ಇದು ಬರಿ ಶಾಲೆಯಲ್ಲ 'ಮಾದರಿ ಶಾಲೆ'
ಬೆಂಗಳೂರು: ಸರ್ಕಾರಿ ಶಾಲಾ ಅಭಿವೃದ್ಧಿ ಕಡೆ ಗಮನ ಹರಿಸುತ್ತಿರುವ ಶಿಕ್ಷಣ ಇಲಾಖೆ ಹಾಲಿ ಇರುವ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕೆಲವೊಂದು ಶಾಲೆಗಳನ್ನು ಮೇಲ್ದರ್ಜೆಗೇರಿಸಿ 'ಮಾದರಿ ಶಾಲೆ'ಯಾಗಿ ರೂಪಿಸಲು 6356.88 ಕೋಟಿ ಅವಶ್ಯವಿದೆ. ಶಿಕ್ಷಣ ಇಲಾಖೆಯು ಸುಸಜ್ಜಿತ ಹಾಗೂ ಮಾದರಿ ಶಾಲೆಯನ್ನಾಗಿ ರೂಪಿಸಲು ಕೆಲವೊಂದು ರೂಪುರೇಷೆ ಸಿದ್ಧಪಡಿಸಿಕೊಂಡಿದ್ದು, ಆ ಮೂಲಕ ಒಂದು ಶಾಲೆಯಲ್ಲಿ ಏನೇನು ಇರಬೇಕು ಆ ಸೌಕರ್ಯ ಒದಗಿಸಲು ತಗುಲುವ ವೆಚ್ಚವೆಷ್ಟು? ಎಂಬುದರ ಮಾಹಿತಿ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.
ಈ ಮಾಹಿತಿ ಆಧಾರದ ಮೇಲೆ ಪ್ರತಿ ಶಾಲೆಗೆ 1.09 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಿದೆ. 2012- 13ನೇ ಸಾಲಿನ ಅಂಕಿ ಅಂಶಗಳ ಪ್ರಕಾರ ಶಿಕ್ಷಣ ಇಲಾಖೆ ಅಧೀನದಲ್ಲಿ 22,567 ಹಿರಿಯ ಪ್ರಾಥಮಿಕ ಶಾಲೆಗಳಿವೆ. ಆದರೆ, ಗ್ರಾಮಪಂಚಾಯ್ತಿ ಹಾಗೂ ತಾಲೂಕು ಮಟ್ಟದಲ್ಲಿ ಒಂದು ಶಾಲೆಯನ್ನು ಮಾದರಿ ಶಾಲೆಗಳು ಎಂದು ಗುರುತಿಸಿ ಅಭಿವೃದ್ಧಿ ಪಡಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ವಿಂಗಡಿಸಿರುವ ಪ್ರಕಾರವಾಗಿ ರಾಜ್ಯದಲ್ಲಿ 5628 ಗ್ರಾಮಪಂಚಾಯ್ತಿಗಳು ಹಾಗೂ 204 ಕ್ಷೇತ್ರಗಳಿವೆ. ಒಟ್ಟು 5832 ಶಾಲೆಗಳ ನಿರ್ಮಾಣಕ್ಕಾಗಿ ಸರ್ಕಾರಕ್ಕೆ 6356.88 ಕೋಟಿ ಬೇಕಾಗುತ್ತದೆ. ಮುಂದಿನ ಸಾಲಿನ ಬಜೆಟ್ನಲ್ಲಿ ಹಣ ಬಿಡುಗಡೆ ಮಾಡಲು ಸರ್ಕಾರ ಒಪ್ಪಿಕೊಂಡರೆ, ಮಾದರಿ ಶಾಲೆಗಳು ಸಿದ್ಧವಾಗಲಿವೆ.
ಏನೇನು ಇರಲಿದೆ?: ಗ್ರಾಮಪಂಚಾಯ್ತಿ ಹಾಗೂ ಕ್ಷೇತ್ರಗಳಲ್ಲಿರುವ ದೊಡ್ಡ ಶಾಲೆಗಳನ್ನು ಗುರುತಿಸಿ ಅವುಗಳ ಅಭಿವೃದ್ಧಿಗೆ ಶಿಕ್ಷಣ ಇಲಾಖೆ ಮುಂದಾಗಲಿದೆ. ಒಂದು ಮಾದರಿ ಶಾಲೆ ಎಂದು ಎನ್ನಿಸಿಕೊಳ್ಳಲು ಶಿಕ್ಷಣ ಇಲಾಖೆ 18 ಸೌಕರ್ಯ ಇರಬೇಕು ಎಂದು ಪಟ್ಟಿ ಮಾಡಿದೆ. 7 ಕೊಠಡಿಗಳು, ಕ್ರೀಡಾಂಗಣ, ಶಾಲಾ ಕಾಂಪೌಂಡ್, ಪೀಠೋಪಕರಣ, ಕುಡಿಯುವ ನೀರು, ಶೌಚಾಲಯ, ಗ್ರಂಥಾಲಯ, ಪ್ರಯೋಗಾಲಯ, ಕ್ರೀಡಾ ಉಪಕರಣ, ಗಣಕ ಯಂತ್ರಗಳು, ರಂಗಮಂದಿರ, ಸಂಗೀತ ಉಪಕರಣ, ಬೋಧನಾ ಸಾಮಗ್ರಿಗಳು, ವೃತ್ತಿ ಶಿಕ್ಷಣ, ದೃಶ್ಯ ಮತ್ತು ಶ್ರವಣ ಸಾಮಗ್ರಿಗಳು, ಚಿತ್ರಕಲೆ ಸಾಮಗ್ರಿಗಳು, ವಾರ್ಷಿಕ ಸಾದಿಲ್ವಾರು, 3 ಬಸ್ಸುಗಳು.
- ಇವು ಶಿಕ್ಷಣ ಇಲಾಖೆ ಗುರುತು ಪಡಿಸಿರುವ ಸೌಕರ್ಯದ ಅಂಶಗಳು.
ಸರ್ಕಾರ ಒಪ್ಪಿಗೆ ಬೇಕು: ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಇಲಾಖೆ ಸಚಿವರಾದ ಕಿಮ್ಮನೆ ರತ್ನಾಕರ್ ಅವರು ಶಾಲಾ ಅಭಿವೃದ್ಧಿ ಬಗ್ಗೆ ಹೆಚ್ಚಿನ ಗಮನವಹಿಸಿದ್ದು, ಈಗಾಗಲೇ ಹಣವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಿಂದ ಪಡೆದುಕೊಳ್ಳಲು ತೀರ್ಮಾನಿಸಿದ್ದಾರೆ. ಆದರೆ, ಒಂದು ಶಾಲೆಯನ್ನು ಮಾದರಿ ಶಾಲೆಯಾಗಿ ರೂಪಿಸಲು ಕೋಟಿಗಟ್ಟಲೆ ಹಣದ ಅವಶ್ಯವಿರುವುದರಿಂದ ಶಿಕ್ಷಣ ಇಲಾಖೆ ಖಜಾನೆಯಿಂದ ಪಡೆಯಲು ತೀರ್ಮಾನಿಸಿದೆ. ಬಜೆಟ್ನಲ್ಲಿ ಹೆಚ್ಚಿನ ಅನುದಾನವನ್ನು ಶಿಕ್ಷಣ ಇಲಾಖೆಗೆ ನೀಡಿದರೆ ಈ ಮಾದರಿ ಶಾಲೆಗಳ ಕನಸು ನನಸಾಗಲಿದೆ ಎಂಬುವುದು ಶಿಕ್ಷಣ ಇಲಾಖೆ ಅಭಿಲಾಷೆ.
ಸೌಕರ್ಯ ಅಂದಾಜು ವೆಚ್ಚ (ಲಕ್ಷಗಳಲ್ಲಿ)
7 ಕೊಠಡಿ (ಒಂದಕ್ಕೆ 6ಲಕ್ಷ) 42
ಕ್ರೀಡಾಂಗಣ 5
ಶಾಲಾ ಕಾಂಪೌಂಡ್ 4
ಪೀಠೋಪಕರಣ 5
ಕುಡಿಯುವ ನೀರು 2
ಶೌಚಾಲಯ 2
ಗ್ರಂಥಾಲಯ 4
ಪ್ರಯೋಗಾಲಯ 4
ಕ್ರೀಡಾ ಉಪಕರಣ 2
ಗಣಕಯಂತ್ರಗಳು 3
ರಂಗಮಂದಿರ 10
ಸಂಗೀತ ಉಪಕರಣ 1
ಬೋಧನಾ ಸಾಮಗ್ರಿಗಳು 2
ವೃತ್ತಿ ಶಿಕ್ಷಣ 1
ದೃಶ್ಯ ಮತ್ತು ಶ್ರವಣ ಸಾಮಗ್ರಿ 3
ಚಿತ್ರಕಲೆ ಸಾಮಗ್ರಿ 0.5
ವಾರ್ಷಿಕ ಸಾದಿಲ್ವಾರು 0.5
3 ಬಸ್ಸುಗಳು 18
ದೇವರಾಜ್ ಎಲ್.