ಮೂಲಭೂತ ಸೌಲಭ್ಯಕ್ಕಿಂತ ಲ್ಯಾಪ್ಟಾಪ್ ಅಗತ್ಯವೇ?
ಕಾಲೇಜಿನಲ್ಲಿ ಶೌಚಾಲಯವಿಲ್ಲ, ಕುಡಿಯುವ ನೀರಿಲ್ಲ, ಪ್ರಯೋಗಾಲಯವಿಲ್ಲ, ಕೆಲವೆಡೆ ಕೊಠಡಿಗಳೇ ಇಲ್ಲ. ಆದರೂ ಮುಂಬರುವ...
ಕನ್ನಡಪ್ರಭ ವಾರ್ತೆ ಬೆಂಗಳೂರು ಜ.26
ಕಾಲೇಜಿನಲ್ಲಿ ಶೌಚಾಲಯವಿಲ್ಲ, ಕುಡಿಯುವ ನೀರಿಲ್ಲ, ಪ್ರಯೋಗಾಲಯವಿಲ್ಲ, ಕೆಲವೆಡೆ ಕೊಠಡಿಗಳೇ ಇಲ್ಲ. ಆದರೂ ಮುಂಬರುವ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಪಿಯುಸಿ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸುವ 1500 ಕೋಟಿ ವೆಚ್ಚದ ಯೋಜನೆಗೆ ಸರ್ಕಾರದ ಮುಂದಾಗುತ್ತಿದೆ.
ಮೂಲಭೂತ ಸೌಕರ್ಯ ಅಭಿವೃದ್ಧಿಗೆ 2454 ಕೋಟಿ ಪ್ರಸ್ತಾವ ಸಲ್ಲಿಸಿದರೆ ಮೌನ ವಹಿಸಿರುವ ರಾಜ್ಯ ಸರ್ಕಾರ, ಲ್ಯಾಪ್ಟಾಪ್ ವಿತರಣೆಗೆ ಮಾತ್ರ ಬರೋಬ್ಬರಿ 1500 ಕೋಟಿ ವ್ಯಯಿಸಲು ಮುಂದಾಗಿದೆ. ರಾಜ್ಯದ
ಪದವಿಪೂರ್ವ ಕಾಲೇಜುಗಳು ಮೂಲಭೂತ ಸೌಕರ್ಯಗಳಿಲ್ಲದೇ ಹಾಳಾಗುತ್ತಿವೆ. ಆದರೆ 10.38 ಲಕ್ಷ ಪಿಯು ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಅಥವಾ ನೋಟ್ಬುಕ್ ನೀಡುವುದಾಗಿ ಘೋಷಿಸಿದೆ.
ರಾಜ್ಯ ಸರ್ಕಾರ ಈಗ ಕೊಡ ಮಾಡಲು ಮುಂದಾಗಿರುವ ಲ್ಯಾಪ್ಟಾಪ್ಗಳ ಮೌಲ್ಯ ರು. 8ರಿಂದ 15 ಸಾವಿರ. ಈ ಬೆಲೆಗೆ ಎಂತಹ ದರಿದ್ರ ಲ್ಯಾಪ್ಟಾಪ್ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ ಎನ್ನುವುದನ್ನು ಒಮ್ಮೆ ಪರಿಶೀಲಿಸಬೇಕು. ನೆಪ ಮಾತ್ರಕ್ಕೆ ಲ್ಯಾಪ್ಟಾಪ್ ಕೊಟ್ಟು ಅವರು ನಾಲ್ಕು ದಿನವೂ ಬಾಳಿಕೆಗೆ ಬಾರದಿದ್ದರೇ ಮಕ್ಕಳ ಆಟಿಕೆಯಾಗುತ್ತದೆ.
ಒಂದೂವರೆ ಸಾವಿರ ಕೋಟಿ ಯೋಜನೆ! : ರಾಜ್ಯಪಾಲರ ಭಾಷಣದ ಬಳಿಕ ಲ್ಯಾಪ್ಟಾಪ್ ಯೋಜನೆಯ ರೂಪುರೇಷೆ ಸಿದ್ದಪಡಿಸಲಾಗಿದೆ. ರಾಜ್ಯದಲ್ಲಿರುವ 10.38 ಲಕ್ಷ ಪಿಯು ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ನೀಡಲಾಗುತ್ತದೆ. 8 ಸಾವಿರದಿಂದ ರು. 15 ಸಾವಿರ ದವರೆಗಿನ ಲ್ಯಾಪ್ಟಾಪ್ ನೀಡಲು ಚಿಂತಿಸಲಾಗುತ್ತಿದೆ. ಇಷ್ಟೇ ವೆಚ್ಚ ಮಾಡಿ ತಮಿಳುನಾಡು ಸರ್ಕಾರ ಕೂಡ
ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಿತ್ತು. ಆದರೆ ಅಲ್ಲಿ ಲ್ಯಾಪ್ಟಾಪ್ಗಳನ್ನು ಮಾರಾಟ ಮಾಡಿ ಸಾಕಷ್ಟು ವಿದ್ಯಾರ್ಥಿಗಳು ಹಣ ಪಡೆಯುತ್ತಿದ್ದಾರೆ.
ಕಾಲೇಜು ಕಟ್ಟಲು ಹಣ ನೀಡಿ: ರಾಜ್ಯದಲ್ಲಿ 1203 ಸರ್ಕಾರಿ ಕಾಲೇಜುಗಳಿವೆ. ಈ ಕಾಲೇಜುಗಳ ಮೂಲಭೂತ ಸೌಕರ್ಯದ ಅಭಿವೃದ್ಧಿಗೆ 1341 ಕೋಟಿ ಯೋಜನೆ ಪ್ರಸ್ತಾವವನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಈ ಯೋಜನೆಯಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಶೌಚಾಲಯ, ಕೊಠಡಿ, ಗ್ರಂಥಾಲಯ, ಕುಡಿಯುವ ನೀರು ಹಾಗೂ ಮೈದಾನ ನಿರ್ಮಾಣ ಮಾಡಲು ಉದ್ದೇಶಿಸಲಾಗಿತ್ತು. ಇದಲ್ಲದೇ ಈಗಾಗಲೇ ರಾಜ್ಯಾದ್ಯಂತ ಸುಮಾರು 188 ಸರ್ಕಾರಿ ಕಾಲೇಜುಗಳ ಸ್ಥಾಪನೆಗೆ ಬೇಡಿಕೆ ಕೂಡ ಬಂದಿದೆ.
ಇನ್ನು ರಾಜ್ಯದಲ್ಲಿರುವ ಅರ್ಧಕ್ಕೂ ಅಧಿಕ ಸರ್ಕಾರಿ ಕಾಲೇಜುಗಳ ಪ್ರಯೋಗಾಲಯಗಳು ಬಳಕೆಗೆ ಬಾರದಂತಿವೆ. ಪ್ರಯೋಗಾಲಯ ನಿರ್ಮಾಣ ಹಾಗೂ ಅಭಿವೃದ್ಧಿಗೆಂದೇ 1114 ಕೋಟಿ ಪ್ರಸ್ತಾವವನ್ನು ರಾಜ್ಯ ಸರ್ಕಾರಕ್ಕೆ ಆರು ತಿಂಗಳ ಹಿಂದೆಯೇ ಕಳುಹಿಸಲಾಗಿದೆ. ಇದರಲ್ಲಿ ಕಂಪ್ಯೂಟರ್, ರಸಾಯನಶಾಸ್ತ್ರ, ಜೀವಶಾಸ್ತ್ರ, ಭೌತಶಾಸ್ತ್ರ ಪ್ರಯೋಗಾಲಯಗಳು ಸೇರಿವೆ. ಆದರೆ ವಿದ್ಯಾರ್ಥಿಗಳ ಪಠ್ಯ ಶಿಕ್ಷಣದ ಅಗತ್ಯಕ್ಕಿಂತ ಪ್ರಚಾರ ಗಿಟ್ಟಿಸಿಕೊಳ್ಳುವ ಚುನಾವಣೆ ಯೋಜನೆಗಳಿಗೆ ಹೆಚ್ಚು ಪ್ರಾಶಸ್ತ್ಯ ದೊರೆಯುತ್ತದೆ.
ಲ್ಯಾಪ್ಟಾಪ್ ಅಗತ್ಯವಿದೆಯೇ?: ಪಿಯುಸಿ ವಿದ್ಯಾರ್ಥಿಗಳಿಗೆ ಎರಡು ವರ್ಷದ ಶಿಕ್ಷಣದಲ್ಲಿ ಒಂದು ದಿನವೂ ಶೈಕ್ಷಣಿಕ ಕಾರಣಕ್ಕೆ ಲ್ಯಾಪ್ಟಾಪ್ ಅಗತ್ಯ ಬರುವುದಿಲ್ಲ. ಪ್ರಾತ್ಯಕ್ಷಿಕೆ, ವಿಶೇಷ ಉಪನ್ಯಾಸದ ಸಂಗತಿಗಳೇ ಅವರ ಪಾಲಿಗೆ ಉದ್ಭವವಾಗುವುದಿಲ್ಲ. ಇದಕ್ಕಿಂತಲೂ ಹೆಚ್ಚಾಗಿ ವಿದ್ಯಾರ್ಥಿಗಳು ಹೆಚ್ಚಾಗಿ ದಾರಿ ತಪ್ಪುವ ಕಾಲವೆಂದರೆ ಪದವಿಪೂರ್ವ ಕಾಲೇಜುಗಳಿಗೆ ಪ್ರವೇಶ ಪಡೆದಾಗ.
ಈ ವಯಸ್ಸು ಬಲು ಕಷ್ಟವೆಂದು ಮನಃಶಾಸ್ತ್ರಜ್ಞರೇ ಹೇಳುತ್ತಾರೆ. ತಮ್ಮ ಪಾಡಿಗೆ ಓದುತ್ತಿರುವ ಈ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಕೊಟ್ಟು ಕೆಡಿಸುವ ಪ್ರಯತ್ನಕ್ಕೆ ಸರ್ಕಾರ ಮುಂದಾಗುತ್ತಿದೆ. ಇದರ ಬದಲಿಗೆ ರಾಜ್ಯದ ಎಲ್ಲ ಸರ್ಕಾರಿ ಕಾಲೇಜುಗಳಿಗೆ ಪ್ರಯೋಗಾಲಯ ಮಾಡಿದರೆ ಈ ಯೋಜನೆಯ ಶೇ.10ರ ವೆಚ್ಚದಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ನೀಡಬಹುದು.
ಅಂದಹಾಗೆ ಶಿಕ್ಷಣ ಇಲಾಖೆಯ ಶೇ.10ರಷ್ಟು ಬಜೆಟ್ ಇದೊಂದೇ ಯೋಜನೆಗೆ ಖರ್ಚಾಗುತ್ತದೆ. ರಾಜ್ಯದಲ್ಲಿ ಈ 10.38 ಲಕ್ಷ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ವ್ಯಾಪ್ತಿಗೆ 98 ಲಕ್ಷ ವಿದ್ಯಾರ್ಥಿಗಳು ಸೇರುತ್ತಾರೆ.
-ರಾಜೀವ ಹೆಗಡೆ