ನಕಲಿ ಅಂಕಪಟ್ಟಿ: ದೂರು ದೂರ
ನಕಲು ಅಂಕಪಟ್ಟಿ ಪಡೆದುಕೊಂಡು ಸಿಕ್ಕಿಬಿದ್ದ ವ್ಯಕ್ತಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಬೆಂಗಳೂರು ವಿಶ್ವವಿದ್ಯಾಲಯ ಎರಡು ...
ಬೆಂಗಳೂರು: ನಕಲು ಅಂಕಪಟ್ಟಿ ಪಡೆದುಕೊಂಡು ಸಿಕ್ಕಿಬಿದ್ದ ವ್ಯಕ್ತಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಬೆಂಗಳೂರು ವಿಶ್ವವಿದ್ಯಾಲಯ ಎರಡು ವರ್ಷದಿಂದ ವಿಳಂಬ ನೀತಿ ಅನುಸರಿಸುತ್ತಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.
ಅಂಚೆ ತೆರಪು ಹಾಗೂ ದೂರಶಿಕ್ಷಣ ನಿರ್ದೇಶನಾಲಯದಲ್ಲಿ ನಡೆದಿರುವ ಈ ನಕಲಿ ಅಂಕಪಟ್ಟಿ ಪ್ರಕರಣವನ್ನು ವಿವಿ ಕುಲಸಚಿವರೇ ಪರಿಶೀಲಿಸಿ ನಕಲಿ ಎಂದು ಗುರುತಿಸಿದ್ದಾರೆ. ಅಲ್ಲದೆ, ಈ ವ್ಯಕ್ತಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕಬೇಕು ಎಂದು ಎರಡು ವರ್ಷದ ಹಿಂದೆಯೇ ಸೂಚಿಸಿದ್ದಾರೆ. ಆದರೆ, ಇದುವರೆಗೂ ಯಾವುದೇ ಮೊಕದ್ದಮೆ ದಾಖಲಾಗದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ.
ಏನಿದು ಪ್ರಕರಣ?: ಬೆಂಗಳೂರು ವಿಶ್ವವಿದ್ಯಾಲಯದ ಅಂಚೆ ತೆರಪು ಹಾಗೂ ದೂರ ಶಿಕ್ಷಣ ನಿರ್ದೇಶನಾಲಯದಲ್ಲಿ 2002-03ನೇ ಸಾಲಿನಲ್ಲಿ ಎಚ್.ಕೆ. ರಾಚಪ್ಪ ಎಂಬ ಅಭ್ಯರ್ಥಿ ಇತಿಹಾಸದಲ್ಲಿ ಎಂ.ಎ. ಕೋರ್ಸ್ಗೆ ಪ್ರವೇಶ ಪಡೆದುಕೊಂಡಿದ್ದರು. ಪ್ರವೇಶ ಪಡೆದ ವ್ಯಕ್ತಿ ಫಲಿತಾಂಶ 2006ರಲ್ಲಿ ಪರೀಕ್ಷೆ ಬರೆದು ಉತ್ತೀರ್ಣರಾಗಲು ಪಡೆದುಕೊಳ್ಳಬೇಕಾಗಿದ್ದ ಕನಿಷ್ಠ ಅಂಕ ಸಿಗದ ಕಾರಣ ಅನುತ್ತೀರ್ಣ ಎಂದು ಪರಿಗಣಿಸಲಾಗಿತ್ತು. ಆದರೆ, ಆತ ವಿವಿ ನೀಡುವ ಅಂಕಪಟ್ಟಿಯನ್ನೇ ಹೋಲುವ ಅಂಕಪಟ್ಟಿ ಪಡೆದು ಅದರಲ್ಲಿ ಕೈಬರಹದಲ್ಲಿ ಅಂಕಗಳನ್ನು ದಾಖಲಿಸಿ
ತಾನು ಉತ್ತೀರ್ಣ ಎಂದು ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲ, ಈ ಉತ್ತೀರ್ಣನಾಗಿರುವ ಅಂಕಪಟ್ಟಿ ತೋರಿಸಿ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಕಾನೂನು ಕೋರ್ಸ್ಗೂ ರಾಚಪ್ಪ ಪ್ರವೇಶ ಪಡೆದುಕೊಂಡಿದ್ದಾರೆ.
ಆದರೆ, ರಾಚಪ್ಪ ಎಂ.ಎ. ನಲ್ಲಿ ಉತ್ತೀರ್ಣರಾಗಿಲ್ಲ ಎಂಬುವುದು ಮಾಹಿತಿ ಹಕ್ಕು ಕಾಯ್ದೆಯಲ್ಲಿ ವಿವಿಯಿಂದ ಪಡೆದಿರುವ ಅಸಲಿ ಅಂಕಪಟ್ಟಿ ದೃಢಪಡಿಸುತ್ತದೆ.
ಕೋರ್ಸ್ಗೆ ಅಡ್ಡಿ: ವಿವೇಕಾನಂದ ಕಾಲೇಜಿನಲ್ಲಿ ಎಲ್ಎಲ್ಬಿ ಪಡೆಯುವ ಸಂದರ್ಭದಲ್ಲಿ ಎಸ್. ಸೀತಾರಾಮ್ ಎಂಬುವರು ರಾಚಪ್ಪ ಅವರ ಎಂ.ಎ. ಬಗ್ಗೆ ಆರ್ಟಿಐ ಮೂಲಕ ವಿವಿಯಿಂದ ಮಾಹಿತಿ ಪಡೆದಿದ್ದಾರೆ. ಈ ಮಾಹಿತಿ ಪ್ರಕಾರ ಅಂದಿನ ವಿವಿ ಕುಲಸಚಿವ(ಮೌಲ್ಯಮಾಪನ) ಟಿ.ಆರ್. ಸುಬ್ರಹ್ಮಣ್ಯ ಅವರು ರಾಚಪ್ಪ ಅವರ ಅಂಕಪಟ್ಟಿಯನ್ನು ಪರಿಶೀಲಿಸಿ ನೋಡಿದಾಗ ಇದೊಂದು 'ನಿಜ'ವಾದ ಅಂಕಪಟ್ಟಿ ಅಲ್ಲ. ಅಂಕಪಟ್ಟಿಯನ್ನು ವಿವಿ ನೀಡಿಲ್ಲ. ಹೀಗಾಗಿ ಇದೊಂದು ನಕಲಿ ಪ್ರಕರಣ ಎಂಬ ತೀರ್ಮಾನಕ್ಕೆ ಬಂದು ಅಭ್ಯರ್ಥಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಮುಂದಾಗಿದ್ದರು. ಜತೆಗೆ 2011ರಲ್ಲಿ ಅರ್ಜಿದಾರರಿಗೂ ಪತ್ರದ ಮೂಲಕ ವಿಷಯ ತಿಳಿಸಿದ್ದರು. ಆದರೆ, ಇದುವರೆಗೂ ಆರೋಪಿ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ ದಾಖಲಾಗಿಲ್ಲ.
ಅಂಕಪಟ್ಟಿ ಸಿಕ್ಕಿದ್ದೆಲ್ಲಿ?: ಬೆಂಗಳೂರು ವಿಶ್ವವಿದ್ಯಾಲಯ ರಾಚಪ್ಪ ಅವರಿಗೆ ಅನುತ್ತೀರ್ಣರಾದ ಅಂಕಪಟ್ಟಿ ನೀಡಿರುವ ಸಂಖ್ಯೆ ಮೊದಲ ವರ್ಷ(0126) ಹಾಗೂ ದ್ವಿತೀಯ ವರ್ಷ ಅಂಕಪಟ್ಟಿ ಸಂಖ್ಯೆ (0590) ಆಗಿದೆ. ಆದರೆ, ರಾಚಪ್ಪ ಬಳಿ ಉತ್ತೀರ್ಣರಾಗಿರುವ ಅಂಕಪಟ್ಟಿಯಲ್ಲಿರುವ ಸಂಖ್ಯೆ ಕ್ರಮವಾಗಿ 0390 ಮತ್ತು 0380 ಆಗಿದೆ.
ಅಲ್ಲದೆ, ರಾಚಪ್ಪ ಅವರ ಉತ್ತೀರ್ಣದ ಅಂಕಪಟ್ಟಿಯಲ್ಲಿ ಕೈ ಬರಹದಿಂದ ಅಂಕಗಳನ್ನು ನಮೂದಿಸಲಾಗಿದೆ. 2006ರಲ್ಲಿ ವಿವಿ ಕಂಪ್ಯೂಟರ್ ತಂತ್ರಜ್ಞಾನದಿಂದ ಪ್ರಿಟಿಂಗ್ ಮಾಡುತ್ತಿತ್ತು ಎಂದು ತಿಳಿದು ಬಂದಿರುವುದರಿಂದ ಇದು ನಕಲಿ ಅಂಕಪಟ್ಟಿ ಎಂಬುವುದು ಸಾಬೀತಾಗಿದೆ.
ಆದರೆ, ಖಾಲಿ ಅಂಕಪಟ್ಟಿ ರಾಚಪ್ಪ ಅವರಿಗೆ ಸಿಕ್ಕಿದ್ದಾದರೂ ಎಲ್ಲಿ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆದರೂ ವಿವಿ ಪರೀಕ್ಷಾ ವಿಭಾಗದ ಅಧಿಕಾರಿಗಳೇ ಇದನ್ನು ನೀಡಿರಬೇಕು. ಹೀಗಾಗಿ ರಾಚಪ್ಪ ಕೈ ಬರಹದಲ್ಲಿ ಹೆಚ್ಚಿನ ಅಂಕಗಳನ್ನು ನಮೂದಿಸಿಕೊಂಡಿದ್ದಾರೆ ಎಂಬುದು ಈ ಕುರಿತ ದಾಖಲೆಗಳನ್ನು ಪಡೆದುಕೊಂಡಿರುವ ಎಸ್. ಸೀತಾರಾಮ್ ಅವರ ಅಭಿಪ್ರಾಯ.
ಈ ಪ್ರಕರಣ ಬಹಳ ಹಿಂದಿನದ್ದಾಗಿದೆ. ಆದರೆ, ವಿವಿ ಹೆಸರಿನಲ್ಲಿ ನಕಲಿ ಅಂಕಪಟ್ಟಿ ಮುದ್ರಣಗೊಂಡಿರುವುದು ಬಹಳ ಆತಂಕಕಾರಿ ವಿಚಾರ. ಈ ಅಂಕಪಟ್ಟಿ ಹೇಗೆ ದೊರೆಯಿತು? ವಿವಿಯೇ ನೀಡಿತ್ತೆ, ಇಲ್ಲವೇ ಬೇರೆ ಕಡೆಯಿಂದ ನಕಲಿ ಅಂಕಪಟ್ಟಿ ತಯಾರಿಸಿಕೊಳ್ಳಲಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುವುದು.
- ಪ್ರೊ.ಬಿ.ತಿಮ್ಮೇಗೌಡ,
ಬೆಂಗಳೂರು ವಿವಿ ಕುಲಪತಿ
ಪ್ರಕರಣದ ಬಗ್ಗೆ ತನಿಖೆ ಆಗಬೇಕಿದೆ. ಪೊಲೀಸ್ ಇಲಾಖೆಯು ಕಾನೂನು ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದರೂ ಇದುವರೆಗೂ ಯಾವುದೇ ಕ್ರಮ ಜರುಗಿಸಿಲ್ಲ. ಈ ಹಿಂದೆಯೇ ಹೇಳಿರುವಂತೆ ಅಭ್ಯರ್ಥಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು.
- ಎಸ್. ಸೀತಾರಾಮ್,
ಅರ್ಜಿದಾರ
ದೇವರಾಜ್ ಎಲ್.