ಹಸಿ ಅಡಕೆ ಮಾರಾಟ ಜೋರು ನೋಡಿ, ರೈತನದೇ ದರಬಾರು ಆತನ ಸಂಭ್ರಮಕ್ಕೆ ಇಲ್ಲ ಪಾರು
ರೈತ ತಾನು ಬೆಳೆದ ಬೆಳೆಯನ್ನು ಇಚ್ಛಿಸಿದ ಬೆಲೆಗೆ ಮಾರಾಟ ಮಾಡುವ ಅವಕಾಶ ಬಹುಶಃ ಸಿಗಲಿಕ್ಕಿಲ್ಲ...
ಶ್ರೀಕಾಂತ ಭಟ್
ಶಿವಮೊಗ್ಗ: ರೈತ ತಾನು ಬೆಳೆದ ಬೆಳೆಯನ್ನು ಇಚ್ಛಿಸಿದ ಬೆಲೆಗೆ ಮಾರಾಟ ಮಾಡುವ ಅವಕಾಶ ಬಹುಶಃ ಸಿಗಲಿಕ್ಕಿಲ್ಲ. ಈಗ ಅಡಕೆ ಬೆಳೆಗಾರನಿಗೆ ಮಾತ್ರ ಇಂಥ ಸುಯೋಗ ಒದಗಿಬಂದಿದೆ.
ಕಳೆದ ವರ್ಷ 2000- 2200 ವರೆಗೆ ಕ್ವಿಂಟಲ್ ಹಸಿ ಅಡಕೆ ಮಾರಿದ್ದ ರೈತರು ಇದೀಗ ಬರೊಬ್ಬರಿ 4800 ವರೆಗೆ ಮಾರಾಟ ಮಾಡಲಾರಂಭಿಸಿದ್ದಾರೆ. ಈ ಮೂಲಕ ನಿರೀಕ್ಷೆ ಮೀರಿ ಲಾಭಗಳಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಭಾಗದಲ್ಲಿ ಅಡಕೆ ಕೊಯ್ಲಿಗೆ ಬಂದಿದ್ದು, ಇಲ್ಲಿ ಹಸಿ ಅಡಕೆಯನ್ನು ಅತಿ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಈ ಭಾಗದ ರೈತರೇ ಹೇಳುವಂತೆ 'ನಾವು ಇಂಥ ಬೆಲೆ ಎಂದೂ ಕಂಡಿರಲಿಲ್ಲ. ಬೆಲೆಯನ್ನು ನಾವು ನಿಗದಿ ಮಾಡುವ ಅವಕಾಶ ಬಂದಿರುವುದು ನಿಜಕ್ಕೂ ಅಚ್ಚರಿ ತಂದಿದೆ'.
ಲಾಭ: ಸಾಮಾನ್ಯವಾಗಿ ಮಲೆನಾಡು ಭಾಗದಲ್ಲಿ ಅಡಕೆ ಕೊಯ್ಲು ಅಧಿಕೃತವಾಗಿ ಆರಂಭವಾಗುವುದು ವಿಜಯದಶಮಿಯ ತರುವಾಯವೇ. ವಿಜಯದಶಮಿಯಂದು ಕೊಯ್ಲು ಪೂಜೆ ನೆರವೇರಿಸಿ ನಂತರ ಕೊಯ್ಲು ಮಾಡಲಾಗುತ್ತದೆ. ಆದರೆ, ಹೊಳೆಹೊನ್ನೂರು, ಅಶೋಕ ನಗರ, ಶಿವಮೊಗ್ಗ ಸುತ್ತಮುತ್ತಲು ಸೇರಿದಂತೆ ದಾವಣಗೆರೆ ಜಿಲ್ಲೆಗೆ ಹೊಂದಿಕೊಂಡ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಜೂನ್ ಅಂತ್ಯ- ಜುಲೈನಲ್ಲಿ ಕೊಯ್ಲು ಆರಂಭವಾಗುತ್ತದೆ. ಇದು ಈ ಬಾರಿ ಲಾಭವಾಗಿ ಪರಿಣಮಿಸಿದೆ.
ಆತಂಕ ಕಡಿಮೆ: ಎರಡು ತಿಂಗಳಿಂದೀಚೆಗೆ ಅಡಕೆ ಬೆಲೆ ಏರುಮುಖದಲ್ಲಿ ಸಾಗಿದಾಗ ಅನೇಕರು ಆತಂಕ ವ್ಯಕ್ತಪಡಿಸಿದ್ದರು. ಇದು ಕೇವಲ ಹಾಲಿ ಮಾರುಕಟ್ಟೆಯಲ್ಲಿರುವ ಅಡಕೆಗೆ ಸೀಮಿತವಾಗಬಹುದು. ಭವಿಷ್ಯದಲ್ಲಿ ಮಾರುಕಟ್ಟೆಗೆ ಬರುವ ಅಡಕೆಗೆ ಬೆಲೆ ಇರುವುದಿಲ್ಲ ಎಂಬ ಮಾತನ್ನಾಡಿದ್ದರು. ಆದರೆ, ಇದೀಗ ಬರುತ್ತಿರುವ ಹೊಸ ಮಾರುಕಟ್ಟೆಗೂ ಉತ್ತಮ ಬೆಲೆ ಸಿಗುತ್ತಿರುವುದು ಬೆಳೆಗಾರರ ಆತಂಕವನ್ನು ಕಡಿಮೆ ಮಾಡಿದೆ.
ಹೊಳೆಹೊನ್ನೂರು ಭಾಗದಲ್ಲಿ ಸೋಮವಾರ ನಡೆದ ವ್ಯಾಪಾರದಲ್ಲಿ ಹಸಿ ಅಡಕೆ 4800ಕ್ಕೆ ಖರೀದಿಯಾಗಿದ್ದು, ನೂರಾರು ಲಾರಿಗಳು ಇದೀಗ ಹಸಿ ಅಡಿಕೆಯನ್ನು ಮಧ್ಯಪ್ರದೇಶಕ್ಕೆ ಹೊತ್ತೊಯ್ಯಲು ಸಿದ್ಧವಾಗಿವೆ. ಮಧ್ಯಪ್ರದೇಶದಲ್ಲಿ ಹಸಿ ಅಡಕೆ ಸಂಸ್ಕರಣೆಯಾಗಲಿದೆ.
ಮ್ಯಾಮ್ಕೋಸ್ ನಿರೀಕ್ಷೆ
ಅಡಕೆ ಬೆಳೆಗಾರರ ಅತಿದೊಡ್ಡ ಸಹಕಾರಿ ಸಂಸ್ಥೆಯಾದ ಮ್ಯಾಮ್ಕೋಸ್ ಈ ಬೆಳವಣಿಗೆ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು, ಇದು ರೈತರಿಗೆ ಆತ್ಮವಿಶ್ವಾಸ ತುಂಬುವ ಹಾಗೂ ಆರ್ಥಿಕವಾಗಿ ಸಬಲಗೊಳ್ಳುವಂತೆ ಮಾಡುವ ಅವಕಾಶ ಎಂದು ಅಭಿಪ್ರಾಯಪಟ್ಟಿದೆ. 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಮ್ಯಾಮ್ಕೋಸ್ ಉಪಾಧ್ಯಕ್ಷ ನರಸಿಂಹ ನಾಯಕ್, ಇತ್ತೀಚೆಗೆ ಅಡಕೆ ಬೆಲೆ ಏರಿಕೆ ಉಂಟಾದ ಸಂದರ್ಭದಲ್ಲಿ ಕೆಲವೇ ದೊಡ್ಡ ಬೆಳೆಗಾರರು ಮತ್ತು ದಲ್ಲಾಲರಿಗೆ ಲಾಭವಾಯಿತು. ಸಣ್ಣ ಬೆಳೆಗಾರರು ಬೆಲೆ ಏರಿಕೆ ಲಾಭ ಪಡೆಯದಾದರು. ಮುಂದಿನ ದಿನಗಳಲ್ಲಿ ಇದೇ ಬೆಲೆ ಮುಂದುವರಿದರೆ ಲಾಭ ಪಡೆಯಲಿದ್ದಾರೆ ಎಂದು ವಿವರಿಸಿದರು. ಮಲೆನಾಡು ಭಾಗದಲ್ಲಿ ಅಡಕೆ ಕೊಯ್ಲು ಆರಂಭವಾಗಲು ಕನಿಷ್ಠವೆಂದರೂ ಎರಡು ತಿಂಗಳಾದರೂ ಬೇಕಾಗುತ್ತದೆ. ಅಷ್ಟರವರೆಗೆ ಈ ಬೆಲೆ ಮುಂದುವರಿಯಲಿ ಎಂದು ಆಶಿಸುತ್ತೇವೆ. ಇಷ್ಟು ಧಾರಣೆ ಸ್ಥಿರತೆ ಕಾಯ್ದುಕೊಳ್ಳದೆ ಹೋದರೂ ಉತ್ತಮ ಬೆಲೆ ಸಿಕ್ಕೇ ಸಿಗುತ್ತದೆಂಬ ವಿಶ್ವಾಸವಿದೆ ಎಂದು ಅಭಿಪ್ರಾಯಪಟ್ಟರು.