ಬರ ಬೇಗೆಯ ನಡುವೆ ಈರುಳ್ಳಿಯೂ ಕಾರ
ಜೂನ್ ತಿಂಗಳಿಡೀ ಮಳೆ ಬಂದಿಲ್ಲ. ಹಣದುಬ್ಬರ ನಿಲ್ಲದೇ ಸಾಗಿದೆ. ಇರಾಕ್ ಬಿಕ್ಕಟ್ಟಿಂದ ತೈಲ ದರ ಹೆಚ್ಚಿದೆ...
ನವದೆಹಲಿ: ಜೂನ್ ತಿಂಗಳಿಡೀ ಮಳೆ ಬಂದಿಲ್ಲ. ಹಣದುಬ್ಬರ ನಿಲ್ಲದೇ ಸಾಗಿದೆ. ಇರಾಕ್ ಬಿಕ್ಕಟ್ಟಿಂದ ತೈಲ ದರ ಹೆಚ್ಚಿದೆ. ಎಲ್ಲ ಸಂಕಷ್ಟಗಳ ನಡುವೆ ಕೇಂದ್ರ ಸರ್ಕಾರಕ್ಕೆ ಅಗತ್ಯವಸ್ತುಗಳ ಬೆಲೆಯೇರಿಕೆಯ ತಲೆನೋವು ಶುರುವಾಗಿದೆ.
ಪ್ರಸಕ್ತ ವಾರ ಈರುಳ್ಳಿಯ ದರ ಭಾರಿ ಪ್ರಮಾಣದಲ್ಲಿ ಏರಿದೆ. ದೆಹಲಿಯಲ್ಲಿ ಒಂದೇ ವಾರದಲ್ಲಿ ಈರುಳ್ಳಿ ದರ ಶೇ.50ರಷ್ಟು ಹೆಚ್ಚಿದೆ. ಭಾರತದ ಅತಿದೊಡ್ಡ ಸಗಟು ಮಾರುಕಟ್ಟೆ ನಾಸಿಕ್‌ನ ಲಸಲ್‌ಗಾಂವ್‌ನಲ್ಲಿ ಈರುಳ್ಳಿ ದರ ಕೆಜಿಗೆ 18.50 ಆಗಿದೆ. ಮೇ ತಿಂಗಳಲ್ಲಿ ಈ ದರ 9.75 ಆಗಿತ್ತು. ದೇಶಾದ್ಯಂತ ಇದೇ ಟ್ರೆಂಡ್ ವ್ಯಾಪಿಸಿದ್ದು, ಎಲ್ಲ ನಗರಗಳಲ್ಲೂ ಈರುಳ್ಳಿ 'ಕಣ್ಣೀರುಳ್ಳಿ'ಯಾಗಿದೆ.
ಪಶ್ಚಿಮದಲ್ಲಿ ಬರ ಭೀತಿ
ಜೂನ್‌ನಲ್ಲಿ ಕಂಡ ಮಳೆ ಅಭಾವ ಪಶ್ಚಿಮ ಭಾರತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಇಲ್ಲಿ ಬರ ಪರಿಸ್ಥಿತಿ ತಲೆದೋರುವ ಆತಂಕವಿದೆ ಎಂದು ಕೇಂದ್ರ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಹೇಳಿದ್ದಾರೆ.
ಮಳೆ ಕೊರತೆಯಿಂದ ಗುಜರಾತ್ ಮತ್ತು ಆಂಧ್ರ ಕರಾವಳಿ ಅತ್ಯಂತ ಹೀನಾಯ ಸ್ಥಿತಿ ಎದುರಿಸಲಿದೆ ಎಂದೂ ಸಚಿವ ಸಿಂಗ್, ಭವಿಷ್ಯ ನುಡಿದಿದ್ದಾರೆ. ನೈರುತ್ಯ ಮಾರುತ ದುರ್ಬಲವಾದ ಹಿನ್ನೆಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಹಲವು ಕಡೆ ಇನ್ನೂ ಬಿತ್ತನೆ ಆರಂಭವಾಗಿಲ್ಲ. ಪರಿಣಾಮ ಅಗತ್ಯ ವಸ್ತುಗಳ ದರ ಗಗನಕ್ಕೇರುವ ಭೀತಿಯೂ ಉಂಟಾಗಿದೆ ಎಂದಿದ್ದಾರೆ.
ಶುಕ್ರವಾರ ಸಭೆ: ಅಗತ್ಯ ವಸ್ತುಗಳನ್ನು ಸೂಕ್ತ ಸಮಯಕ್ಕೆ ಪೂರೈಸುವ ಸಲುವಾಗಿ ಶುಕ್ರವಾರ ಎಲ್ಲ ರಾಜ್ಯಗಳ ಆಹಾರ ಸಚಿವರ ಸಭೆ ಕರೆಯಲಾಗಿದೆ. ಈಗಾಗಲೇ ಎಲ್ಲ ರಾಜ್ಯಗಳಿಗೆ ಪತ್ರ ಬರೆದಿದ್ದು, ಕಾಳಸಂತೆ ನಿಗ್ರಹಿಸುವಂತೆ ಸೂಚಿಸಲಾಗಿದೆ. ಅಗತ್ಯಬಿದ್ದರೆ 'ಅಗತ್ಯ ವಸ್ತುಗಳ ಕಾಯ್ದೆ'ಯ ನಿಬಂಧನೆಗಳನ್ನೂ ಬಳಸುವಂತೆ ಸಲಹೆ ಕೇಂದ್ರದ ಕಾರ್ಯದರ್ಶಿ ನೀಡಿದ್ದಾರೆ.
ಈ ತಿಂಗಳು ಬರುತ್ತಾ ಮಳೆ?
ಹವಾಮಾನ ಇಲಾಖೆ ಮಂಗಳವಾರ ನೀಡಿದ ಮಾಹಿತಿಯಂತೆ ಈ ತಿಂಗಳಲ್ಲಿ ಧಾರಾಕಾರ ಮಳೆಯಾಗಲಿದೆ. ದೇಶದ ಕೇಂದ್ರ ಭಾಗ ಮತ್ತು ವಾಯವ್ಯ ಭಾಗ ಇದುವರೆಗೆ ಅತ್ಯಂತ ಕನಿಷ್ಠ ತಮ ಮಳೆಯಾದ ಪ್ರದೇಶಗಳು.