ಮೋಟಮ್ಮ ಸೇರಿ ಆರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ
ಬಿಜಾಪುರ: ಉನ್ನತ ಶಿಕ್ಷಣ ಖಾತೆ ಸಚಿವ, ಮಹಿಳಾ ವಿವಿ ಸಮ ಕುಲಾಧಿಪತಿ ಆರ್.ವಿ. ದೇಶಪಾಂಡೆ ಅವರು ಸೋಮವಾರ ಮಹಿಳಾ ವಿವಿ ಆವರಣದಲ್ಲಿ ನಡೆದ ಘಟಿಕೋತ್ಸವದಲ್ಲಿ ಆರು ಸಾಧಕಿಯರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು. ಬೆಂಗಳೂರಿನ ಅವಸ್ಥಾಜೆನ್ ಸ್ಥಾಪಕ ಅಧ್ಯಕ್ಷೆ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಡಾ.ವಿಲ್ಲು ಮೊರಾವಾಲ ಪಟೇಲ್, ಖ್ಯಾತ ಸಂಗೀತ ಮತ್ತು ನೃತ್ಯ ಕಲಾವಿದೆ ಲಲಿತಾ ಶ್ರೀನಿವಾಸನ್, ಹಾವೇರಿಯ ಪರಿಸರವಾದಿ ಮಾಧುರಿ ದೇವಧರ, ಮಾಜಿ ಸಚಿವೆ ಮೋಟಮ್ಮ, ವಿನೋಬಾ ಭಾವೆ ಅವರ ಅನುಯಾಯಿ ಹಾಗೂ ಮುಧೋಳ ವಾತ್ಸಲ್ಯ ಧಾಮದ ರೂವಾರಿ ಮೀರಾತಾಯಿ ಕೊಪ್ಪಿಕರ್ ಮತ್ತು ಖ್ಯಾತ ಕಥೆಗಾರ್ತಿ ಧಾರವಾಡದ ಶಾಂತಾದೇವಿ ಕಣವಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಅಲ್ಲದೇ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಗರಿಷ್ಠ ಅಂಕ ಗಳಿಸಿದ 32 ವಿದ್ಯಾರ್ಥಿನಿಯರಿಗೆ 40 ಚಿನ್ನದ ಪದಕ, 12 ಮಂದಿಗೆ ಪಿಎಚ್‌ಡಿ ಹಾಗೂ 9 ವಿದ್ಯಾರ್ಥಿಗಳಿಗೆ ಎಂಫಿಲ್ ಪದವಿ ಪ್ರದಾನ ಮಾಡಲಾಯಿತು.
ಈ ಘಟಿಕೋತ್ಸವದಲ್ಲಿ 405 ಸ್ನಾತಕೋತ್ತರ ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 7035 ವಿದ್ಯಾರ್ಥಿನಿಯರು, ಸ್ನಾತಕ, ಸ್ನಾತಕೋತ್ತರ ಮತ್ತು ಪಿಜಿ ಡಿಪ್ಲೋಮಾ ಪದವಿ ಪಡೆದರು.
ವಿವಿ ಕುಲಪತಿ ಪ್ರೊ. ಮೀನಾ ಚಂದಾವರಕರ ಸ್ವಾಗತಿಸಿದರು. ಅವಸ್ಥಾಜೆನ್ ಸ್ಥಾಪಕ ಅಧ್ಯಕ್ಷೆ ಡಾ.ವಿಲ್ಲು ಮೊರಾವಾಲ ಪಟೇಲ್ ಘಟಿಕೋತ್ಸವ ಭಾಷಣ ಮಾಡಿದರು. ಪಿಎಚ್.ಡಿ, ಎಂಫಿಲ್ ಹಾಗೂ ರ್ಯಾಂಕ್ ವಿಜೇತರ ಪಟ್ಟಿಯನ್ನು ಕುಲಸಚಿವ ಪ್ರೊ. ಎಸ್.ಎ. ಖಾಜಿ ಮಂಡಿಸಿದರು.