ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಶಿಕ್ಷಕರ ಕೈಗೆ ಅಸಂಬದ್ಧ ಪ್ರಶ್ನಾವಳಿ ಪಟ್ಟಿ

Mainashree
Updated On : 30 Jan 2014, 10:42 am

ಕ.ಪ್ರ.ವಾರ್ತೆ  ಬೆಂಗಳೂರು  ಜ. 30
ಶಿಕ್ಷಕರೇ ನೀವು ಪಾಠ ಮಾಡುವುದನ್ನೊಂದು ಬಿಟ್ಟು ಉಳಿದೆಲ್ಲ ಕೆಲಸವನ್ನು ಮಾಡಿ, ತಪ್ಪಿದಲ್ಲಿ ಒಂಟಿ ಕಾಲಿನಲ್ಲಿ  ನಿಲ್ಲಿಸುತ್ತೇವೆ!
ಶಾಲೆಯಲ್ಲಿ ವಿದ್ಯಾರ್ಥಿಗಳು ಶಿಸ್ತನ್ನು ಗೌರವಿಸುತ್ತಾರೆಯೇ? ನೋವನ್ನು ಮರೆತು ಶಾಲಾ ಚಟುವಟಿಕೆಯಲ್ಲಿ ಭಾಗವಹಿಸುತ್ತಾರೆಯೇ? ಸಂಯಮದಿಂದ ವರ್ತಿಸುತ್ತಾರೆಯೇ? ಶಿಕ್ಷಕರ ಸಲಹೆಗಳನ್ನು ಧನಾತ್ಮಕವಾಗಿ ಸ್ವೀಕರಿಸುತ್ತಾರೆಯೇ? ಸಹಪಾಠಿಗಳೊಡನೆ ಚರ್ಚಿಸುತ್ತಾರೆಯೇ? ಧಾರ್ಮಿಕ ನಂಬಿಕೆ ಹಾಗೂ ಸಂಸ್ಕೃತಿಯನ್ನು ಗೌರವಿಸುತ್ತಾರೆಯೇ? ನೈತಿಕತೆ ಪ್ರದರ್ಶಿಸುತ್ತಾರೆಯೇ? ಸ್ವಾಭಿಮಾನ ಪ್ರದರ್ಶಿಸುತ್ತಾರೆಯೇ? ಇಂತಹ 55 ಅಸಂಬದ್ಧ ಪ್ರಶ್ನಾವಳಿಗಳ ಪಟ್ಟಿಯನ್ನು ಶಿಕ್ಷಕರ ಕೈಗೆ ನೀಡಿ ಪ್ರತಿ ವಿದ್ಯಾರ್ಥಿಯ ಹಣೆಬರಹ ಬರೆಯಿರಿ ಎಂದು ಇಲಾಖೆ ನೀಡಿದೆ. ಪ್ರತಿ ಪಾಠ ಮುಗಿದ ಬಳಿಕ ನಡೆಸುವ ಪರೀಕ್ಷೆಯ ನಂತರ ಈ ಪ್ರಶ್ನಾವಳಿಗಳನ್ನು ಶಿಕ್ಷಕರು ತುಂಬಬೇಕಿದೆ.
ಮನೆಯಲ್ಲಿ ಮಕ್ಕಳು ಅಮ್ಮನಿಗೆ ಕೊಡುವ ಕೀಟಲೆಯೇ ಅಪ್ಪನಿಗೆ ಗೊತ್ತಿರುವುದಿಲ್ಲ. ಆದರೆ 40ಕ್ಕೂ ಅಧಿಕ ವಿದ್ಯಾರ್ಥಿಗಳಿರುವ ಒಂದು ತರಗತಿಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯ ಜಾತಕವನ್ನು ಶಿಕ್ಷಕರು ಬರೆಯುತ್ತಾ ಕೂರಲು ಸಾಧ್ಯವಿಲ್ಲ. ಒಂದೊಮ್ಮೆ ಬರೆಯುತ್ತಾ ಸಾಗಿದರೆ ಖಂಡಿತ ಆ ಶಿಕ್ಷಕ ಪ್ರಾಮಾಣಿಕವಾಗಿ ಪಾಠ ಮಾಡಲು ಸಾಧ್ಯವಿಲ್ಲ ಅಥವಾ ಪ್ರಾಮಾಣಿಕವಾಗಿ ಈ ಪ್ರಶ್ನಾವಳಿ ತುಂಬಲಾರರು.
ಅಧಿಕಾರಿಗಳ ಬೇಜವಾಬ್ದಾರಿ ನಿಯಮಗಳಿಂದ ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಶಿಕ್ಷಕರಿಗೆ ಪಾಠ ಮಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ವಿದ್ಯಾರ್ಥಿಗಳಿಗೆ ಪಾಠ ಕಲಿಸುವ ಬದಲು ಶಾಲೆಯಲ್ಲಿ ಗುಮಾಸ್ತನ ಕೆಲಸವನ್ನು ಶಿಕ್ಷಕರು ನಿಭಾಯಿಸುತ್ತಿದ್ದಾರೆ. ಶಿಕ್ಷಕರು ಈ ವ್ಯವಸ್ಥೆ ಬಗ್ಗೆ ಅಪಸ್ವರ ಎತ್ತುತ್ತಿದ್ದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ. ಶಿಕ್ಷಣದ ಗುಣಮಟ್ಟ ವೃದ್ಧಿಗೆ ನಿರಂತರ ವ್ಯಾಪಕ ಮೌಲ್ಯಮಾಪನ(ಸಿಸಿಇ) ಜಾರಿಗೆ ತಂದಿದ್ದರೂ, ಪರೋಕ್ಷವಾಗಿ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ. ಇದೇ ವ್ಯವಸ್ಥೆಯನ್ನು ಮುಂದುವರೆಸಿದರೆ ಶಿಕ್ಷಕರು ಪಾಠ ಮಾಡುವುದನ್ನು ಮರೆತು ಗುಮಾಸ್ತಿಕೆಯನ್ನೇ ಕೆಲಸ ಎಂದು ತಿಳಿದುಕೊಳ್ಳುತ್ತಾರೆ. ಏಕೆಂದರೆ ಈ ಕೆಲಸ ಮಾಡುವುದನ್ನು ನಿರ್ಲಕ್ಷಿಸಿದರೆ ಇಲಾಖೆ ಅಧಿಕಾರಿಗಳು ಶಿಕ್ಷಕರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತಾರೆ.
ಗಣತಿ, ಬಿಸಿಯೂಟ, ಕ್ಷೀರಭಾಗ್ಯ, ಶಾಲೆ ಬಿಟ್ಟ ಮಕ್ಕಳ ಹುಡುಕಾಟದಲ್ಲಿಯೇ ಸುಸ್ತಾಗಿದ್ದ ಶಿಕ್ಷಕರಿಗೆ ಈಗ ಇದೊಂದು ಹೊಸ ತಲೆನೋವಾಗಿ ಪರಿಣಮಿಸಿದೆ.

ಇದೆಂಥಾ ಹುಚ್ಚಾಟ?
ನಿರಂತರ ವ್ಯಾಪಕ ಮೌಲ್ಯಮಾಪನದ ಪ್ರಕಾರ ಪ್ರತಿ ಅಧ್ಯಾಯವನ್ನು ಕಲಿಸಿದ ಬಳಿಕ ವಿದ್ಯಾರ್ಥಿಗಳಿಗೆ 10 ಅಂಕಗಳ ಪರೀಕ್ಷೆ ನಡೆಸಬೇಕು. ಈ ಪರೀಕ್ಷೆ ಮುಗಿದ ಬಳಿಕ ಇಲಾಖೆಯ ತಪಶೀಲು ಪಟ್ಟಿಯಲ್ಲಿ ವಿದ್ಯಾರ್ಥಿಗಳ ಅಂಕ ಹಾಗೂ ಶ್ರೇಣಿ ದಾಖಲಿಸಬೇಕು. ಆದರೆ ಶಿಕ್ಷಕರ ಕೆಲಸ ಇಲ್ಲಿಗೆ ಮುಗಿಯುವುದಿಲ್ಲ. ಇದನ್ನು ಹೊರತುಪಡಿಸಿ ಒಟ್ಟು 8 ತಪಶೀಲು ಪಟ್ಟಿಗಳಿವೆ. ಇದರಲ್ಲಿ ಭಾವನಾತ್ಮಕ-ಸಾಮಾಜಿಕ ಕೌಶಲ, ಸಂಘಟನಾ ಕೌಶಲ, ಸೃಜನಶೀಲ ಕೌಶಲ, ಶಿಕ್ಷಕರ ಕುರಿತಿರುವ ಮನೋಧೋರಣೆ, ಸಹಪಾಠಿಗಳ ಕುರಿತಿರುವ ಮನೋಧೋರಣೆ, ಶಾಲಾ ಕಾರ್ಯಕ್ರಮಗಳ ಬಗ್ಗೆ ಇರುವ ಮನೋಧರೆಣೆ ಹಾಗೂ ಮೌಲ್ಯಗಳ ತಪಶೀಲ ಪಟ್ಟಿಯನ್ನು ಇಲಾಖೆ ನೀಡಿದೆ. ಈ 8 ತಪಶೀಲು ಪಟ್ಟಿಗಳಲ್ಲಿ ಬರೋಬ್ಬರಿ 55 ಪ್ರಶ್ನೆಗಳಿವೆ. ವಿದ್ಯಾರ್ಥಿಗಳ ಚಟುವಟಿಕೆಯನ್ನು ಖುದ್ದಾಗಿ ಗಮನಿಸಿ ಶಿಕ್ಷಕರು ಇವೆಲ್ಲ ಪ್ರಶ್ನೆಗಳಿಗೆ ಉತ್ತರಿಸಬೇಕು. ಒಂದು ತರಗತಿಯಲ್ಲಿ ಸರಾಸರಿ 40 ವಿದ್ಯಾರ್ಥಿಗಳಿರುತ್ತಾರೆ. ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪ್ರತಿ ಶಿಕ್ಷಕರು ಎರಡು ಅಥವಾ ಮೂರು ತರಗತಿ ಹಾಗೂ 4 ವಿಷಯಗಳನ್ನು ಕಲಿಸಬೇಕು. ಇನ್ನು ಪ್ರೌಢ ಶಾಲೆಯಲ್ಲಿ ಪ್ರತಿ ಶಿಕ್ಷಕರು 60ಕ್ಕೂ ಹೆಚ್ಚಿನ ವಿದ್ಯಾರ್ಥಿಗಳನ್ನು ಪ್ರತಿ ತರಗತಿಯಲ್ಲಿ ನಿರ್ವಹಿಸಬೇಕು. ಈತನ್ಮಧ್ಯೆ ಪ್ರತಿ ವಿದ್ಯಾರ್ಥಿಗೆ ಸಂಬಂಧಿಸಿದ 55 ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರಿಸಲು ಸಾಧ್ಯವೇ ಎನ್ನುವುದನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಸಾಬೀತು ಮಾಡಬೇಕು. ಮೂಲಗಳ ಪ್ರಕಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪರಿವೀಕ್ಷಣೆಗೆ ಬರುವುದಕ್ಕೂ ಮುಂಚೆ ಸಾಮೂಹಿಕವಾಗಿ ಈ 55 ಪ್ರಶ್ನೆಗಳಿಗೆ ಉತ್ತರಿಸುವ ಕಾರ್ಯವಾಗುತ್ತಿದೆ.

ಸಿಸಿಇ ಬೇಡ ಎನ್ನುವ ವಾದವಲ್ಲ
-  ನಿರಂತರ ವ್ಯಾಪಕ ಮೌಲ್ಯಮಾಪನದಲ್ಲಿರುವ ಅಂಶಗಳು ಅಸಂಬದ್ಧವಾಗಿಲ್ಲ.
-  ಪ್ರತಿ ಅಧ್ಯಾಯದ ಬಳಿಕ ಪೂರಕ ಪರೀಕ್ಷೆ ಮಾಡುತ್ತಿದ್ದರೇ ಪಾಠ ಮಾಡಲು ಸಮಯವೇ ಇರುವುದಿಲ್ಲ.
-  ಪ್ರತಿ ಪರೀಕ್ಷೆ ಬಳಿಕ ಈ 55 ಪ್ರಶ್ನೆಗಳಿಗೆ ಉತ್ತರಿಸುವುದರಿಂದ ಪುಸ್ತಕದ ಹಾಳೆ, ಪೆನ್ ಇಂಕ್ ಹಾಗೂ ಶಿಕ್ಷಕರ ಸಮಯ ಮಾತ್ರ ಖಾಲಿಯಾಗುತ್ತದೆ.
-  ಬದಲಿಗೆ ನಾಲ್ಕು ಕಿರು ಪರೀಕ್ಷೆ, ಮಧ್ಯವಾರ್ಷಿಕ ಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆಯ ಅಂಕದ ವಿಚಾರಕ್ಕೆ ಮಾತ್ರ ಸಿಸಿಇಯನ್ನು ಸೀಮಿತಗೊಳಿಸಬಹುದು.

ಆಯ್ದ ಅಸಂಬದ್ಧ ಪ್ರಶ್ನೆಗಳು(ತರಗತಿಯಲ್ಲಿನ 40ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಪ್ರಾಮಾಣಿಕವಾಗಿ ಈ ವಿಚಾರವನ್ನು ಗಮನಿಸಿ ದಾಖಲಿಸಲು ಸಾಧ್ಯವೇ ಎಂದು ನೋಡಿ)
-  ನೋವಾಗಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅದನ್ನು ಮರೆತು ಬೇರೆ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆಯೇ?
-  ಸಿಟ್ಟಿನಲ್ಲಿರುವ ತನ್ನ ಸಹಪಾಠಿ/ಶಿಕ್ಷಕರೊಂದಿಗೆ ಸಂಯಮದಿಂದ ವರ್ತಿಸುತ್ತಾರೆಯೇ?
-  ಅಂತರಾವಲೋಕನ ಮಾಡಿಕೊಂಡು ತನ್ನ ತಪ್ಪನ್ನು ಒಪ್ಪಿಕೊಂಡು ಬದಲಾಗಲೂ ಪ್ರಯತ್ನಿಸುತ್ತಾರೆಯೇ?
-  ದೈನಂದಿನ ಸಂಗತಿಗಳಿಗೆ ವೈಜ್ಞಾನಿಕ ಜ್ಞಾನವನ್ನು ಅನ್ವಯಿಸುತ್ತಾರೆಯೇ?
-  ಸಹಪಾಠಿಗಳೊಡನೆ ಅಭಿಪ್ರಾಯ ಭಿನ್ನತೆಯನ್ನು ಗೌರವಿಸುತ್ತಾರೆಯೇ?
-  ಸಾಮರ್ಥ್ಯ, ಧಾರ್ಮಿಕ ನಂಬಿಕೆ, ಲಿಂಗ ಮತ್ತು ಸಂಸ್ಕೃತಿ ಗೌರವಿಸುತ್ತಾರೆಯೇ?
-  ಪ್ರಾಮಾಣಿಕತೆ, ನೈತಿಕತೆ ಮತ್ತು ಭಾವೈಕ್ಯತೆ ಪ್ರದರ್ಶಿಸುತ್ತಾರೆಯೇ?
-  ದಯೆ, ಸಹಾಯ ಮಾಡುವುದು, ಜವಾಬ್ದಾರಿ ಸ್ವಭಾವ ಹೊಂದಿರುತ್ತಾರೆಯೇ?
-  ದಕ್ಷತೆಯಿಂದ ಕೆಲಸ ಮಾಡುತ್ತಾರೆಯೇ?
-  ವೈವಿಧ್ಯತೆಯನ್ನು ಗೌರವಿಸುತ್ತಾರೆಯೇ?
-  ಪರಿಸರವನ್ನು ಸ್ವಚ್ಛವಾಗಿರಿಸಿಕೊಂರುತ್ತಾರೆಯೇ?
(ಇವೆಲ್ಲ ಪ್ರಶ್ನೆಗಳಿಗೆ ಪಾಲಕರೇ ಖಡಕ್ ಆಗಿ ಉತ್ತರ ನೀಡುವುದು ಕಷ್ಟವಾಗಬಹುದು)

ರಾಜೀವ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement