ಸದಾನಂದಗೌಡಗೆ ಅಶೋಕ ಅಡ್ಡಗಾಲು
ಲೋಕಸಭೆ ಚುನಾವಣೆಗೆ ಇನ್ನೂ ದಿನಾಂಕವೇ ಘೋಷಣೆಯಾಗಿಲ್ಲ. ಆದರೂ ಟೆಕೆಟ್ಗಾಗಿ ಎಲ್ಲ ಪಕ್ಷಗಳಲ್ಲೂ ಭಾರಿ ಬೇಟೆ ಶುರುವಾಗಿದೆ...
ಕನ್ನಡಪ್ರಭ ವಾರ್ತೆ ಬೆಂಗಳೂರು ಜ.22
ಲೋಕಸಭೆ ಚುನಾವಣೆಗೆ ಇನ್ನೂ ದಿನಾಂಕವೇ ಘೋಷಣೆಯಾಗಿಲ್ಲ. ಆದರೂ ಟೆಕೆಟ್ಗಾಗಿ ಎಲ್ಲ ಪಕ್ಷಗಳಲ್ಲೂ ಭಾರಿ ಬೇಟೆ ಶುರುವಾಗಿದೆ. ಆದರಲ್ಲೂ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ವಿಚಾರದಲ್ಲಿ ಬಿಜೆಪಿಯಲ್ಲಿ ಇಬ್ಬರು ನಾಯಕರ ನಡುವೆ ಇನ್ನಿಲ್ಲದ ಪೈಪೋಟಿ ನಡೆಯುತ್ತಿದೆ.
ಈ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರನ್ನು ಕಣಕ್ಕಿಳಿಸಲು ಬಿಜೆಪಿಯ ಅಷ್ಟೂ ನಾಯಕರು ಚಿಂತಿಸುತ್ತಿದ್ದರೆ, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ ಮಾತ್ರ ತಾವೇ ಆಖಾಡಕ್ಕೆ ಇಳಿಯಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಡಿ.ಬಿ. ಚಂದ್ರೇಗೌಡ ಅವರು ಈ ಕ್ಷೇತ್ರದಿಂದ ಸ್ಪರ್ಧಿಸಿ ನಿರಾಯಾಸವಾಗಿ ಗೆಲವು ಸಾಧಿಸಿದ್ದರು. ಆದರೆ, ಈ ಬಾರಿ ಅವರು ಸ್ಪರ್ಧಿಸುವ ಬಗ್ಗೆ ಖಾತರಿ ಇಲ್ಲ. ಅನಾರೋಗ್ಯವೂ ಇದಕ್ಕೆ ಕಾರಣ. ಹೀಗಾಗಿ ಟಿಕೆಟ್ಗಾಗಿ ಸದಾನಂದಗೌಡ ಮತ್ತು ಅಶೋಕ ನಡುವೆ ಜಿದ್ದಾಜಿದ್ದಿ ನಡೆಯುತ್ತಿದೆ. ತಾವು ಟಿಕೆಟ್ ಪಡೆಯುವುದಕ್ಕಿಂತ ಹೆಚ್ಚಾಗಿ ಗೌಡರ 'ಬೆಂಗಳೂರು ಪ್ರವೇಶ' ತಡೆಯುವುದು ಮಾಜಿ ಉಪ ಮುಖ್ಯಮಂತ್ರಿಗಳ ಲೆಕ್ಕಾಚಾರ.
ಬಿಜೆಪಿಯ ಒಕ್ಕಲಿಗ ಸಮುದಾಯದ ಮುಖಂಡರಿಗೆ ಅದರಲ್ಲೂ ಬೆಂಗಳೂರು ನಗರದಲ್ಲಿ ಅಶೋಕ ಅವರೇ ನಾಯಕ. ಒಂದೊಮ್ಮೆ ಸದಾನಂದಗೌಡರು ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರಕ್ಕೆ ಪ್ರವೇಶ ಪಡೆದರೆ ಈ ನಾಯಕತ್ವಕ್ಕೆ ಸಂಚಕಾರ ಬಂದೊದಗುತ್ತದೆ ಎಂಬ ಆತಂಕ ಅಶೋಕ ಅವರನ್ನು ಆವರಿಸಿದೆ. ಹೀಗಾಗಿ 'ತಡೆ' ಹಾಕುವ ಪ್ರಯತ್ನದಲ್ಲಿದ್ದಾರೆ. ಮತ್ತೊಂದು ಪ್ರಮುಖ ಕಾರಣವೂ ಇದರ ಹಿಂದಿದೆ.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅಲೆಯಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತದೆ. ಆಗ ಸಚಿವ ಸ್ಥಾನಕ್ಕೆ ತಾವು ಟವೆಲ್ ಹಾಕಬಹುದು. ಮಂತ್ರಿಯಾಗಿ ಕೇಂದ್ರದಲ್ಲಿ ಮಿರಿಮಿರಿ ಮಿಂಚಬಹುದು ಎಂಬ ಆಸೆ ಅಶೋಕ ಅವರಿಗಿದೆ. ಹೀಗಾಗಿ ಬೆಂಗಳೂರು ಉತ್ತರವನ್ನು ತಮ್ಮ ಆಕಾಂಕ್ಷೆ ಈಡೇರಿಸಿಕೊಳ್ಳುವುದಕ್ಕೆ 'ಮೆಟ್ಟಿಲು' ಮಾಡಿಕೊಳ್ಳಲು ಹೊರಟಿದ್ದಾರೆ.
ಬೆಳಗಾವಿಯಲ್ಲೇ ಚಾಲನೆ : ಸದಾನಂದಗೌಡರನ್ನು ಬೆಂಗಳೂರು ಉತ್ತರಿಂದ ಕಣಕ್ಕಿಳಿಸುವ ವಿಚಾರ ಕೇಳಿದ ಕೂಡಲೇ ಅಶೋಕ ಜಾಗೃತರಾದರು. ಇದನ್ನು ತಡೆಯಲು ಏನೇನು ಮಾಡಬೇಕು ಎಂಬ ಲೆಕ್ಕಾಚಾರವನ್ನು ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ ಸಂದರ್ಭದಲ್ಲೇ ಹಾಕಿದ್ದರು.
ಪುತ್ತೂರಿನ ಕಾಂಗ್ರೆಸ್ ಶಾಸಕಿ ಶಕುಂತಲಾ ಶೆಟ್ಟಿ ಅವರನ್ನು ಸಂಪರ್ಕ ಮಾಡಿ ಸದಾನಂದಗೌಡರಿಗೆ ಮಂಗಳೂರಿನಲ್ಲಿ ನೆಲೆ ಇಲ್ಲ ಎಂಬ ಹೇಳಿಕೆ ನೀಡುವಂತೆ ಕೋರಿದ್ದರು. ಆದರೆ, ಬಿಜೆಪಿ ನಾಯಕರೇ ಇದೆಲ್ಲ ಬೇಡ ಎಂದು ಬುದ್ಧಿವಾದ ಹೇಳಿ ಸುಮ್ಮನಾಗಿರಿಸಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ, ಕಳೆದ 2-3 ದಿನಗಳಿಂದ ಟಿಕೆಟ್ ಜಗಳ ಬಹಿರಂಗವಾಗಿಯೇ ಶುರುವಾಗಿದೆ. ಆದರೆ, ಟಿಕೆಟ್ ವಿಚಾರದಲ್ಲಿ ಬಿಜೆಪಿಯ ಎಲ್ಲ ನಾಯಕರೂ ಸದಾನಂದಗೌಡರ ಪರ ಇದ್ದಾರೆ. ರಾಜಕೀಯ ವ್ಯವಹಾರಗಳ ಸಮಿತಿಯೂ ಗೌಡರ ಪರವಾಗಿಯೇ ಬ್ಯಾಟಿಂಗ್ ಮಾಡುತ್ತಿದೆ. ಇದಕ್ಕೆ ನಾಯಕರು ಕೊಡುವ ಕಾರಣಗಳೇ ಬೇರೆ.
ಗೌಡರೇ ಏಕೆ?
ದೆಹಲಿಯಲ್ಲಿ ಆರಂಭವಾಗಿರುವ ಆಮ್ ಆದ್ಮಿ ಪಕ್ಷದ ಪ್ರಭಾವ ಲೋಕಸಭೆ ಚುನಾವಣೆ ವೇಳೆ ಬೆಂಗಳೂರಿನಲ್ಲಿಯೂ ಕೆಲಸ ಮಾಡಬಹುದು. ಹೀಗಾಗಿ ಕ್ಲೀನ್ ಇಮೇಜ್ ಹೊಂದಿದವರನ್ನೇ ಮುಂದಿಟ್ಟುಕೊಂಡು ನಾವು ಮಹಾನಗರದಲ್ಲಿ ಮತ ಕೇಳಬೇಕಾಗುತ್ತದೆ. ಅದಕ್ಕೆ ಸದಾನಂದಗೌಡರು ಹೇಳಿ ಮಾಡಿಸಿದ ವ್ಯಕ್ತಿ ಎಂಬುದು ನಾಯಕರ ಅನಿಸಿಕೆ. ಹಗರಣಗಳ ಸರಮಾಲೆಯಲ್ಲಿ ಸಿಲುಕಿ ಬಿಜೆಪಿ ಸರ್ಕಾರ ಒದ್ದಾಡುತ್ತಿದ್ದ ಸಂದರ್ಭದಲ್ಲಿ ಗೌಡರು ಮುಖ್ಯಮಂತ್ರಿ ಆದರು. ಕಡಿಮೆ ಅವಧಿಯಲ್ಲೇ ಅವರು ಸ್ವಚ್ಛ ಆಡಳಿತದ ಮೂಲಕ ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ವರ್ಚಸ್ಸು ತಂದುಕೊಟ್ಟರು. ಸಕಾಲ ಯೋಜನೆ ಜಾರಿಗೆ ತರುವ ಮೂಲಕ ತಳಮಟ್ಟದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದರು. ಇದನ್ನು ಸಚಿವಾಲಯ ಮಟ್ಟಕ್ಕೂ ವಿಸ್ತರಿಸಲು ಅವರು ಮುಂದಾಗಿದ್ದರು. ಆದರೆ, ಅಧಿಕಾರ ಕಳೆದುಕೊಂಡರು. ಆದ್ದರಿಂದ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರಕ್ಕೆ ಅವರೇ ಸೂಕ್ತ ಎಂಬ ತೀರ್ಮಾನಕ್ಕೆ ನಾಯಕರು ಬಂದಿದ್ದಾರೆ.
ಅಶೋಕ ಉಪ ಮುಖ್ಯಮಂತ್ರಿಯಾಗಿದ್ದ ವೇಳೆ, ಭೂ ಹಗರಣ ಮತ್ತು ಡಿನೋಟಿಫೈ ಪ್ರಕರಣದಲ್ಲಿ ಅವರು ಸಿಲುಕಿದ್ದರು. ಜೊತೆಗೆ ವಿವಾದ ನ್ಯಾಯಾಲಯದ ಮೆಟ್ಟಿಲನ್ನೂ ಏರಿತ್ತು. ಚುನಾವಣೆ ವೇಳೆ ಇದೆಲ್ಲ ಮತ್ತೆ ಚರ್ಚೆಗೆ ಬಂದು ಆಮ್ ಆದ್ಮಿ ಪಾರ್ಟಿಗೆ ಪ್ರಮುಖ ಅಸ್ತ್ರವೂ ಆಗಬಹುದು ಎಂಬುದು ಬಿಜೆಪಿ ನಾಯಕರ ಅಭಿಪ್ರಾಯ.
ಇನ್ನು ರಾಜಕೀಯ ವ್ಯವಹಾರಗಳ ಸಮಿತಿಯಲ್ಲಿರುವ ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ, ಸಿ.ಟಿ.ರವಿ, ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ ಇದಕ್ಕೆ ಒಕೆ ಎಂದಿದ್ದಾರೆ. ಸದಾನಂದಗೌಡ ವಿಚಾರದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಷಿ, ಶಾಸಕಾಂಗ ನಾಯಕ ಜಗದೀಶ ಶೆಟ್ಟರ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಸಹ ಎರಡನೇ ಮಾತು ಹೇಳುವುದಿಲ್ಲ.
ಇದೆಲ್ಲದಕ್ಕಿಂತ ಮುಖ್ಯವಾಗಿ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಲ್ಲಿ ಗೆಲುವು ಸಾಧ್ಯ ಎಂಬುದು ಪಕ್ಷದ ವತಿಯಿಂದ ನಡೆಸಿದ ಸಮೀಕ್ಷೆಯಲ್ಲೂ ಗೊತ್ತಾಗಿದೆ. ಹೀಗಾಗಿಯೇ ಟಿಕೆಟ್ಗಾಗಿ ಅಶೋಕ ಜಿದ್ದಿಗೆ ಬಿದ್ದಿದ್ದಾರೆ ಎನ್ನುತ್ತಾರೆ ಬಿಜೆಪಿ ನಾಯಕರು