ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಇದು ನಿಜವಾದ ಮೊಯ್ಲಿಗಲ್ಲು!

ಕೇಂದ್ರ ಸಚಿವ ವೀರಪ್ಪ ಮೊಯಿಲಿ ಅವರ ಸಮಯ ಸಾಧಕತನಕ್ಕೆ ಇಲ್ಲಿದೆ ನೋಡಿ ಮತ್ತೊಂದು ಉದಾಹರಣೆ. ಲೋಕಸಭೆ ಚುನಾವಣೆ...

Mainashree
Updated On : 30 Jan 2014, 10:30 am

ಮಂಗಳೂರು: ಕೇಂದ್ರ ಸಚಿವ ವೀರಪ್ಪ ಮೊಯಿಲಿ ಅವರ ಸಮಯ ಸಾಧಕತನಕ್ಕೆ ಇಲ್ಲಿದೆ ನೋಡಿ ಮತ್ತೊಂದು ಉದಾಹರಣೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಸೋಲಿನ ಭೀತಿಯಲ್ಲಿರುವ ಅವರು ಟೆಂಡರ್ ಕೂಡ ಕರೆಯದ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಜನರ ಕಣ್ಣಿಗೆ ಮಣ್ಣೆರಚಹೊರಟಿದ್ದಾರೆ.
ನೀರು ಬರದಿದ್ದರೂ ಪರವಾಗಿಲ್ಲ, ಶಂಕುಸ್ಥಾಪನೆಯ ಕಲ್ಲು ತೋರಿಸಿಯೇ ಮತ ಕೇಳುವ ಹವಣಿಕೆ ಅವರದ್ದು. ಇದು ನಿಜವಾದ ಮೊಯ್ಲಿಗಲ್ಲು! ಇನ್ನೂ ಒಂದು ವಿಶೇಷವೆಂದರೆ ಕಾಮಗಾರಿಗೆ ಟೆಂಡರ್ ಕರೆದಿರುವುದು ಸಕಲೇಶಪುರದ ಎತ್ತಿನಹೊಳೆಯಲ್ಲಿ, ಶಂಕುಸ್ಥಾಪನೆ ಮಾತ್ರ ಚಿಕ್ಕಬಳ್ಳಾಪುರದಲ್ಲಿ!
ಇದು ಕೇವಲ ಚಿಕ್ಕಬಳ್ಳಾಪುರಕ್ಕೆ ಮಾತ್ರ ನೀರು ನೀಡುವ ಯೋಜನೆಯಲ್ಲ. ಆದರೂ ಚಿಕ್ಕಬಳ್ಳಾಪುರದಲ್ಲಿ ಶಂಕುಸ್ಥಾಪನೆ ನೆರವೇರಿಸುವುದರ ಹಿಂದೆ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರ ಕೈವಾಡವಲ್ಲದೇ ಬೇರೆ ಕಾರಣಗಳೇ ಇಲ್ಲ.
ಕಾಮಗಾರಿ ನಡೆಸುವ ಗುತ್ತಿಗೆದಾರರು ಯಾರು? ಎಷ್ಟು ಮೊತ್ತದ ಕಾಮಗಾರಿ ಎಂಬದು ಫೆ.7ರಂದು ಟೆಂಡರ್ ತೆರೆದ ಬಳಿಕವೇ ಗೊತ್ತಾಗುತ್ತದೆ. ಅದೂ ಅಲ್ಲದೆ ಮೊದಲ ಹಂತದ ಕಾಮಗಾರಿಯ ಟೆಂಡರ್ನ 5 ಪ್ಯಾಕೇಜ್ಗಳಲ್ಲಿಯೂ ಎಲ್ಲೂ ಚಿಕ್ಕಬಳ್ಳಾಪುರ ಕಾಮಗಾರಿಗಳ ಪ್ರಸ್ತಾಪ ಇಲ್ಲ. ಅಲ್ಲದೇ ಕಾಮಗಾರಿ ಮೊದಲು ಆರಂಭಗೊಳ್ಳುವುದು ಸಕಲೇಶಪುರದಲ್ಲಿ. ಆದರೂ ಶಂಕುಸ್ಥಾಪನೆ ಚಿಕ್ಕಬಳ್ಳಾಪುರದಲ್ಲಿ ನಡೆಯುತ್ತಿರುವುದರ ಹಿಂದೆ ಮೊಯ್ಲಿ ಸ್ವಾರ್ಥ ಕೆಲಸಮಾಡಿದೆ. ಶಂಕುಸ್ಥಾಪನೆ ತನ್ನ ಕ್ಷೇತ್ರವಾದ ಚಿಕ್ಕಬಳ್ಳಾಪುರದಲ್ಲಿಯೇ ಆಗಬೇಕು. ಜ.31ರಂದೇ ಆಗಬೇಕು ಎಂದು ಒತ್ತಾಯ ಮಾಡಿದ್ದು ಕೇಂದ್ರ ಇಂಧನ ಸಚಿವ ಎಂ.ವೀರಪ್ಪ ಮೊಯ್ಲಿ. ಚಿಕ್ಕಬಳ್ಳಾಪುರ ಬಂದ್ ಬೆದರಿಕೆ ಬಂದ ನಂತರ ಈಗ ಜ.31ರ ಶಂಕುಸ್ಥಾಪನೆಯನ್ನು ಮುಂದೂಡಲಾಗಿದೆ.      

'ಕಾರ್ಕಳ, ಮಂಗಳೂರು, ಚಿಕ್ಕಮಗಳೂರು ಕ್ಷೇತ್ರ ಬಿಟ್ಟು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಗೆದ್ದು ಸಂಸದರಾಗಿರುವ ವೀರಪ್ಪ ಮೊಯ್ಲಿ, ಚಿಕ್ಕಬಳ್ಳಾಪುರದ ಜನತೆಗೆ ನೀರು ತೆಗೆದುಕೊಂಡು ಹೋಗಿ ಕೊಡುತ್ತೇನೆ ಎಂದು ನಂಬಿಸಲು ಈ ತಂತ್ರ ಹೂಡಿದ್ದಾರೆ. ಹೊಸ ಕ್ಷೇತ್ರದ ಜನತೆಗೆ ಮರುಳು ಮಾಡುವ ಆತುರದಲ್ಲಿ ಹಳೆ ಕ್ಷೇತ್ರದ ಜನತೆಯ, ಸ್ವಂತ ಊರಿನ ಜನತೆಯ ವಿರೋಧವನ್ನು ನಿರ್ಲಕ್ಷಿಸಿದ್ದಾರೆ. ಈ ಬಾರಿ ಮತ್ತೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಲು ಈ ಪ್ಲಾನ್.
ನೀರು ಬಾರದಿದ್ದರೂ ಪರವಾಗಿಲ್ಲ. ಶಂಕುಸ್ಥಾಪನೆ ಮಾಡಿಸಿಯೇ ಸಿದ್ಧ ಎಂಬ ನಿಲುವು ಅವರದ್ದು. ಇದಕ್ಕಾಗಿಯೇ ಟೆಂಡರ್ ಆಗುವ ಮುಂಚಿತವಾಗಿಯೇ ಶಂಕುಸ್ಥಾಪನೆಗೆ ತರಾತುರಿ ನಡೆಸಿದ್ದಾರೆ' ಎನ್ನುತ್ತಾರೆ ಆರ್ಟಿಐ ಹೋರಾಟಗಾರ ಕಟೀಲು ದಿನೇಶ್ ಪೈ. 'ಕರಾವಳಿ ಜನರನ್ನು ಕೊಂದು ಚಿಕ್ಕಬಳ್ಳಾಪುರದವರಿಗೂ ಇಲ್ಲ. ಕರಾವಳಿ ಜನರಿಗೂ ನೀರಿಲ್ಲ ಮಾಡುವ ಯೋಜನೆಗೆ ಶಂಕುಸ್ಥಾಪನೆಗೆ ನನ್ನ ವಿರೋಧ ಇದೆ' ಎಂದು ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಟೀಕಿಸಿದ್ದಾರೆ.
'ಟೆಂಡರೇ ತೆರೆದಿಲ್ಲ, ಕಾಮಗಾರಿ ನಡೆಯುವುದು ಸಕಲೇಶಪುರದಲ್ಲಿ, ಅಲ್ಲಿಯೇ ಶಂಕುಸ್ಥಾಪನೆ ಆಗಬೇಕು, ಚಿಕ್ಕಬಳ್ಳಾಪುರದಲ್ಲಿ ಶಂಕುಸ್ಥಾಪನೆ ಕೇವಲ ರಾಜಕೀಯ ಉದ್ದೇಶ. ಈ ಯೋಜನೆಯಿಂದ ಕೋಲಾರದವರಿಗೆ  ನೀರು ಸಿಗುವದು ಕಷ್ಟ' ಎಂದು ಪೈ ಸಂಶಯ ವ್ಯಕ್ತಪಡಿಸುತ್ತಾರೆ.
ಎಲೆಮಲ್ಲಪ ಕೆರೆ ಯೋಜನೆ ಬೆಸ್ಟ್: 'ಬೆಂಗಳೂರಿನ ಎಲೆಮಲ್ಲಪ್ಪ ಕೆರೆಯಿಂದ 32 ಕಿ.ಮೀ. ಕೊಳವೆ ಹಾಕಿ ಕೋಲಾರದ ಜನರಿಗೆ ಯಥೇಚ್ಛ ನೀರು ನೀಡಬಹುದು. ಮೊದಲು ಈ ಯೋಜನೆ ಜಾರಿಗೊಳಿಸಿ, ಹತ್ತಿಪ್ಪತ್ತು ಸಾವಿರ ಕೋಟಿ ಯೋಜನೆ ಜಾರಿಯಾದರೂ ನೀರುವ ಸಿಗುವುದೇ ಸಂಶಯ ಇದೆ. ಎಲೆಮಲ್ಲಪ್ಪ ಕೆರೆ ಕಡಿಮೆ ಖರ್ಚಿನ ಯೋಜನೆಯಿಂದ ನೀರು ಸಿಕ್ಕೇ ಸಿಗುತ್ತದೆ' ಎನ್ನುವುದು ಜನಾರ್ದನ ಪೂಜಾರಿ ಅಭಿಪ್ರಾಯ.
ಕರ್ನಾಟಕ ನೀರಾವರಿ ನಿಗಮ ಕರೆದ ಇ - ಟೆಂಡರ್ನಲ್ಲಿ ಕಾಮಗಾರಿಯನ್ನು 5 ಪ್ಯಾಕೇಜ್ ಮಾಡಿದೆ. ಜ.27ಕ್ಕೆ ತಾಂತ್ರಿಕ ಯೋಜನೆ ಬಿಡ್ ತೆರೆಯಲಾಗಿದೆ. ಇದರಲ್ಲಿ ಮೊದಲ ಪ್ಯಾಕೇಜ್ಗೆ ಮೂವರು ಗುತ್ತಿಗೆದಾರರು ಮತ್ತುಳಿದ ನಾಲ್ಕು ಪ್ಯಾಕೇಜ್ಗೆ ತಲಾ ಇಬ್ಬರು ಟೆಂಡರ್ ಹಾಕಿದ್ದಾರೆ.
ಹೀಗಿದೆ ಎತ್ತಿನ ಹೊಳೆಯ ಐದು ಪ್ಯಾಕೇಜ್: ಎತ್ತಿನಹೊಳೆಯಿಂದ 26 ಕಿಮೆಕ್ಸ್ ನೀರನ್ನು ದಡದಲ್ಲಿಯೇ 15 ಉದ್ದ 15 ಮೀಟರ್ ಅಗಲದ ತೊಟ್ಟಿ ನಿರ್ಮಿಸಿ ಕೊಳವೆ ಮೂಲಕ ನೀರೆತ್ತಿ ಹಾಯಿಸಲಾಗುತ್ತದೆ. ಇದರ ಟೆಂಡರ್ ಮೊತ್ತ 335.97 ಕೋಟಿ. 36 ತಿಂಗಳಲ್ಲಿ ಕಾಮಗಾರಿ ಮುಗಿಸಬೇಕು.
ಎರಡನೇ ಪ್ಯಾಕೇಜ್ನಲ್ಲಿ ಡೆಲಿವರಿ ಚೇಂಬರ್ 1ರಿಂದ ಡೆಲಿವರಿ ಚೇಂಬರ್ 3ವರೆಗೆ ಹೊಳೆ ಮೂಲಕ 44 ಕಿಮೆಕ್ಸ್ ನೀರೆತ್ತುವುದು. ಇದರ ಟೆಂಡರ್ ಮೊತ್ತ 501.44 ಕೋಟಿ. ಮೂರನೇ ಪ್ಯಾಕೇಜ್ನಲ್ಲಿ ಡೆಲಿವರಿ ಚೇಂಬರ್ ಮೂರರಿಂದ ಹರವನಹಳ್ಳಿ ಪ್ರದೇಶದ ಹೊಳೆಯ ಡೆಲಿವರಿ ಚೇಂಬರ್ 4ಕ್ಕೆ ಕೊಳವೆ ಮೂಲಕ 85 ಕಿಮೆಕ್ಸ್ ನೀರು ಎತ್ತುವುದು. ಇದರ ಮೊತ್ತ 843.93 ಕೋಟಿ.
ನಾಲ್ಕನೇ ಪ್ಯಾಕೇಜ್ನಲ್ಲಿ ನಾಲ್ಕು ಹೊಳೆಗಳಿಂದ 44 ಕಿಮೆಕ್ಸ್ ನೀರನ್ನು ಕೊಳವೆ ಮೂಲಕ ಡೆಲಿವರಿ ಚೇಂಬರ್ ಒಂದಕ್ಕೆ ಒಯ್ಯುವುದು ಇದರ ಮೊತ್ತ ರು. 670.26 ಕೋಟಿ ಐದನೇ ಪ್ಯಾಕೇಜ್ನಲ್ಲಿ ಮೂರು ಹೊಳೆಗಳಿಂದ 15 ಕಿಮೆಕ್ಸ್ ನೀರನ್ನು ಎತ್ತಿ ಡೆಲಿವರಿ ಚೇಂಬರ್ 2 ಕ್ಕೆ ಒಯ್ಯುವುದು. ಅಲ್ಲಿಂದ ಡೆಲಿವರಿ ಚೇಂಬರ್ ಮೂರರವರೆಗೆ ಗುರುತ್ವಾ ಕೊಳವೆ ಮೂಲಕ ಸಾಗಿಸುವುದು. ಇದರ ಮೊತ್ತ 404.68 ಕೋಟಿ.  'ಪ್ರತಿ ಹೊಳೆಗಳ ಪಕ್ಕದಲ್ಲಿಯೇ ಬೃಹತ್ ತೊಟ್ಟಿ(ಡೆಲಿವರಿ ಚೇಂಬರ್) ನಿರ್ಮಿಸಲಾಗುವುದು. ತಾಂತ್ರಿಕ ಬಿಡ್ ಪರಿಶೀಲನೆಯಲ್ಲಿದೆ. ಮೊದಲ ಪ್ಯಾಕೇಜ್ಗೆ ಮೂರು ಮಂದಿ, ಉಳಿದ ಪ್ಯಾಕೇಜ್ನಲ್ಲಿ ತಲಾ ಇಬ್ಬರು ಬಿಡ್ ದಾರರು ಇದ್ದಾರೆ. ಹಣಕಾಸು ಮೊತ್ತ ಇರುವ ಟೆಂಡರ್ ಬಿಡ್ ಫೆ.7ಕ್ಕೆ ತೆರೆಯಲಾಗುತ್ತದೆ' ಎಂದು ಕರ್ನಾಟಕ ನೀರಾವರಿ ನಿಗಮ ಎಂಜಿನಿಯರ್ ಮೋಹನ್ ರಾಜನ್ ತಿಳಿಸಿದ್ದಾರೆ.

ಟೆಂಡರ್ನ ಐದು ಕಾಮಗಾರಿ ಪ್ಯಾಕೇಜ್ಗಳಲ್ಲಿ ಎಲ್ಲೂ ಚಿಕ್ಕಬಳ್ಳಾಪುರ ಹೆಸರಿಲ್ಲ! ಶಂಕುಸ್ಥಾಪನೆ ಮುಂದೂಡಿಕೆ

- ಜಿತೇಂದ್ರ ಕುಂದೇಶ್ವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement