ಜನಾರ್ದನ ರೆಡ್ಡಿ ಕರೆದೊಯ್ಯುತ್ತಿದ್ದ ವೇಳೆ ಹಿಂಬದಿಯಿಂದ ವಾಹನ ಡಿಕ್ಕಿ
ಬೆಂಗಳೂರು: ಗಣಿ ಅಕ್ರಮ ಸಂಬಂಧ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನು ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ವಾಪಸ್ ಕಾರಾಗೃಹಕ್ಕೆ ಕರೆದೊಯ್ಯುತ್ತಿದ್ದಾಗ ಸಣ್ಣ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಜನಾರ್ದನ ರೆಡ್ಡಿಗಾಗಲಿ ,ಪೊಲೀಸರಿಗಾಗಲಿ ಯಾವುದೇ ಗಾಯಗಳಾಗಿಲ್ಲ. ಗುರುವಾರ ಬೆಳಗ್ಗೆ ಜನಾರ್ದನ ರೆಡ್ಡಿ ಅವರನ್ನು ಜಯನಗರ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಸಾಮಾನ್ಯ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ವಾಪಸ್ ಕರೆದುಕೊಂಡು ಹೋಗಲಾಗುತ್ತಿತ್ತು. ಹೊಸೂರು ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದ ವಾಹನವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಬಳಿಕ ಪೊಲೀಸರು ಗೊಂದಲಗಳಿಗೆ ಅವಕಾಶ ನೀಡದೆ ಜನಾರ್ದನ ರೆಡ್ಡಿ ಅವರನ್ನು ಕಾರಾಗೃಹಕ್ಕೆ ಕರೆದೊಯ್ದಿದ್ದಾರೆ. ಜನಾರ್ದನ ರೆಡ್ಡಿ ಅವರನ್ನು ಗುರುವಾರ ಆಸ್ಪತ್ರೆಗೆ ಕರೆತರುತ್ತಿರುವ ವಿಷಯ ತಿಳಿದ ಕೆಲ ಬೆಂಬಲಿಗರು ಆಸ್ಪತ್ರೆ ಬಳಿ ಧಾವಿಸಿದ್ದರು. ಅವರೇ ಕೃತ್ಯ ಎಸಗಿದ್ದಾರಾ ಎಂಬುದೂ ಗೊತ್ತಾಗಿಲ್ಲ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಡಿಸಿಪಿ ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.