ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸಚಿವ ಸೋಮನಾಥ ರಾಜಿನಾಮೆಗೆ ಒತ್ತಡ

ದೆಹಲಿ ಕಾನೂನು ಸಚಿವ ಸೋಮನಾಥ ಭಾರ್ತಿ ರಾಜಿನಾಮೆಗೆ ಒತ್ತಡ ಹೆಚ್ಚಾಗುತ್ತಿದೆ. ಉಗಾಂಡಾದ ಮಹಿಳೆ ಕಳೆದ ಬುಧವಾರ ರಾತ್ರಿಯ ...

Rashmi Kasaragodu
Updated On : 23 Jan 2014, 1:14 am

ನವದೆಹಲಿ: ದೆಹಲಿ ಕಾನೂನು ಸಚಿವ ಸೋಮನಾಥ ಭಾರ್ತಿ ರಾಜಿನಾಮೆಗೆ ಒತ್ತಡ ಹೆಚ್ಚಾಗುತ್ತಿದೆ. ಉಗಾಂಡಾದ ಮಹಿಳೆ ಕಳೆದ ಬುಧವಾರ ರಾತ್ರಿಯ ದೊಂಬರಾಟಕ್ಕೆ ಸೋಮನಾಥ ಭಾರ್ತಿ ನೇತೃತ್ವದ ಗುಂಪೇ ಕಾರಣ ಎಂದು ಗುರುತಿಸಿದ್ದು, ಇದು ಕೇಜ್ರಿವಾಲ್ ಸರ್ಕಾರದ ಪೀಕಲಾಟಕ್ಕೆ ಕಾರಣವಾಗಿದೆ.
ರಾಜಕೀಯ ಪಕ್ಷಗಳು ಮತ್ತು ಮಹಿಳಾ ಸಂಘಟನೆಗಳು ಸೋಮನಾಥ ಭಾರ್ತಿಯನ್ನು ಸಂಪುಟದಿಂದ ಕಿತ್ತೊಗೆಯಬೇಕು ಎಂದು ಆಗ್ರಹಿಸಿವೆ.

ಸಾಯಿಸುವ ಧಮಕಿ
ಹಲ್ಲೆಗೊಳಗಾದ ಉಗಾಂಡಾದ ಮಹಿಳೆ ಬುಧವಾರ ಕೋರ್ಟ್ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ. 'ಸೋಮನಾಥ ಭಾರ್ತಿ ನೇತೃತ್ವದ 15 ರಿಂದ 20 ಜನರ ಗುಂಪು ನಮ್ಮ ಮನೆಗೆ ನುಗ್ಗಿ ದಾಂದಲೆ ನಡೆಸಿತು. ಅವರ ಕೈಯಲ್ಲಿ ಉದ್ದನೆಯ ಕೋಲುಗಳಿದ್ದವು. ದೇಶ ಬಿಟ್ಟು ಹೋಗಿ, ಇಲ್ಲದಿದ್ದರೆ ಒಬ್ಬೊಬ್ಬರಂತೆ ಎಲ್ಲರನ್ನೂ ಸಾಯಿಸುತ್ತೇವೆ' ಎಂದು ಧಮಕಿ ಹಾಕಿದ್ದರು. ಅವರನ್ನು ಟಿವಿಯಲ್ಲಿ ನೋಡಿದ್ದೇನಾದ್ದರಿಂದ ಗುರುತು ಹಿಡಿದೆ ಎಂದು ಹೇಳಿದ್ದಾರೆ. ಪೊಲೀಸರು ಇವರನ್ನು ಪ್ರಾಸಿಕ್ಯೂಷನ್ ಸಾಕ್ಷಿಯಾಗಿ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.

ಸಮನ್ಸ್ ಜಾರಿ
ದೆಹಲಿ ಮಹಿಳಾ ಆಯೋಗ ಸೋಮನಾಥ ಭಾರ್ತಿಗೆ ಸಮನ್ಸ್ ನೀಡಿದೆ. ಎಸ್‌ಎಚ್‌ಓ ಮೂಲಕ ಇದನ್ನು ಕಳುಹಿಸಲಾಗಿದೆ. ಒಂದು ವೇಳೆ ಭಾರ್ತಿ ಅವರು ಇದಕ್ಕೆ ಸ್ಪಂದಿಸದಿದ್ದಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲು ಸೂಚನೆ ನೀಡುವುದಾಗಿ ಮಹಿಳಾ ಆಯೋಗ ಹೇಳಿದೆ.
ಇದರ ಜೊತೆಗೆ ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಸೋಮನಾಥ ಭಾರ್ತಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ದ್ವಂದ್ವ ನೀತಿ ಏಕೆ?
ಮಹಿಳೆಯರ ರಕ್ಷಣೆಗಾಗಿ ಪ್ರತಿಭಟನೆ ಮಾಡಿದ್ದು ಎಂದು ಹೇಳಿದ್ದೀರಿ, ಆದರೆ ನಿಮ್ಮ ಸರ್ಕಾರದ ಸಚಿವರು ಮಹಿಳೆಯರನ್ನು ನಡೆಸಿಕೊಳ್ಳುವುದು ಹೀಗೆಯೇ ಎಂದು ಪಕ್ಷಗಳು, ಮಹಿಳಾ ಸಂಘಟನೆಗಳು ಕೇಜ್ರಿವಾಲ್‌ರನ್ನು ಪ್ರಶ್ನಿಸಿವೆ. ಭಾರ್ತಿ ಅವರನ್ನು ಸಂಪುಟದಿಂದ ವಜಾ ಮಾಡುವಂತೆ ಎಎಪಿ ಸದಸ್ಯ ಕ್ಯಾ. ಗೋಪಿನಾಥ್ ಅವರು ಆಗ್ರಹಿಸಿದ್ದಾರೆ.   


ಆದರೆ ರಾಜಿನಾಮೆ ಪಡೆಯುವುದಿಲ್ಲ ಎಂದಿರುವ ಕೇಜ್ರಿವಾಲ್ ಪಕ್ಷ ಮಾತಿನ ಮೇಲೆ ನಿಗಾ ಇಡುವಂತೆ ಭಾರ್ತಿಗೆ ಸೂಚಿಸಿದೆ. ಇದೇ ವೇಳೆ ಎರಡು ದಿನ ಪ್ರತಿಭಟನೆ ನಡೆಸಿದ 'ಅಪರಿಚಿತ'ರ ವಿರುದ್ಧ ದೆಹಲಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ವಿಶ್ವಾಸ್ ವಿರುದ್ಧವೂ ಪ್ರತಿಭಟನೆ: ದೆಹಲಿಯಲ್ಲಿರುವ ಕೇರಳ ಭವನದ ಮುಂದೆ ನಾನಾ ಮಹಿಳಾ ಸಂಘಟನೆಗಳು ಎಎಪಿ ನಾಯಕ ಕುಮಾರ್ ವಿಶ್ವಾಸ್ ವಿರುದ್ಧ ಪ್ರತಿಭಟನೆ ನಡೆಸಿವೆ. ಕೇರಳದ ನರ್ಸ್‌ಗಳ ಕ್ಷಮೆ ಕೇಳಬೇಕು ಮತ್ತು ಪರಿಹಾರ ನೀಡಬೇಕು ಎಂದು ಒತ್ತಾಯಿಸಿವೆ. ಈ ಬೆಳವಣಿಗೆಗಳ ನಡುವೆ ಕುಮಾರ್ ವಿಶ್ವಾಸ್ ನರ್ಸ್‌ಗಳ ಕ್ಷಮೆ ಕೇಳಿದ್ದಾರೆ. ಆದರೆ 'ಸಿನಿಮಾಗಳಲ್ಲಿ ರೇಪ್ ಸೀನ್‌ಗಳಲ್ಲಿ ಪಾಲ್ಗೊಂಡ ರಾಜ್ ಬಬ್ಬರ್ ಮತ್ತು ಶತ್ರುಘ್ನ ಸಿನ್ಹಾ ಅವರ ಕ್ಷಮೆ ಕೋರುತ್ತೀರಾ' ಎಂದು ಕಾಂಗ್ರೆಸ್, ಬಿಜೆಪಿಗೆ ಪ್ರಶ್ನಿಸಿದ್ದಾರೆ.

ಶಿಂದೆ ಮೇಲೆ ರಾಹುಲ್‌ಗೆ ಕೋಪ
ಕೇಜ್ರಿವಾಲ್ ಜೊತೆ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ಸಂಧಾನಕ್ಕೆ ಮುಂದಾಗಿದ್ದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸಿಟ್ಟು ತರಿಸಿದೆ ಎಂದು ಮೂಲಗಳು ಹೇಳಿವೆ. ಮಂಗಳವಾರ ಸಂಜೆ ಪ್ರಧಾನಿ ಮನಮೋಹನ್ ಸಿಂಗ್, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಪ್ರತಿಭಟನೆ ಬಗ್ಗೆ ಚರ್ಚೆ ನಡೆಸಿದ್ದಾರೆ.  ಆದರೆ ಯಾವುದೇ ಸಂಧಾನಕ್ಕೆ ಹೋಗುವ ಬಗ್ಗೆ ನಿರ್ಧರಿಸಲಾಗಿಲ್ಲ. ಆದರೂ ಶಿಂದೆ ಲೆ.ಗವರ್ನರ್ ಮೂಲಕ ಸಂಧಾನಕ್ಕೆ ಕಳುಹಿಸಿದ್ದು ರಾಹುಲ್ ಗಾಂಧಿ ಅವರಿಗೆ ಅಪ್ಯಾಯಮಾನವಾಗಿ ಕಂಡಿಲ್ಲ. ಈ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ.  


ಹುಚ್ಚು ಮುಖ್ಯಮಂತ್ರಿ
1970ರಲ್ಲಿ ನಾನು ಪೊಲೀಸ್ ಆಗಿದ್ದಾಗ ಮುಂಬೈನಲ್ಲಿ ಸೇನೆಯ ಆರ್ಭಟ ಹೆಚ್ಚಿತ್ತು. ಆಗ ನಮಗೆ ರಜೆ ಸಿಕ್ಕಿರಲಿಲ್ಲ. ಆದರೆ ಈಗ ಕೇಜ್ರಿವಾಲ್‌ರ ಹುಚ್ಚಾಟದಿಂದಾಗಿ ದೆಹಲಿ ಪೊಲೀಸರ ರಜೆ ರದ್ದಾಯಿತು. ಅವರೊಬ್ಬ ಹುಚ್ಚು ಮುಖ್ಯಮಂತ್ರಿ.
- ಸುಶೀಲ್ ಕುಮಾರ್ ಶಿಂದೆ,
ಕೇಂದ್ರ ಗೃಹ ಸಚಿವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement