ಅಂಡಮಾನ್ ಬಳಿ ದೋಣಿ ಮುಳುಗಿ 21 ಮಂದಿ ಸಾವು
ಪ್ರವಾಸಿ ದೋಣಿಯೊಂದು ಭಾನುವಾರ ಅಂಡಮಾನ್ ನಿಕೋಬಾರ್ ದ್ವೀಪದ ಸಮೀಪ ಮುಳುಗಿ 21 ಮಂದಿ ಮೃತಪಟ್ಟಿದ್ದಾರೆ...
ಪೋರ್ಟ್ಬ್ಲೇರ್: ಪ್ರವಾಸಿ ದೋಣಿಯೊಂದು ಭಾನುವಾರ ಅಂಡಮಾನ್ ನಿಕೋಬಾರ್ ದ್ವೀಪದ ಸಮೀಪ ಮುಳುಗಿ 21 ಮಂದಿ ಮೃತಪಟ್ಟಿದ್ದಾರೆ.
ಸಂಜೆ 4.30ರ ವೇಳೆಗೆ ಸಂಭವಿಸಿದ ಈ ದುರಂತದಲ್ಲಿ ಸಮುದ್ರಪಾಲಾಗಿದ್ದ 18 ಮಂದಿಯನ್ನು ರಕ್ಷಿಸಲಾಗಿದೆ. ಇವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಖಾಸಗಿ ಕಂಪನಿಯೊಂದಕ್ಕೆ ಸೇರಿದ ಈ ದೋಣಿಯಲ್ಲಿ ತಮಿಳುನಾಡಿನ ಕಂಚೀಪುರಂನ 30 ಮಂದಿ ಸೇರಿ ಒಟ್ಟು 45 ಮಂದಿ ಪ್ರವಾಸಿಗರಿದ್ದರು. ಈ ದೋಣಿ ರೋಸ್ ಐಲ್ಯಾಂಡ್ನಿಂದ ನಾರ್ಥ್ ಬೇಯತ್ತ ಸಾಗುತ್ತಿದ್ದಾಗ ತೀರದಿಂದ 25 ಕಿ.ಮೀ. ದೂರದಲ್ಲಿ ಈ ದುರ್ಘಟನೆ ಸಂಭವಿಸಿದೆ. ಆದರೆ, ದುರ್ಘಟನೆಗೆ ಕಾರಣವೇನೆಂಬುದು ಖಚಿತವಾಗಿಲ್ಲ. ಆದರೆ, ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರನ್ನು ಹೊತ್ತೊಯ್ದಿದ್ದೇ ಕಾರಣ ಎಂದು ಹೇಳಲಾಗಿದೆ. ಈ ಸಂಬಂಧ ಅಂಡಮಾನ್ ನಿಕೋಬಾರ್ ಲೆ. ಗವರ್ನರ್ ಎ.ಕೆ. ಸಿಂಗ್ ತನಿಖೆಗೆ ಆದೇಶಿಸಿದ್ದಾರೆ. ಪ್ರಧಾನಿ ಮನಮೋಹನ್ ಸಿಂಗ್ ದುರಂತದ ಬಗ್ಗೆ ಶೋಕ ವ್ಯಕ್ತಪಡಿಸಿದ್ದಾರೆ.
ಸೇನೆ ಬಳಕೆ: ಸಮುದ್ರಪಾಲಾಗಿರುವವರ ರಕ್ಷಣೆಗೆ ಕೋಸ್ಟ್ಗಾರ್ಡ್ ಜತೆಗೆ ಸೇನೆಯ ನೆರವು ಪಡೆಯಲಾಗಿದೆ. ದೋಣಿಯ ಕ್ಯಾಬಿನ್ನಲ್ಲಿ ಇನ್ನೂ ಕೆಲವರು ಸಿಕ್ಕಿಹಾಕಿಕೊಂಡಿರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.