ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

2ನೇ ಹಂತದ ಮೆಟ್ರೋಗೆ ಒಪ್ಪಿಗೆ

Rashmi Kasaragodu
Updated On : 31 Jan 2014, 1:58 am

ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಚುನಾವಣೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ, ಬೆಂಗಳೂರಿನ 'ನಮ್ಮ ಮೆಟ್ರೋ' ಎರಡನೇ ಹಂತದ ಯೋಜನೆಗೆ ಅನುಮೋದನೆ ನೀಡಿದೆ.
ಇಡೀ ಬೆಂಗಳೂರಿನ ವಾಣಿಜ್ಯ ಚಿತ್ರಣ ಬದಲಾಯಿಸಲಿರುವ ಅಂದಾಜು 26405 ಕೋಟಿ ವೆಚ್ಚದ ಈ ಯೋಜನೆಗೆ ಕೇಂದ್ರ ಒಟ್ಟು ಯೋಜನಾ ವೆಚ್ಚದ ಶೇ.20ರಷ್ಟು ಅಂದರೆ 5281 ಕೋಟಿ ಒದಗಿಸಲಿದೆ. ಗುರುವಾರ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಮಹಾತ್ವಾಕಾಂಕ್ಷಿ ಯೋಜನೆಗೆ ಹಸಿರು ನಿಶಾನೆ ತೋರಿಸಲಾಗಿದೆ.
72 ಕಿ.ಮೀ. ಉದ್ದದ ಈ ಯೋಜನೆ ಪೂರ್ಣಗೊಳ್ಳಲು ಸುಮಾರು ಐದರಿಂದ ಏಳು ವರ್ಷ ಬೇಕಾಗುತ್ತದೆ. ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ 2018ಕ್ಕೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ದೆಹಲಿಯ ನಂತರ ಎರಡನೇ ಹಂತದ ಮೆಟ್ರೋ ಯೋಜನೆಗೆ ಅನುಮೋದನೆ ದೊರೆತಿರುವುದು ಬೆಂಗಳೂರಿಗೆ ಮಾತ್ರ.             3

 ಉಳಿದ ಮಹಾನಗರಗಳಲ್ಲಿ ಮೆಟ್ರೋ ಯೋಜನೆ ಮೊದಲ ಹಂತದಲ್ಲಿದೆ. ದೆಹಲಿಯಲ್ಲಿ ಮಾತ್ರ ಈಗಾಗಲೇ ಮೂರನೇ ಹಂತದ ಯೋಜನೆ ಅನುಷ್ಠಾನವಾಗುತ್ತಿದೆ. ಮೆಟ್ರೋ ಎರಡನೇ ಹಂತದ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕೇಂದ್ರ ನಗರಾಭಿವೃದ್ಧಿ ಇಲಾಖೆ ಯಥಾವತ್ತು ಒಪ್ಪಿತ್ತು. ಅದನ್ನು ವಾರದ ಹಿಂದಷ್ಟೆ ಕೇಂದ್ರ ನಗರಾಭಿವೃದ್ಧಿ ಇಲಾಖೆ ಸಂಪುಟಕ್ಕೆ ಸಲ್ಲಿಸಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಇರುವ ಕಾರಣ ಮತ್ತು ಚುನಾವಣೆ ಸಮೀಪಿಸುತ್ತಿರುವ ಕಾರಣಕ್ಕಾಗಿ ತ್ವರಿತವಾಗಿ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಈ ಯೋಜನೆಗೆ ತ್ವರಿತ ಒಪ್ಪಿಗೆ ದಕ್ಕಿಸಿಕೊಳ್ಳುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಷ್ಟೆ ಅಲ್ಲ ರಾಜ್ಯ ಪ್ರತಿನಿಧಿಸುತ್ತಿರುವ ಕೇಂದ್ರದ ಪಂಚ ಸಚಿವರ ಪಾತ್ರವು ಪ್ರಮುಖವಾಗಿದೆ.



ಹಣ ಎಲ್ಲಿಂದ ಬರುತ್ತದೆ?
ಪ್ರತಿ ಕಿ.ಮೀ. ಮೆಟ್ರೋ ಮಾರ್ಗಕ್ಕೆ ಸರಾಸರಿ 367 ಕೋಟಿ ವೆಚ್ಚವಾಗುವ ಈ ಯೋಜನೆಗೆ 26405 ಕೋಟಿ ಬೇಕು. ಈ ಪೈಕಿ ಕೇಂದ್ರ ಕೇಂದ್ರ ಸರ್ಕಾರ 5281 ಕೋಟಿ ಒದಗಿಸುತ್ತದೆ. ರಾಜ್ಯ ಸರ್ಕಾರದ ಕೊಡುಗೆ 8983 ಕೋಟಿ. ಹಣಕಾಸು ಮಾರುಕಟ್ಟೆಯಿಂದ ಬಿಎಂಆರ್‌ಸಿಎಲ್ 12141 ಕೋಟಿ ಸಂಗ್ರಹಿಸಲಿದೆ.
ಕೇಂದ್ರ ಸಂಪುಟದ ಅನುಮೋದಿತ ಅಂದಾಜು ವೆಚ್ಚ: 2011-12 ಸಾಲಿನ ಲೆಕ್ಕಾಚಾರ ಪ್ರಕಾರ ಈ ಹೊತ್ತಿನ ಮಾರುಕಟ್ಟೆ ದರಕ್ಕನುಗುಣವಾಗಿ ಅಂದಾಜು ವೆಚ್ಚ ಸಿದ್ಧಪಡಿಸಿದರೆ ಯೋಜನೆ ವೆಚ್ಚ 30000 ಕೋಟಿ ಮೀರುತ್ತದೆ. ಕೇಂದ್ರ ತೆರಿಗೆ ಮತ್ತು ರಾಜ್ಯ ತೆರಿಗೆಗಳು ಸೇರಿ ವಾರ್ಷಿಕ ಶೇಕಡಾ ಐದರಷ್ಟು ಯೋಜನಾ ವೆಚ್ಚ ಏರಿಕೆ ನಿರೀಕ್ಷಿಸಲಾಗಿದೆ. ಹೆಚ್ಚುವರಿ ವೆಚ್ಚವನ್ನು ರಾಜ್ಯ ಮತ್ತು  ಕೇಂದ್ರ ಸರ್ಕಾರಗಳು ಸಮನವಾಗಿ ಭರಿಸುತ್ತವೆ.


ಬದಲಾಗಲಿದೆ ಬೆಂಗಳೂರು ಚಿತ್ರಣ
ಮೆಟ್ರೋ ಯೋಜನೆ ಜಾರಿಯಾಗುತ್ತಿದ್ದಂತೆ ಬೆಂಗಳೂರಿನ ಚಿತ್ರಣ ಬದಲಾಗಲಿದೆ. ಇಡೀ ನಗರದ ಆರ್ಥಿಕ ಭೂಪಟವೂ ಬದಲಾಗಲಿದೆ. ಮೆಟ್ರೋ ಹಾದು ಹೋಗುವ ಮಾರ್ಗಕ್ಕೆ ಹೊಂದಿಕೊಂಡಿರುವ ಭೂಮಿ ದರ ಯೋಜನೆ ಪೂರ್ಣ ಜಾರಿ ವೇಳೆಗೆ ನಾಲ್ಕರಿಂದ ಆರು ಪಟ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. ಮೆಟ್ರೋ ನಿಲ್ದಾಣಕ್ಕೆ ನಾಲ್ಕೈದು ಕಿ.ಮೀ. ವ್ಯಾಪ್ತಿವರೆಗೂ ಭೂಮಿದರ ಹೆಚ್ಚಳವಾಗಲಿದೆ. ವಸತಿ ವ್ಯವಸ್ಥೆಯಲ್ಲೂ ಬದಲಾವಣೆಗಳಾಗಲಿದೆ. ಮೆಟ್ರೋ ಸಂಪರ್ಕಿಸುವ ನಗರದ ಹೊರ ಭಾಗಗಳಲ್ಲಿ ಸಮೂಹ ವಸತಿ ಯೋಜನೆಗಳು(ಅಪಾರ್ಟ್‌ಮೆಂಟ್‌ಗಳು) ವ್ಯಾಪಕವಾಗಲಿವೆ. ಮೆಟ್ರೋ ನಿಲ್ದಾಣದ ಆಜು ಬಾಜಿನಲ್ಲಿ ಮಾಲ್‌ಗಳು ತಲೆ ಎತ್ತಲಿವೆ. ಈಗ ಜಾರಿಯಾಗುತ್ತಿರುವ ಮೆಟ್ರೋ ವಿಶ್ವದರ್ಜೆಗನುಗುಣವಾಗಿದ್ದು, ಮಾಹಿತಿ ತಂತ್ರಜ್ಞಾನದಲ್ಲಿ ವಿಶ್ವಮಟ್ಟದಲ್ಲಿ ಹೆಸರುಮಾಡಿರುವ ಬೆಂಗಳೂರು ಮೂಲಭೂತ ಸೌಲಭ್ಯದಲ್ಲೂ ಹೆಸರಾಗಲಿದೆ.


    ಯೋಜನೆಯ ವಿವರ


ಉದ್ದೇಶಿತ ಎರಡನೇ ಹಂತದಲ್ಲಿ ನಾಲ್ಕು ಹೊಸ ಲೇನ್‌ಗಳಿವೆ.
ಈಗಾಗಲೇ ಸಿದ್ಧವಾಗುತ್ತಿರುವ ಎರಡು ಲೇನ್‌ಗಳು ವಿಸ್ತರಣೆಯಾಗಲಿವೆ.
72 ಕಿ.ಮೀ. ಮಾರ್ಗದಲ್ಲಿ 61 ನಿಲ್ದಾಣಗಳು.
ಐಐಎಂನಿಂದ ನಾಗವಾರದವರೆಗೆ 13 ಕಿ.ಮೀ. ಸುರಂಗ ಮಾರ್ಗ ಈ ವ್ಯಾಪ್ತಿಯಲ್ಲಿ 12 ನಿಲ್ದಾಣಗಳು.
ಉಳಿದಂತೆ ಮೇಲ್ಸೆತುವೆ ಮಾರ್ಗ. ಇಲ್ಲಿ 49 ನಿಲ್ದಾಣಗಳು.

  ಎಲ್ಲಿಂದ ಎಲ್ಲಿಗೆ? ಎಷ್ಟು ಕಿ.ಮೀ.?

15.5 - ಕಿ.ಮೀ.(ಬಯ್ಯಪ್ಪನಹಳ್ಳಿ- ಐಟಿಪಿಎಲ್ - ವೈಟ್‌ಫೀಲ್ಡ್)

18.8 - ಕಿ.ಮೀ.(ಆರ್.ವಿ.ರಸ್ತೆ- ಬೊಮ್ಮಸಂದ್ರ)

6.4  ಕಿ.ಮೀ.(ಮೈಸೂರು ರೋಡ್ ಟರ್ಮಿನಲ್ - ಕೆಂಗೇರಿ)

1.25 ಕಿ.ಮೀ.(ಗೊಟ್ಟಿಗೆರೆ- ಐಐಎಂ- ನಾಗವಾರ)

6.29 ಕಿ.ಮೀ.(ಪುಟ್ಟೇನಹಳ್ಳಿ ಕ್ರಾಸ್ - ಅಂಜನಾಪುರ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement