ತನಿಖಾ ವರದಿ ಆಧರಿಸಿ ಮುಂದಿನ ಕ್ರಮ
ಕ.ಪ್ರ.ವಾರ್ತೆ ಬೆಂಗಳೂರು ಜ. 28
ಕರ್ನಾಟಕ ಲೋಕಸೇವಾ ಆಯೋಗದ ಮೂಲಕ 2011ರಲ್ಲಿ ನಡೆದ ಗೆಜೆಟೆಡ್ ಪ್ರೊಬೆಷನರ್ಸ್ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖಾ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲು ಸರ್ಕಾರ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ 2011ರ ಗೆಜೆಟೆಡ್ ಪ್ರೊಬೆಷನರ್ಸ್ ನೇಮಕಾತಿ ಆದೇಶವನ್ನು ರದ್ದುಗೊಳಿಸುವ ಕುರಿತಂತೆ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ನಿರ್ಣಯ ಕೈಗೊಳ್ಳದೆ ವಿಷಯ ಮುಂದೂಡಲಾಗಿದೆ.
ಕೆಪಿಎಸ್ಸಿ ಮೂಲಕ 2011ರಲ್ಲಿ 300ಕ್ಕೂ ಹೆಚ್ಚು ಗೆಜೆಟೆಡ್ ಪ್ರೊಬೆಷನರ್ಸ್ ಹುದ್ದೆಗಳನ್ನು ಭರ್ತಿ ಮಾಡಲಾಗಿತ್ತು. ಆದರೆ, ನೇಮಕಾತಿಯಲ್ಲಿ ಭಾರಿ ಅಕ್ರಮಗಳು ನಡೆದಿದೆ ಎಂದು ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿಗೆ ವಹಿಸಿ ಕೋರ್ಟ್ ಆದೇಶ ನೀಡಿತ್ತು. ತನಿಖೆಯಲ್ಲಿ ಅಕ್ರಮ ನಡೆದಿರುವುದು ಪತ್ತೆಯಾಗಿ ತಪ್ಪಿತಸ್ಥರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ತೀರ್ಮಾನಿಸಲಾಗಿತ್ತು.
ಈ ಮಧ್ಯೆ ಅಕ್ರಮದ ಹಿನ್ನೆಲೆಯಲ್ಲಿ 2011ರಲ್ಲಿ ಹೊರಡಿಸಿದ್ದ ನೇಮಕಾತಿ ಅಧಿಸೂಚನೆಯನ್ನೇ ರದ್ದುಗೊಳಿಸಿ ಹೊಸದಾಗಿ ನೇಮಕ ಪ್ರಕ್ರಿಯೆ ಆರಂಭಿಸಬೇಕು ಎಂದು ಈ ಹಿಂದೆ ಯೋಚಿಸಲಾಗಿತ್ತು. ಅದರಂತೆ ಮಂಗಳವಾರ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಯಿತು.
ಆಡಳಿತಾತ್ಮಕ-ಮಾನವೀಯ ದೃಷ್ಟಿ: ಸಿಐಡಿ ವರದಿ ಪ್ರಕಾರ ನೇಮಕಾತಿಯಲ್ಲಿ 42 ಮಂದಿ ಮಾತ್ರ ಅಕ್ರಮ ನಡೆಸಿದ್ದಾರೆ. ಹೀಗಾಗಿ ನೇಮಕಾತಿ ಅಧಿಸೂಚನೆ ರದ್ದುಗೊಳಿಸಿದರೆ, ಇದನ್ನು ಪ್ರಶ್ನಿಸಿ ಯಾರಾದರೂ ಕೋರ್ಟ್ ಮೊರೆ ಹೋದರೆ ಅರ್ಹರಿಗೂ ಅನ್ಯಾಯವಾಗುತ್ತದೆ. ಮೇಲಾಗಿ ಆಡಳಿತಕ್ಕೂ ತೊಂದರೆಯಾಗುತ್ತದೆ. ಆದ್ದರಿಂದ ಆಡಳಿತಾತ್ಮಕ ಮತ್ತು ಮಾನವೀಯ ದೃಷ್ಟಿಯಿಂದ ಪ್ರಕರಣವನ್ನು ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು. ಆದರೆ, ಏಕಾಏಕಿ ಈ ನಿರ್ಧಾರ ಕೈಗೊಂಡರೆ ಮತ್ತೆ ಕಾನೂನು ತೊಡಕು ಎದುರಾಗಬಹುದು ಎಂಬ ಕಾರಣಕ್ಕೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಮುಂದಿನ ಕ್ರಮ ಜರುಗಿಸಲು ನಿರ್ಧರಿಸಲಾಯಿತು.
ಕೃಷಿ ಬೆಲೆ ಆಯೋಗಕ್ಕೆ ಸಮ್ಮತಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಬಜೆಟ್‌ನಲ್ಲಿ ಕೃಷಿ ಬೆಲೆ ಆಯೋಗ ರಚನೆ ಬಗ್ಗೆ ಘೋಷಿಸಿದ್ದರು. ಫೆಬ್ರವರಿಯಲ್ಲಿ ಮತ್ತೆ ಬಜೆಟ್ ಮಂಡಿಸಲಿರುವುದರಿಂದ ಅದಕ್ಕೆ ಮುನ್ನವೇ ಕೃಷಿ ಬೆಲೆ ಆಯೋಗ ರಚಿಸಬೇಕು ಎಂಬ ತೀರ್ಮಾನಕ್ಕೆ ಬಂದಿರುವ ಸಚಿವ ಸಂಪುಟ ಇದಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಶೀಘ್ರವೇ ಆಯೋಗಕ್ಕೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಲು ತೀರ್ಮಾನಿಸಲಾಗಿದೆ.
ಅದೇ ರೀತಿ ಹುಬ್ಬಳ್ಳಿಯಲ್ಲಿ ರು. 9 ಕೋಟಿ ವೆಚ್ಚದಲ್ಲಿ ಡ್ರಗ್ ಟೆಸ್ಟಿಂಗ್ ಲ್ಯಾಬೋರೆಟರಿ ಸ್ಥಾಪನೆಗೆ ಸಂಪುಟ ಅನುಮೋದನೆ ನೀಡಿದೆ.