ಅರಣ್ಯ ಇಲಾಖೆ ಭೂಮಿ ಒತ್ತುವರಿ ತೆರವು ಸಂಕಷ್ಟದಲ್ಲಿ
ಇದರ ನಡುವೆ ರಾಜಕೀಯ ಒತ್ತಡ, ಹೈಕೋರ್ಟ್ ಗಡುವು ವಿಳಂಬಕ್ಕೆ ಕಾರಣ
ಬೆಂಗಳೂರು: ರಾಜ್ಯದಲ್ಲಿ ಒತ್ತುವರಿಯಾಗಿರುವ 1,65,796 ಎಕರೆ ಅರಣ್ಯ ಭೂಮಿ ತೆರವು ಸದ್ಯಕ್ಕೆ ಸಾಧ್ಯವಿಲ್ಲ!
ಒತ್ತುವರಿ ತೆರವುಗೊಳಿಸಲು ಮುಂದಾಗಿರುವ ಇಲಾಖೆಗೆ ಒಂದೆಡೆ ಕಾನೂನೇ ಅಡ್ಡಿಯಾಗುತ್ತಿದ್ದರೆ ಮತ್ತೊಂದೆಡೆ ರಾಜಕೀಯ ಒತ್ತಡಗಳು ದಾರಿಯ ಮುಳ್ಳಾಗಿವೆ. ಇವೆರಡರ ಮಧ್ಯೆ ಹೈಕೋರ್ಟ್ ನೀಡಿರುವ ಗಡುವು ಸಹ ಸಮೀಪಿಸುತ್ತಿದೆ. ಅಂದರೆ ಸುಪ್ರೀಂಕೋರ್ಟ್ ಸೂಚನೆ ಮತ್ತು ಹೈಕೋರ್ಟ್ನಲ್ಲಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರದ ಪ್ರಕಾರ ಫೆ.10 ಒಳಗಾಗಿ ಒತ್ತುವರಿ ತೆರವು ವಿಚಾರದಲ್ಲಿ ಅರಣ್ಯ ಇಲಾಖೆ ಏನಾದರೂ ವಿಕ್ರಮ ಸಾಧಿಸಿ ವರದಿ ಸಲ್ಲಿಸಬೇಕು.
ಆದರೆ ಅರಣ್ಯ ಹಕ್ಕು ಕಾಯ್ದೆ ಪ್ರಕಾರ ಒತ್ತುವರಿ ಪ್ರಕರಣಗಳು ಇತ್ಯರ್ಥ ಆಗುವವರೆಗೂ ಯಾರನ್ನೂ ತೆರವುಗೊಳಿಸುವಂತಿಲ್ಲ. ಅಂದರೆ ಈ ಕಾಯ್ದೆಯಡಿ 7ಲಕ್ಷಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳ ಇತ್ಯರ್ಥ ಆಗದೆ ಒತ್ತುವರಿದಾರರ ತೆರವು ಮಾಡುವಂತಿಲ್ಲ.
ಜತೆಗೆ ಅನೇಕ ಪ್ರಮುಖ ಒತ್ತುವರಿ ಪ್ರಕರಣಗಳಲ್ಲಿ ಮಂತ್ರಿಗಳು, ಶಾಸಕರೇ ಹಿಂದೆ ಇರುವುದರಿಂದ ಒತ್ತುವರಿ ತೆರವು ಆಗುತ್ತಲೇ ಇಲ್ಲ. ಹಾಗಂತ ಇಲಾಖೆ ಸುಮ್ಮನೆ ಕೂರುವಂತೆಯೂ ಇಲ್ಲ. ಹೀಗೆ ಅರಣ್ಯ ಇಲಾಖೆ ಅಡಕತ್ತರಿ ಸಿಲುಕಿದ್ದು, ಇದು ಸಚಿವರು ಕೈಗೊಳ್ಳುವ ದಿಟ್ಟ ಕ್ರಮದಿಂದಷ್ಟೇ ನಿರ್ಧಾರವಾಗಬೇಕಿದೆ ಎಂದು ಹಿರಿಯ ಅಧಿಕಾರಿಗಳೇ ಹೇಳುತ್ತಾರೆ.
ಸಚಿವರೇ ಹೇಳಿದಂತೆ ಇದು ಸವಾಲು!: ರಾಜ್ಯದಲ್ಲಿ ಸರ್ಕಾರಿ ಭೂಮಿ ಸಂರಕ್ಷಿಸುವ ಕಾರ್ಯಪಡೆ ಮಾಹಿತಿಯಂತೆ ಒಟ್ಟು 1,65,796 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ. ಇದರಲ್ಲಿ ತೆರವುಗೊಳಿಸಿರುವುದು ಕೇವಲ 5,516 ಎಕರೆ ಮಾತ್ರ. ಇನ್ನೂ 1,60,280 ಎಕರೆ ಒತ್ತುವರಿಯಾಗಿಯೇ ಉಳಿದಿದೆ. ಈ ವಿಚಾರದಲ್ಲಿ ಅಧಿಕಾರಿಗಳು ಏನೇ ಮಾಡಿದರೂ ಫಲ ಸಿಗುತ್ತಿಲ್ಲ. ಹೀಗಾಗಿ ಅರಣ್ಯ ಸಚಿವ ರಮಾನಾಥ ರೈ ಅವರೇ ಒಪ್ಪಿಕೊಂಡಂತೆ ಒತ್ತುವರಿ ತೆರವು ಇಲಾಖೆಗೆ ಒಂದು ದೊಡ್ಡ ಸವಾಲೇ ಆಗಿದೆ.
ಈ ಮಧ್ಯೆ ಸಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಹೈಕೋರ್ಟ್ನಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಫೆ.10ರಂದು ವಿಚಾರಣೆಗೆ ಬರಲಿದೆ. ಅಷ್ಟರೊಳಗಾಗಿ ಒತ್ತುವರಿ ತೆರವು ಪ್ರಕ್ರಿಯೆ ಏನಾಗಿದೆ. ಎಷ್ಟಾಗಿದೆ ? ಎಂದು ಇಲಾಖೆ ಹೈಕೋರ್ಟ್ಗೆ ವರದಿ ಸಲ್ಲಿಸಬೇಕು.
ಅಕ್ರಮ ವಾಸಿಗಳೇ ಹೆಚ್ಚು: ಇಂದಿಗೂ ಅರಣ್ಯದಲ್ಲೇ ವಾಸವಿರುವ ಬುಡಕಟ್ಟು ಸಮುದಾಯದವರಿಗೆ ಅವಕಾಶ ನೀಡಲು ಇಲಾಖೆಗೆ ಸಮಸ್ಯೆ ಇಲ್ಲ. ಆದರೆ ತಲೆಮಾರಿನಿಂದಲೂ ನಾವು ಅರಣ್ಯ ವಾಸಿಗಳೇ ಎಂದು ಇತ್ತೀಚಿಗೆ ಅರ್ಜಿ ಸಲ್ಲಿಸಿ ರಾಜಕೀಯ ಒತ್ತಡ ತರುತ್ತಿರುವವರದ್ದೇ ದೊಡ್ಡ ತಲೆನೋವು. ಇಂಥ 7.5ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ಇನ್ನೂ ಬರುತ್ತಲೇ ಇವೆ. ಈತನಕ ನಡೆಸಿದ ಪರಿಶೀಲನೆಯಲ್ಲಿ 7.5ಲಕ್ಷದಲ್ಲಿ 7000 ಅರ್ಜಿದಾರರು ಮಾತ್ರ ಅರ್ಹರಾಗಿದ್ದು, ಉಳಿದವರು ಅರಣ್ಯವಾಸಿಗಳು ಎನ್ನುವುದಕ್ಕೆ ಪುರಾವೆ ಸೂಕ್ತವಾಗಿಲ್ಲ.
ಏಕೆಂದರೆ, ಅರ್ಜಿದಾರರು ಅರ್ಹರಾಗಲು ಅವರು 75ವರ್ಷ ಅರಣ್ಯವಾಸಿಯಾಗಿದ್ದೆ ಎನ್ನುವ ಪುರಾವೆ ಒದಗಿಸಬೇಕು. ಅಂಥವರಿಗೆ 2005ರ ಡಿಸೆಂಬರ್ ವೇಳೆಗೆ 83ವರ್ಷ ವಯಸ್ಸಾಗಿರಬೇಕು. ಇದನ್ನು ಸ್ಥಳೀಯ ಹಿರಿಯರೊಬ್ಬರಿಂದ ದೃಢಪಡಿಸಬೇಕು. ಅವರಿಗೆ 95ವರ್ಷ ವಯಸ್ಸಾಗಿರಬೇಕು. ಆದರೆ ಅರಣ್ಯ ಒತ್ತುವರಿ ಮಾಡಿರುವ ಸಾವಿರಾರು ಗ್ರಾಮಸ್ಥರು ಯಾರೋ ಹಿರಿಯಯೊಬ್ಬರಿಂದ ಹೇಳಿಕೆ ಪ್ರಕಟಿಸಿ ಅರ್ಜಿಗಳಲ್ಲಿ ಸಲ್ಲಿಸುತ್ತಿದ್ದಾರೆ. ಇದಕ್ಕೆ ಸ್ಥಳೀಯ ರಾಜಕಾರಣಿಗಳಿಂದ ಒತ್ತಡ ಹಾಕಿಸುತ್ತಿದ್ದು, ಅಕ್ರಮಗಳಿಗೆ ದಾರಿಯಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅರಣ್ಯ ವಿಭಾಗಗಳು ಪ್ರಮುಖ ಒತ್ತುವರಿ ಪ್ರದೇಶ (ಎಕರೆಯಲ್ಲಿ)
ಬೆಂಗಳೂರು ಗ್ರಾ. 465.56
ರಾಮನಗರ 4,693.92
ಕೋಲಾರ 1,599.42
ಚಿಕ್ಕಬಳ್ಳಾಪುರ 1,377.40
ಮಡಿಕೇರಿ 2,467.25
ಸಿರಸಿ 4,652.93
ಯಲ್ಲಾಪುರ 5,176.23
ಹೊನ್ನಾವರ 3,223.47
ಧಾರವಾಡ 1,020.68
ಗದಗ 1,916.62
ಹಾವೇರಿ 1,016.72
ಮಂಗಳೂರು 1,671.32
ಕುಂದಾಪುರ 1,001.38
ಚಿಕ್ಕಮಗಳೂರು 4,094.82
ಕೊಪ್ಪ 9,900.60
ಹಾಸನ 1,088,48
ತುಮಕೂರು 2,593.57
ಬೆಳಗಾವಿ 10,129.46
ಗೋಕಾಕ್ 1,078.77
ಬೀದರ್ 2,591.03
ರಾಯಚೂರು 1,705.70
ಗುಲ್ಬರ್ಗಾ 4219.20
ಯಾದಗಿರಿ 2,342.80
ಭದ್ರಾವತಿ 9.005.72
ಸಾಗರ 12,225.40
ಶಿವಮೊಗ್ಗ 4399.81
ಮಂಡ್ಯ 1,857.40
ಬಳ್ಳಾರಿ 4,148.99
ರಾಜಕೀಯ ಒತ್ತಡ ಎಲ್ಲೆಲ್ಲಿ ಹೆಚ್ಚು ?
ಉತ್ತರ ಕನ್ನಡ, ಕಾರವಾರ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅರಣ್ಯ ಭೂಮಿ ಹೆಚ್ಚಾಗಿ ಒತ್ತುವರಿಯಾಗಿದ್ದು, ಅದರ ತೆರವಿಗೆ ರಾಜಕಾರಣಿಗಳೇ ಬಿಡುತ್ತಿಲ್ಲ. ಇಲ್ಲಿ ಪ್ರತಿ ಒತ್ತುವರಿ ಹಿಂದೆ ಪ್ರಭಾವಿಗಳು ನಿಂತಿದ್ದು, ಸಚಿವರು ಕಠಿಣ ಕ್ರಮಕ್ಕೆ ಸೂಚಿಸದ ಹೊರತು ಅಧಿಕಾರಿಗಳು ಕಣ್ಣಿದ್ದು ಕುರುಡರಾಗಬೇಕಿದೆ ಎಂದು ಹಿರಿಯ ಅಧಿಕಾರಿಯೊಬ್ಬರ ಹೇಳುತ್ತಾರೆ.
-ಶಿವಕುಮಾರ್ ಬೆಳ್ಳಿತಟ್ಟೆ