ಪ್ರೇಮಾಧಿಪತಿ ಚಿತ್ರ ತೋರಿಸದಂತೆ ಬಿಇಒ ಆದೇಶ!
ಮಾಲೂರು: ಪ್ರೇಮಾಧಿಪತಿ ಚಿತ್ರ ನೋಡಲು ಮಕ್ಕಳನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಹೋಗದಂತೆ ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳಿಗೆ ಬಿಇಒ ಸುಬ್ರಮಣ್ಯ ಆದೇಶ ಹೊರಡಿಸಿದ್ದಾರೆ. 'ಮಕ್ಕಳಿಗೆ ಪ್ರೇಮಾಧಿಪತಿ ಚಿತ್ರ ನೋಡಲು ಬಿಇಒ ಆದೇಶ' ಎಂಬ ಶಿರ್ಷಿಕೆಯಡಿ ಜ.31ರಂದು ಕನ್ನಡಪ್ರಭ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಬಿಇಒ ಸುಬ್ರಮಣ್ಯ ಸದ್ದಿಲ್ಲದೆ ಸುತ್ತೋಲೆ ಹೊರಡಿಸಿದ್ದಾರೆ.
ಫೋಷಕರ ವಿರೋಧದ ಹಿನ್ನೆಲೆಯಲ್ಲಿ ಚಿತ್ರ ನೋಡುವುದನ್ನು ರದ್ದುಪಡಿಸುತ್ತಿರುವುದಾಗಿ ಬಿಇಒ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.
ಬಿಇಒ ವಿರುದ್ಧ ಭುಗಿಲೆದ್ದ ಆಕ್ರೋಶ: ಶಾಲಾ ಮಕ್ಕಳಿಗೆ ಪ್ರೇಮಾಧಿಪತಿ ಚಿತ್ರ ನೋಡುವಂತೆ ಆದೇಶ ನೀಡಿದ್ದ ಬಿಇಒ ಸುಬ್ರಮಣ್ಯ ವಿರುದ್ಧ ಪಟ್ಟಣದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಯಿತು. ಕರವೇ ಕಾರ್ಯಕರ್ತರು ಬಿಇಒ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಚಿಣ್ಣರಿಂದ ಹಣ ಪಡೆದು ಪ್ರೇಮ ಸಂದೇಶ ಚಿತ್ರ ತೋರಿಸಲು ಹೊರಟಿರುವ ಬಿಇಒರನ್ನು ತಕ್ಷಣ ಅಮಾನತು ಮಾಡಬೇಕು ಎಂದು ಕರವೇ ಕಾರ್ಯಕರ್ತರು ಆಗ್ರಹಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸುಬ್ರಮಣ್ಯ ಗೈರು ಹಾಜರಿಯಲ್ಲಿ ಇಲಾಖೆ ವ್ಯವಸ್ಥಾಪಕ ಕೃಷ್ಣಪ್ಪ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿ, ಪೋಷಕರ ವಿರುದ್ಧದ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಈ ಹಿಂದೆ ನೀಡಿದ್ದ ಅನುಮತಿಯನ್ನು ರದ್ದುಗೊಳಿಸಲಾಗಿದೆ. ಇಂದಿನಿಂದ ಪ್ರದರ್ಶನ ಏರ್ಪಡಿಸದಂತೆ ಸಂಬಂಧಪಟ್ಟವರಿಗೆ ಹಾಗೂ ಶಾಲೆಗಳಿಗೆ ತಿಳಿಸಲಾಗಿದೆ. ಬಿಇಒ ಮನವಿಯನ್ನು ಮೇಲಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಭರವಸೆ ನೀಡಿದ ಮೇಲೆ ಕರವೇ ಕಾರ್ಯಕರ್ತರು ಪ್ರತಿಭಟನೆ ಕೈ ಬಿಟ್ಟರು.