ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಲ್ಯಾಪ್‌ಟಾಪ್ ತಂದ ಅಚ್ಚರಿ!

ಪಿಯುಸಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಕೊಡುವ ಘೋಷಣೆ ವಿಧಾನ ಮಂಡಲದ...

Rashmi Kasaragodu
Updated On : 27 Jan 2014, 3:27 am

ಕನ್ನಡಪ್ರಭ ವಾರ್ತೆ    ಬೆಂಗಳೂರು    ಜ.26
ಪಿಯುಸಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಕೊಡುವ ಘೋಷಣೆ ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣದಲ್ಲಿ ಸೇರಿಕೊಂಡಿದ್ದು ಹೇಗೆ ಎಂಬುದು ಖುದ್ದು ಸಿಎಂ ಕಚೇರಿಗೂ ಗೊತ್ತಿರಲಿಲ್ಲ!

ಇಂಥದ್ದೊಂದು ಚರ್ಚೆ ಸರ್ಕಾರ ಹಾಗೂ ಪ್ರತಿಪಕ್ಷಗಳ ಪಾಳೆಯದಲ್ಲಿ ನಡೆಯುತ್ತಿದೆ. ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಈಗಾಗಲೇ 'ಲ್ಯಾಪ್‌ಟಾಪ್‌' ಯೋಜನೆ ನನ್ನ ಗಮನದಲ್ಲೇ ಇರಲಿಲ್ಲ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ  ಸಾರ್ವಜನಿಕವಾಗಿ ಹೀಗೆ ಹೇಳುವಂತಿಲ್ಲ! ಆದರೆ ಅವರ ಕಚೇರಿಯ ಸಿಬ್ಬಂದಿ ಮಾತ್ರ ತಮಗೆ ಈ ಕಾರ್ಯಕ್ರಮದ ಅರಿವಿರಲಿಲ್ಲ ಎಂದು ಕೆಲವರ ಬಳಿ ಹೇಳಿಕೊಂಡಿದ್ದಾರೆ.

ಅಂದಾಜು 1,500 ಕೋಟಿ ವೆಚ್ಚವಾಗುವ ಯೋಜನೆ ವಿಚಾರ ಚರ್ಚೆ ಇಲ್ಲದೇ, ಬಹುತೇಕ ಅಧಿಕಾರಿಗಳಿಗೆ ಗೊತ್ತಿಲ್ಲದೆ ಹೇಗೆ ಭಾಷಣ ಸೇರಿತು ಎಂಬುದೇ ಮುಖ್ಯಮಂತ್ರಿ ಕಚೇರಿ ಸಿಬ್ಬಂದಿಗೆ ತಿಳಿಯುತ್ತಿಲ್ಲ. ಏಕೆಂದರೆ, ಪದವಿಪೂರ್ವ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಸರ್ಕಾರಕ್ಕೆ ಈ ಬಗ್ಗೆ ಯಾವುದೇ ಪ್ರಸ್ತಾವ ಸಲ್ಲಿಸಿಲ್ಲ.         


ಎಷ್ಟು ಮಕ್ಕಳಿಗೆ ಲ್ಯಾಪ್‌ಟಾಪ್ ವಿತರಿಸಬೇಕು, ಸರ್ಕಾರಿ ಶಾಲೆ ಮಕ್ಕಳಿಗೆ ಮಾತ್ರ ಕೊಡಬೇಕೇ? ಅಥವಾ ಎಲ್ಲ ಮಕ್ಕಳಿಗೂ ಯೋಜನೆ ಅನ್ವಯ ಆಗುತ್ತದೆಯೇ ? ಕೊಡುವಾದದರೆ ಅದಕ್ಕೆ ತಗಲುವ ವೆಚ್ಚವೆಷ್ಟು? ಮುಂತಾದ ಅಂಶಗಳನ್ನು ಪ್ರಸ್ತಾಪಿಸಿ ವರದಿ ಸಹಿತವಾದ ಮನವಿಯನ್ನು ಶಿಕ್ಷಣ ಇಲಾಖೆ ಸಲ್ಲಿಸಿಯೇ ಇಲ್ಲ.

ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಘೋಷಣೆ ಇತ್ತು ಎಂಬುದನ್ನು ಬಿಟ್ಟರೆ, ಈ ಬಗ್ಗೆ ಬೇರೆ ಯಾವುದೇ ಚಿಂತನೆ ಅಥವಾ ಪ್ರಕ್ರಿಯೆ ನಡೆದಿರಲೇ ಇಲ್ಲ. ಆದರೂ ಲ್ಯಾಪ್‌ಟಾಪ್ ರಾಜ್ಯಪಾಲರ ಭಾಷಣ ಸೇರಿದೆ!
ಮೂಲಗಳ ಪ್ರಕಾರ ರಾಜ್ಯಪಾಲರ ಭಾಷಣದಲ್ಲಿ ಲ್ಯಾಪ್‌ಟಾಪ್ ವಿಚಾರ ಸೇರಿಕೊಳ್ಳಲು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಅವರೇ ಕಾರಣ. ಅವರು ಕೊನೆಯ ಕ್ಷಣದಲ್ಲಿ ರಾಜ್ಯಪಾಲರ ಭಾಷಣ ಪ್ರತಿಯಲ್ಲಿ 'ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌' ಘೋಷಣೆ ಸೇರಿಸಿದ್ದಾರೆ. ಜತೆಗೆ ಇದು ರಾಹುಲ್ ಗಾಂಧಿ ಅವರ ಕನಸು ಎಂದೂ ಹೇಳಿಕೊಂಡಿದ್ದಾರೆ.

ಸಾಮಾನ್ಯವಾಗಿ ಮುಖ್ಯಮಂತ್ರಿ ಮತ್ತು ಸರ್ಕಾರದ ಮುಖ್ಯಕಾರ್ಯದರ್ಶಿ ಅವರು ರಾಜ್ಯಪಾಲರ ಭಾಷಣದಲ್ಲಿ ಇರಬೇಕಾದ ಅಂಶಗಳನ್ನು ನಿರ್ಧರಿಸುತ್ತಾರೆ. ವಿವಿಧ ಇಲಾಖೆಗಳಿಂದ ಬಂದ ಪ್ರಸ್ತಾವ, ಮುಂಬರಲಿರುವ ಯೋಜನೆಗಳನ್ನು ಗಮನದಲ್ಲಿರಿಸಿಕೊಂಡು ರಾಜ್ಯಪಾಲರ ಭಾಷಣದ ಅಂಶಗಳನ್ನು ನಿರ್ಧರಿಸಲಾಗುತ್ತದೆ. ಆನಂತರ ರಾಜ್ಯಪಾಲರ ಭಾಷಣದ ಪ್ರತಿಯನ್ನು ಸಚಿವ ಸಂಪುಟದ ಮುಂದಿಟ್ಟು ಅನುಮತಿ ಪಡೆಯಲಾಗುತ್ತದೆ. ಇಷ್ಟೆಲ್ಲ ಪ್ರಕ್ರಿಯೆಗಳ ನಡುವೆ ಎಲ್ಲರ ಕಣ್ಣು ತಪ್ಪಿಸಿ ಲ್ಯಾಪ್‌ಟಾಪ್ ವಿಷಯ ರಾಜ್ಯಪಾಲರ ಭಾಷಣದೊಳಗೆ ಸೇರಿದ್ದು ಮಾತ್ರ ಸರ್ಕಾರದ ಪವಾಡಗಳಲ್ಲೊಂದು.
ರಾಜ್ಯಪಾಲರ ಭಾಷಣಕ್ಕೆ ಅಂತಹ ಮಹತ್ವವೇನೂ ಇಲ್ಲ. ರಾಜ್ಯಪಾಲರ ಭಾಷಣದಲ್ಲಿ ಹೇಳಿದ್ದೆಲ್ಲವನ್ನೂ ಮಾಡಲೇಬೇಕೆಂದೇನಿಲ್ಲ ಎಂಬ ವಾದವೂ ಇದೆ. ಆದರೆ ಶಿಕ್ಷಣ ಸಚಿವರು ಮಾತ್ರ ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪವಾದ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಅದನ್ನು ಪಾಲಿಸಲು ಮುಂದಾಗಿದ್ದಾರೆ. ಈ ಬಗ್ಗೆ ಯೋಜನೆ ಸಿದ್ಧಪಡಿಸುವ ಚಿಂತನೆ ನಡೆಸಿದ್ದಾರೆ.

ರಾಜ್ಯಪಾಲರ ಭಾಷಣದಲ್ಲಿ ಯೋಜನೆ ಪ್ರಸ್ತಾಪವಾಗಿದ್ದರಿಂದ ಜಾರಿಗೆ ತರುವುದು ಸಚಿವನಾಗಿ ನನ್ನ ಬದ್ಧತೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದರಿಂದಾಗಿ ಸರ್ಕಾರ ಅಚಾನಕ್ ಆಗಿ ಮುಜುಗರದ ನಡುವೆಯೇ ಸಾವಿರಾರು ಕೋಟಿ ಹೊರೆ ಹೊರಲು ಸಿದ್ಧವಾಗಬೇಕಿದೆ.

ರು. 1500 ಕೋಟಿ
ವೆಚ್ಚದ ಯೋಜನೆ ಬಗ್ಗೆ ನಡೆಯದ ಚರ್ಚೆ; ಸಚಿವ ಜಯಚಂದ್ರ ಪ್ರಭಾವದಿಂದ ಕೊನೆ ಕ್ಷಣದಲ್ಲಿ ಬದಲು

-ವಿನಾಯಕ ಭಟ್ಟ ಮೂರೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement