ಸಕ್ಕರೆ ಕಾರ್ಖಾನೆ ಮಾಲೀಕರ ಅರ್ಜಿ ಇತ್ಯರ್ಥ
ಬೆಂಗಳೂರು: ಕಬ್ಬು ಬೆಳೆಗಾರರ ಬೆಂಬಲ ಬೆಲೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ನೀಡಿದ್ದ ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಲೇರಿದ್ದ ಸಕ್ಕರೆ ಕಾರ್ಖಾನೆ ಮಾಲೀಕರ ಅರ್ಜಿಯನ್ನು ಏಕಸದಸ್ಯ ಪೀಠ ಇತ್ಯರ್ಥಗೊಳಿಸಿದೆ. ಜಿಲ್ಲಾಧಿಕಾರಿಗಳು ನೀಡಿದ್ದ ನೋಟಿಸ್ಗೆ ಸಂಬಂಧಿಸಿದಂತೆ ಸಕ್ಕರೆ ಕಾರ್ಖಾನೆ ಮಾಲೀಕರು ತಕರಾರು ಅರ್ಜಿಯನ್ನು ಒಂದು ವಾರದ ಒಳಗೆ ಸಲ್ಲಿಸುವಂತೆ ಮಂಗಳವಾರ ನ್ಯಾ.ಅಶೋಕ್ ಬಿ ಹಿಂಚಿಗೇರಿ ಪೀಠ ನಿರ್ದೇಶಿಸಿದೆ. ಕಬ್ಬು ಬೆಳೆಗಾರರ ಅರ್ಜಿ ಇತ್ಯರ್ಥ ಆಗುವರೆಗೂ ಕೇಂದ್ರ ಸರ್ಕಾರ ನಿಗದಿಪಡಿಸಿರುವ 2100 ಬೆಂಬಲ ಬೆಲೆ ನೀಡುವಂತೆ ಮುಖ್ಯ ನ್ಯಾ. ಡಿ.ಎಚ್. ವಘೇಲರ ಮತ್ತು ನ್ಯಾ. ಹೆಚ್.ಜಿ. ರಮೇಶ್ ದ್ವಿಸದಸ್ಯ ಪೀಠ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಸೋಮವಾರ ಸೂಚಿಸಿತು. ಅಷ್ಟೇ ಅಲ್ಲದೇ ಸಕ್ಕರೆ ದಾಸ್ತಾನು ಮುಟ್ಟುಗೋಲು ಹಾಗೂ ಯಾವುದೇ ಒತ್ತಡವನ್ನು ಸಕ್ಕರೆ ಕಾರ್ಖಾನೆ ಮಾಲಿಕರಿಗೆ ಹೇರಬಾರದು. ಈಗಾಗಲೇ ಇದರ ಮುಖ್ಯ ಪ್ರಕರಣದ ಅರ್ಜಿ ಏಕಸದಸ್ಯ ಪೀಠದಲ್ಲಿದ್ದು ತಿಂಗಳೊಳಗೆ ವಿಚಾರಣೆ ಪೂರೈಸಿಕೊಳ್ಳುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.