2005ಕ್ಕೂ ಮೊದಲ ನೋಟುಗಳು ವಾಪಸ್
ಮುಂಬೈ: ಕಪ್ಪುಹಣ ಮತ್ತು ಖೋಟಾನೋಟುಗಳ ವಿರುದ್ಧ ಸಮರ ಸಾರಿರುವ ಆರ್ಬಿಐ 'ಅಕ್ರಮ ಸಕ್ರಮ'ಕ್ಕೆ ಮುಂದಾಗಿದೆ.
ಮಾರ್ಚ್ 31, 2014ರ ನಂತರ 2005ಕ್ಕೂ ಮುನ್ನ ಮುದ್ರಿತವಾದ ನೋಟುಗಳು ಚಲಾವಣೆಯಲ್ಲಿರುವುದಿಲ್ಲ. ಹೀಗಾಗಿ ಏಪ್ರಿಲ್ 1 ರ ನಂತರ ಬ್ಯಾಂಕುಗಳು ನೋಟು ಬದಲಾವಣೆಯ ಯೋಜನೆ ಹಮ್ಮಿಕೊಂಡಿದ್ದು ನಿಮ್ಮಲ್ಲಿರುವ ಹಳೆ ನೋಟುಗಳನ್ನು ಹೊಸ ನೋಟುಗಳೊಂದಿಗೆ ಬದಲಾಯಿಸಿಕೊಳ್ಳಬೇಕು.
2005ಕ್ಕೂ ಮುಂಚಿನ ನೋಟುಗಳನ್ನು ಗುರುತಿಸುವುದು ಹೇಗೆ ಎಂದು ಜನ ಚಿಂತೆ ಮಾಡಬೇಕಿಲ್ಲ ಎಂದೂ ಆರ್ಬಿಐ ಹೇಳಿದೆ.
2005ಕ್ಕೂ ಮುನ್ನ ಮುದ್ರಿತವಾಗಿರುವ ನೋಟುಗಳಲ್ಲಿ ಪ್ರಿಂಟ್ ಆದ ವರ್ಷವನ್ನು ನಮೂದು ಮಾಡಲಾಗಿರುವುದಿಲ್ಲ. ನಿಮ್ಮಲ್ಲಿರುವ ನೋಟುಗಳ ಹಿಂದಿನ ಭಾಗದಲ್ಲಿ ಮುದ್ರಿತವಾಗಿರುವ ಇಸವಿ ಇದ್ದರೆ ಅದು ಸೇಫ್. ಇಲ್ಲದಿದ್ದರೆ ಹತ್ತಿರದ ಬ್ಯಾಂಕ್ಗೆ ಹೋಗಿ ಬದಲಾಯಿಸಿಕೊಳ್ಳಿ ಎಂದು ಆರ್ಬಿಐ ಹೇಳಿದೆ.
ಏಪ್ರಿಲ್ 1, 2014 ರಿಂದಲೇ ಜನ ಬ್ಯಾಂಕುಗಳಿಗೆ ಹೋಗಿ ನೋಟುಗಳನ್ನು ಬದಲಾಯಿಸಿಕೊಳ್ಳಬಹುದಾಗಿದೆ ಎಂದು ಅದು ಹೇಳಿದೆ. ಬ್ಯಾಂಕುಗಳು ಮುಂದಿನ ಸೂಚನೆ ಬರುವವರೆಗೂ ನೋಟುಗಳನ್ನು ಬದಲಾಯಿಸಿ ಕೊಡಬೇಕು ಎಂದು ಆರ್ಬಿಐ ಹೇಳಿದೆ. ಅಲ್ಲದೆ 2014ರ ಜುಲೈ 1 ರಿಂದ 500 ಮತ್ತು 1000 ಮುಖಬೆಲೆಯ 10ಕ್ಕೂ ಹೆಚ್ಚು ನೋಟುಗಳನ್ನು ಬದಲಾಯಿಸಿಕೊಳ್ಳಬೇಕಿದ್ದರೆ ಐಡಿ ಕಾರ್ಡ್ ತೋರಿಸಲೇಬೇಕು ಎಂಬ ನಿಯಮವನ್ನೂ ಆರ್ಬಿಐ ಜಾರಿಗೆ ತಂದಿದೆ.