ಇಂಡಿಯಾ ಶುಗರ್ಸ್ಗೆ ಮುಖಭಂಗ; ಕಬ್ಬು ಮುಕ್ತ ಮಾರಾಟಕ್ಕೆ ಸುಪ್ರೀಂ ಅಸ್ತು
ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ರೈತರು ತಾವು ಬೆಳೆದ ಕಬ್ಬನ್ನು ಮುಕ್ತವಾಗಿ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೊಸಪೇಟೆ ಕಬ್ಬು ಬೆಳೆಗಾರರಿಗೆ ಮುಕ್ತವಾಗಿ ಕಬ್ಬು ಮಾರಾಟ ಮಾಡಲು ಅವಕಾಶ ನೀಡಿದ್ದ ಜಿಲ್ಲಾಧಿಕಾರಿಗಳ ಆದೇಶಕ್ಕೆ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ಬದಿಗೊತ್ತಿದೆ. ರೈತರು ತಾವು ಬೆಳೆದ ಕಬ್ಬನ್ನು ನಿರ್ದಿಷ್ಟ ಕಾರ್ಖಾನೆಗೆ ಮಾರಾಟ ಮಾಡಬೇಕಿಲ್ಲ. ಅವರು ಇಚ್ಛಿಸಿದಲ್ಲಿ ಮಾರಾಟ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಹೊಸಪೇಟೆ ಕಬ್ಬು ಬೆಳೆಗಾರರು ಇಂಡಿಯಾ ಶುಗರ್ಸ್ಗೆ ಕಬ್ಬು ನೀಡಲು ನಿರಾಕರಿಸಿದ್ದರು. ಮತ್ತು ತಾವು ಕಬ್ಬನ್ನು ಮುಕ್ತವಾಗಿ ಮಾರಾಟ ಮಾಡಲು ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗಳನ್ನು ಕೋರಿದ್ದರು. ಜಿಲ್ಲಾಧಿಕಾರಿಗಳು ರೈತರ ಕೋರಿಕೆ ಒಪ್ಪಿ ಕಬ್ಬನ್ನು ಎಲ್ಲಿಯಾದರೂ ಮಾರಾಟ ಮಾಡಲು ಅನುಮತಿ ನೀಡಿದ್ದರು.
ಹೊಸಪೇಟೆಯ ಇಂಡಿಯಾ ಶುಗರ್ಸ್ ಆಡಳಿತ ಮಂಡಳಿ ಜಿಲ್ಲಾಧಿಕಾರಿಗಳ ಆದೇಶ ಪ್ರಶ್ನಿಸಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್, ಜಿಲ್ಲಾಧಿಕಾರಿಗಳ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು. ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ಪ್ರಶ್ನಿಸಿ ಹೊಸಪೇಟೆ ರೈತರು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಬುಧವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ರೈತರು ತಾವು ಬೆಳೆದ ಕಬ್ಬನ್ನು ಎಲ್ಲಿಯಾದರೂ ಮಾರಾಟ ಮಾಡುವ ಹಕ್ಕು ಹೊಂದಿದ್ದಾರೆ ಎಂದು ತಿಳಿಸಿ ಕರ್ನಾಟಕ ಹೈಕೋರ್ಟ್ ಆದೇಶವನ್ನು ಬದಿಗೊತ್ತಿದೆ. ರೈತರು ಈಗ ಮುಕ್ತವಾಗಿ ಕಬ್ಬು ಮಾರಾಟ ಮಾಡಬಹುದಾಗಿದೆ.