ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಲೆಕ್ಕಕ್ಕುಂಟು, ಪಾಠಕ್ಕಿಲ್ಲ...

Mainashree
Updated On : 31 Jan 2014, 9:43 am

-ಬಿಸಿಯೂಟಕ್ಕೆ ಬೇಕಾಗುವ ಇತರ ಪದಾರ್ಥಗಳನ್ನು ತರುವ ಕೆಲಸವೂ ಶಿಕ್ಷಕರದ್ದೇ

ಕ.ಪ್ರ.ವಾರ್ತೆ ಬೆಂಗಳೂರು ಜ. 31
ಲೆಕ್ಕಕ್ಕುಂಟು ಪಾಠಕ್ಕಿಲ್ಲ, ಶಿಕ್ಷಕರ ಗೋಳು ಕೇಳುವವರಿಲ್ಲ!
ರಾಜ್ಯದಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಬಹುತೇಕರಿಗೆ ಪಾಠ ಮಾಡುವುದನ್ನು ಬಿಟ್ಟು ಉಳಿದೆಲ್ಲ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವುದು ಉದ್ಯೋಗ ಭದ್ರತೆ ಕಾರಣದಿಂದ ಅನಿವಾರ್ಯವಾಗಿದೆ!
ನೀವು ಹೇಗೆ ಪಾಠ ಮಾಡಿದ್ದೀರಿ? ಮಕ್ಕಳಿಗೆ ಎಷ್ಟು ಅರ್ಥವಾಗಿದೆ? ಮಕ್ಕಳು ಚೆನ್ನಾಗಿ ಕಲಿಯುತ್ತಿದ್ದಾರಾ? ಯಾವ ಹೊಸ ಸಂಗತಿಗಳನ್ನು ಕಲಿಸಿದಿರಿ? ಎಂದು ಕೇಳುವವರಿಲ್ಲ. ಬದಲಾಗಿ ಬಿಸಿಯೂಟದ ಲೆಕ್ಕ ಬರೆದಿರಾ? ಮಕ್ಕಳ ವರ್ತನೆ ಹೇಗಿದೆ? ಮಕ್ಕಳು ಬೇರೆಯವರಿಗೆ ಸಹಾಯ ಮಾಡುತ್ತಾರಾ? ಹೇಳಿದ ಮಾತು ಕೇಳುತ್ತಾರಾ? ಎಂದು ಅಧಿಕಾರಯುತವಾಗಿ ಪ್ರಶ್ನಿಸುವುವರೇ ಹೆಚ್ಚಾಗಿದ್ದಾರೆ.
ವರ್ಷಕ್ಕೆ ಮೂರು ತಿಂಗಳ ರಜೆ. ಶಾಲೆಯಲ್ಲಿ ಹೆಚ್ಚಿನ ಕೆಲಸವಿರುವುದಿಲ್ಲ. ಮಕ್ಕಳಿಗೆ ಪಾಠ ಮಾಡದಿದ್ದರೂ ಕೇಳುವವರಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಒಂದು ಕಾಲದಲ್ಲಿತ್ತು. ಆದರೆ ಆಗ ಶಿಕ್ಷಣದ ಗುಣಮಟ್ಟ ಉತ್ತಮವಾಗಿತ್ತು. ಇಂದು ಶಿಕ್ಷಣದ ಗುಣಟ್ಟವೂ ಇಲ್ಲ, ಶಿಕ್ಷಕರಿಗೆ ವಿಶ್ರಾಂತಿಯೂ ಇಲ್ಲದಂತಹ ವಾತಾವರಣವನ್ನು ಶಿಕ್ಷಣ ಇಲಾಖೆ ರೂಪಿಸಿದೆ.
ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಕಳೆದ ವರ್ಷ ಬಿಡುಗಡೆ ಮಾಡಿದ ವರದಿ ಪ್ರಕಾರ ವಿದ್ಯಾರ್ಥಿಗಳ ದಾಖಲು ಪ್ರಮಾಣ ಹೆಚ್ಚಾಗುತ್ತಿದ್ದರೂ ಗುಣಮಟ್ಟ ಕುಸಿಯುತ್ತಿದೆ. ಇದಕ್ಕೆ ಪ್ರಮುಖ ಕಾರಣ ಶಿಕ್ಷಕರನ್ನು ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಾಗಿ ಬಳಸಿಕೊಳ್ಳುತ್ತಿರುವುದು. ಶಿಕ್ಷಕರನ್ನು ಪಠ್ಯೇತರ ಚಟುವಟಿಕೆಗೆ ಬಳಿಸಿಕೊಳ್ಳಕೂಡದು ಎಂದು ಸುಪ್ರೀಂ ಕೋರ್ಟ್ ಕೂಡ ಆದೇಶಿಸಿದೆ. ಆದರೆ ಶೈಕ್ಷಣಿಕ ಚಟುವಟಿಕೆಗೆ ಪೂರಕವಾಗಿರುವ ಸರ್ಕಾರದ ಇತರೆ ಕೆಲಸಗಳಿಗೆ ಶಿಕ್ಷಕರನ್ನು ಸರ್ಕಾರ ಬಳಸಿಕೊಳ್ಳುತ್ತಿದೆ.
ಪಠ್ಯದ ಲೆಕ್ಕವಿಲ್ಲ, ಯೋಜನೆಗಳ ಲೆಕ್ಕ: ರಾಜ್ಯದಲ್ಲಿ ಸುಮಾರು 56 ಸಾವಿರ ಶಾಲೆಗಳಲ್ಲಿ ಅಕ್ಷರ ದಾಸೋಹ ಹಾಗೂ ಕ್ಷೀರ ಭಾಗ್ಯ ಯೋಜನೆ ನಡೆಯುತ್ತಿದೆ. ಪ್ರತಿ ಶಾಲೆಗೂ ಒಬ್ಬರು ಅಡುಗೆ ತಯಾರಕರು ಹಾಗೂ ಸಹಾಯಕರನ್ನು ಸರ್ಕಾರ ನೇಮಿಸಿದೆ. ಆದರೆ ಅಕ್ಷರ ದಾಸೋಹ ಯೋಜನೆಯ ಸಂಪೂರ್ಣ ಜವಾಬ್ದಾರಿ ಮುಖ್ಯ ಹಾಗೂ ಸಹ ಶಿಕ್ಷಕರ ಮೇಲಿರುತ್ತದೆ. ಶಿಕ್ಷಕರ ವಲಯವೇ ಹೇಳುವ ಹಾಗೆ ಇದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಬಿಸಿಯೂಟ ಯೋಜನೆಗೆ ತರಕಾರಿ, ಅಕ್ಕಿ ಬೇಳೆ ಹಾಗೂ ಇತರ ಸಾಮಗ್ರಿಗಳನ್ನು ತರುತ್ತಾರೆ. ಇವೆಲ್ಲದರ ಲೆಕ್ಕವನ್ನು ಶಿಕ್ಷಕರೇ ನಿರ್ವಹಿಸಬೇಕಿದೆ. ಈ ಲೆಕ್ಕದಲ್ಲಿ ಪ್ರತಿನಿತ್ಯ ಬಳಕೆಯಾಗುವ ಆಹಾರ ಪದಾರ್ಥಗಳು ಹಾಗೂ ಎಷ್ಟು ವಿದ್ಯಾರ್ಥಿಗಳು ಊಟ ಮಾಡಿದರು ಎನ್ನುವುದು ಸೇರಿರುತ್ತದೆ. ಗ್ರಾಂಗಳ ಲೆಕ್ಕದಲ್ಲಿ ಇದನ್ನು ಬರೆಯಬೇಕು!
ಈ ಲೆಕ್ಕದಲ್ಲಿ ದೋಷ ಕಂಡುಬಂದರೆ ಇಲಾಖೆ ಅಧಿಕಾರಿಗಳು ಶಿಕ್ಷಕರ ತೆಲೆಗೆ ಕಟ್ಟುತ್ತಾರೆ. ಇನ್ನು ಕೆಲವು ಅಡುಗೆ ತಯಾರಕರಿಗೆ ಈ ಲೆಕ್ಕಾಚಾರದ ತಲೆಬುಡ ಗೊತ್ತಿರುವುದಿಲ್ಲ.
ಇಷ್ಟು ದಿನ ಈ ಲೆಕ್ಕಾಚಾರಗಳು ಬಿಸಿಯೂಟಕ್ಕೆ ಸೀಮಿತವಾಗಿತ್ತು. ಆದರೆ ಕಳೆದ ನಾಲ್ಕು ತಿಂಗಳಿಂದ ಶಿಕ್ಷಕರಿಗೆ ಹೊಸ ತಲೆನೋವು ಆರಂಭವಾಗಿದೆ. ಶಾಲೆಗೆ ಬರುವ ಆಹಾರ ಪದಾರ್ಥಗಳ ಲೆಕ್ಕವಿಡುವ ಜತೆಗೆ ಹಾಲಿನ ಪುಡಿಯ ಲೆಕ್ಕವನ್ನು ಶಿಕ್ಷಕರೇ ಬರೆಯಬೇಕು.
ಯಾವುದೇ ಶಾಲೆಗಳಿಗೆ ಜವಾನರಿಲ್ಲ: ಶಿಕ್ಷಕರ ತಲೆನೋವು ಇಲ್ಲಿಗೆ ನಿಲ್ಲುವುದಿಲ್ಲ. ಇತರೆ ಸರ್ಕಾರಿ ಕಚೇರಿಗಳಲ್ಲಿ ಮಾಡುವ ಎಲ್ಲ ಜವಾನರ ಕೆಲಸಗಳನ್ನು ಶಿಕ್ಷಕರೇ ನಿರ್ವಹಿಸಬೇಕು. ಒಮ್ಮೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿದರೆ ಜವಾನರು ಹಾಗೂ ಗುಮಾಸ್ತರು ಲೆಕ್ಕ ಮಾಡದಷ್ಟು ಜನ ಸಿಗುತ್ತಾರೆ. ಅಧಿಕಾರಿಗಳ ಸಣ್ಣ ಪುಟ್ಟ ಕೆಲಸಕ್ಕೂ ಹತ್ತಾರು ಸಹಾಯಕರನ್ನು ನೇಮಿಸಿಕೊಂಡಿರುತ್ತಾರೆ. ಆದರೆ ರಾಜ್ಯದಲ್ಲಿ ಮಾದರಿ ಶಾಲೆಗಳನ್ನು ಹೊರತುಪಡಿಸಿ ಮತ್ಯಾವ ಶಾಲೆಗಳಿಗೂ ಗುಮಾಸ್ತರು ಅಥವಾ ಜವಾನರ ನೇಮಕವನ್ನೇ ಮಾಡಿಲ್ಲ. ಮಕ್ಕಳಿಂದ ಕೆಲಸ ಮಾಡಿಕೊಂಡರೆ ಶಿಕ್ಷೆ ಬೇರೆ!
ಯಾವುದಾದರೂ ಮನೆಯಲ್ಲಿ ಶಾಲೆ ಬಿಟ್ಟ ಮಗುವಿದ್ದರೆ ಇದೇ ಶಿಕ್ಷಕರು ಆ ಮನೆಗೆ ದೌಡಾಯಿಸಬೇಕು. ಪತ್ರಿಕೆ ಈಗಾಗಲೇ ವರದಿ ಮಾಡಿದಂತೆ ಪ್ರತಿ ವಿದ್ಯಾರ್ಥಿಯ ವರ್ತನೆಗಳನ್ನು ಗಮನಿಸಿ ವಾರಕ್ಕೊಮ್ಮೆ ನಿರಂತರ ವ್ಯಾಕ ಮೌಲ್ಯಮಾಪನ ಯೋಜನೆ ಮೂಲಕ ದಾಖಲಿಸಬೇಕು. ಪ್ರತಿ ತಿಂಗಳು ಶಿಕ್ಷಕರು ಮಾಸಿಕ ವರದಿಯನ್ನು
ತಯಾರಿಸಬೇಕು. ಶಿಕ್ಷಕರು ಇದ್ಯಾವುದೇ ಕೆಲಸಗಳಲ್ಲಿ ಕಿಂಚಿತ್ ಎಡವಿದರೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗರಂ ಆಗುತ್ತಾರೆ. ಆದರೆ ಪಠ್ಯವನ್ನು ಸಮರ್ಪಕವಾಗಿ ಮಾಡಿದ್ದಾರೆಯೇ ಎಂದು ಕೊನೆಯಲ್ಲಿ ಸಮಯವಿದ್ದರೇ ವಿಚಾರಿಸುತ್ತಾರೆ.
ಇವೆಲ್ಲದರ ಮಧ್ಯೆ ಸಮಯವಿದ್ದರೆ ಶಿಕ್ಷಕರು ಪಾಠ ಮಾಡಬೇಕಿದೆ!

ಐದು ಸಾವಿರದಲ್ಲಿ ವರ್ಷದ ಕೆಲಸ!
ಶಾಲೆಯ ನಿರ್ವಹಣೆ ವೆಚ್ಚವಾಗಿ 5 ಸಾವಿರವನ್ನು ರಾಜ್ಯ ಸರ್ಕಾರ ನೀಡುತ್ತದೆ. ಈ ಖರ್ಚಿನಲ್ಲೇ ಶೌಚಾಲಯ, ಶಾಲಾ ಆವರಣ ಹಾಗೂ ಕೊಠಡಿಗಳ ಸ್ವಚ್ಛತೆ ಮಾಡಿಸಬೇಕು. ಶಿಕ್ಷಣ ಹಕ್ಕು ಕಾಯಿದೆ ಪ್ರಕಾರ ಯಾವುದೆ ವಿದ್ಯಾರ್ಥಿಗಳಿಂದ ಶಾಲೆಯಲ್ಲಿ ಸಣ್ಣ ಕೆಲಸವನ್ನು ಮಾಡುವಂತಿಲ್ಲ. ಇವೆಲ್ಲ ಕೆಲಸಗಳಿಗೆ ದುಡ್ಡು ಕೊಟ್ಟು ಮಾಡಿಸಿದರೆ ಶಿಕ್ಷಕರೇ ಕೈಯಿಂದ ದುಡ್ಡು ಹಾಕಬೇಕಾಗುತ್ತದೆ ಅಥವಾ ಹಾಗೆಯೇ ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಶಿಕ್ಷಕರೋ? ಗುಮಾಸ್ತರೋ?
-  ಅಕ್ಷರ ದಾಸೋಹದ ಲೆಕ್ಕ
-  ಕ್ಷೀರ ಭಾಗ್ಯ ಯೋಜನೆಯ ಲೆಕ್ಕ
-  ನಿರಂತರ ವ್ಯಾಪಕ ಮೌಲ್ಯಮಾಪನ
-  ಶಾಲೆಯ ಇತರ ದೈನಂದಿನ ಚಟುವಟಿಕೆ ಕುರಿತ ವರದಿ ತಯಾರು
-  ಗಣತಿ, ಶಾಲೆ ಬಿಟ್ಟು ಹೋಗುವ ವಿದ್ಯಾರ್ಥಿಗಳ ಮೇಲೆ ನಿಗಾ

- ರಾಜೀವ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement