ವಿದ್ವಾಂಸ ಡಾ. ರಂಗನಾಥ ಶರ್ಮ ನಿಧನ
ಮೈಸೂರು: ಕನ್ನಡ ಹಾಗೂ ಸಂಸ್ಕೃತ ಭಾಷೆಯ ಹಿರಿಯ ವಿದ್ವಾಂಸ, ಮಹಾಮಹೋಪಾಧ್ಯಾಯ ಡಾ. ವಿದ್ವಾನ್ ಎನ್. ರಂಗನಾಥಶರ್ಮ (99) ಶನಿವಾರ ಬೆಳಗಿನ ಜಾವ ಮೈಸೂರಿನ ತಮ್ಮ ಪುತ್ರಿಯ ನಿವಾಸದಲ್ಲಿ ನಿಧನರಾದರು.
ಅವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಪತ್ನಿ ಕೆಲವು ವರ್ಷಗಳ ಹಿಂದೆಯೇ ನಿಧನರಾಗಿದ್ದರು. ಬೆಂಗಳೂರಿನಲ್ಲಿ ವಾಸವಾಗಿದ್ದ ಅವರು ಒಂದೂವರೆ ವರ್ಷಗಳಿಂದ ಮೈಸೂರಿನ ಮಗಳ ಮನೆಯಲ್ಲಿದ್ದರು.
ರಂಗನಾಥ ಶರ್ಮ ಅವರು 1914ರ ಏ.7ರಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿರುವ ನಡಹಳ್ಳಿ ಗ್ರಾಮದಲ್ಲಿ ಜನಿಸಿದರು. ಕೃಷಿಕ ಕುಟುಂಬದಲ್ಲಿ ಜನಿಸಿದ ಇವರಿಗೆ ಚಿಕ್ಕಂದಿನಲ್ಲಿಯೇ ವಿದ್ಯಾಭ್ಯಾಸದಲ್ಲಿದ್ದ ತೀವ್ರ ಆಸಕ್ತಿ ಇವರನ್ನು ಬೆಂಗಳೂರಿಗೆ ಎಳೆದು ತಂದಿತು. ವಾರಾನ್ನ, ಭಿಕ್ಷಾನ್ನಗಳಿಂದ ಪ್ರಾರಂಭದಲ್ಲಿ ಸರಸ್ವತಿಯ ಆರಾಧನೆ ನಡೆಯಿತು. ಸಂಸ್ಕೃತ ಮತ್ತು ಕನ್ನಡದಲ್ಲಿ ವಿದ್ವತ್ ಸಂಪಾದಿಸಿದ ಇವರಲ್ಲಿ ಹುದುಗಿದ್ದ ಪ್ರತಿಭೆಯನ್ನು ಗುರುತಿಸಿ, ಸಂಸ್ಕೃತ ಮತ್ತು ಕನ್ನಡ ಲೋಕಕ್ಕೆ ಇವರಿಂದ ಅಸದೃಶ ಕೊಡುಗೆಯನ್ನು ಸಂಪಾದಿಸಿಕೊಟ್ಟ ಹೆಗ್ಗಳಿಕೆ ಡಾ.ಡಿ..ವಿ. ಗುಂಡಪ್ಪ (ಡಿವಿಜಿ) ಅವರಿಗೆ ಸಲ್ಲುತ್ತದೆ.
ವಾಲ್ಮೀಕಿ ರಾಮಾಯಣವನ್ನು ಸರಳ ಕನ್ನಡಕ್ಕೆ ಅನುವಾದಿಸುವ ಮೂಲಕ ಸಾಹಿತ್ಯ ಲೋಕದ ಸಂಪತ್ತನ್ನು ಬೆಳೆಸಿದರು. ವಿದ್ವಾನ್ ರಂಗನಾಥ ಶರ್ಮ ರಚಿಸಿರುವ ಕೃತಿಗಳು 80ಕ್ಕೂ ಹೆಚ್ಚು. ಸಂಸ್ಕೃತ ಕೃತಿಗಳಲ್ಲಿ ಏಕಚಕ್ರಮ್, ಬಾಹುಬಲಿ ವಿಜಯ, ಶ್ರೀಶಂಕರ ಚರಿತಾಮೃತಮ್ ಇತ್ಯಾದಿ. ಸಂಸ್ಕೃತದಲ್ಲಿ 15ಕ್ಕೂ ಹೆಚ್ಚು ಪ್ರೌಢಪ್ರಬಂಧಗಳಿವೆ.
ಪ್ರಶಸ್ತಿ, ಗೌರವಗಳು: ಸಂಸ್ಕೃತ ಮೂಲಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿರುವ ಕೃತಿಗಳಲ್ಲಿ ವಾಲ್ಮೀಕಿ ರಾಮಾಯಣ, ವಿಷ್ಣುಪುರಾಣ, ಶ್ರೀಮದ್ಭಾಗವತ, ಅಮರಕೋಶ, ಭರ್ತೃಹರಿಯ ವಾಕ್ಯಪದೀಯ ಮೊದಲಾದ ಕೃತಿಗಳು ಪ್ರಮುಖವಾದವು.
ವಿದ್ವಾನ್ ಶರ್ಮ ಅವರಿಗೆ ರಾಜ್ಯ ಮತ್ತು ರಾಷ್ಟ್ರದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಳು, ಕೇಂದ್ರ ಸರ್ಕಾರದಿಂದ ರಾಷ್ಟ್ರದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಕೇಂದ್ರ ಸರ್ಕಾರದ ರಾಷ್ಟ್ರಪತಿ ಸನ್ಮಾನ, ಡಿವಿಜಿ ಸ್ಮಾರಕ ಸನ್ಮಾನ, ತಿರುಪತಿಯ ಸಂಸ್ಕೃತ ವಿವಿಯ ಮಹಾಮಹೋಪಾಧ್ಯಾಯ ಪದವಿ, ಬೆಂಗಳೂರು ಸಂಸ್ಕೃತ ವಿವಿಯ ಗೌರವ ಡಾಕ್ಟರೇಟ್ ಮುಖ್ಯವಾದವು.
ಇವರು ಏ.7ರಂದು ನೂರನೇ ವರ್ಷಕ್ಕೆ ಪಾದಾರ್ಪಣೆ ಮಾಡಬೇಕಿತ್ತು. ಈ ಹಿನ್ನೆಲೆಯಲ್ಲಿ ಫೆ.15 ರಿಂದ 17 ರವರೆಗೆ ಶರ್ಮ ಶತಶಾರದೋತ್ಸವ ಸಮಿತಿಯು ಕಾರ್ಯಕ್ರಮ ಸಂಘಟಿಸಿತ್ತು. ಈ ಕಾರ್ಯಕ್ರಮಕ್ಕೂ ಮುನ್ನವೇ ಅವರು ಇಹಲೋಕ ತ್ಯಜಿಸಿದ್ದಾರೆ.
ಅಪಾರ ಶಿಷ್ಯ ವೃಂದವನ್ನು ಬೆಳೆಸಿದ್ದರು...
ಬೆಂಗಳೂರು ಮತ್ತು ಮೈಸೂರಿನ ಸಂಸ್ಕೃತ ಕಾಲೇಜುಗಳಲ್ಲಿ ವ್ಯಾಕರಣಶಾಸ್ತ್ರದ ಪ್ರಾಧ್ಯಾಪಕರಾಗಿ ಅವರು ಅನೇಕ ಮಂದಿ ಶಿಷ್ಯರನ್ನು ತಯಾರು ಮಾಡಿ ಅಪಾರ ಗೌರವಾದರಗಳಿಗೆ ಪಾತ್ರರಾಗಿದ್ದರು. ಸುಮಾರು ಒಂದು ಶತಮಾನಕ್ಕೂ ಹಿಂದೆ ಪ್ರಕಟವಾಗಿದ್ದು, ದುರ್ಲಭವಾಗಿದ್ದ 'ಶ್ರೀ ಚಾಮರಾಜೋಕ್ತಿ ವಿಲಾಸ'ವೆಂಬ ಕನ್ನಡ ರಾಮಾಯಣವನ್ನು ಪರಿಷ್ಕರಿಸುವುದರಲ್ಲಿ ಅವರು ಬಹುಮುಖ್ಯ ಪಾತ್ರ ವಹಿಸಿದ್ದರು. ಶ್ರೀಮದ್ವಾಲ್ಮೀಕಿ ರಾಮಾಯಣದ ಅವರ ಕನ್ನಡ ಅನುವಾದ ಬಹು ಜನಾದರಣೀಯವಾಗಿದೆ. ಲೌಕಿಕ ನ್ಯಾಯಗಳು, ಹೊಸಗನ್ನಡ ವ್ಯಾಕರಣ, ಸೂಕ್ತಿ-ವ್ಯಾಪ್ತಿ ಮೊದಲಾದ ಗ್ರಂಥಗಳನ್ನು ಕನ್ನಡದಲ್ಲಿ ರಚಿಸಿರುವ ಅವರು ವಿಷ್ಣುಪುರಾಣ, ಶ್ರೀಮದ್ಭಾಗವತದ ಕೊನೆಯ ಮೂರು ಸ್ಕಂದಗಳನ್ನು ಸೊಗಸಾಗಿ ಅನುವಾದಿಸಿ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ಅಮರಕೋಶವನ್ನು ಸಂಪಾದಿಸಿ ಕನ್ನಡದಲ್ಲಿ ತಂದಿದ್ದಾರೆ. ಸಂಸ್ಕೃತದಲ್ಲಿ ಎರಡು ನಾಟಕಗಳನ್ನು ಬರೆದಿದ್ದಾರೆ. 'ಗೊಮ್ಮಟೇಶ್ವರ ಸುಪ್ರಭಾತ', 'ಸುಬ್ರಹ್ಮಣ್ಯ ಸುಪ್ರಭಾತ', 'ರಾಮಚಂದ್ರ ಸುಪ್ರಭಾತ' ಮುಂತಾದ ಕೃತಿಗಳನ್ನು ರಚಿಸಿ ವಿದ್ವಜ್ಜನರಿಗೆ ಆದರಣೀಯರಾಗಿದ್ದಾರೆ.
ಅನೇಕ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದ್ದ ಅವರ ಲೇಖನಗಳು ಅವರ ಆರೋಗ್ಯಕರ ಅಧ್ಯಾಪನಾಕ್ರಮ ಮತ್ತು ಚಿಂತನಶೀಲ ಹಾಗೂ ಮಾರ್ಗದರ್ಶಕ ದೃಷ್ಟಿಯನ್ನು ಪ್ರತಿಬಿಂಬಿಸುತ್ತವೆ. ವ್ಯಾಕರಣ, ವೇದಾಂತ, ಕಾವ್ಯ ಮೀಮಾಂಸೆ ಮೊದಲಾದ ಶಾಸ್ತ್ರಗಳಲ್ಲಿ ಅವರಿಗಿರುವ ನಿಷ್ಕೃಷ್ಟ ಹಾಗೂ ವಿಶಾಲವ್ಯಾಪ್ತಿಯ ಜ್ಞಾನ, ಸಾಹಿತ್ಯದಲ್ಲಿರುವ ಸಹೃದಯತೆ ಅವರ ಉಪನ್ಯಾಸಗಳಲ್ಲಿ ಪ್ರತಿಬಿಂಬಿತವಾಗಿವೆ. ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಪ್ರಾಚೀನ ಕನ್ನಡ ಕಾವ್ಯಗಳನ್ನು ಹೊಸಗನ್ನಡಕ್ಕೆ ತರುವ ಯೋಜನೆಯ ನಿರ್ದೇಶಕರಾಗಿದ್ದು, ಆ ಗ್ರಂಥಗಳು ಇಂದಿನವರಿಗೆ ಎಟಕುವಂತೆ ಮಾಡಿದ್ದಾರೆ. 'ಉತ್ಥಾನ' ಪತ್ರಿಕೆಯಲ್ಲಿ ಸೂಕ್ತಿ-ವ್ಯಾಪ್ತಿ ಎಂಬ ಶೀರ್ಷಿಕೆಯಲ್ಲಿ ಸಮಕಾಲೀನ ವಿಷಯಗಳನ್ನು ಆರ್ಷೇಯ ಮತ್ತು ಮಹಾಕವಿಗಳ ಸೂಕ್ತಿಗಳ ಬೆಳಕಿನಲ್ಲಿ ಸಮೀಕ್ಷಿಸಿದ್ದಾರೆ.
1984ರಲ್ಲಿ ಅವರು ಅಖಿಲ ಕರ್ನಾಟಕ ಸಂಸ್ಕೃತ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಭಾರತೀಯ ವಿದ್ಯಾಭವನ, ಆಧ್ಯಾತ್ಮ ಪ್ರಕಾಶ ಕಾರ್ಯಾಲಯ, ಶ್ರೀ ರಾಮಕೃಷ್ಣಾಶ್ರಮ ಮುಂತಾದ ಸಂಸ್ಥೆಗಳು ಅವರ ವಿದ್ವತ್ತಿನ ಲಾಭ ಪಡೆಯುತ್ತಿದ್ದವು.