ಗಣಿ ಪ್ರದೇಶ ಪುನಶ್ಚೇತನ ಏಕಿಲ್ಲ: ರಾಜ್ಯಕ್ಕೆ ಸುಪ್ರೀಂ ತಪರಾಕಿ
ಗಣಿಗಾರಿಕೆ ಪ್ರದೇಶದಲ್ಲಿ ಪರಿಸರ ಪುರ್ನನಿರ್ಮಾಣ ಮತ್ತು ಪುನಶ್ಚೇತನ ಯೋಜನೆ(ಆರ್ ಆ್ಯಂಡ್ ಆರ್) ಅನುಷ್ಠಾನದಲ್ಲಿ...
ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಗಣಿಗಾರಿಕೆ ಪ್ರದೇಶದಲ್ಲಿ ಪರಿಸರ ಪುರ್ನನಿರ್ಮಾಣ ಮತ್ತು ಪುನಶ್ಚೇತನ ಯೋಜನೆ(ಆರ್ ಆ್ಯಂಡ್ ಆರ್) ಅನುಷ್ಠಾನದಲ್ಲಿ ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತ ಪಡಿಸಿರುವ ಸುಪ್ರೀಂ ಕೋರ್ಟ್, ಕರ್ನಾಟಕದಲ್ಲಿ ವಾರ್ಷಿಕ ಅದಿರು ಉತ್ಪಾದನೆ ಮಿತಿ ಸಡಿಲಿಸಲು ಮತ್ತೆ ನಿರಾಕರಿಸಿದೆ.
'ಇದು ಆಡಳಿತ ವ್ಯವಸ್ಥೆ ಕುಸಿದಿರುವುದರ ಸ್ಪಷ್ಟ ಸೂಚನೆ' ಎಂದು ಹರಿಹಾಯ್ದಿರುವ ಸುಪ್ರೀಂ, ಆರ್ ಆ್ಯಂಡ್ ಆರ್ ಅನುಷ್ಠಾನ ಜಾರಿ ವಿಳಂಬ ಏಕೆ ಆಗಿದೆ ಎಂಬುದರ ಕುರಿತು ಫೆ.24ರೊಳಗೆ ವಿವರ ನೀಡಲು ರಾಜ್ಯ ಮತ್ತು ಕೇಂದ್ರ ಪರಿಸರ ಇಲಾಖೆಗೆ ಸೂಚಿಸಿದೆ. ವಾರ್ಷಿಕ ಅದಿರು ಉತ್ಪಾದನೆ ಮಿತಿ ಹೆಚ್ಚಳಕ್ಕೆ ಸಂಬಂಧಸಿದಂತೆ ಉಕ್ಕು ಕಂಪನಿಗಳು ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆಯನ್ನು ಸೋಮವಾರ ನಡೆಸಿದ ನ್ಯಾ.ಎ.ಕೆ. ಪಟ್ನಾಯಕ್ ನೇತೃತ್ವದ ಹಸಿರುಪೀಠ, ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ವಿಚಾರಣೆ ವೇಳೆ ನ್ಯಾಯಪೀಠ, ಈಗಾಗಲೇ ತಾನು ನೀಡಿದ ಆದೇಶದಂತೆ 'ಎ' ಮತ್ತು 'ಬಿ' ವರ್ಗದ ಕಂಪನಿಗಳು ಪರಿಸರ ಪುರ್ನನಿರ್ಮಾಣ ಮತ್ತು ಪುನಶ್ಚೇತನ ಯೋಜನೆ ಜಾರಿ ಪ್ರಕ್ರಿಯೆ ಸಮರ್ಪಕವಾಗಿ ಮಾಡದಿರುವುದನ್ನು ಗಮನಿಸಿತು. 72 ಕಂಪನಿಗಳ ಪೈಕಿ 22 ಕಂಪನಿಗಳು ಮಾತ್ರ ಯೋಜನೆ ಜಾರಿ ಪ್ರಕ್ರಿಯೆಯನ್ನು ಸಮರ್ಪಕವಾಗಿ ಪೂರೈಸಿದ್ದು, ಉಳಿದ 50 ಕಂಪನಿಗಳು ಇನ್ನೂ ಪ್ರಕ್ರಿಯೆ ಪೂರೈಸದ ಬಗ್ಗೆ ತೀವ್ರ ಆಕ್ಷೇಪಿಸಿತು. ಯೋಜನೆ ಪ್ರಕ್ರಿಯೆ ಮೇಲೆ ನಿಗಾ ಇಟ್ಟು ಮೇಲ್ವಿಚಾರಣೆ ಮಾಡಬೇಕಾದ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ಕಾರ್ಯನಿರ್ವಹಿಸಿಲ್ಲ ಎಂಬುದನ್ನು ಪ್ರಸ್ತಾಪಿಸಿದ ತರಾಟೆಗೆ ತೆಗೆದುಕೊಂಡಿತು.
ರಾಜ್ಯ ಸರ್ಕಾರವೇ ಹೊಣೆ: ಈ ಲೋಪಕ್ಕೆ ಕಾರಣವೆನೆಂದು ವಿಚಾರಣೆ ವೇಳೆ ಸಿಇಸಿಯನ್ನು ನ್ಯಾಯಪೀಠ ಕೇಳಿತು. ಈ ವಿಳಂಬಕ್ಕೆ ಕರ್ನಾಟಕವೇ ಹೊಣೆ ಎಂದು ಸಿಇಸಿ ತಿಳಿಸಿತು. ರಾಜ್ಯದ ಪರ ವಕೀಲರು ಕೇಂದ್ರ ಪರಿಸರ ಇಲಾಖೆ ಅಗತ್ಯ ಅನುಮೋದನೆ ನೀಡಿಲ್ಲ ಎಂದು ತಿಳಿಸಿದರು. ಇದರಿಂದ ತೀವ್ರ ಅಸಮಾಧಾನಗೊಂಡ ನ್ಯಾಯಪೀಠ, 'ಹಿಂದೆಯೂ ಇದೇ ಕಾರಣ ನೀಡಲಾಗಿದೆ. ಯೋಜನೆ ಜಾರಿಯಲ್ಲಿ ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಪರಿಸರ ಇಲಾಖೆಯಿಂದ ಪ್ರಾಮಾಣಿಕ ಪ್ರಯತ್ನ ಕಾಣುತ್ತಿಲ್ಲ' ಎಂದು ತಿಳಿಸಿತು.
ಮಿತಿ ಹೆಚ್ಚಳಕ್ಕೆ ಸುಪ್ರೀಂ ನಕಾರ
ಅದಿರು ಉತ್ಪಾದನೆ ಮಿತಿ ಹೆಚ್ಚಿಸುವಂತೆ ಉಕ್ಕು ಕಂಪನಿಗಳು ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ, ನ್ಯಾಯಪೀಠ, 'ಯಾವುದೇ ಕಾರಣಕ್ಕೂ ಅದಿರು ಉತ್ಪಾದನೆ ಮಿತಿ ಹೆಚ್ಚಿಸಲು ಸಾಧ್ಯವೇ ಇಲ್ಲ' ಎಂದು ಸ್ಪಷ್ಟಪಡಿಸಿತು. ಆದರೆ, ಈ ಬಗ್ಗೆ ಲಿಖಿತ ಆದೇಶವನ್ನೇನೂ ನೀಡಿಲ್ಲ. ಫೆ.24ಕ್ಕೆ ಮುಂದಿನ ವಿಚಾರಣೆ ನಿಗದಿ ಮಾಡಿರುವ ನ್ಯಾಯಪೀಠ ಅಂದು ಲಿಖಿತ ಆದೇಶ ನೀಡಲಿದೆ.
ಸಿಇಸಿ ಶಿಫಾರಸಿನಂತೆ ಸುಪ್ರೀಂ ಕರ್ನಾಟಕದಲ್ಲಿ ಅದಿರು ಉತ್ಪಾದನೆಯನ್ನು ವಾರ್ಷಿಕ 30 ದಶಲಕ್ಷ ಟನ್‌ಗೆ ಮಿತಿಗೊಳಿಸಿದೆ. ಈ ಪೈಕಿ 25 ದಶಲಕ್ಷ ಟನ್ ಬಳ್ಳಾರಿ ಜಿಲ್ಲೆಯಿಂದ ಮತ್ತು 5 ದಶ ಲಕ್ಷಟನ್ ತುಮಕೂರು ಮತ್ತು ಚಿತ್ರದುರ್ಗದಿಂದ ಉತ್ಪಾದಿಸಬಹುದು.
ಅದಿರು ಉತ್ಪಾದನೆಗೆ ಮಿತಿ ಹೇರಿರುವುದರಿಂದ ಉಕ್ಕು ಉದ್ಯಮಕ್ಕೆ ಹಿನ್ನಡೆಯಾಗಿದೆ. ಕಚ್ಚಾವಸ್ತುವನ್ನು ರಫ್ತು ಮಾಡಿಕೊಳ್ಳಬೇಕಾದ ಪರಿಸ್ಥಿತಿ ತಲೆದೋರಿದೆ ಎಂದು ಕೇಂದ್ರು ಉಕ್ಕು ಸಚಿವಾಲಯವು ಮಿತಿ ಹೆಚ್ಚಳಕ್ಕೆ ಮನವಿ ಮಾಡಿತ್ತು.