ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

'ಕೈ'ಯೊಳಗೆ ಜಟಾಪಟಿ

ಕಾಂಗ್ರೆಸ್ ಸಚಿವರ ಶಾಸಕರ ಮಧ್ಯೆ ಜಟಾಪಟಿ. ಸಚಿವರ ಮೇಲೆಯೇ ಕೈ ಎತ್ತಿದ ಶಾಸಕ. ಸ್ಪೀಕರ್ ಎಚ್ಚರಿಸುತ್ತಿದ್ದರೂ ಸಚಿವರನ್ನು...

Mainashree
Updated On : 30 Jan 2014, 10:31 am

ವಿಧಾನಸಭೆ:  ಕಾಂಗ್ರೆಸ್ ಸಚಿವರ ಶಾಸಕರ ಮಧ್ಯೆ ಜಟಾಪಟಿ. ಸಚಿವರ ಮೇಲೆಯೇ ಕೈ ಎತ್ತಿದ ಶಾಸಕ. ಸ್ಪೀಕರ್ ಎಚ್ಚರಿಸುತ್ತಿದ್ದರೂ ಸಚಿವರನ್ನು ಹೊಡೆಯಲು ಮುಂದಾಗಿದ್ದರು. ಮುಖ್ಯ ಸಚೇತಕ ಅಡ್ಡಬರದಿದ್ದರೆ ವಿಧಾನಸಭೆಯೊಳಗೇ ಮಾರಾಮಾರಿ.
ಇದು ಕಾಂಗ್ರೆಸ್ ಪಕ್ಷದ ಗ್ರಾಮ, ಜಿಲ್ಲಾ ಘಟಕದ ಸಭೆಯಲ್ಲಿ ನಡೆದಿದ್ದಲ್ಲ. ಪಕ್ಷದ ಸಮಾರಂಭವೂ ಅಲ್ಲ, ಸರ್ಕಾರಿ ಕಾರ್ಯಕ್ರಮವೂ ಅಲ್ಲ. ಸಚಿವರು-ಶಾಸಕರ ಈ ಜಟಾಪಟಿ ನಡೆದದ್ದು ವಿಧಾನಸಭೆಯಲ್ಲೇ.
ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ ಅವರ ವರ್ತನೆಗೆ ಆಡಳಿತ ಪಕ್ಷದ ಶಾಸಕ ನರೇಂದ್ರ ಸ್ವಾಮಿ ಗರಂ ಆಗಿದ್ದಷ್ಟೇ ಅಲ್ಲ, ಅವರತ್ತ ನುಗ್ಗಿ ಹೊಡೆಯಲೂ ಮುಂದಾಗಿದ್ದರು. ಮುಖ್ಯ ಸಚೇತಕ ಅಶೋಕ ಪಟ್ಟಣ ಸೇರಿದಂತೆ ಶಾಸಕರು ತಡೆಯದಿದ್ದರೆ ಕೈಕೈ ಮಿಲಾಯಿಸುವ ಘಟನೆ ಸಂಭವಿಸುತ್ತಿತ್ತು. ಇದೆಲ್ಲವೂ ನಿಯಂತ್ರಣಕ್ಕೆ ಬರಲಿ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ 'ಏಯ್, ಏಯ್ ಏನದು. ಸುಮ್ಮನಿರಿ' ಎಂದರೂ ಯಾವುದೂ ಪ್ರಯೋಜನಕ್ಕೆ ಬಾರಲೇ ಇಲ್ಲ. ಇಷ್ಟಕ್ಕೂ ಶಾಸಕ ನರೇಂದ್ರಸ್ವಾಮಿ ಸಿಟ್ಟಿಗೆ ಸಮಾಜ ಕಲ್ಯಾಣ ಖಾತೆ ಸಚಿವ ಆಂಜನೇಯ ಅವರೇ ಕಾರಣರಾಗಿದ್ದರು.  

ಅದೂ ಜಾತಿ ಹೆಸರಿನಲ್ಲಿ ಚರ್ಚೆ ಮಾಡಿ ಶಾಸಕರನ್ನು ಆರೋಪಿಸಿದ್ದರು. ಇದನ್ನು ಸದನದಲ್ಲಿರುವ ಎಲ್ಲ ಶಾಸಕರು ಪಕ್ಷಭೇದ ಮರೆತು ಟೀಕಿಸಿದ್ದಲ್ಲದೆ, ಬಾವಿಗಿಳಿದು ಧರಣಿಯನ್ನೂ ಮಾಡುತ್ತಿದ್ದರು. ನರೇಂದ್ರಸ್ವಾಮಿ ಅವರ ಕೋಪ ಮತ್ತಷ್ಟು ಹೆಚ್ಚಾಗುವುದಕ್ಕೆ ಸಚಿವರು ಮತ್ತೆ ಅದೇ ವಿಚಾರವನ್ನು ಅವರ ಬಳಿಯೇ ಮಾತನಾಡಿದಾಗ.
ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಪರಿಶಿಷ್ಟ ಜಾತಿ/ ಪಂಗಡದ ಫಲಾನುಭವಿಗಳ ಆಯ್ಕೆ ಸಮಿತಿ, ಅಂಬೇಡ್ಕರ್ ನಿಗಮ, ದೇವರಾಜ ಅರಸು ನಿಗಮಗಳಿಗೆ ಆರು ಜನ ಅಧಿಕಾರೇತರ ಸದಸ್ಯರನ್ನು ನೇಮಕ ಮಾಡಲು ಸರ್ಕಾರ ಆದೇಶ ಹೊರಡಿಸಿದೆ. ಶಾಸಕರು ಅಧ್ಯಕ್ಷರಾಗಿರುವ ಈ ಸಮಿತಿಗಳಲ್ಲಿ ಇಂತಹ ನೇಮಕ ಮಾಡುವುದು ಬೇಡ ಎಂದು ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಪಕ್ಷಭೇದ ಮರೆತು ಎಲ್ಲ ಶಾಸಕರೂ ದನಿಗೂಡಿಸಿದರು. ಶಾಸಕರ ಅಧಿಕಾರ ಮೊಟಕುಗೊಳಿಸುವ ಆದೇಶ ಇದು. ಇದನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರ ನೀಡಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ, ಸಾಮಾಜಿಕ ನ್ಯಾಯ ನೀಡಲು ಇಂತಹ ಆದೇಶ ಮಾಡಲಾಗಿದೆ. ಕೆಲವು ಶಾಸಕರು ಸಮಿತಿಗೆ ಅವರ ಜಾತಿಗೆ ಸಂಬಂಧಿಸಿದವರನ್ನೇ ನೇಮಕ ಮಾಡಿಕೊಳ್ಳುತ್ತಿದ್ದರು. ಭೋವಿ ಶಾಸಕರಾದರೆ ಅವರೇ ಪ್ರಾತಿನಿಧ್ಯ. ಅವರವರ ಜಾತಿಯವರಿಗೇ ಪ್ರಾತಿನಿಧ್ಯವಾಗುತ್ತಿದ್ದು. ಆದ್ದರಿಂದ 6 ಅಧಿಕಾರರೇತರ ಸದಸ್ಯರನ್ನು ಜಿಲ್ಲಾ ಉಸ್ತುವಾರಿ ಸಚಿವರು ನಾಮನಿರ್ದೇಶನ ಮಾಡಲು ಅವಕಾಶ ನೀಡಲಾಗಿದೆ ಎಂದು ಸಮಜಾಯಿಷಿ ನೀಡಿದರು.
ವಿಶ್ವೇಶ್ವರಹೆಗಡೆ ಕಾಗೇರಿ, ಸಿ.ಟಿ. ರವಿ, ಎಸ್.ಆರ್. ವಿಶ್ವನಾಥ್ ಸೇರಿದಂತೆ ಪ್ರತಿಪಕ್ಷ ಶಾಸಕರೆಲ್ಲರೂ ವಿರೋಧ ವ್ಯಕ್ತಪಡಿಸಿದರು. ಕಾಂಗ್ರೆಸ್ನ ಶಿವಮೂರ್ತಿ, ನರೇಂದ್ರಸ್ವಾಮಿ ಅವರೂ ಜಾತಿಯವರನ್ನೇ ನೇಮಕ ಮಾಡುತ್ತೇವೆ ಎಂಬ ಸಚಿವರ ಮಾತಿಗೆ ಅತೀವ ಬೇಸರ ವ್ಯಕ್ತಪಡಿಸಿದರು. ಸರ್ಕಾರಿ ಆದೇಶವನ್ನು ತಡೆಹಿಡಿಯಿರಿ ಎಂದು ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದರು. ಬಿಜೆಪಿ, ಜೆಡಿಎಸ್ ಶಾಸಕರೆಲ್ಲರೂ ಆದೇಶವನ್ನು
ರದ್ದುಪಡಿಸಬೇಕು ಎಂದು ಶಾಸಕರು ಬಾವಿಗಿಳಿದು ಧರಣಿಗಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ನ ಶಾಸಕರೆಲ್ಲ ಸಚಿವ ಆಂಜನೇಯ ಕುಳಿತಿದ್ದ ಸಾಲಿನ ಆಸನದತ್ತ ಬಂದರು. ಆಂಜನೇಯ ಅವರ ಪಕ್ಕದ ಆಸನದಲ್ಲಿ ಕುಳಿತ ನರೇಂದ್ರಸ್ವಾಮಿ ಜಾತಿ ಬಗ್ಗೆ ಮಾತನಾಡಿದ್ದಕ್ಕೆ ಮತ್ತೊಮ್ಮೆ ಅದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಚಿವ ಆಂಜನೇಯ ಹಾಗೂ ನರೇಂದ್ರ ಸ್ವಾಮಿ ನಡುವೆ ವಾಗ್ವಾದ ಉಂಟಾಯಿತು. ನರೇಂದ್ರ ಸ್ವಾಮಿ ಅವರು ಹೊಡೆಯಲು ಮುಂದಾದರು. ಈ ಸಂದರ್ಭದಲ್ಲಿ ಸ್ಪೀಕರ್ ಅದೇನದು ನಿಲ್ಲಿಸಿ, ಏಯ್ ಏಯ್ ಎನ್ನುತ್ತಿದ್ದರು. ನರೇಂದ್ರಸ್ವಾಮಿ ಆಕ್ರೋಶದಿಂದ ಆಂಜನೇಯರತ್ತ ನುಗ್ಗುತ್ತಿದ್ದರು. ಆಗ, ಮುಖ್ಯ ಸಚೇತಕ ಅಶೋಕ ಪಟ್ಟಣ ಅವರು ನರೇಂದ್ರಸ್ವಾಮಿ ಅವರನ್ನು ಹಿಡಿದು, ತಳ್ಳಿಕೊಂಡು ಹೋಗಿ ಅವರ ಆಸನದಲ್ಲಿ ಕೂರಿಸಿದರು. ಪಕ್ಕದ ಆಸನದಲ್ಲೇ ಕುಳಿತು ಸಾಕಷ್ಟು ಸಮಯ ಸಮಾಧಾನಪಡಿಸಿದರು.
ಕಾಂಗ್ರೆಸ್ನಲ್ಲಿರುವ ಒಗ್ಗಟ್ಟು ಸದನದಲ್ಲೇ ಬಹಿರಂಗವಾಗಿದೆ. ಆಡಳಿತ ಪಕ್ಷದ ಶಾಸಕರೇ ಸರ್ಕಾರದ ಆದೇಶವನ್ನು ಒಪ್ಪುತ್ತಿಲ್ಲ. ಅಂದರೆ ಇನ್ನೆಂಥಾ ಸರ್ಕಾರ ಇದು. ಇಂತಹ ಸರ್ಕಾರ ಧಿಕ್ಕಾರ ಎಂದು ಬಿಜೆಪಿ-ಜೆಡಿಎಸ್ ಶಾಸಕರು ಕೂಗುತ್ತಿದ್ದರು. ಕಾಂಗ್ರೆಸ್ನವರು ಇಲ್ಲೇ ಹೊಡೆದಾಡುತ್ತಿದ್ದಾರೆ, ಇಲ್ಲೇ ಅವರಲ್ಲಿ ಒಗ್ಗಟ್ಟಿಲ್ಲ ಎಂದು ದೂರಿದರು. ಸಮಸ್ಯೆಯನ್ನು ಇತ್ಯರ್ಥಪಡಿಸುವುದಾಗಿ ಸ್ಪೀಕರ್ ನೀಡಿದ ಆಶ್ವಾಸನೆಯಿಂದ ಶಾಸಕರು ಧರಣಿ ಕೈಬಿಟ್ಟರು. ಇಷ್ಟಾದರೂ, ನರೇಂದ್ರ ಸ್ವಾಮಿ ಅವರನ್ನು ಅಶೋಕ ಪಟ್ಟಣ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ ಸಮಾಧಾನಪಡಿಸುತ್ತಲೇ ಇದ್ದರು.

ಎಸ್ಸಿ ಎಸ್ಟಿ ಸಮಿತಿಗಳಿಗೆ ಸರ್ಕಾರ ನಾಮನಿರ್ದೇಶನ ಮಾಡಬೇಕು. ಆದರೆ ಮೀಸಲು ಕ್ಷೇತ್ರದಲ್ಲಿ ಮಾತ್ರ  ತಾರತಮ್ಯ ನಡೆಯುತ್ತಿದೆ ಎಂಬರ್ಥದಲ್ಲಿ ಸಚಿವರು ಮಾತನಾಡಿದ್ದು ಸರಿಯಲ್ಲ. ಅದನ್ನು ನನ್ನ ಆತ್ಮಸಾಕ್ಷಿ ಒಪ್ಪದ ಕಾರಣ ವಿರೋಧಿಸಿದೆ. ಇದು ಹೊಡೆದಾಟವಲ್ಲ. ಮಾತಿನ ಚಕಮಕಿ ಅಷ್ಟೇ.
- ನರೇಂದ್ರ ಸ್ವಾಮಿ, ಶಾಸಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement