ಪರಮೇಶ್ವರ್ಗೆ ಡಿಸಿಎಂ ಕೈಯಲ್ಲಿ ಲಾಭದ ತರ್ಕ
ಉಪ ಮುಖ್ಯಮಂತ್ರಿ ಹುದ್ದೆ ಕುರಿತು ಕಾಂಗ್ರೆಸ್ನಲ್ಲಿ ಮತ್ತೆ ಚರ್ಚೆ ಶುರುವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಆರಂಭದಿಂದಲೂ..
ಕನ್ನಡಪ್ರಭವಾರ್ತೆ ಬೆಂಗಳೂರು ಜ. 22
ಉಪ ಮುಖ್ಯಮಂತ್ರಿ ಹುದ್ದೆ ಕುರಿತು ಕಾಂಗ್ರೆಸ್ನಲ್ಲಿ ಮತ್ತೆ ಚರ್ಚೆ ಶುರುವಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಆರಂಭದಿಂದಲೂ ಈ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವುದರಿಂದ ಆಗುವ ರಾಜಕೀಯ ಲಾಭದ ಸುತ್ತಮುತ್ತ ಹೈಕಮಾಂಡ್ ವಲಯದಲ್ಲೂ ಇದೀಗ ಮಾತು ಶುರುವಾಗಿದೆ. ಜಾತಿ ಮತಗಳ ಲೆಕ್ಕಾಚಾರವೂ ಇದರ ಹಿಂದೆ ಅಡಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಲೋಕಸಭೆ ಚುನಾವಣೆಗೆ ಮುಂಚಿತವಾಗಿಯೇ ಈ ಪ್ರಯೋಗ ನಡೆಸುವ ಬಗ್ಗೆ ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದ್ದು, ಜಾತಿ ಸಮೀಕರಣದ ಲೆಕ್ಕಾಚಾರದ ಪ್ರಕ್ರಿಯೆ ಆರಂಭವಾಗಿದೆ. ಇದರ ಜತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೆ ಸಾಕಷ್ಟು ಕೊಡುಗೆ ನೀಡಿದ ಪರಮೇಶ್ವರ ಅವರ ಶ್ರಮಕ್ಕೆ ಮನ್ನಣೆ ನೀಡುವ ಉದ್ದೇಶವೂ ವರಿಷ್ಠರದ್ದಾಗಿದೆ.
ರಾಜ್ಯ ವಿಧಾನಸಭೆ ಚುನಾವಣೆಗೆ ಮುನ್ನವೇ ಪಕ್ಷದ ಸಾರಥ್ಯ ವಹಿಸಿದ್ದ ಪರಮೇಶ್ವರ ಪಕ್ಷ ಸಂಘಟನೆಗೆ ಶ್ರಮಿಸಿದ್ದರು. 'ಕಾಂಗ್ರೆಸ್ ನಡಿಗೆ, ಜನರ ಬಳಿಗೆ', 'ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ'ಯಂಥ ಮಹತ್ವದ ಪಾದಯಾತ್ರೆಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಪಕ್ಷದ ಪರ ಅಲೆ ಏಳುವುದಕ್ಕೆ ಪರಮೇಶ್ವರ ಶ್ರಮಿಸಿರುವುದು ಚುನಾವಣೆಗೆ ಮುನ್ನವೇ ಹೈಕಮಾಂಡ್ಗೆ ಮನವರಿಕೆಯಾಗಿತ್ತು.
ಹೀಗಾಗಿ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳ ಪೈಕಿ ಪರಮೇಶ್ವರ ಹೆಸರು ಮುಂಚೂಣಿಯಲ್ಲಿತ್ತು. ಚುನಾವಣೆಯಲ್ಲಿ ಅವರು ಸೋತಿದ್ದರಿಂದ ಈ ಅವಕಾಶ ತಪ್ಪಿ ಹೋಗಿತ್ತು. ಆದರೂ ಸರ್ಕಾರ ರಚನೆ ಸಂದರ್ಭದಲ್ಲಿಯೇ ಪರಮೇಶ್ವರ ಅವರಿಗೆ ಸಂಪುಟಕ್ಕೆ ಸೇರುವ ಮುಕ್ತ ಅವಕಾಶವನ್ನು ಕಲ್ಪಿಸಲಾಗಿತ್ತು. ಆದರೆ ಪಕ್ಷದ ಹಿತದೃಷ್ಟಿಯಿಂದ ಈ ಅವಕಾಶವನ್ನು ನಯವಾಗಿಯೇ ನಿರಾಕರಿಸಿದ್ದ ಅವರು ಅಧ್ಯಕ್ಷ ಸ್ಥಾನದಲ್ಲಿಯೇ ಮುಂದುವರಿದಿದ್ದರು.
ಆದರೆ ಪಕ್ಷದ ಗೆಲುವಿಗೆ ಅವರು ನೀಡಿದ್ದ ಕೊಡುಗೆಯ ಮುಂದೆ ವೈಯಕ್ತಿಕ ಸೋಲು ಸಾಟಿಯಲ್ಲ ಎಂದು ಪರಿಗಣಿಸಿದ ಹೈಕಮಾಂಡ್ನ ಒಂದು ವರ್ಗ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂಬ ವಾದವನ್ನು ಮುಂದಿಟ್ಟಿತ್ತು. ಆದರೂ ಹಲವಾರು ತರ್ಕಗಳ ಹಿನ್ನೆಲೆಯಲ್ಲಿ ಈ ವಿಚಾರವನ್ನು ತಾತ್ಕಾಲಿಕವಾಗಿ ಕೈ ಬಿಡಲಾಗಿತ್ತು.
ಆದರೆ ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಈ ವಿಚಾರ ಮತ್ತೆ ಚಾಲ್ತಿಗೆ ಬಂದಿದೆ. ಪರಮೇಶ್ವರ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವುದರಿಂದ ರಾಜ್ಯದಲ್ಲಿ ಪಕ್ಷಕ್ಕೆ ಹಲವು ಅನುಕೂಲತೆಗಳಿದೆ ಎಂಬ ನಿರ್ಧಾರಕ್ಕೆ ಹೈಕಮಾಂಡ್ ಬಂದಿದೆ.
ಇದರ ಜತೆಗೆ ಕಳಂಕದ ಆರೋಪ ಹೊತ್ತಿದ್ದ ಡಿ.ಕೆ.ಶಿವಕುಮಾರ್ ಹಾಗೂ ರೋಶನ್ ಬೇಗ್ ಅವರನ್ನೇ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಆದರೆ ಇಂಥ ಯಾವುದೇ ಆರೋಪಗಳಿಲ್ಲದ ಪರಮೇಶ್ವರ ಅವರ ಸಂಪುಟ ಸೇರ್ಪಡೆಗೆ ಮಾತ್ರ ತಡೆ ಏಕೆ ? ಎಂಬ ಪ್ರಶ್ನೆ ಉದ್ಭವವಾಗಿದೆ. ಮಾತ್ರವಲ್ಲ ಪರಮೇಶ್ವರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳದೇ ಇದ್ದರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬ ಮಾತು ಹೈಕಮಾಂಡ್ ವಲಯದಲ್ಲಿ ವ್ಯಕ್ತವಾಗಿದೆ.
ಹಿಂದುಳಿದ ವರ್ಗಕ್ಕೆ ಸೇರಿದ ಸಿದ್ದರಾಮಯ್ಯ ಅವರು ಈಗಾಗಲೇ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ದಲಿತರಿಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಕೂಗು ಬಲವಾಗಿದೆ. ಹೀಗಾಗಿ ಪರಮೇಶ್ವರ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದರಿಂದ ಆ ವರ್ಗದ ಮತದಾರರನ್ನು ತೃಪ್ತಿಪಡಿಸಿದಂತಾಗುತ್ತದೆ. ಜತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಒಕ್ಕಲಿಗ ಅಥವಾ ಲಿಂಗಾಯಿತ ಸಮುದಾಯಕ್ಕೆ ಸೇರಿದವರನ್ನು ನೇಮಕ ಮಾಡುವುದರಿಂದ ಪ್ರಬಲ ಸಮುದಾಯದ ಮತವನ್ನೂ ಸೆಳೆಯಬಹುದೆಂಬ ಚಿಂತನೆಯನ್ನು ಹೈಕಮಾಂಡ್ ನಡೆಸಿದೆ.
ಸೋಲು ಮುಖ್ಯವಲ್ಲ : ಇದರ ಜತೆಗೆ ಕೆಪಿಸಿಸಿ ಅಧ್ಯಕ್ಷರು ಚುನಾವಣೆಯಲ್ಲಿ ಸೋತಿದ್ದಾರೆಂಬ ಕಾರಣಕ್ಕೆ ಅವರನ್ನು ಅಧಿಕಾರದಿಂದ ದೂರವಿಡಬೇಕೆಂಬ ವಿಚಾರ ಅಪ್ರಸ್ತುತ ಎಂಬ ವಾದವನ್ನು ಹೈಕಮಾಂಡ್ ಮುಖಂಡರೇ ಮಂಡಿಸಿದ್ದಾರೆ. ಹಿಂದೆ ರಾಜಸ್ಥಾನ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸಿ.ಪಿ.ಜೋಶಿ ತಾವು ಚುನಾವಣೆಯಲ್ಲಿ ಸೋತು ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಇಡೀ ರಾಜ್ಯದಲ್ಲಿ ಪಕ್ಷದ ಗೆಲುವಿನ ತಂತ್ರದಲ್ಲಿ ಮುಳುಗಿ ಹೋಗುವುದರಿಂದ ಸಹಜವಾಗಿಯೇ ಸ್ವಕ್ಷೇತ್ರದತ್ತ ಗಮನ ಕಡಿಮೆಯಾಗುತ್ತದೆ. ಜತೆಗೆ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳನ್ನು ಸೋಲಿಸುವ ಪ್ರಯತ್ನ ಎಲ್ಲ ಕಡೆ ಇರುತ್ತದೆ. ಈ ಹಿನ್ನೆಲೆಯಲ್ಲಿ ದೊಡ್ಡ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಚುನಾವಣೆಯಲ್ಲಿ ಸ್ಪರ್ಧಿಸದೇ ಇರುವ ನಿರ್ಣಯ ತೆಗೆದುಕೊಳ್ಳಬೇಕೆಂಬ ವಾದವನ್ನು ಮಾಜಿ ಸಚಿವೆ ಅಂಬಿಕಾ ಸೋನಿ ಅವರೇ ತೇಲಿ ಬಿಟ್ಟಿದ್ದಾರೆ. ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಪರಮೇಶ್ವರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ವಾದ ಹೈಕಮಾಂಡ್ ವಲಯದಲ್ಲಿ ಮತ್ತೆ ಚಾಲ್ತಿಗೆ ಬಂದಿದ್ದು, ಲೋಕಸಭೆ ಚುನಾವಣೆಗೆ ಮುನ್ನ ನಿರ್ಧಾರ ಪ್ರಕಟವಾಗಲಿದೆ ಎಂದು ಮೂಲಗಳು ತಿಳಿಸಿವೆ.