ಮೋದಿ ಸ್ಲೋಗನ್, ರಾಹುಲ್ ಟ್ಯಾಗ್ಲೈನ್!
'ಮೇ ನಹೀ, ಹಮ್' (ನಾನು ಅಲ್ಲ, ನಾವು)... ಇದು ಕಾಂಗ್ರೆಸ್ನ ಹೊಸ ಎಡವಟ್ಟು. 3 ವರ್ಷಗಳ ಹಿಂದೆ ಗುಜರಾತ್ ಮುಖ್ಯಮಂತ್ರಿ...
ನವದೆಹಲಿ: 'ಮೇ ನಹೀ, ಹಮ್' (ನಾನು ಅಲ್ಲ, ನಾವು)... ಇದು ಕಾಂಗ್ರೆಸ್ನ ಹೊಸ ಎಡವಟ್ಟು. 3 ವರ್ಷಗಳ ಹಿಂದೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಬಳಸಿದ್ದ ಟ್ಯಾಗ್ಲೈನನ್ನೇ ಈಗ ಕಾಂಗ್ರೆಸ್ ತನ್ನ ಜಾಹೀರಾತಲ್ಲಿ ಬಳಸಿಕೊಂಡು ಮುಜುಗರಕ್ಕೀಡಾಗಿದೆ.
ಶುಕ್ರವಾರದ ಪತ್ರಿಕೆಗಳನ್ನು ನೀವು ಓದಿರಬಹುದು. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಫೋಟೋವುಳ್ಳ ಜಾಹೀರಾತು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಅದರಲ್ಲಿ 'ಮೇ ನಹೀ, ಹಮ್'(ನಾನು ಅಲ್ಲ ನಾವು) ಎಂಬ ಪದಗುಚ್ಛ ಬಳಸಲಾಗಿದೆ. ಆದರೆ ಇದು ಕಾಂಗ್ರೆಸ್ನದ್ದಲ್ಲ. ಬಿಜೆಪಿಯ ಪೋಸ್ಟರ್ನಿಂದ ಕಾಪಿ ಹೊಡೆದದ್ದು.
ಹೌದು. ಬೆಳಗ್ಗೆ ಪತ್ರಿಕೆಗಳನ್ನು ನೋಡುತ್ತಿದ್ದಂತೆ ಬಿಜೆಪಿಗೆ ಆಶ್ಚರ್ಯವೋ ಆಶ್ಚರ್ಯ. 2011ರಲ್ಲಿ ಮೋದಿ ಅವರು ಗುಜರಾತ್ನಲ್ಲಿ ನಡೆದ 'ಚಿಂತನ ಶಿಬಿರ'ದಲ್ಲಿ ಬಳಸಿದ್ದ ಟ್ಯಾಗ್ಲೈನ್ ಕಾಂಗ್ರೆಸ್ ಜಾಹೀರಾತಲ್ಲಿ ಯಥಾವತ್ ಪ್ರಕಟವಾಗಿದೆ. ತಕ್ಷಣವೇ ಬಿಜೆಪಿ, 'ಇದು ಮೋದಿ ಅವರು 3 ವರ್ಷ ಹಿಂದೆಯೇ ಬಳಸಿದ್ದ ಪದಗುಚ್ಛ. ಅದನ್ನೀಗ ಕಾಂಗ್ರೆಸ್ ನಕಲು ಮಾಡಿದೆ' ಎಂಬ ವಿಚಾರ ಬಹಿರಂಗಪಡಿಸಿದೆ.
ಕಾಪಿ ಮಾಡಿಲ್ವಂತೆ: ಜಾಹೀರಾತು ವಿವಾದದಿಂದ ತೀವ್ರ ಮುಜುಗರಕ್ಕೀಡಾಗಿರುವ ಕಾಂಗ್ರೆಸ್, 'ನಮ್ಮ ಪ್ರಧಾನ ಧ್ಯೇಯವಾಕ್ಯವೇ ಬೇರೆ. ಇಲ್ಲಿ ಏನೋ ತಪ್ಪಾಗಿದೆ. ನಾವು ಇನ್ನೊಬ್ಬರನ್ನು ಯಾವತ್ತೂ ಕಾಪಿ ಮಾಡುವುದಿಲ್ಲ' ಎಂದಿದೆ.
ರಾಹುಲ್ ಕೇಂದ್ರಿತ: ವಿಶೇಷವೆಂದರೆ, ಶುಕ್ರವಾರ ಪ್ರಕಟವಾಗಿದ್ದು ರಾಹುಲ್ ಕೇಂದ್ರಿತ ಜಾಹೀರಾತು. ಅದರಲ್ಲಿ ಸೋನಿಯಾ ಅಥವಾ ಪ್ರಧಾನಿ ಸಿಂಗ್ ಅವರ ಫೋಟೋ ಇರಲಿಲ್ಲ. ಬದಲಾಗಿ ಜನಸಾಮಾನ್ಯರ ಮಧ್ಯೆ ರಾಹುಲ್ ಇರುವ ಚಿತ್ರ ಪ್ರಕಟಿಸಲಾಗಿದೆ. ಮೋದಿಯವರ 'ಚಹಾ ಮಾರುವವ v/s ರಾಜಕುಮಾರ', ಕೇಜ್ರಿವಾಲ್ ಅವರ 'ಆಮ್ ಆದ್ಮಿ' ಜಾಹೀರಾತುಗಳಿಗೆ ಪ್ರತಿಯಾಗಿ ರಾಹುಲ್ ಅವರನ್ನೂ 'ಜನಸಾಮಾನ್ಯರ ರಾಜಕಾರಣಿ' ಎಂದು ಬಿಂಬಿಸುವುದು ಕಾಂಗ್ರೆಸ್ನ ಉದ್ದೇಶವಾಗಿತ್ತು. ಹಾಗಾಗಿ ರಾಹುಲ್ ಇರುವ ಜಾಹೀರಾತು ಪ್ರಕಟಿಸಿತ್ತು.
ಕಾಪಿಕ್ಯಾಟ್ ಎಂದ ಮೋದಿ
ಜಾಹೀರಾತಿಗೆ ಸಂಬಂಧಿಸಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರೂ ಪ್ರತಿಕ್ರಿಯೆ ನೀಡಿದ್ದಾರೆ. ತಾನು ಬಳಸಿದ್ದ ಪದಗುಚ್ಛವನ್ನೇ ಕಾಂಗ್ರೆಸ್ ಪಕ್ಷ ತನ್ನ ಜಾಹೀರಾತಿನಲ್ಲಿ ಬಳಸಿದೆ. ಇದು 'ಕಾಪಿ-ಕ್ಯಾಟ್' ಎಂದಿದ್ದಾರೆ ಮೋದಿ.
'ನಕಲ್ ಕೇ ಲಿಯೇ ಅಕಲ್ ಚಾಹಿಯೇ'(ನಕಲಿ ಮಾಡಲೂ ಬುದ್ಧಿವಂತಿಕೆ ಬೇಕು). ಕಾಂಗ್ರೆಸ್ ಪಕ್ಷವು ಮೋದಿಯನ್ನು ದ್ವೇಷಿಸುತ್ತದೆ, ಆದರೆ ಅವರ ಟ್ಯಾಗ್ಲೈನ್ ಅನ್ನು ಪ್ರೀತಿಸುತ್ತದೆ. ರಾಹುಲ್ ಅವರು ಸ್ಲೋಗನ್ ಅನ್ನಷ್ಟೇ ಕದಿಯಬಹುದು, ಆದರೆ, ಮೋದಿಯವರ ಅನುಭವ ಹಾಗೂ ಸಾಮರ್ಥ್ಯವನ್ನು ಹೊಂದಲು ಸಾಧ್ಯವೇ?
- ಶಹನವಾಜ್ ಹುಸೇನ್, ಬಿಜೆಪಿ ವಕ್ತಾರ