ಇಡೀ ದಿನ ಹೈಡ್ರಾಮಾ, ಪೊಲೀಸ್-ಆಪ್ ನಡುವೆ ಸಂಘರ್ಷ, ಕೇಜ್ರಿ ಬೀದಿ ಹೋರಾಟಕ್ಕೆ ಖಂಡನೆ, ಲೆ. ಗವರ್ನರ್ ಮಧ್ಯಸ್ಥಿಕೆ ಇಬ್ಬರು ಅಧಿಕಾರಿಗಳು ರಜೆ ಮೇಲೆ, ಪ್ರತಿಭಟನೆಗೆ ಬಿತ್ತು ತೆರೆ
ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ 2 ದಿನಗಳ ...
ನವದೆಹಲಿ: ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ 2 ದಿನಗಳ ಪ್ರತಿಭಟನೆ ಅಂತ್ಯಗೊಳಿಸಿದ್ದಾರೆ.
ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರದ ನಡುವಿನ ಜಟಾಪಟಿಯ ಮಧ್ಯಸ್ಥಿಕೆ ವಹಿಸಿದ ಲೆಫ್ಟಿನೆಂಟ್ ಗವರ್ನರ್ ಅವರು, ಇಬ್ಬರು ಸ್ಟೇಷನ್ ಹೆಡ್ ಆಫೀಸರ್ಗಳನ್ನು ರಜೆ ಮೇಲೆ ಕಳುಹಿಸುವುದರೊಂದಿಗೆ ಈ ಧರಣಿ ಡ್ರಾಮಾ ಅಂತ್ಯಗೊಂಡಿದೆ. ಅಲ್ಲಿಗೆ ದೆಹಲಿ 'ಆಮ್ ಆದ್ಮಿ' ನಿಟ್ಟುಸಿರು ಬಿಟ್ಟಿದ್ದಾರೆ.
ಸೋಮವಾರ ಬೆಳಗ್ಗೆ ಆರಂಭವಾಗಿದ್ದ ಆಮ್ ಆದ್ಮಿ ಪಕ್ಷದ ಪ್ರತಿಭಟನೆ, ದೆಹಲಿಯ ಭದ್ರತೆಗೆ ಆತಂಕ ತಂದಿತ್ತು. ಅಲ್ಲದೆ ದೆಹಲಿ ಜನತೆ ಸೇರಿದಂತೆ ರಾಜಕೀಯ ವಲಯದಿಂದ ಟೀಕೆಗೆ ಒಳಗಾಗಿತ್ತು.
ಮಂಗಳವಾರ ಕೊಂಚ ಉದ್ರಿಕ್ತರಂತೆ ಕಂಡುಬಂದಿದ್ದ ಕೇಜ್ರಿವಾಲ್ ಅವರೇ ಗಣರಾಜ್ಯೋತ್ಸವಕ್ಕೆ ಅಗೌರವ ತರುವ ರೀತಿಯಲ್ಲಿ ಮಾತನಾಡಿದ್ದರು. ಇದಾದ ಬಳಿಕವಂತೂ ಸ್ವಯಂ ಆಮ್ ಆದ್ಮಿ ಪಕ್ಷದ ಸದಸ್ಯರಿಂದಲೇ ಆಕ್ಷೇಪ ವ್ಯಕ್ತವಾಗಿತ್ತು. ಈ ಬೆಳವಣಿಗೆಗಳ ನಂತರ ರಾತ್ರಿ 7.30ರ ವೇಳೆಗೆ ಲೆ.ಗವರ್ನರ್ ಅವರ ಮಧ್ಯಪ್ರವೇಶ ಈ ಎಲ್ಲಾ ನಾಟಕಕ್ಕೆ ತೆರೆ ಎಳೆಯಿತು.
ಸುಪ್ರೀಂಕೋರ್ಟ್ನಲ್ಲಿ ಅರ್ಜಿ
ಎಎಪಿಯ ಪ್ರತಿಭಟನೆ ವಿರುದ್ಧ ವಕೀಲರೊಬ್ಬರು ಸುಪ್ರೀಂಕೋರ್ಟ್ ಕದ ಬಡಿದರು. ಈ ಸಂಬಂಧ ವಿಚಾರಣೆಗೆ ಸ್ವೀಕರಿಸಿದ ನ್ಯಾಯಾಲಯ ಶುಕ್ರವಾರ ಕೈಗೆತ್ತಿಕೊಳ್ಳುವುದಾಗಿ ಹೇಳಿತು. ಕಾನೂನು ಸಚಿವ ಸೋಮನಾಥ ಭಾರ್ತಿ ಅವರು ಕಾನೂನು ಕೈಗೆತ್ತಿಕೊಂಡಿದ್ದಾರೆ. ಅರವಿಂದ ಕೇಜ್ರಿವಾಲ್ ಅವರು ಸಾಂವಿಧಾನಿಕ ಸ್ಥಾನದಲ್ಲಿದ್ದು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದರು. ಬಿಜೆಪಿ ಕೂಡ ಕೇಜ್ರಿವಾಲ್ ಮತ್ತು ಸೋಮನಾಥ್ ಭಾರ್ತಿ ವಿರುದ್ಧ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತು. ಇವರಿಬ್ಬರು ಚುನಾವಣೆ ಸಂದರ್ಭದಲ್ಲಿ ಅಗತ್ಯಕ್ಕಿಂತ ಹೆಚ್ಚು ವೆಚ್ಚ ಮಾಡಿದ್ದಾರೆ ಎಂದು ದೂರು ನೀಡಿತು.
ಪೊಲೀಸರೊಂದಿಗೆ ಕಾರ್ಯಕರ್ತರ ಕಾಳಗ
ಮಂಗಳವಾರ ಮಧ್ಯಾಹ್ನದ ವೇಳೆಗೆ ಎಎಪಿ ಕಾರ್ಯಕರ್ತರು ಪೊಲೀಸರೊಂದಿಗೆ ಕಾಳಗಕ್ಕೆ ಇಳಿದರು. ಕೆಲವು ಕಾರ್ಯಕರ್ತರು ತಮ್ಮ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದರು. ಅದೇ ಸಮಯಕ್ಕೆ ಎಎಪಿ ಕಾರ್ಯಕರ್ತರು ಬ್ಯಾರಿಕೇಡ್ ಭೇದಿಸಿ ಮುನ್ನುಗ್ಗಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಎಎಪಿ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿತು. ಘಟನೆಯಲ್ಲಿ ಇಬ್ಬರು ಪೊಲೀಸರು ಸೇರಿದಂತೆ 12 ಮಂದಿ ಗಾಯಗೊಂಡರು.
ಮಾತು ತಂದ ಎಡವಟ್ಟು
ಮಾತಿನ ಭರದಲ್ಲಿ ಅರವಿಂದ ಕೇಜ್ರಿವಾಲ್ ಅವರು ಗಣರಾಜ್ಯೋತ್ಸವಕ್ಕೇ ಅಗೌರವ ತಂದು ಬಿಟ್ಟರು. ಯಾರಿಗಾಗಿ ಗಣರಾಜ್ಯೋತ್ಸವ ಆಚರಣೆ? ಕೇವಲ ವಿಐಪಿಗಳ ಖುಷಿಗಾಗಿ ಮಾಡಲಾಗುತ್ತಿದೆ. ಜ.26 ರಂದು ರಾಜಪಥ್ನಲ್ಲಿ ಲಕ್ಷ ಜನರನ್ನು ಸೇರಿಸಿ ಗಣರಾಜ್ಯೋತ್ಸವಕ್ಕೆ ಅಡ್ಡಿ ಮಾಡುತ್ತೇವೆ ಎಂದರು. ಕೇಜ್ರಿವಾಲ್ ಅವರ ಈ ಹೇಳಿಕೆಗೆ ಬಿಜೆಪಿ ಕಡೆಯಿಂದ ತೀವ್ರ ಟೀಕೆ ವ್ಯಕ್ತವಾಯಿತು. ಗಣರಾಜ್ಯೋತ್ಸವವನ್ನು ಯಾವುದೇ ಪಕ್ಷ ಮಾಡುವುದಿಲ್ಲ. ಇದನ್ನು ಯೋಧರಿಗಾಗಿ ಮಾಡಲಾಗುತ್ತಿದೆ. ಒಬ್ಬ ಜವಾಬ್ದಾರಿಯುತ ಸಿಎಂ ಆಗಿ ಇಂಥ ಹೇಳಿಕೆ ನೀಡುವಾಗ ಎಚ್ಚರಿಕೆ ಇರಲಿ. ಅಲ್ಲದೆ ಈ ಬಗ್ಗೆ ಯೋಧರ ಕ್ಷಮೆ ಕೇಳಬೇಕು ಎಂದು ಪಕ್ಷದ ವಕ್ತಾರ ಪ್ರಕಾಶ್ ಜಾವಡೇಕರ್ ಆಗ್ರಹಿಸಿದರು.
ಯು-ಟರ್ನ್ ಏಕೆ?
ಪೊಲೀಸರನ್ನು ಅಮಾನತು ಮಾಡದೇ ಒಂದು ಹೆಜ್ಜೆ ಕೂಡ ಹಿಂದಕ್ಕೆ ಇಡುವುದಿಲ್ಲ ಎಂದಿದ್ದ ಕೇಜ್ರಿವಾಲ್ ಅವರು, ದಿಢೀರನೆ ಧರಣಿ ವಾಪಸ್ ತೆಗೆದುಕೊಂಡದ್ದು ಏಕೆ ಎಂಬ ಪ್ರಶ್ನೆ ಕೂಡ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಕೆಳ ಹಂತದ ಪೊಲೀಸರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿ ಕೇಜ್ರಿವಾಲ್ ಪ್ರತಿಭಟನೆಗೆ ಮುಂದಾಗಿದ್ದನ್ನು ದೆಹಲಿಯ ಬಹುಸಂಖ್ಯಾತ ಜನ ಒಪ್ಪಿರಲಿಲ್ಲ. ಅಲ್ಲದೆ ಎರಡು ದಿನಗಳ ಟ್ರಾಫಿಕ್ ಜಾಮ್ ಮತ್ತು ಕಿರಿಕಿರಿ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಎಲ್ಲಿ ಜನ ತಮ್ಮ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಾರೆಯೋ ಎಂಬ ಭಯದಿಂದ ಕೇಜ್ರಿವಾಲ್ ಇಬ್ಬರು ಪೊಲೀಸರನ್ನು ರಜೆ ಮೇಲೆ ಕಳುಹಿಸಿದ ತಕ್ಷಣವೇ ಧರಣಿ ವಾಪಸ್ ತೆಗೆದುಕೊಂಡರು ಎನ್ನಲಾಗುತ್ತಿದೆ.
ಯಾರಿಗಾಗಿ ಗಣರಾಜ್ಯೋತ್ಸವ? ಇದು ಕೇವಲ ವಿಐಪಿಗಳ ಮನರಂಜನೆಗಾಗಿ ಮಾಡುತ್ತಿರುವ ಕಾರ್ಯಕ್ರಮ. ಇದರಿಂದ ಯಾರಿಗೂ ಉಪಯೋಗವಿಲ್ಲ. ನಾವು ಗಣರಾಜ್ಯೋತ್ಸವಕ್ಕೆ ಅಡ್ಡಿ ಮಾಡುತ್ತೇವೆ.
- ಅರವಿಂದ್ ಕೇಜ್ರಿವಾಲ್
(ಮಂಗಳವಾರ ಬೆಳಗ್ಗೆ)
ಕೇಜ್ರಿವಾಲ್ ಮತ್ತು ಸಂಪುಟದ ಸಹೋದ್ಯೋಗಿಗಳು ವಾಪಸ್ ಹೋಗಲಿ. ಎಎಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಲಿ. ಕ್ಯಾಬಿನೆಟ್ ದೊಡ್ಡ ಮತ್ತು ಗಂಭೀರ ವಿಚಾರಗಳ ಬಗ್ಗೆ ಗಮನಹರಿಸಬೇಕು.
- ಕ್ಯಾ. ಗೋಪಿನಾಥ್
ದೆಹಲಿಯಲ್ಲಿ ಆಗುತ್ತಿರುವ ಬೆಳವಣಿಗೆಗಳು ಸರಿ ಎಂದು ನನಗನಿಸುತ್ತಿಲ್ಲ. ಪ್ರತಿಭಟನೆಯಿಂದ ನೋವು ಅನುಭವಿಸುತ್ತಿರುವವರು ಜನತೆ. ನಾಳೆ ಡೆಲ್ಲಿ ಜನತೆ ಸೆಕ್ರೆಟರಿಯಟ್ ಮುಂದೆ ನಿಂತು ಕಾರ್ಯನಿರ್ವಹಿಸಲು ಬಿಡಲ್ಲ ಎನ್ನುತ್ತಾರೆ.
- ಸಂತೋಷ್ ಹೆಗ್ಡೆ
ಈಗಲೂ 1940 - 50ರ ಸಿದ್ಧಾಂತಗಳನ್ನು ಅನುಸರಿಸುವುದು ಬೇಡ. ಕೇಜ್ರಿವಾಲ್ ಈ ಕಾಲಕ್ಕೆ ತಕ್ಕ ಸಿದ್ಧಾಂತಗಳನ್ನು ಅನುಸರಿಸುವುದು ಸೂಕ್ತ. ಅವರ ಕೆಲವೊಂದು ನಿರ್ಧಾರಗಳು ಆಗಿನ ಕಾಲಕ್ಕೆ ತಕ್ಕಂತೆ ಇವೆ.
- ನಾರಾಯಣಮೂರ್ತಿ