿಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ವರ್ಷದ ಮೊದಲ ಅಧಿವೇಶನ ರಾಜ್ಯಪಾಲರ ಭಾಷಣದೊಂದಿಗೆ ಆರಂಭವಾಗಬೇಕಾಗಿರುವುದರಿಂದ ಅದಕ್ಕೆ ಮುನ್ನ ವಿಧಾನಸಭೆಯಲ್ಲಿ ಬೇರೆ ಯಾವುದೇ ಪ್ರಕ್ರಿಯೆಗಳನ್ನು ನಡೆಸಲು ಅವಕಾಶವಿಲ್ಲ. ಆದ್ದರಿಂದ ಹೊಸ ಪ್ರತಿಪಕ್ಷ ನಾಯಕರ ಆಯ್ಕೆ ಗುರುವಾರವಷ್ಟೇ ನಡೆಯಲಿದೆ. ಹೀಗಾಗಿ ಬುಧವಾರ ರಾಜ್ಯಪಾಲರ ಭಾಷಣದ ವೇಳೆಗೆ ಜೆಡಿಎಸ್ ಪ್ರಮುಖ ಪ್ರತಿಪಕ್ಷವಾಗಿರುತ್ತದೆ. ರಾಜ್ಯಪಾಲರ ಭಾಷಣ ಮುಗಿದು ಮತ್ತೆ ಕಲಾಪ ಆರಂಭವಾದಾಗ ಯಡಿಯೂರಪ್ಪ ಸೇರಿದಂತೆ ಕೆಜೆಪಿಯ ನಾಲ್ವರು ಶಾಸಕರು ಬಿಜೆಪಿ ಸೇರಿರುವುದನ್ನು ಸಭಾಧ್ಯಕ್ಷರು ಪ್ರಕಟಿಸುತ್ತಾರೆ. ಬಳಿಕ ಅಧಿವೇಶನವನ್ನು ಗುರುವಾರಕ್ಕೆ ಮುಂದೂಡಲಾಗುತ್ತದೆ. ಗುರುವಾರ ಕಲಾಪ ಆರಂಭವಾದ ಬಳಿಕ ಪ್ರತಿಪಕ್ಷಗಳ ಸದಸ್ಯರ ಸಂಖ್ಯೆ ಆಧರಿಸಿ ಸಭಾಧ್ಯಕ್ಷರು ಬಿಜೆಪಿಯನ್ನು ಅಧಿಕೃತ ಪ್ರತಿಪಕ್ಷ ಎಂದು ಘೋಷಿಸಿ, ಜಗದೀಶ್ ಶೆಟ್ಟರ್ ಅವರಿಗೆ ಪ್ರತಿಪಕ್ಷ ನಾಯಕನ ಸ್ಥಾನಮಾನ ನೀಡಲಿದ್ದಾರೆ.
ಕೆಜೆಪಿ ಶಾಸಕರಾಗಿ ಮುಂದುವರಿಕೆ: ಕೆಜೆಪಿಯನ್ನು ಬಿಜೆಪಿ ಜತೆ ವಿಲೀನಗೊಳಿಸಿರುವುದಾಗಿ ಹೇಳಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಾಲ್ವರು ಶಾಸಕರೊಂದಿಗೆ ಬಿಜೆಪಿ ಸೇರಿರಬಹುದು. ಆದರೆ, ಉಳಿದ ಇಬ್ಬರು ವಿಧಾನಸಭೆಯಲ್ಲಿ ಕೆಜೆಪಿ ಶಾಸಕರಾಗಿಯೇ ಮುಂದುವರಿಯಲಿದ್ದಾರೆ. ಏಕೆಂದರೆ, ವಿಧಾನಸಭೆ ದಾಖಲೆಗಳಲ್ಲಿ ಯಡಿಯೂರಪ್ಪ ಸೇರಿದಂತೆ ಆರು ಶಾಸಕರನ್ನು ಕೆಜೆಪಿ ಶಾಸಕರೆಂದು ಪರಿಗಣಿಸಲಾಗಿದೆ. ಯಡಿಯೂರಪ್ಪ ಅವರು ಮೂರನೇ ಎರಡು ಬಹುಮತದೊಂದಿಗೆ ಬಿಜೆಪಿ ಸೇರಿದ್ದರೂ ಕೆಜೆಪಿಯಿಂದ ಆಯ್ಕೆಯಾಗಿರುವ ಬಿ.ಆರ್. ಪಾಟೀಲ್ ಮತ್ತು ಗುರು ಪಾಟೀಲ್ ಅವರು ಇನ್ನೂ ಆ ಪಕ್ಷದ ಶಾಸಕರಾಗಿಯೇ ಉಳಿದುಕೊಂಡಿದ್ದಾರೆ. ಹೀಗಾಗಿ ಪ್ರತಿಪಕ್ಷದ ಸಾಲಿನಲ್ಲಿ ಇವರನ್ನು ಕೆಜೆಪಿ ಶಾಸಕರೆಂದೇ ಪರಿಗಣಿಸಿ ಮಾನ್ಯತೆ ನೀಡಲಾಗುತ್ತದೆ ಎಂದು ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ತಿಳಿಸಿದರು.