ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಡಬ್ಬಿಂಗ್ ವಿರುದ್ಧ ಬೀದಿಗಿಳಿದ ಕನ್ನಡ ಚಿತ್ರರಂಗ ಕಲಾವಿದರು,ತಂತ್ರಜ್ಞರು, ಕಾರ್ಮಿಕರು

'ಡಬ್ಬಿಂಗ್ ಬೇಡವೇ ಬೇಡ. ಡಬ್ಬಿಂಗ್ ತರುವ ಪ್ರಯತ್ನ ಇನ್ನೂ ಮುಂದುವರಿದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಜನಜಾಗೃತಿ...

Mainashree
Updated On : 28 Jan 2014, 11:07 am

ಕನ್ನಡಪ್ರಭ ವಾರ್ತೆ  ಬೆಂಗಳೂರು  ಜ. 27
'ಡಬ್ಬಿಂಗ್ ಬೇಡವೇ ಬೇಡ. ಡಬ್ಬಿಂಗ್ ತರುವ ಪ್ರಯತ್ನ ಇನ್ನೂ ಮುಂದುವರಿದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಜನಜಾಗೃತಿ ಮೂಡಿಸುತ್ತೇವೆ. ಆದಾಗ್ಯೂ ಡಬ್ಬಿಂಗ್ ಕಾಲಿಟ್ಟಿದ್ದೇ ಆದಲ್ಲಿ ಎಂಥ ಹೋರಾಟಕ್ಕೂ ಸಿದ್ಧ..!'
ಡಬ್ಬಿಂಗ್ ವಿರುದ್ಧ ಕನ್ನಡ ಚಿತ್ರರಂಗದ ಘಟಾನುಘಟಿಗಳು, ಹಿರಿತೆರೆ-ಕಿರುತೆರೆ ಕಲಾವಿದರು, ತಂತ್ರಜ್ಞರು, ಕಾರ್ಮಿಕರು ಹಾಗೂ ಕನ್ನಡಪರ ಹೋರಾಟಗಾರರು ಸೋಮವಾರ ಬೀದಿಗಿಳಿದು ಪ್ರತಿಭಟಿಸಿ, ಚಿತ್ರೋದ್ಯಮದ ಚಟುವಟಿಕೆ ಸ್ಥಗಿತಗೊಳಿಸಿದ್ದಲ್ಲದೆ ಒಕ್ಕೊರಲಿನಿಂದ ಇಂಥದ್ದೊಂದು ಎಚ್ಚರಿಕೆ ನೀಡಿದರು.
ಕನ್ನಡಪರ ಹೋರಾಟಗಾರರಾದ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು ಹಾಗೂ ನಟ ಶಿವರಾಜ್‌ಕುಮಾರ್ ನೇತೃತ್ವದಲ್ಲಿ ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಜಮಾಯಿಸಿದ ಕಲಾವಿದರು, ತಂತ್ರಜ್ಞರು, ಕಾರ್ಮಿಕರು ಹಾಗೂ ಕನ್ನಡಪರ ಹೋರಾಟಗಾರರು ಮೈಸೂರು ಬ್ಯಾಂಕ್ ವೃತ್ತದಿಂದ ಕೆಂಪೇಗೌಡ ರಸ್ತೆ, ಜನತಾಬಜಾರ್, ತ್ರಿಭುವನ್ ಚಿತ್ರಮಂದಿರ, ಕನಕದಾಸ ವೃತ್ತ ಮೂಲಕ ಸಾಗಿ ಸೆಂಟ್ರಲ್ ಕಾಲೇಜು ಕ್ರಿಕೆಟ್ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಿದರು. ಸಭೆಯಲ್ಲಿ ಒಬ್ಬೊಬ್ಬರಾಗಿ ಮಾತನಾಡಿದ ಕನ್ನಡಪರ ಹೋರಾಟಗಾರರು, ಚಿತ್ರರಂಗದ ಪ್ರಮುಖರು ಡಬ್ಬಿಂಗ್ ಪರ ವಹಿಸುತ್ತಿರುವ ಎಲ್ಲರಿಗೂ ಎಚ್ಚರಿಕೆ ಸಂದೇಶ ರವಾನಿಸಿದರು. ವಾಟಾಳ್ ನಾಗರಾಜ್ ಅವರು ಮಾತನಾಡಿ, ಡಬ್ಬಿಂಗ್ ಬಂದರೆ 5-10 ವರ್ಷಗಳಲ್ಲಿ ಕನ್ನಡ ಕಲಾವಿದರು ಮೂಲೆಗುಂಪಾಗುತ್ತಾರೆ.    

ಕನ್ನಡ ಸಂಸ್ಕೃತಿ ನಾಶವಾಗುತ್ತದೆ. ನಾಡಿನಲ್ಲಿ ಈಗ ಶೇ. 80ರಷ್ಟು ಪರಭಾಷಾ ಚಿತ್ರಗಳು ತೆರೆ ಕಾಣುತ್ತಿದ್ದು, ಇದು ಚೌಚೌ ರಾಜ್ಯ ಎಂಬಂತಾಗಿದೆ. ಆದರೆ, ತಮಿಳುನಾಡು, ಕೇರಳ, ಆಂಧ್ರಪ್ರದೇಶದಲ್ಲಿ ಅಲ್ಲಿನ ಭಾಷಾ ಚಿತ್ರಗಳಿಗೆ ಆದ್ಯತೆ ಹೊರತು ಕನ್ನಡಕ್ಕೆ ಜಾಗವಿಲ್ಲ. ಇಂಥ ಸಂದರ್ಭದಲ್ಲಿ ಡಬ್ಬಿಂಗ್ ಬಂದರೆ ಕನ್ನಡದ ಗತಿ ಏನಾಗಬೇಡ ಎಂದು ಆತಂಕ ವ್ಯಕ್ತಪಡಿಸಿದರು. ಡಬ್ಬಿಂಗ್ ಬೇಡವೇ ಬೇಡ ಎಂದು ಖಡಾಖಂಡಿತವಾಗಿ ಹೇಳಿದರು.
ಪುನೀತ್ ರಾಜ್‌ಕುಮಾರ್, ಜಗ್ಗೇಶ್, ದುನಿಯಾ ವಿಜಿ, ಪ್ರೇಮ್, ಯಶ್, ಸತೀಶ್, ವಿನೋದ್‌ರಾಜ್, ಸುದೀಪ್, ದರ್ಶನ್, ಮುಖ್ಯಮಂತ್ರಿ ಚಂದ್ರು, ನಟಿಯರಾದ ಲೀಲಾವತಿ, ಹೇಮಾಚೌಧರಿ, ಭಾವನಾ, ತಾರಾ, ಸುಧಾರಾಣಿ, ಮಾಲಾಶ್ರೀ, ಪೂಜಾಗಾಂಧಿ, ಶ್ರುತಿ ಸೇರಿದಂತೆ ಹಿರಿತೆರೆ-ಕಿರುತೆರೆಯ ನೂರಾರು ನಟ-ನಟಿಯರು, ನಿರ್ಮಾಪಕ ಶ್ರೀಕಾಂತ್, ನಿರ್ದೇಶಕರ ಸಂಘದ ಅಧ್ಯಕ್ಷ ಎಂ.ಎಸ್.ರಮೇಶ್, ಅಖಿಲ ಕರ್ನಾಟಕ ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಕನ್ನಡಪರ ಹೋರಾಟಗಾರರಾದ ಕೆ.ಆರ್.ಕುಮಾರ್, ಶಿವರಾಮೇಗೌಡ, ಅಭಿಮಾನಿಗಳು ಸೇರಿದಂತೆ ಸಾವಿರಾರು ಜನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ದೆಹಲಿ ದರ್ಬಾರಿಗೆ ತಲೆ ಬಾಗುತ್ತೆ. ಇದರಿಂದ ಕನ್ನಡ ಉದ್ಧಾರವಾಗಲ್ಲ. ಕನ್ನಡ, ಕನ್ನಡ ಚಿತ್ರರಂಗ ಉದ್ಧಾರವಾಗಬೇಕಿದ್ದರೆ 1 ಪ್ರಾದೇಶಿಕ ಪಕ್ಷ ರಚನೆಯಾಗಬೇಕು. ಚಿತ್ರರಂಗ, ಕನ್ನಡಪರ ಸಂಘಟನೆ ಆ ಬಗ್ಗೆ ಚಿಂತಿಸಲಿ.
- ಅಶೋಕ್, ಚಿತ್ರ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ

ಡಬ್ಬಿಂಗ್ ಮಾಡಿದ್ದು ಕಲಾಕೃತಿಯಲ್ಲ, ವಿಕೃತಿ. ಅದನ್ನು ಒಪ್ಪುವುದು, ನೋಡುವುದು ಭಗ್ನಗೊಂಡ ವಿಗ್ರಹವನ್ನು ಪೂಜಿಸಿದಂತೆ.
- ಬಿ.ಸುರೇಶ್, ಕಿರುತೆರೆ ನಿರ್ದೇಶಕ

ಕಂಬಾರ ಬೆಂಬಲ
ಡಬ್ಬಿಂಗ್ ಬೇಡ ಎಂಬ ತಮ್ಮೆಲ್ಲರ ನಿಲುವಿಗೆ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾ ಮಾತ್ರವಲ್ಲದೆ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ, ಸಾಹಿತಿಗಳಾದ ಚಂದ್ರಶೇಖರ ಪಾಟೀಲರೂ ಬೆಂಬಲ ಸೂಚಿಸಿದ್ದಾರೆ. ಚಂದ್ರಶೇಖರ ಕಂಬಾರರ ಜತೆ ಬೆಳಗ್ಗೆಯಷ್ಟೇ ದೂರವಾಣಿ ಮೂಲಕ ಮಾತನಾಡಿದ್ದು, ನಟ ಪ್ರೇಮ್ ಮತ್ತು ನಿಮ್ಮ ನಡುವಿನ ವಾಗ್ಯುದ್ಧ ಮರೆತು ಬಿಡಿ. ಡಬ್ಬಿಂಗ್ ವಿರೋಧಿ ನಿಲುವಿಗೆ ಬೆಂಬಲಿಸಿ ಎಂದಿದ್ದೆ. ಅವರು ಕೂಡ ತಾವು ಡಿಸ್ಕವರಿ ಮುಂತಾದ ವಾಹಿನಿಗಳ ಕಾರ್ಯಕ್ರಮಗಳ ಡಬ್ಬಿಂಗ್ ಪರವಾಗಿ ಮಾತನಾಡಿದ್ದೇ ವಿನಃ ಚಲನಚಿತ್ರದ ಡಬ್ಬಿಂಗ್ ಬಗ್ಗೆ ಅಲ್ಲ ಎಂದು ಸ್ಪಷ್ಟಪಡಿಸಿದ್ದು, ಈಗ ಅವರೂ ತಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದರು.
ಡಬ್ಬಿಂಗ್ ವಿರೋಧಿಸಿ ಕನ್ನಡಪರ ಹೋರಾಟಗಾರರು ಹಾಗೂ ಚಿತ್ರರಂಗದ ಪ್ರಮುಖರು ಸೋಮವಾರ ನಡೆಸಿದ ಬೃಹತ್ ಪ್ರತಿಭಟನೆಯಲ್ಲಿ ಕಲಾವಿದರಾದ ಶಿವರಾಜ್‌ಕುಮಾರ್, ಪುನೀತ್‌ರಾಜ್‌ಕುಮಾರ್,  ಯಶ್, ಶೋಭರಾಜ್, ಗುರುಕಿರಣ್, ಬುಲೆಟ್ ಪ್ರಕಾಶ್ ಮತ್ತಿತರರು ಹಾಜರಿದ್ದರು.

ಕರ್ನಾಟಕ ಸರ್ಕಾರ ಜಾರಿಗೆ ತರಲಿರುವ ಸಾಂಸ್ಕೃತಿಕ ನೀತಿಯಲ್ಲಿ ಡಬ್ಬಿಂಗ್ ಹಾಗೂ ರಿಮೇಕ್ ಎರಡಕ್ಕೂ ವಿರೋಧ ಇರಬೇಕು. ಆ ರೀತಿ ನೀತಿ ರೂಪುಗೊಳ್ಳಲು ಚಿತ್ರರಂಗದ ಗಣ್ಯರು ಚಿಂತಿಸಬೇಕು. ಡಬ್ಬಿಂಗ್ ತಡೆಯಲು ನನಗೆ ಸೀಮೆಎಣ್ಣೆ ಸುರಿದು ಬೆಂಕಿ ಇಡುವುದಾದರೆ ಅದಕ್ಕೂ ಒಪ್ಪುವೆ.
- ಹಂಸಲೇಖ, ಸಂಗೀತ ನಿರ್ದೇಶಕ

ಡಬ್ಬಿಂಗ್ ಅನ್ನು ಇಡೀ ಚಿತ್ರೋದ್ಯಮವೇ ಬೇಡ ಎನ್ನುತ್ತಿದೆ. ಹೋರಾಟಕ್ಕೆ ಶಿವಣ್ಣನದೇ ನೇತೃತ್ವ ಎನ್ನಲಾಗುತ್ತಿದೆ. ಆದರೆ ಇದು ನಾಯಕತ್ವದ ಪ್ರಶ್ನೆ ಅಲ್ಲ. ನನ್ನನ್ನು ಎಲ್ಲರ ಮಧ್ಯದಲ್ಲಿಟ್ಟು ನೋಡಿ, ನಾಯಕ ಎನ್ನಬೇಡಿ. ಕನ್ನಡದ ವಿಷಯದಲ್ಲಿ ಎಲ್ಲರೂ ನಾಯಕರೇ. ಇಲ್ಲಿ ಎಲ್ಲ ನಾಯಕರೂ ಸೇರಿ ಡಬ್ಬಿಂಗ್ ಬೇಡ ಎನ್ನುತ್ತಿದ್ದೇವೆ. ಇದಕ್ಕೆ ಉತ್ತರ ಸಿಕ್ಕಿಲ್ಲ ಎಂದರೆ ರಾಜ್ಯದ ಮೂಲೆಮೂಲೆಗೂ ಹೋಗಿ ಪ್ರತಿಭಟಿಸಿ ಜನಜಾಗೃತಿ ಮೂಡಿಸುತ್ತೇವೆ.
- ಶಿವರಾಜ್‌ಕುಮಾರ್, ನಟ

ಚಿತ್ರರಂಗ ಒಂದು ಕುಟುಂಬ ಇದ್ದ ಹಾಗೆ. ಆದರೆ ಡಬ್ಬಿಂಗ್‌ನಿಂದ ಶೇ. 10ರಷ್ಟು ತೊಂದರೆಯಾದರೂ ಚಿತ್ರೋದ್ಯಮವನ್ನು ನಂಬಿದ ಎಷ್ಟೋ ಕುಟುಂಬದ ಹೊಟ್ಟೆಪಾಡಿಗೆ ಕುತ್ತಾಗುತ್ತದೆ.
-ಪುನೀತ್ ರಾಜ್‌ಕುಮಾರ್, ನಟ

ಕೆಲ ನಿರ್ಮಾಪಕರು ಸೈಟ್ ಜಿಪಿಒ ಮಾಡಿಸಿಕೊಂಡ ರೀತಿ ಕೆಲ ಚಿತ್ರಗಳನ್ನು ಡಬ್ಬಿಂಗ್ ಮಾಡಿಟ್ಟಿದ್ದಾರೆ. ಅದಕ್ಕಾಗಿ ಡಬ್ಬಿಂಗ್ ಬೇಕು ಎನ್ನುತ್ತಿರುವ ಅವರೆಲ್ಲ ಕನ್ನಡ ವಿರೋಧಿಗಳೇ...
- ದುನಿಯಾ ವಿಜಿ, ನಟ

ಭಿಕ್ಷುಕರ ರೀತಿ ಚಿತ್ರರಂಗಕ್ಕೆ ಬಂದ ನಮಗೆ ಇದೇ ಚಿತ್ರರಂಗ 25-30 ವರ್ಷ ಎಲ್ಲವನ್ನೂ ನೀಡಿ ಸಲಹಿದೆ. ಇದು ಖಂಡಿತ ನಮ್ಮ ಹೊಟ್ಟೆಪಾಡಿನ ಪ್ರಶ್ನೆ ಅಲ್ಲ. ನಮ್ಮಂತೆ ಮುಂದೆಯೂ ನೂರಾರು ಕಲಾವಿದರು ಸೃಷ್ಟಿಯಾಗಬೇಕು. ಚಿತ್ರರಂಗ ನೂರಾರು ವರ್ಷ ಉಳಿಯಬೇಕು ಎಂಬ ಕಾಳಜಿಯಿಂದಾಗಿ ಡಬ್ಬಿಂಗ್ ವಿರೋಧಿಸುತ್ತಿದ್ದೇವೆ.
-  ಜಗ್ಗೇಶ್, ನಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement