ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕನ್ನಡ ತಂತ್ರಾಂಶಕ್ಕೆ ಬಜೆಟ್ನಲ್ಲಿ ಹೆಚ್ಚು ಅನುದಾನ: ಸಿದ್ದರಾಮಯ್ಯ

Rashmi Kasaragodu
Updated On : 23 Jan 2014, 1:17 am

ಕ.ಪ್ರ.ವಾರ್ತೆ  ಬೆಂಗಳೂರು  ಜ. 22
ಕನ್ನಡ ತಂತ್ರಾಂಶಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ದವಾಗಿದೆ. ಮುಂದಿನ ಬಜೆಟ್ನಲ್ಲಿ ಇದಕ್ಕೆ ಹೆಚ್ಚುವರಿ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಡಾ.ಚಿದಾನಂದಗೌಡ ಅವರ ಸಮಿತಿಯ ಶಿಫಾರಸಿನಂತೆ ಈಗಾಗಲೇ 4 ತಂತ್ರಾಂಶಗಳು ತಯಾರಾಗಿರುವುದು ಸಂತೋಷದ ಸಂಗತಿ. ಉಳಿದ 6 ತಂತ್ರಾಂಶಗಳನ್ನು ಆದಷ್ಟು ಬೇಗ ಅಭಿವೃದ್ಧಿಪಡಿಸಿ. ಇದಕ್ಕೆ ಅಗತ್ಯವಿರುವ ಅನುದಾನವನ್ನು ರಾಜ್ಯ ಸರ್ಕಾರ ನೀಡಲಿದೆ ಎಂದು ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊರತಂದಿರುವ 4 ಕನ್ನಡ ತಂತ್ರಾಂಶಗಳನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಬಿಡುಗಡೆಗೊಳಿಸಿ ಮಾತನಾಡಿದರು.
ಕನ್ನಡದ ರಕ್ಷಣೆಗೆ ತಂತ್ರಾಂಶಗಳ ಅಭಿವೃದ್ಧಿ ಅನಿವಾರ್ಯ. ತಂತ್ರಜ್ಞಾನ, ಕಂಪ್ಯೂಟರ್ ಹಾಗೂ ಮೊಬೈಲ್ ಫೋನ್ನಲ್ಲಿಯೇ ಭವಿಷ್ಯವಿದೆ. ಇದಕ್ಕೆ ಸರ್ಕಾರ ಪ್ರಾಧಾನ್ಯತೆ ನೀಡದಿದ್ದರೇ ಬೇಜವಾಬ್ದಾರಿತನವಾಗುತ್ತದೆ. ಕನ್ನಡ ಬರದವರಿಗೆ ಕನ್ನಡ ಕಲಿಯಲು, ಇಂಗ್ಲಿಷ್ ಬರದವರಿಗೆ ಕನ್ನಡದಲ್ಲಿ ವ್ಯವಹರಿಸಲು ಈ ತಂತ್ರಾಂಶಗಳು ನೆರವಾಗಲಿವೆ ಎಂದು ಮುಖ್ಯಮಂತ್ರಿ ಹೇಳಿದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರರು ಸಿಕ್ಕಾಗಲೆಲ್ಲ ಯುನಿಕೋಡ್ ತಂತ್ರಾಂಶ ಅಭಿವೃದ್ಧಿಪಡಿಸುವ ಯೋಜನೆ ಏನಾಯಿತು ಎಂದು ಪ್ರಶ್ನಿಸುತ್ತಲೇ ಇದ್ದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ. ಉಳಿದ ತಂತ್ರಾಂಶಗಳು ಕೂಡಲೇ ಬಿಡುಗಡೆಗೆ ತಯಾರಾಗಲಿ ಎಂದು ಮುಖ್ಯಮಂತ್ರಿ ಆಶಿಸಿದರು.
ಈ ತಂತ್ರಜ್ಞಾನದಲ್ಲಿ ನಾನು ಪೆದ್ದ: ಈ ಮೊಬೈಲ್ ಫೋನ್ನಲ್ಲಿ ನನಗೆ ಏನೂ ಗೊತ್ತಾಗುವುದಿಲ್ಲ. ಕಷ್ಟಪಟ್ಟು ಇನ್ಕಮಿಂಗ್, ಔಟ್ಗೋಯಿಂಗ್ ಕಾಲ್ಗಳ ಬಗ್ಗೆ ಮಾತ್ರ ತಿಳಿದುಕೊಂಡಿದ್ದೇನೆ. ಮತ್ಯಾವುದೂ ಗೊತ್ತಿಲ್ಲ. ಇವತ್ತಿನ ತಂತ್ರಜ್ಞಾನದ ಜತೆ ಅಷ್ಟು ಸಂಬಂಧವಿಲ್ಲ. ನನಗೆ ಅದು ಗೊತ್ತು ಆಗುವುದಿಲ್ಲ, ಅವಶ್ಯಕ ಎಂದೆನಿಸಲೂ ಇಲ್ಲ. ಆದರೆ ನನ್ನ ಹಾಗೆ ಸಾಕಷ್ಟು ಜನ ಈ ವಿಚಾರದಲ್ಲಿ ಪೆದ್ದರಿದ್ದಾರೆ ಎಂದು ಸಿದ್ದರಾಮಯ್ಯ ಚಟಾಕಿ ಹಾರಿಸಿದರು.


ಸಾಹಿತಿಗಳ ಹೆಸರಲ್ಲಿ ಅಕ್ಷರವಿನ್ಯಾಸ
ಕನ್ನಡ ಪದಗಳ ಸೌಂದರ್ಯ ಹಾಗೂ ಅಲಂಕಾರವನ್ನು ಇನ್ನಷ್ಟು ಆಕರ್ಷಕಗೊಳಿಸುವ ಹಿನ್ನೆಲೆಯಲ್ಲಿ ಕನ್ನಡ ಸಾಹಿತಿಗಳ ಹೆಸರಲ್ಲಿ 12 ವಿಶೇಷ ಅಕ್ಷರ ವಿನ್ಯಾಸಗಳನ್ನು ಇಲಾಖೆ ಬಿಡುಗಡೆಗೊಳಿಸಿದೆ. ಈ ಅಕ್ಷರ ವಿನ್ಯಾಸಗಳಿಗೆ ಸಾಹಿತಿಗಳಾದ ಕುವೆಂಪು, ದ.ರಾ.ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ.ಕೃ.ಗೋಕಾಕ್, ಗಿರೀಶ್ ಕಾರ್ನಾಡ್, ಯು.ಆರ್.ಅನಂತಮೂರ್ತಿ, ಚಂದ್ರಶೇಖರ ಕಂಬಾರ, ಪೂರ್ಣಚಂದ್ರ ತೇಜಸ್ವಿ, ಗೋಪಾಲಕೃಷ್ಣ ಅಡಿಗ, ಕೆ.ಎಸ್.ನರಸಿಂಹಸ್ವಾಮಿ, ಪುತಿನ ಅವರ ಹೆಸರನ್ನಿಡಲಾಗಿದೆ. ಇದರ ಜತೆಗೆ ಯುನಿಕೋಡ್ ಪರಿವರ್ತಕ, ಮೊಬೈಲ್ ಆಧಾರಿತ ಕನ್ನಡ ತಂತ್ರಾಂಶ ಹಾಗೂ ಕನ್ನಡ ಬ್ರೈಲ್ ತಂತ್ರಾಂಶವನ್ನು ಮುಖ್ಯಮಂತ್ರಿ ಬಿಡುಗಡೆಗೊಳಿಸಿದರು. ಇವೆಲ್ಲ ತಂತ್ರಾಂಶಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವೆಬ್ಸೈಟ್ನಲ್ಲಿ ಉಚಿತವಾಗಿ ಲಭ್ಯವಿರುತ್ತದೆ. ಈ ತಂತ್ರಾಂಶಗಳಿಗೆ ಸಂಬಂಧಿಸಿ ಯಾವುದೇ ಸಂದೇಹಗಳಿದ್ದರೇ ಅಭಿಪ್ರಾಯ ಕಳುಹಿಸಿಕೊಡಬಹುದು. ಮುಂದಿನ 2 ತಿಂಗಳೊಳಗೆ ನಾಲ್ಕು ತಂತ್ರಾಂಶಗಳ ಅಂತಿಮ ರೂಪವನ್ನು ಇಲಾಖೆ ಬಿಡುಗಡೆ ಮಾಡಲಿದೆ. ಚಿದಾನಂದ ಗೌಡರ ಸಮಿತಿ ಶಿಫಾರಸಿನಂತೆ ಇನ್ನು ಲಿನಕ್ಸ್ ಆಧಾರಿತ ಮುಕ್ತ ಆಕರ ತಂತ್ರಾಂಶ, ವರ್ಚ್ಯುವಲ್ ವಿಶ್ವವಿದ್ಯಾಲಯ, ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್, ಕನ್ನಡದಲ್ಲಿ ಧ್ವನಿ ಸಂಸ್ಕರಣೆ ಹಾಗೂ ಅಂತರಜಾಲ ನಿಘಂಟು ಕುರಿತ ತಂತ್ರಾಂಶಗಳನ್ನು ಇನ್ನೊಂದು ವರ್ಷದಲ್ಲಿ ಬಿಡುಗಡೆ ಮಾಡಲು ಇಲಾಖೆ ನಿರ್ಧರಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement