ರಾಜ್ಯದಲ್ಲೂ ದಿಢೀರ್ ಏರಿಕೆ
ರಾಜ್ಯದಲ್ಲಿ ಈರುಳ್ಳಿ ಬೆಲೆ ದಿಢೀರ್ ಏರಿಕೆಯಾಗಿದ್ದು, ಗ್ರಾಹಕರು ಕಣ್ಣೀರಿಡುವಂತಾಗಿದೆ...
ಬೆಂಗಳೂರು: ರಾಜ್ಯದಲ್ಲಿ ಈರುಳ್ಳಿ ಬೆಲೆ ದಿಢೀರ್ ಏರಿಕೆಯಾಗಿದ್ದು, ಗ್ರಾಹಕರು ಕಣ್ಣೀರಿಡುವಂತಾಗಿದೆ. ಕಳೆದ ತಿಂಗಳು ಕೆ.ಜಿ. 15ರಂತೆ ಸಿಗುತ್ತಿದ್ದ ಈರುಳ್ಳಿ ಈಗ 30 ವರೆಗೂ ಏರಿಕೆಯಾಗಿದೆ.
ದೇಶದಲ್ಲೇ ಹೆಚ್ಚು ಈರುಳ್ಳಿ ಉತ್ಪಾದಿಸುವ ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆ ಈರುಳ್ಳಿ ಬೆಳೆಯನ್ನು ನುಂಗಿತ್ತು. ಹೀಗಾಗಿ ರಾಜ್ಯಕ್ಕೆ ಪೂರೈಕೆಯಾಗುತ್ತಿದ್ದ ಈರುಳ್ಳಿ ಪ್ರಮಾಣದಲ್ಲಿ ಕುಸಿತ ಉಂಟಾಗಿ ಬೇಡಿಕೆ ಹೆಚ್ಚಾಗಿದೆ. ರಾಜ್ಯದಲ್ಲಿ ಪ್ರತಿಬಾರಿ ಆಗಸ್ಟ್ ವೇಳೆಗೆ ಈರುಳ್ಳಿ ಫಸಲು ಕೈಗೆ ಸಿಗುತ್ತಿದ್ದು ಬಿಜಾಪುರ, ಗದಗ ಹಾಗೂ ದಾವಣಗೆರೆ ಸೇರಿಅನೇಕ ಕಡೆ ಈ ಬಾರಿ ಬಿತ್ತನೆ ಮಾಡಲಾಗಿದೆ. ಆದರೆ ಮಳೆ ಅನಿಶ್ಚಿತತೆ ಮುಂದುವರಿದರೆ ಬೆಳೆ ನಷ್ಟದ ಸಾಧ್ಯತೆ ಇದೆ. ಇದರಿಂದ ಬೆಲೆ ಗಗನಕ್ಕೇರುವ ಸಂಭವ ಇದೆ ಎಂದು ಈರುಳ್ಳಿ, ಆಲೂಗಡ್ಡೆ ಮಾರಾಟಗಾರರ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಹೇಳಿದ್ದಾರೆ.
ಹಾವೇರಿ, ಗದಗದಲ್ಲಿ: ಹಾವೇರಿ ಮಾರುಕಟ್ಟೆಯಲ್ಲಿ ಜೂನ್ ಆರಂಭದಲ್ಲಿ ಕ್ವಿಂಟಲ್ ಈರುಳ್ಳಿಗೆ 1800 ಇದ್ದ ಬೆಲೆ, ಇದೀಗ 3200- 3500ರವರೆಗೂ ಏರಿಕೆ ಕಂಡಿದೆ. ಗದಗ ಮಾರುಕಟ್ಟೆಯಲ್ಲಿ ಕ್ವಿಂಟಲ್ಗೆ 1500-2300 ಇದ್ದ ಬೆಲೆ, ಈಗ 1800ರಿಂದ 2800ರವರೆಗೂ ಹೆಚ್ಚಿದೆ. ಏಕೆಂದರೆ ಇಲ್ಲಿನ ಈರುಳ್ಳಿ ಗಾತ್ರದಲ್ಲಿ ಉಳಿದೆಡೆಗಿಂತ ಸ್ವಲ್ಪ ಚಿಕ್ಕದಾಗಿರುವುದರಿಂದ ಉಳಿದೆಡೆಗಿಂತ ದರದಲ್ಲಿ ಏರಿಳಿತ ಕಂಡಿದೆ.
ಮತ್ತಷ್ಟು ಏರಿಕೆ ಸಂಭವ: ಧಾರವಾಡ ಜಿಲ್ಲೆಗೆ ಈರುಳ್ಳಿ ಸುತ್ತಲ ಹಳ್ಳಿಗಳಿಂದ ಹಾಗೂ ಬೆಳಗಾವಿ, ಮಹಾರಾಷ್ಟ್ರದಿಂದ ಸಾಕಷ್ಟು ಪ್ರಮಾಣದಲ್ಲಿ ಆವಕವಾಗುತ್ತಿತ್ತು. ಸದ್ಯ ಹುಬ್ಬಳ್ಳಿಯ ಎಪಿಎಂಸಿಗೆ ನಿತ್ಯ 300- 400 ಕ್ವಿಂಟಲ್ ಈರುಳ್ಳಿ ಮಾತ್ರ ಆವಕವಾಗುತ್ತಿದ್ದು, ಬೇಡಿಕೆ ಹೆಚ್ಚುತ್ತಲೇ ಇದೆ. ಮಳೆಯ ಅಭಾವ ಇನ್ನಷ್ಟು ಹೆಚ್ಚಾದರೆ ಈರುಳ್ಳಿ ಬೆಲೆ ಗಗನಕ್ಕೆ ಏರುವುದರಲ್ಲಿ ಸಂಶಯವೇ ಇಲ್ಲ.
ರು. 5000ಕ್ಕೆ ಏರಿಕೆ ಸಂಭವ