ಗಣತಂತ್ರ ಸಂಭ್ರಮ ರಾಜ್ಯಕ್ಕೆ ಸಿಕ್ಕಿತು ಸಪ್ತ ಪದ್ಮ ಗೌರವ
ಯೋಗಗುರು ಬಿ.ಕೆ.ಎಸ್. ಅಯ್ಯಂಗಾರ್ (ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ ಅಯ್ಯಂಗಾರ್) ಸೇರಿ ಏಳು ಮಂದಿ ಕನ್ನಡಿಗರಿಗೆ...
ನವದೆಹಲಿ: ಯೋಗಗುರು ಬಿ.ಕೆ.ಎಸ್. ಅಯ್ಯಂಗಾರ್ (ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ ಅಯ್ಯಂಗಾರ್) ಸೇರಿ ಏಳು ಮಂದಿ ಕನ್ನಡಿಗರಿಗೆ ಈ ಬಾರಿಯ ಪದ್ಮ ಪ್ರಶಸ್ತಿ ಘೋಷಣೆಯಾಗಿದೆ. ಯೋಗಗುರು, ಮಂಡ್ಯದ ಬಿ.ಕೆ.ಎಸ್. ಅಯ್ಯಂಗಾರ್, ಖ್ಯಾತ ವಿಜ್ಞಾನಿ ಡಾ. ಆರ್. ಮಶೇಲ್ಕರ್ ಅವರು ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಪದ್ಮವಿಭೂಷಣ' ಗೌರವಕ್ಕೆ ಪಾತ್ರವಾಗಿದ್ದಾರೆ.
ಕನ್ನಡಿಗರಾದ ಪ್ರೊ. ಪದ್ಮನಾಭನ್ ಬಲರಾಂ(ವಿಜ್ಞಾನ ಮತ್ತು ಎಂಜಿನಿಯರಿಂಗ್), ಡಾ.ಮಾದಪ್ಪ ಮಹದೇವಪ್ಪ (ವಿಜ್ಞಾನ ಮತ್ತು ಎಂಜಿನಿಯರಿಂಗ್), ಡಾ. ರಾಧಾಕೃಷ್ಣನ್ ಕೊಪ್ಪಿಲಿಲ್ (ವಿಜ್ಞಾನ ಮತ್ತು ಎಂಜಿನಿಯರಿಂಗ್) ಸೇರಿ 25 ಮಂದಿ ಪದ್ಮಭೂಷಣ ಹಾಗೂ ಡಾ. ಕಾಮಿನಿರಾವ್(ವೈದ್ಯಕೀಯ), ಎಚ್. ಬೊನಿಫೇಸ್ ಪ್ರಭು(ಕ್ರೀಡೆ), ಪ್ರೊ.ಇಳುವಂತಿಗಲ್ ದೇವಸ್ಸಿ ಜಮಿಸ್ (ವಿಜ್ಞಾನ ಮತ್ತು ಎಂಜಿನಿಯರಿಂಗ್) ಸೇರಿ ಒಟ್ಟು 101 ಮಂದಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಗಣರಾಜ್ಯೋತ್ಸವದ ಮುನ್ನಾ ದಿನ ಘೋಷಣೆಯಾಗುವ ಈ ಪ್ರಶಸ್ತಿಯನ್ನು ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಪ್ರದಾನ ಮಾಡಲಾಗುವುದು.
ಪದ್ಮಭೂಷಣ ಪ್ರಶಸ್ತಿ ಪಡೆದ ಪ್ರಮುಖರು
ಕಮಲ್ ಹಾಸನ್ - ಕಲೆ/ಸಿನಿಮಾ
ವಿ.ಆರ್. ಥೇವರ್ - ಸಾಹಿತ್ಯ
ಅನಿತಾ ದೇಸಾಯಿ - ಸಾಹಿತ್ಯ
ಲಿಯಾಂಡರ್ಪೇಸ್ - ಕ್ರೀಡೆ
ಪುಲ್ಲೇಲ್ ಗೋಪಿಚಂದ್ - ಕ್ರೀಡೆ
ಪದ್ಮಶ್ರೀ ಪಡೆದ ಪ್ರಮುಖರು
ಯುವರಾಜ್ ಸಿಂಗ್ - ಕ್ರೀಡೆ
ಪರೇಶ್ ರಾವಲ್ - ಕಲೆ/ಸಿನಿಮಾ
ವಿದ್ಯಾಬಾಲನ್ - ಕಲೆ/ಸಿನಿಮಾ
ದೀಪಿಕಾ ಪಳ್ಳಿಕಾಲ್ - ಕ್ರೀಡೆ
ಮಂಡ್ಯದ ಬೆಳ್ಳೂರಿನವರು ಅಯ್ಯಂಗಾರ್
ಕರ್ನಾಟಕದ ಮಂಡ್ಯ ಜಿಲ್ಲೆಯ ಬೆಳ್ಳೂರಿನ ಬಿ.ಕೆ.ಎಸ್. ಅಯ್ಯಂಗಾರ್ ಅವರು ಯೋಗಗುರು ಆಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದವರು. ಬಿ.ಕೆ.ಎಸ್. ಅವರ ಯೋಗ ಶಿಕ್ಷಣ ಶೈಲಿಯು 'ಅಯ್ಯಂಗಾರ್ ಯೋಗ' ಆಗಿ ಪ್ರಸಿದ್ಧಿಪಡೆದಿದೆ. ಈ ಶೈಲಿಯ ಯೋಗವನ್ನು ವಿಶ್ವಾದ್ಯಂತ ಅನೇಕ ಮಂದಿ ಅನುಕರಣೆ ಮಾಡುತ್ತಿದ್ದಾರೆ.
ಕನ್ನಡಿಗ ಡೆರೆಲ್ ಸೇರಿ ಮೂವರಿಗೆ ಕೀರ್ತಿಚಕ್ರ
ನವದೆಹಲಿ: ಗಣರಾಜ್ಯೋತ್ಸವ ವೇಳೆ ಕೊಡಮಾಡುವ ದೇಶದ ಎರಡನೇ ಪರಮೋಚ್ಚ ಶೌರ್ಯ ಪ್ರಶಸ್ತಿಯಾದ 'ಕೀರ್ತಿ ಚಕ್ರ'ಕ್ಕೆ ಗೆ ಈ ಬಾರಿ ಮೂವರು ಭದ್ರತಾ ಸಿಬ್ಬಂದಿ ಆಯ್ಕೆಯಾಗಿದ್ದಾರೆ. ಇದಲ್ಲದೆ 365 ಮಂದಿಗೆ ಶೌರ್ಯ ಹಾಗೂ 10 ಮಂದಿಗೆ ಶೌರ್ಯ ಚಕ್ರ ಪದಕ ನೀಡಿ ಗೌರವಿಸಲಾಗುತ್ತದೆ.
ಕೀರ್ತಿ ಚಕ್ರ ಪ್ರಶಸ್ತಿ ವಿಜೇತರು: ಎನ್. ಸುಬ್ ಭೂಪಾಲ್ ಸಿಂಗ್ ಚಾಂತೇಲ್ ಮಗರ್(ಗೋರ್ಖಾ ರೈಫಲ್ಸ್): ಕುಪ್ವಾರಾದ ಗಡಿ ನಿಯಂತ್ರಣ ರೇಖೆಯಲ್ಲಿ ಭಯೋತ್ಪಾದಕರಿಬ್ಬರನ್ನು ಹೊಡೆದುರುಳಿಸಿದ ಸಾಧನೆಗಾಗಿ ಈ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಕಾನ್ಸ್ಟೇಬಲ್ ಭೃಗು ನಂದನ್ ಚೌಧರಿ(ಸಿಆರ್ಪಿಎಫ್): ಬಿಹಾರದಲ್ಲಿ ತಮ್ಮ ಸಹೋದ್ಯೋಗಿಗಳ ಆಯುಧಗಳನ್ನು ದೋಚುವ ನಕ್ಸಲರ ಪ್ರಯತ್ನವನ್ನು ವಿಫಲಗೊಳಿಸಿದ ಹಿನ್ನೆಲೆಯಲ್ಲಿ ಮರಣೋತ್ತರ ಗೌರವ.
ವಿಂಗ್ ಕಮಾಂಡರ್ ಡೆರೆಲ್ ಕ್ಯಾಸ್ಟಲಿನೊ: ಉತ್ತರಾಖಂಡ ಪ್ರವಾಹದ ವೇಳೆ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾಗ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದರು. ಈ ವೇಳೆ ಅವರು ಹಲವು ನಾಗರಿಕರು, ಕೇಂದ್ರೀಯ ಭದ್ರತಾ ದಳದ ಸಿಬ್ಬಂದಿ ಜೀವ ಉಳಿಸಿದ್ದರು. ಡೆರೆಲ್ ಮಂಗಳೂರು ಮೂಲದವರು.
ಭದ್ರತಾ ಸಂಸ್ಥೆಗಳಿಗೆ 776 ಪದಕ
776 ಪೊಲೀಸ್, ಅರೆಸೇನಾ ಹಾಗೂ ಇತರೆ ಭದ್ರತಾ ಪಡೆಗಳ 776 ಭದ್ರತಾ ಸಿಬ್ಬಂದಿ ಈ ಬಾರಿಯ ಗಣರಾಜ್ಯೋತ್ಸವದಂದು ರಾಷ್ಟ್ರಪತಿ ಸೇವಾ ಪದಕಕ್ಕೆ ಆಯ್ಕೆಯಾಗಿದ್ದಾರೆ. ಇವರಲ್ಲಿ ನಾಲ್ವರು 4 ಭದ್ರತಾ ಸಿಬ್ಬಂದಿ, 44 ಪೊಲೀಸರು, ಸಿಆರ್ಪಿಎಫ್ನ 15 ಮಂದಿ ಶೌರ್ಯಪದಕಕ್ಕೆ ಆಯ್ಕೆಯಾಗಿದ್ದಾರೆ. ನಕ್ಸಲ್ ನಿಗ್ರಹ ಕಾರ್ಯಾಚರಣೆ ವೇಳೆ ಮೃತಪಟ್ಟ ಏಳು ಸಿಆರ್ಪಿಎಫ್ ಸಿಬ್ಬಂದಿಗೆ ಮರಣೋತ್ತರವಾಗಿ ಈ ಪದಕ ನೀಡಲಾಗುತ್ತಿದೆ. 94 ಮಂದಿಗೆ ರಾಷ್ಟ್ರಪತಿಗಳ ವಿಶಿಷ್ಟ ಪೊಲೀಸ್ ಸೇವಾ ಪದಕ, 624 ಮಂದಿ ಅತ್ಯುತ್ತಮ ಸೇವಾ ಪದಕಕ್ಕೆ ಆಯ್ಕೆಯಾಗಿದ್ದಾರೆ ಎಂದು ಗೃಹ ಸಚಿವಾಲಯ ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆ ತಿಳಿಸಿದೆ.
ಇದರ ಜತೆಗೆ ಕೈದಿಗಳ, ಅಪರಾಧಿಗಳ ಮನಪರಿವರ್ತಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವಲ್ಲಿ ಮಹತ್ವದ ಪಾತ್ರ ವಹಿಸಿದ 41 ಅಧಿಕಾರಿಗಳಿಗೂ ಈ ಬಾರಿ ಪ್ರಶಸ್ತಿ ನೀಡಲು ರಾಷ್ಟ್ರಪತಿ ಒಪ್ಪಿಗೆ ಸೂಚಿಸಿದ್ದಾರೆ. ಇವರಲ್ಲಿ ಇಬ್ಬರಿಗೆ ವಿಶಿಷ್ಟ ಸೇವಾ ಪದಕ ಹಾಗೂ 39 ಮಂದಿಗೆ ಅತ್ಯುತ್ತಮ ಸೇವಾ ಪದಕ ನೀಡಿ ಗೌರವಿಸಲಾಗುವುದು.
ಬಿಎಸ್ಎಫ್ನ 51 ಮಂದಿಗೆ ಪದಕ
ಗಡಿ ಭದ್ರತಾ ಪಡೆ(ಬಿಎಸ್ಎಫ್)ಯ 51 ಮಂದಿ, ಸಶಸ್ತ್ರ ಸೀಮಾಬಲ(ಎಸ್ಎಸ್ಬಿ)ದ 13 ಮಂದಿ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ಎಫ್)ನ 33 ಮಂದಿ ರಾಷ್ಟ್ರಪತಿಗಳ ಪೊಲೀಸ್ ಪದಕ ಪಡೆಯಲಿದ್ದಾರೆ.
27 ಸಿಬಿಐ ಅಧಿಕಾರಿಗಳಿಗೆ ಪ್ರಶಸ್ತಿ
ಆರುಷಿ- ಹೇಮರಾಜ್ ಹತ್ಯೆ ಹಾಗೂ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆ ಮತ್ತು ಕಲ್ಲಿದ್ದಲು ಬ್ಲಾಕ್ ಹಂಚಿಕೆ ಹಗರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಸೇರಿ ಸಿಬಿಐನ ಒಟ್ಟು 27 ಮಂದಿಗೆ ರಾಷ್ಟ್ರಪತಿಗಳ ಪೊಲೀಸ್ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಪದ್ಮಭೂಷಣ ಪ್ರಶಸ್ತಿಗೆ ನನ್ನನ್ನು ಗುರುತಿಸುವ ಮೂಲಕ ಸರ್ಕಾರ ಬಂಜೆತನ ಚಿಕಿತ್ಸೆಯನ್ನು ಗುರುತಿಸಿದೆ ಎಂದು ನಾನು ಭಾವಿಸುತ್ತೇನೆ. ಬಂಜೆತನದ ಚಿಕಿತ್ಸೆಗಳನ್ನು ವಿಮಾ ಯೋಜನೆಯಲ್ಲಿ ಸೇರಿಸಿಲ್ಲವಾದ್ದರಿಂದ ಜನರು ಚಿಕಿತ್ಸೆಯ ಹಣ ಭರಿಸುವಲ್ಲಿ ವಿಫಲರಾಗುತ್ತಿದ್ದಾರೆ. ಇನ್ನು ಮುಂದಾದರೂ ಈ ಚಿಕಿತ್ಸೆಯನ್ನು ಸರ್ಕಾರ ವಿಮಾ ಯೋಜನೆಯಲ್ಲಿ ಸೇರಿಸಲಿ. ಇದರಿಂದ ಲಕ್ಷಾಂತರ ಜೋಡಿಗಳಿಗೆ ಅನುಕೂಲವಾಗುತ್ತದೆ. ನಾನು ಈ ಪ್ರಶಸ್ತಿಯನ್ನು ಬಂಜೆತನ ಸಮಸ್ಯೆ ಎದುರಿಸುತ್ತಿರುವ ಜೋಡಿಗಳಿಗೆ ಅರ್ಪಿಸುತ್ತೇನೆ. ಅವರ ಸೇವೆಯಿಂದಲೇ ಸರ್ಕಾರ ನನ್ನನ್ನು ಗುರುತಿಸಿದೆ.
- ಡಾ. ಕಾಮಿನಿ ರಾವ್ , ಪ್ರಸೂತಿ ತಜ್ಞೆ
ನಾನು ಈ ಗೌರವವನ್ನು ಐಐಎಸ್ಸಿಗೆ ಅರ್ಪಿಸುತ್ತೇನೆ. ಈ ಮಟ್ಟಕ್ಕೆ ನಾನು ಬೆಳೆಯಲು ಈ ವಿಜ್ಞಾನ ಮಂದಿರ ಸಹಕರಿಸಿದೆ. ಈ ಪ್ರಶಸ್ತಿ ನನ್ನನ್ನು ಮತ್ತಷ್ಟು ಪ್ರೋತ್ಸಾಹಿಸಿದೆ. ಮುಂದೆ ವಿಜ್ಞಾನ ಸಂಶೋಧನೆ ಹಾಗೂ ಅಭಿವೃದ್ಧಿ ಬಗ್ಗೆ ಹೆಚ್ಚಾಗಿ ತೊಡಗಿಸಿಕೊಳ್ಳಲು ಸಹಾಯ ಮಾಡಿದೆ.
- ಪ್ರೊ.ಪದ್ಮನಾಭನ್ ಬಲರಾಮ್
ವಿಜ್ಞಾನಿ, ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು
ನನ್ನ 20 ವರ್ಷಗಳ ಟೆನಿಸ್ ಬದುಕು ಸಾರ್ಥಕವಾದಂತಾಗಿದೆ. ಕನ್ನಡಿಗನಾಗಿ ಈ ಪ್ರಶಸ್ತಿ ಪಡೆದಿರುವುದು ನನಗೆ ಹೆಮ್ಮೆ ಮೂಡಿಸಿದೆ. ಪಾರದರ್ಶಕತೆ ಕಾಪಾಡಲು ಪ್ರಶಸ್ತಿಗೆ ಆನ್ಲೈನ್ ಮೂಲಕವೇ ಅರ್ಜಿ ಕರೆಯಲಾಗಿತ್ತು. ಹಾಗಾಗಿ ಈ ಬಾರಿ ನನಗೆ ಪ್ರಶಸ್ತಿ ಬರುವ ವಿಶ್ವಾಸವಿತ್ತು. ಇದುವರೆಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನೆರವಾದ ಎಲ್ಲರಿಗೂ ನಾನು ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುತ್ತೇನೆ.
-ಎಚ್. ಬೋನಿಫೇಸ್ ಪ್ರಭು, ವೀಲ್ಚೇರ್ ಟೆನಿಸ್ ಆಟಗಾರ
ಪದ್ಮಭೂಷಣ ಪ್ರಶಸ್ತಿಯನ್ನು ಕೃಷಿ ಕ್ಷೇತ್ರದಿಂದ ಗುರುತಿಸಿ ಕೊಟ್ಟಿರುವುದು ಸಂತಸ ತಂದಿದೆ. ನಾನು ನಿವೃತ್ತಿಯ ನಂತರವೂ ಕೃಷಿ ಕ್ಷೇತ್ರದ ಬೆಳವಣಿಗೆಗಾಗಿ ಕೆಲಸ ಮಾಡುತ್ತಿದ್ದೇನೆ. ಕೃಷಿ ಕ್ಷೇತ್ರದಲ್ಲಿ ಬಹಳಷ್ಟು ಅವಕಾಶವಿದ್ದು ಅದನ್ನು ಸದ್ಬಳಕೆ ಮಾಡಿಕೊಂಡರೆ ನಾವು ಯಾರಿಗೂ ಕಮ್ಮಿ ಇಲ್ಲದಂತೆ ಸಾಧನೆ ಮಾಡಬಹುದು.
- ಡಾ.ಎಂ. ಮಹದೇವಪ್ಪ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ
ಪ್ರಶಸ್ತಿ ಸಿಕ್ಕಿರುವುದು ಸಂತಸ ತಂದಿದೆ. ನನ್ನ ಕೆಲಸ ಗುರುತಿಸಿ ಸರ್ಕಾರ ಅತ್ಯುತ್ತಮ ಪ್ರಶಸ್ತಿ ನೀಡಿರುವುದು ಜವಾಬ್ದಾರಿಯನ್ನು ಹೆಚ್ಚಿಸಿದೆ. ನನ್ನ ಬೆಳವಣಿಗೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಆಭಾರಿಯಾಗಿದ್ದೇನೆ. ಇನ್ನಷ್ಟು ಹುಮ್ಮಸ್ಸಿನಿಂದ ಕೆಲಸ ಮಾಡಲು ಪ್ರೋತ್ಸಾಹ ಸಿಕ್ಕಿದೆ.
-ಇಲವತ್ತಿಂಗಲ್ ದೇವಸ್ಸಿ ಜಮ್ಮಿಸ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ
ಪದ್ಮವಿಭೂಷಣ
ಬಿ.ಕೆ.ಎಸ್.ಅಯ್ಯಂಗಾರ್- ಯೋಗ
ನಟ ಕಮಲ್ಹಾಸನ್, ಪೇಸ್ಗೆ ಪದ್ಮಭೂಷಣ
ಪದ್ಮಭೂಷಣ
ಪಿ.ಬಲರಾಮ್-ವಿಜ್ಞಾನ ಮತ್ತು ತಂತ್ರಜ್ಞಾನ
ಎಂ.ಮಹದೇವಪ್ಪ-ವಿಜ್ಞಾನ ಮತ್ತು ತಂತ್ರಜ್ಞಾನ
ರಾಧಾಕೃಷ್ಣನ್ ಕೊಪ್ಪಿಲಿಲ್-ವಿಜ್ಞಾನ ಮತ್ತು ತಂತ್ರಜ್ಞಾನ
ಪದ್ಮಶ್ರೀ
ಡಾ.ಕಾಮಿನಿ ರಾವ್-ವೈದ್ಯಕೀಯ
ಇ.ಡಿ.ಜಮಿಸ್-ವಿಜ್ಞಾನ ಮತ್ತು ತಂತ್ರಜ್ಞಾನ
ಬೋನಿಫೇಸ್ ಪ್ರಭು-ವ್ಹೀಲ್ಚೇರ್ ಟೆನಿಸ್