ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮಧ್ಯವರ್ತಿ ಅಕ್ರಮಕ್ಕೆ ಕೋಟಿ ಸುರಿದ ಸರ್ಕಾರ

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಯೋಜನೆಗಳ ಮಧ್ಯವರ್ತಿಗಳ...

Mainashree
Updated On : 1 Jul 2014, 10:18 am

ಬೆಂಗಳೂರು: ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಯೋಜನೆಗಳ ಮಧ್ಯವರ್ತಿಗಳ ಅಕ್ರಮಕ್ಕೆ ರಾಜ್ಯ ಸರ್ಕಾರ ಕೋಟಿ ಕೋಟಿ ಸುರಿಯುತ್ತಿದೆ.
ಆರ್‌ಎಂಎಸ್‌ಎ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರೈಸಲು ವಿಫಲವಾದ ಮಾನಸಾ ಕನ್ಸಲ್ಟೆನ್ಸಿ ಗುತ್ತಿಗೆ ರದ್ದು ಮಾಡಲು ಸರ್ವ ಶಿಕ್ಷಣ ಅಭಿಯಾನದ ಯೋಜನಾ ನಿರ್ದೇಶಕರು ನಿರ್ಧರಿಸಿದ್ದರು. ಆದರೆ ಈಗ ಇದೇ ಸಂಸ್ಥೆಗೆ ಸುಮಾರು 4 ಕೋಟಿ ಮೊತ್ತದ ಯೋಜನಾ ನಿರ್ವಹಣಾ ವೆಚ್ಚ ನೀಡಲು ಮುಂದಾಗಿದೆ. ರಾಜ್ಯ ಸರ್ಕಾರಿ ಸಂಸ್ಥೆಗಳಿದ್ದರೂ ಯೋಜನೆಯ ನಿರ್ವಹಣೆಗೆ ಖಾಸಗಿ ಸಂಸ್ಥೆಗಳೊಂದಿಗೆ ಗುತ್ತಿಗೆ ಮಾಡಿಕೊಂಡು ಅಕ್ರಮ ಮಾಡಿದ್ದ ಶಿಕ್ಷಣ ಇಲಾಖೆ, ಈಗ ಯೋಜನೆ ನಿರ್ವಹಿಸಲು ವಿಫಲವಾದ ಸಂಸ್ಥೆಗೆ ಹಣ ಬಿಡುಗಡೆ ಮಾಡಲು ಮುಂದಾಗಿದೆ. ಮಾನಸಾ ಕನ್ಸಲ್ಟೆನ್ಸಿಯ ಗುತ್ತಿಗೆ ರದ್ದು ಮಾಡುವ ಕುರಿತಂತೆ ಈಗಾಗಲೇ ಕನ್ಸಲ್ಟೆನ್ಸಿಗೆ ನೋಟಿಸ್ ನೀಡಲಾಗಿದೆ. ಆದರೆ ಈತನ್ಮಧ್ಯೆ ಹಣ ಬಿಡುಗಡೆ ಮಾಡಲು ಸರ್ಕಾರದ ಉನ್ನತ ವಲಯದಿಂದಲೇ ಸರ್ವ ಶಿಕ್ಷಣ ಅಭಿಯಾನದ ಯೋಜನಾ ನಿರ್ದೇಶಕರಿಗೆ ಒತ್ತಡ ಹೇರಲಾಗುತ್ತಿದೆ.
ಈ ಸಂಬಂಧದ ದಾಖಲೆಗಳು 'ಕನ್ನಡಪ್ರಭ'ಕ್ಕೆ ಲಭ್ಯವಾಗಿದ್ದು, ಬಿಲ್ ಪಾವತಿಗೆ ಮನವಿ ಬಂದಿರುವುದನ್ನು ಯೋಜನಾ ನಿರ್ದೇಶಕರು ಖಾತ್ರಿಪಡಿಸಿದ್ದಾರೆ. ಇವೆಲ್ಲ ಅಕ್ರಮಗಳಿಗೆ ಕಾರಣವಾಗಿದ್ದ ಅಧಿಕಾರಿ ವರ್ಗಾವಣೆಯಾದ ಬಳಿಕವೂ ಹಣ ಪಾವತಿಗೆ ಒತ್ತಡ ಹೆಚ್ಚುತ್ತಿರುವುದು ವಿಶೇಷ.
ಒತ್ತಡದಲ್ಲಿ ಹಣ ಬಿಡುಗಡೆ?: ಕಳೆದ 2013ರ ಸೆಪ್ಟೆಂಬರ್‌ನಲ್ಲಿಯೇ ಮಾನಸಾ ಕನ್ಸಲ್ಟೆನ್ಸಿಯ ಗುತ್ತಿಗೆ ರದ್ದು ಮಾಡಲು ಯೋಜನಾ ನಿರ್ದೇಶಕರು ನಿರ್ಧರಿಸಿದ್ದರು. ಆದರೆ ಅಧಿಕಾರಿಯ ವರ್ಗಾವಣೆಯಿಂದ ಇದು ಅಲ್ಪಮಟ್ಟಿಗೆ ವಿಳಂಬವಾಗಿತ್ತು. ಅಂತಿಮವಾಗಿ ಮಾನಸಾ ಕನ್ಸಲ್ಟೆನ್ಸಿಯ 16 ತಿಂಗಳ ಗುತ್ತಿಗೆ ನವೀಕರಣ ರದ್ದು ಮಾಡಲು ಮೇ 22ರಂದು ಸರ್ವ ಶಿಕ್ಷಣ ಅಭಿಯಾನದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಈ ಸಂಬಂಧದ ಟಿಪ್ಪಣಿ ಹಾಳೆಗಳು ಪತ್ರಿಕೆಗೆ ಲಭ್ಯವಾಗಿದೆ. ಕನ್ಸಲ್ಟೆನ್ಸಿಯ ಪ್ರಾಥಮಿಕ ಗುತ್ತಿಗೆ 2013ರ ಮೇನಲ್ಲಿಯೇ ಅಂತ್ಯಗೊಂಡಿತ್ತು. ಈ ಪ್ರಕಾರ ಮಾನಸಾ ಕನ್ಸಲ್ಟೆನ್ಸಿಗೆ ಈ ದಿನದ ನಂತರದ ಕಾಮಗಾರಿಗಳಿಗೆ ಪ್ರಮಾಣೀಕರಿಸುವ ಜವಾಬ್ದಾರಿ ನೀಡವು ಹಾಗಿರಲಿಲ್ಲ. ಟಿಪ್ಪಣಿ ಹಾಳೆಯಲ್ಲಿ ಸೂಚಿಸಿರುವ ಹಾಗೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳ ಮೂಲಕ ಪ್ರಮಾಣೀಕರಿಸಲು ನಿರ್ಧರಿಸಲಾಗಿದೆ. ಆದಾಗ್ಯೂ ಜೂ.7, 10, 11, 13 ಹಾಗೂ 20ರಂದು ಸುಮಾರು 57.08 ಕೋಟಿ ಕಾಮಗಾರಿಗೆ ಇದೇ ಕನ್ಸಲ್ಟನ್ಸಿ ಪ್ರಮಾಣೀಕರಿಸಿ ಹಣ ಬಿಡುಗಡೆ ಶಿಫಾರಸು ಮಾಡಿದೆ. ಒಟ್ಟು 4 ಕೋಟಿ ಮೊತ್ತದ ನಿರ್ವಹಣಾ ಶುಲ್ಕದ ಅರ್ಜಿ ಈಗ ಶಿಕ್ಷಣ ಇಲಾಖೆಯ ಎದುರಿಗಿದೆ.
ಶಿಕ್ಷಣ ಇಲಾಖೆಯ ನೋಟಿಸ್‌ಗೆ ಉತ್ತರಿಸುವ ಬದಲು ಈ ಸಂಸ್ಥೆಯು ಹಣ ಪಾವತಿಗೆ ಅರ್ಜಿ ಸಲ್ಲಿಸಿದೆ. 'ನೋಟಿಸ್‌ಗೆ ಉತ್ತರ ನಂತರ ನೀಡಲಿ, ಗುತ್ತಿಗೆ ರದ್ದು ಮಾಡುವ ವಿಚಾರವು ಪಕ್ಕಕ್ಕಿರಲಿ, ಮೊದಲು ಹಣ ಬಿಡುಗಡೆ ಮಾಡಿ' ಎಂಬ ಸೂಚನೆ ಇಲಾಖೆಯ ಅಧಿಕಾರಿಗಳಿಗೆ ಬಂದಿದೆ. ಇದರಿಂದ ನೋಟಿಸ್ ಜಾರಿ ಮಾಡಿರುವ ಅಧಿಕಾರಿಗಳು ಗೊಂದಲದಲ್ಲಿದ್ದಾರೆ. ಅಂದಹಾಗೆ ಸುಮಾರು 107 ಕೋಟಿ ಮೊತ್ತದ ಕಾಮಗಾರಿಯ ನಿರ್ವಹಣೆ ಕುರಿತಂತೆ ಮಾನಸಾ ಕನ್ಸಲ್ಟೆನ್ಸಿ ಗಮನ ನೀಡಿಲ್ಲ. ಇದರಿಂದ ಯೋಜನೆ ಅನುಷ್ಠಾನ ವಿಳಂಬವಾಗಿದೆ ಎಂದು ಇಲಾಖೆಯ ಟಿಪ್ಪಣಿಯಲ್ಲಿ ದಾಖಲಿಸಲಾಗಿದೆ. ಒಪ್ಪಂದದ ಪ್ರಕಾರ ಪ್ರತಿ ಯೋಜನೆಯ ಒಟ್ಟು ಅನುದಾನದಲ್ಲಿ ಯೋಜನಾ ನಿರ್ವಹಣೆ ವೆಚ್ಚವೆಂದು ಶೇ.2.98ರಷ್ಟು ಹಣವನ್ನು ಮಾನಸಾ ಕನ್ಸಲ್ಟೆನ್ಸಿಗೆ ನೀಡಲಾಗುತ್ತದೆ.
ಖಾಸಗಿ ವ್ಯಕ್ತಿಗಳ ಅಗತ್ಯವೇನು?
ರಾಜ್ಯದ ಲೋಕೋಪಯೋಗಿ ಇಲಾಖೆಯ 55 ಎಂಜಿನಿಯರ್‌ಗಳ ನೆರವು ಪಡೆದು ಕಾಮಗಾರಿಗಳನ್ನು ಅನುಷ್ಠಾನಕ್ಕೆ ತರಬಹುದಾಗಿದೆ. ಒಂದೊಮ್ಮೆ ಲೋಕೋಪಯೋಗಿ ಇಲಾಖೆಯಿಂದ ಅಗತ್ಯ ಸ್ಪಂದನೆ ದೊರೆಯದಿದ್ದರೆ ಹೊರಗುತ್ತಿಗೆ ಆಧಾರದಲ್ಲಿ ಕಾಮಗಾರಿ ಅನುಷ್ಠಾನ ಮಾಡಬಹುದಾಗಿದೆ. ಆದಾಗ್ಯೂ ಸುಮಾರು 1200 ಕೋಟಿ ಮೊತ್ತದ ಯೋಜನೆ ನಿರ್ವಹಣೆಗೆ ಖಾಸಗಿ ಸಂಸ್ಥೆಯೊಂದರ ಜೇಬು ತುಂಬಿಸಲು 36 ಕೋಟಿಗೂ ಅಧಿಕ ಹಣ ನೀಡಲಾಗುತ್ತಿದೆ. ಮತ್ತೊಂದೆಡೆ ಮಧ್ಯವರ್ತಿಗಳಿಂದಲೇ ಯೋಜನೆ ವಿಳಂಬವಾಗುತ್ತಿರುವುದು ಸರ್ಕಾರದ ವಿಚಾರಣೆಯಿಂದ ತಿಳಿದುಬಂದಿದೆ.

 ರಾಜೀವ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement