ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಕುಟುಂಬ 'ಕುತಂತ್ರ'
ಬೆಂಗಳೂರು: ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಅಪ್ಪ-ಮಕ್ಕಳ ಜುಗಲ್ಬಂದಿ ನಡೆಯುತ್ತಿದೆ!
ಭ್ರಷ್ಟಾಚಾರ ಹಾಗೂ ಅವ್ಯವಹಾರಗಳ ಸರಮಾಲೆಯನ್ನೇ ಹೊಂದಿರುವ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲೀಗ ಕುಟುಂಬ ಸದಸ್ಯರ ಜಂಟಿ ಕಾರ್ಯಾಚರಣೆ ಕೂಡ ಬಯಲಿಗೆ ಬಂದಿದೆ.
ಇಲಾಖೆ ನಿರ್ದೇಶಕರು ಪ್ರಭಾವ ಬೀರಿ ಮಗನಿಗೆ ಉದ್ಯೋಗ ಕೊಡಿಸಿದ್ದಾರೆ. ಈ ಪುತ್ರ ಸರ್ಕಾರಿ ಉದ್ಯೋಗದಲ್ಲಿದ್ದರೂ ಖಾಸಗಿ ಸಾಫ್ಟ್ವೇರ್ ಕಂಪನಿ ಒಡೆಯ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ.
ಆದಾಗ್ಯೂ ಇವೆಲ್ಲ ವಿಚಾರಗಳ ಕುರಿತಂತೆ ಉನ್ನತ ಶಿಕ್ಷಣ ಇಲಾಖೆ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮೌನವಹಿಸಿದೆ. ಕಾರಣ, ತಂದೆ ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಕರಾಗಿರುವುದು.
ಇಷ್ಟಕ್ಕೆ ಮುಗಿಯಲಿಲ್ಲ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ನಡೆದ ಡಿಪ್ಲೋಮಾ ಆನ್ಲೈನ್ ಪ್ರಕ್ರಿಯೆಯಲ್ಲಿ ನಿರ್ದೇಶಕ ಎಚ್.ಯು.ತಳವಾರ ಅವರ ಮಕ್ಕಳಾದ ರವಿ ತಳವಾರ ಹಾಗೂ ಶ್ರೀಕಾಂತ್ ತಳವಾರ ಅವರೇ ನೇರವಾಗಿ ಭಾಗಿಯಾಗಿದ್ದಾರೆ. ತಳವಾರ ಕುಟುಂಬದ ಎಸ್ಎಚ್ಎಲ್ಆರ್ ಟೆಕ್ನೋ ಸಾಫ್ಟ್ ಪ್ರೈವೇಟ್ ಲಿಮಿಟೆಡ್ ಈ ಕೌನ್ಸೆಲಿಂಗ್ 'ಸೇವೆ' ನಡೆಸಿದೆ.
ಆರಂಭವಾಗಿ ಒಂದೂವರೆ ವರ್ಷ: ಎಂಟೆಕ್ ಸ್ನಾತಕೋತ್ತರ ಪದವಿ ಹೊಂದಿರುವ ರವಿ ತಳವಾರ 2012ರ ಡಿಸೆಂಬರ್ನಲ್ಲಿನ ಬಿಎಂಎಸ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಆರಂಭಿಸಿದ್ದಾರೆ. ರಾಜ್ಯದ ಅನುದಾನಿತ ಕಾಲೇಜುಗಳಲ್ಲಿನ ಬ್ಯಾಕ್ಲಾಗ್ ಹುದ್ದೆಗಳನ್ನು ತುಂಬುವ ಸಂದರ್ಭದಲ್ಲಿ ತಳವಾರ ಅವರನ್ನು ಬಿಎಂಎಸ್ ಕಾಲೇಜಿಗೆ ನೇಮಕ ಮಾಡಲಾಗಿದೆ. ಆದರೆ ಈ ಸಂದರ್ಭದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಆದೇಶಕ್ಕೆ ವಿರುದ್ಧವಾಗಿ ಸಂದರ್ಶನವಿಲ್ಲದೇ ನೇಮಕ ಮಾಡಿಕೊಳ್ಳಲಾಗಿದೆ.
ಇದಾದ ಬಳಿಕ ತಾಂತ್ರಿಕ ಶಿಕ್ಷಣ ಇಲಾಖೆ ನೇತೃತ್ವದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಆನ್ಲೈನ್ ಕೌನ್ಸೆಲಿಂಗ್ ನಡೆದಿದೆ. ಈ ಕೌನ್ಸೆಲಿಂಗ್ಗೆ ಸಾಫ್ಟ್ವೇರ್ ವಿನ್ಯಾಸ, ಅಭಿವೃದ್ಧಿ ಹಾಗೂ ನಿರ್ವಹಣೆಯನ್ನು ಇದೇ ಎಸ್ಎಚ್ಎಲ್ಆರ್ ಟೆಕ್ನೋ ಸಾಫ್ಟ್ ಪ್ರೈವೇಟ್ ಲಿಮಿಟೆಡ್ ಮಾಡಿದೆ. ಅಪ್ಪ ಮೇಲುಸ್ತುವಾರಿ ವಹಿಸಿದ ಕೌನ್ಸೆಲಿಂಗ್ಗೆ ಪುತ್ರ ಸಾಫ್ಟ್ವೇರ್ ಒದಗಿಸಿದ್ದಾರೆ.
ವಾರದ ಹಿಂದೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಷನ್ ವಿಭಾಗಕ್ಕೆ ಸಹಾಯಕ ಪ್ರಾಧ್ಯಾಪಕರಾಗಿ ರವಿ ತಳವಾರ ನೇಮಕಗೊಂಡಿದ್ದಾರೆ. ನಿಯಮದ ಪ್ರಕಾರ ಸರ್ಕಾರಿ ಹುದ್ದೆಯಲ್ಲಿರುವವರು ಖಾಸಗಿ ಕಂಪನಿ ನಡೆಸುವಂತಿಲ್ಲ. ಇವತ್ತಿನವರೆಗೂ ಆದಾಯ ತೆರಿಗೆ ಇಲಾಖೆ ಹಾಗೂ ಕಂಪನಿ ನೋಂದಣಿ ಇಲಾಖೆಯಲ್ಲಿ ರವಿ ತಳವಾರ ಅವರೇ ಕಂಪನಿಯ ಮಾಲೀಕರು ಎಂದು ದಾಖಲಾಗಿದೆ.
ಇದಲ್ಲದೇ ಅವರ ವೆಬ್ಸೈಟ್ನಲ್ಲಿಯೂ ಕೂಡ ಈ ಬಗ್ಗೆ ವಿವರಣೆ ದೊರೆಯುತ್ತದೆ.
ಈ ಹಿಂದೆ ಬಡ್ತಿಯಲ್ಲಿ ಅಕ್ರಮ: ಕಳೆದ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ 93 ಸಹಾಯಕ ಪ್ರಾಧ್ಯಾಪಕರ ಬಡ್ತಿ ವಿಚಾರದಲ್ಲಿಯೂ ಗೋಲ್ಮಾಲ್ ಮಾಡಲಾಗಿತ್ತು. ಆರ್ಥಿಕ ಇಲಾಖೆ ಅಧಿಕಾರಿಗಳು ಮತ್ತು ಅಡ್ವೊಕೇಟ್ ಜನರಲ್ ಕೂಡ ಪ್ರಾಧ್ಯಾಪಕರ ಬಡ್ತಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಆದಾಗ್ಯೂ ಸುಮಾರು 12 ಕೋಟಿ ಹಣವನ್ನು ಉನ್ನತ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿತ್ತು. 'ಕನ್ನಡಪ್ರಭ'ದಲ್ಲಿ ವರದಿ ಪ್ರಕಟವಾದ ಬಳಿಕ ಬಡ್ತಿಯನ್ನು ರದ್ದುಗೊಳಿಸಲಾಗಿತ್ತು. ಆದರೆ ಈ ಸಂಬಂಧ ಉನ್ನತ ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆ ಯಾವುದೇ ಅಧಿಕಾರಿಗಳ ವಿರುದ್ಧ ಕ್ರಮಜರುಗಿಸಿಲ್ಲ.
ರಾಜೀವ ಹೆಗಡೆ