ಆಧಾರದ ಹೆಸರಲ್ಲಿ ಸಬ್ಸಿಡಿ ಮೇಲೆ ಏಜೆನ್ಸಿಗಳ ಸವಾರಿ, ಕೋರ್ಟ್ ಆಕ್ಷೇಪವಿರುವ ಕಾರ್ಡ್ ಮೇಲೆ ರಾಜ್ಯ ಸರ್ಕಾರಕ್ಕೂ ಕಡ್ಡಾಯದ ಪ್ರೀತಿ
ಕಾನೂನಿನ ಆಧಾರವೇ ಇಲ್ಲದ ಆಧಾರ್ ಕಾರ್ಡ್ ಹೆಸರಿನಲ್ಲಿ ಇನ್ನಿಲ್ಲದ ಕಿರುಕುಳ ಶುರುವಾಗಿದೆ. ಆಧಾರ್ ಗುರುತಿನ ಚೀಟಿ ಕಡ್ಡಾಯವಲ್ಲ...
ಬೆಂಗಳೂರು: ಕಾನೂನಿನ ಆಧಾರವೇ ಇಲ್ಲದ ಆಧಾರ್ ಕಾರ್ಡ್ ಹೆಸರಿನಲ್ಲಿ ಇನ್ನಿಲ್ಲದ ಕಿರುಕುಳ ಶುರುವಾಗಿದೆ.
ಆಧಾರ್ ಗುರುತಿನ ಚೀಟಿ ಕಡ್ಡಾಯವಲ್ಲ ಎಂದು ದೇಶದ ಸರ್ವೋಚ್ಚ ನ್ಯಾಯಾಲಯವೇ ಸಾರಿ ಹೇಳಿದೆ. ಆದರೆ ಅಡುಗೆ ಅನಿಲ ವಿತರಕರು ಕೋರ್ಟ್ ಆದೇಶ ಧಿಕ್ಕರಿಸಿ 'ಆಧಾರ್ ಕಡ್ಡಾಯ'ಗೊಳಿಸುತ್ತಿದ್ದಾರೆ.
ಆಧಾರ್ ಇಲ್ಲದಿದ್ದರೆ ಅಡುಗೆ ಅನಿಲ ಸಿಲಿಂಡರ್ ಸಬ್ಸಿಡಿ ಸಿಗುವುದಿಲ್ಲ. ಸಿಲಿಂಡರ್ಗೆ 421 ಬದಲು ಮಾರುಕಟ್ಟೆ ಬೆಲೆ 1250ಕ್ಕೇರುತ್ತದೆ ಎನ್ನುತ್ತಿದ್ದಾರೆ. ಆಧಾರ್ ಇಲ್ಲದ ಗ್ರಾಹಕರಿಂದ ಸಿಲಿಂಡರ್ ಒಂದಕ್ಕೆ 1250ಕ್ಕೂ ಅಧಿಕ ಹಣ ಪಡೆಯುತ್ತಿದ್ದಾರೆ.
ಹಾಗೆ ನೋಡಿದರೆ, ಆಧಾರ್ ಕಡ್ಡಾಯವಾದರೂ ದೇಶದ ಎಲ್ಲಾ ಜನರಿಗೂ ಆ ಕಾರ್ಡ್ ಸಿಗುವವರೆಗೂ ಸಿಲಿಂಡರ್ಗಳನ್ನು ಸಬ್ಸಿಡಿ ದರದಲ್ಲೇ ನೀಡಬೇಕು. ಆದರೆ ಆಧಾರ್ ಚೀಟಿ ನೀಡುವ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಮಿಗಿಲಾಗಿ ಆಧಾರ್ಗೆ ಸಂವಿಧಾನದ ಮಾನ್ಯತೆಯೇ ಇಲ್ಲ ಎಂಬ ಆರೋಪವೂ ಇದೆ.
ಮಾರ್ಚ್ ಅಂತ್ಯದೊಳಗೆ ಎಲ್ಲರೂ ಗ್ಯಾಸ್ ಸಂಪರ್ಕಕ್ಕೆ ಆಧಾರ್ ನೋಂದಣಿ ಮಾಡಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. ಮಾರ್ಚ್ ನಂತರವೂ ಆಧಾರ್ ಸಲ್ಲಿಸದಿದ್ದರೂ ಸಬ್ಸಿಡಿ ದರದಲ್ಲೇ ಗ್ಯಾಸ್ ಸಿಲಿಂಡರ್ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಗ್ಯಾಸ್ ವಿತರಕರು ಈಗಲೇ ಆಧಾರ್ ಕೊಡಿ ಎಂದು ಗ್ರಾಹಕರನ್ನು ಪೀಡಿಸುತ್ತಿದ್ದಾರೆ.
ಆಧಾರ್ಗೆ ಉತ್ತೇಜನ: ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆ ಕೂಡ ಆಧಾರ್ ಹಂಚಿಕೆ ಮತ್ತು ಬಳಕೆಗೆ ಸಹಕರಿಸುತ್ತಿದೆ. ಆಧಾರ್ ಕೇಂದ್ರ ಸರ್ಕಾರದ ಯೋಜನೆಯಾದರೂ ನೋಂದಣಿ ಸೌಲಭ್ಯ, ಸಹಕಾರ ಮತ್ತು ಸಮನ್ವಯ ಮಾಡುವುದು ರಾಜ್ಯ ಸರ್ಕಾರ. ಯೋಜನೆ ಜಾರಿಗೆಂದೇ ರಾಜ್ಯದ ಮಾಹಿತಿ ತಂತ್ರಜ್ಞಾನ ಇಲಾಖೆಯಿಂದ ರಿಜಿಸ್ಟ್ರಾರ್ ನಿಯೋಜನೆಯಾಗಿದ್ದಾರೆ.
ಇವರು ಕೂಡ ಆಧಾರ್ಗೆ ಆಧಾರವೇ ಇಲ್ಲ ಎಂದು ಗೊತ್ತಿದ್ದರೂ ನೋಂದಣಿ ಮತ್ತು ಬಳಕೆ ಉತ್ತೇಜಿಸುತ್ತಲೇ ಇದ್ದಾರೆ. ಇನ್ನು ಆಧಾರ್ ಕಡ್ಡಾಯಗೊಳಿಸುತ್ತಿರುವ ಅಡುಗೆ ಅನಿಲ ವಿತರಕರಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಯಾವ ಸೂಚನೆಯನ್ನೂ ನೀಡುತ್ತಿಲ್ಲ. ಗ್ರಾಹಕರಿಗೆ ಸೂಕ್ತ ಸ್ಪಷ್ಟೀಕರಣವನ್ನೂ ಕೊಡುತ್ತಿಲ್ಲ.
ಆಶ್ಚರ್ಯವೆಂದರೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ವೀರಪ್ಪ ಮೋಯ್ಲಿ ಅವರೇ ಅಡುಗೆ ಅನಿಲ ಸಬ್ಸಿಡಿಗೆ ಆಧಾರ್ ಕಡ್ಡಾಯ ಎಂದು ಮಂಗಳೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ. ಜತೆಗೆ ಅನಿಲ ವಿತರಕರು ಮತ್ತು ಬ್ಯಾಂಕ್ಗಳಿಗೆ ಆಧಾರ್ ಸಲ್ಲಿಸಲು ಸೂಚಿಸುವಂತೆ ಜನರಿಗೂ ಸೂಚಿಸಿದೆ. ಇದಕ್ಕಾಗಿ ಮಾಧ್ಯಮಗಳಲ್ಲಿ ದೊಡ್ಡ ಜಾಹಿರಾತುಗಳನ್ನೇ ನೀಡುತ್ತಿದೆ.
ಗೊಂದಲದಿಂದ ಆಧಾರ ಸಲ್ಲಿಕೆ: ರಾಜ್ಯದಲ್ಲಿ ಈಗಾಗಲೇ 4.6ಕೋಟಿ ಮಂದಿ ಆಧಾರ್ಗಾಗಿ ನೋಂದಣಿ ಮಾಡಿಸಿದ್ದಾರೆ. ಇವರಲ್ಲಿ 3.98ಕೋಟಿ ಜನರಿಗೆ ಕಾರ್ಡ್ಗಳು ಸಿದ್ಧವಾಗಿದ್ದು, ವಿತರಣೆ ಕಾರ್ಯ ಪ್ರಗತಿಯಲ್ಲಿದೆ. ಉಳಿದಂತೆ 1.5ಕೋಟಿ ಮಂದಿಯನ್ನು ಆಧಾರ್ ವ್ಯಾಪ್ತಿಗೆ ತರಬೇಕಿದೆ.
ಅಡುಗೆ ಅನಿಲ ವಿತರಕರು ಆಧಾರ್ ಗುರುತಿನ ಚೀಟಿ ಸಲ್ಲಿಸುವಂತೆ ಗ್ರಾಹಕರಿಗೆ, ಗ್ರಾಹಕರಲ್ಲದವರಿಗೆಲ್ಲಾ ಸಂದೇಶ ರವಾನಿಸುತ್ತಿದ್ದಾರೆ. ತಮ್ಮ ಕಚೇರಿಗಳನ್ನು ಆಧಾರ್ ಸಲ್ಲಿಸುವ ಕಚೇರಿಗಳಂತೆ ಮಾಡಿಕೊಂಡಿದ್ದು, ಅಲ್ಲೇ ಜೆರಾಕ್ಸ್ ಸೇವೆ, ಅರ್ಜಿ ನಮೂನೆಗಳ ಮಾರಾಟ ವ್ಯಾಪಾರ ಮಾಡುತ್ತಿವೆ. ಅಷ್ಟೇಅಲ್ಲ. ಸಲ್ಲಿಸಿದ ಅರ್ಜಿಗಳನ್ನು ಬ್ಯಾಂಕ್ಗೆ ಅಳವಡಿಸಲು ನೆರವಾಗುವ ಮಧ್ಯವರ್ತಿಗಳನ್ನು ಬಗಲಲ್ಲೇ ಇಟ್ಟುಕೊಂಡಿದ್ದಾರೆ.
ಆಧಾರ ಉಳಿಯುವುದೋ? ಇಲ್ಲವೋ? ಎಂಬ ಗೊಂದಲಕ್ಕೆ ಸಿಲುಕಿರುವ ಜನತೆ ಆಧಾರ್ ನೋಂದಣಿಗೆ ಮುಂದಾಗುತ್ತಿದ್ದಾರೆ. ಜತೆಗೆ ಅಡುಗೆ ಅನಿಲ ವಿತರಕರ ಬೆದರಿಕೆಗೆ ಮಣಿದು ಗ್ಯಾಸ್ ಸಬ್ಸಿಡಿಗಾಗಿ ಆಧಾರ್ ಸಲ್ಲಿಸಲು ಮುಗಿ ಬೀಳುತ್ತಿದ್ದಾರೆ.
ವಂಚನೆ ಹೀಗೂ ಆಗುತ್ತಿದೆ...: ಬೆಂಗಳೂರಿನ ಗ್ರಾಹಕ ಶ್ರೀನಿವಾಸ್ ರೆಡ್ಡಿ 2013 ಅಕ್ಟೋಬರ್ನಲ್ಲಿ 421 ಪಾವತಿಸಿ 5ನೇ ಸಿಲಿಂಡರ್ ಸ್ವೀಕರಿಸಿ ಆ ಬಗ್ಗೆ ದಾಖಲೆಯನ್ನೂ ಪಡೆದರು. ನಂತರ ಇವರು ಡಿಸೆಂಬರ್ನಲ್ಲಿ ಪಡೆಯುವ ಸಿಲಿಂಡರ್ 6ನೇಯದಾಗಿರಬೇಕಿತ್ತು. ಆದರೆ ಇದನ್ನು 11ನೇ ಸಿಲಿಂಡರ್ ಎಂದು ಪರಿಗಣಿಸಿ 1265 ಪಡೆದಿದ್ದಾರೆ. ಹೀಗೆ ಹಣ ಪೀಕಿಸಿರುವುದಕ್ಕೆ ವಿತರಕರು ದಾಖಲೆಯನ್ನೂ ನೀಡಿದ್ದಾರೆ. ಇದು ಎಲ್ಲಾ ತೈಲ ಕಂಪನಿಗಳಿಗೆ ಸೇರಿದ ಅನಿಲ ವಿತರಣ ಸಂಸ್ಥೆಗಳಲ್ಲೂ ನಡೆಯುತ್ತಿದೆ. ಆದರೂ ಸರ್ಕಾರವಾಗಲಿ, ತೈಲ ಕಂಪನಿಗಳಾಗಲಿ ಇದನ್ನು ಸರಿಪಡಿಸುತ್ತಿಲ್ಲ.
ಆಧಾರ್ ಸಲ್ಲಿಸದಿದ್ದರೆ ಸಿಲೆಂಡರ್ ಸಿಗುವುದಿಲ್ಲ, ಆಧಾರ್ ಸಲ್ಲಿಸಿದರೆ ಸಬ್ಸಿಡಿ ಸಿಗುವುದಿಲ್ಲ ಎಂಬಂತಾಗಿದೆ ಗ್ರಾಹಕರ ಸ್ಥಿತಿ. ಇದನ್ನು ವಿಚಾರಿಸೋಣ, ದೂರು ನೀಡೋಣ ಅಂದರೆ ಇದಕ್ಕೊಂದು ಗ್ರಾಹಕ ಸೇವಾ ಕೇಂದ್ರವಿಲ್ಲ. ನೋಡಲ್ ಅಧಿಕಾರಿಯೂ ಇಲ್ಲ.
ಹೀಗೂ ವಂಚನೆ...
ಬೆಂಗಳೂರಿನ ಗ್ರಾಹಕ ಶ್ರೀನಿವಾಸ್ ರೆಡ್ಡಿ 2013 ಅಕ್ಟೋಬರ್ನಲ್ಲಿ 421 ಪಾವತಿಸಿ 5ನೇ ಸಿಲಿಂಡರ್ ಸ್ವೀಕರಿಸಿ ಆ ಬಗ್ಗೆ ದಾಖಲೆಯನ್ನೂ ಪಡೆದರು. ನಂತರ ಇವರು ಡಿಸೆಂಬರ್ನಲ್ಲಿ ಪಡೆಯುವ ಸಿಲಿಂಡರ್ 6ನೇಯದಾಗಿರಬೇಕಿತ್ತು. ಆದರೆ ಇದನ್ನು 11ನೇ ಸಿಲಿಂಡರ್ ಎಂದು ಪರಿಗಣಿಸಿ 1265 ಪಡೆದಿದ್ದಾರೆ. ಹೀಗೆ ಹಣ ಪೀಕಿಸಿರುವುದಕ್ಕೆ ವಿತರಕರು ದಾಖಲೆಯನ್ನೂ ನೀಡಿದ್ದಾರೆ. ಇದು ಎಲ್ಲಾ ತೈಲ ಕಂಪನಿಗಳಿಗೆ ಸೇರಿದ ಅನಿಲ ವಿತರಣ ಸಂಸ್ಥೆಗಳಲ್ಲೂ ನಡೆಯುತ್ತಿದೆ. ಆದರೂ ಸರ್ಕಾರವಾಗಲಿ, ತೈಲ ಕಂಪನಿಗಳಾಗಲಿ ಇದನ್ನು ಸರಿಪಡಿಸುತ್ತಿಲ್ಲ. ಆಧಾರ್ ಸಲ್ಲಿಸದಿದ್ದರೆ ಸಿಲಿಂಡರ್ ಸಿಗುವುದಿಲ್ಲ, ಆಧಾರ್ ಸಲ್ಲಿಸಿದರೆ ಸಬ್ಸಿಡಿ ಸಿಗುವುದಿಲ್ಲ ಎಂಬಂತಾಗಿದೆ ಗ್ರಾಹಕರ ಸ್ಥಿತಿ. ಇದನ್ನು ವಿಚಾರಿಸೋಣ, ದೂರು ನೀಡೋಣ ಅಂದರೆ ಇದಕ್ಕೊಂದು ಗ್ರಾಹಕ ಸೇವಾ ಕೇಂದ್ರವಿಲ್ಲ. ನೋಡಲ್ ಅಧಿಕಾರಿಯೂ ಇಲ್ಲ.
-ಶಿವಕುಮಾರ್ ಬೆಳ್ಳಿತಟ್ಟೆ