ಇನ್ನು ಸುಮ್ನಿರಕ್ಕೆ ಆಗಲ್ಲ ; ಅಮೆರಿಕಕ್ಕೆ ಎಚ್ಚರಿಕೆ
ಬಿಜೆಪಿ ಮತ್ತು ಯುಪಿಎ ಸರ್ಕಾರದ ಮೇಲೆ ಅಮೆರಿಕದ ರಾಷ್ಟ್ರೀಯ ಭದ್ರತಾ ದಳ ಕಣ್ಗಾವಲು ಇಟ್ಟಿತ್ತು...
ನವದೆಹಲಿ: ಬಿಜೆಪಿ ಮತ್ತು ಯುಪಿಎ ಸರ್ಕಾರದ ಮೇಲೆ ಅಮೆರಿಕದ ರಾಷ್ಟ್ರೀಯ ಭದ್ರತಾ ದಳ ಕಣ್ಗಾವಲು ಇಟ್ಟಿತ್ತು ಎನ್ನುವ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಬುಧವಾರ ಅಮೆರಿಕ ರಾಜತಾಂತ್ರಿಕ ಅಧಿಕಾರಿಯನ್ನು ಕರೆಸಿಕೊಂಡು ಕಟುಮಾತುಗಳಲ್ಲಿ ಖಂಡನೆ ವ್ಯಕ್ತಪಡಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಮೆರಿಕ ರಾಯಭಾರ ಕಚೇರಿಯ ಹಿರಿಯ ರಾಜತಾಂತ್ರಿಕ ಅಧಿಕಾರಿಯನ್ನು ಬುಧವಾರ ಕರೆಸಿಕೊಂಡಿತ್ತು. ಅಧಿಕಾರಿ ಹೆಸರನ್ನು ಸಚಿವಾಲಯ ಬಹಿರಂಗಪಡಿಸಿಲ್ಲ. ನ್ಯಾನ್ಸಿ ಪಾವೆಲ್ ರಾಜಿನಾಮೆ ಬಳಿಕ ದೇಶದಲ್ಲಿ ಅಮೆರಿಕ ರಾಯಭಾರಿ ಇಲ್ಲ.
'ದೇಶದ ಯಾವುದೇ ಪಕ್ಷ, ಸಂಸ್ಥೆ, ವ್ಯಕ್ತಿ ವಿರುದ್ಧ ವಿದೇಶಿ ಸಂಸ್ಥೆಗಳು ಬೇಹುಗಾರಿಕೆ ನಡೆಸುವುದನ್ನು ಒಪ್ಪಲು ಸಾಧ್ಯವಿಲ್ಲ' ಎಂದು ಕಟುವಾಗಿ ತನ್ನ ಖಂಡನೆ ದಾಖಲಿಸಿದ ಸರ್ಕಾರ, ಭವಿಷ್ಯದಲ್ಲಿ ಇಂಥ ಘಟನೆ ಮತ್ತೆ ನಡೆಯುವುದಿಲ್ಲ ಎನ್ನುವ ಕುರಿತು ಖಾತರಿ ನೀಡಬೇಕು ಎಂದು ಒತ್ತಾಯಿಸಿತು.
ಅಲ್ಲದೆ, ಅಮೆರಿಕ ಸರ್ಕಾರದಿಂದಲೇ ನೇರವಾಗಿ ಪ್ರತಿಕ್ರಿಯೆ ಬಯಸಿರುವುದಾಗಿಯೂ ಸರ್ಕಾರ ತಿಳಿಸಿತು. 'ಈ ಹಿಂದೆ ಇ-ಮೇಲ್ ಸೇರಿದಂತೆ ದೇಶದ ವಿದ್ಯುನ್ಮಾನ ಸಂವಹನ ಕುರಿತು ಎನ್ಎಸ್ಎ ಬೇಹುಗಾರಿಕೆ ನಡೆಸಿದ್ದರ ಕುರಿತು ಭಾರತ ಆಕ್ಷೇಪ ವ್ಯಕ್ತಪಡಿಸಿತ್ತು. ಇಂಥ ಕೃತ್ಯಗಳನ್ನು ಯಾವ ಕಾರಣಕ್ಕೂ ಒಪ್ಪಲಾಗದು' ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ಸೈಯದ್ ಅಕ್ರಬುದ್ದೀನ್ ತಿಳಿಸಿದರು.
ಚುರುಕು ಮುಟ್ಟಿಸಬೇಕು: ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಎನ್ಎಸ್ಎ ಬೇಹುಗಾರಿಕೆ ಖಂಡಿಸಿದ್ದು, ಅಮೆರಿಕಕ್ಕೆ ಚುರುಕು ಮುಟ್ಟಿಸುವಂತೆ ಸರ್ಕಾರವನ್ನು ಆಗ್ರಹಿಸಿವೆ.
'ಬೇಹುಗಾರಿಕೆ ನಡೆದಿರುವುದು ನಿಜವೇ ಆಗಿದ್ದರೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಬೇಕು' ಎಂದು ಬಿಜೆಪಿ ಮುಖಂಡ ರಾಜೀವ್ ಪ್ರತಾಪ್ ರೂಡಿ ಆಗ್ರಹಿಸಿದ್ದಾರೆ.
ಸೆನೆಟರ್ ಭೇಟಿ ಮೇಲೂ ನೆರಳು
ಅಮೆರಿಕದ ಸೆನೆಟ್ ಸದಸ್ಯ ಜಾನ್ ಮೆಕ್ಗಿನ ಅವರ ಭಾರತ ಪ್ರವಾಸಕ್ಕೂ ಎನ್ಎಸ್ಎ ಬೇಹುಗಾರಿಕೆ ವರದಿ ಕರಿನೆರಳು ತಾಗಿದೆ. ನವದೆಹಲಿಯಲ್ಲಿರುವ ಮೆಕ್ಗಿನ್ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಬೇಕಿತ್ತು. ವಿದೇಶಾಂಗ ವ್ಯವಹಾರಗಳ ಇಲಾಖೆ, ತಮ್ಮ ದೇಶದ ರಾಜತಾಂತ್ರಿಕ ಅಧಿಕಾರಿಯನ್ನು ಕರೆಸಿಕೊಂಡ ಸಂಗತಿ ತಿಳಿಯುತ್ತಿದ್ದಂತೆ ಸುದ್ದಿಗೋಷ್ಠಿಯನ್ನು ದಿಢೀರ್ ರದ್ದುಪಡಿಸಿದರು. ಇದಕ್ಕೆ ಎರಡೂ ದೇಶಗಳೂ ಬೇರೆಬೇರೆ ಕಾರಣಗಳನ್ನು ನೀಡಿದರೂ, ಬೇಹುಗಾರಿಕೆ ವರದಿ ಹಿನ್ನೆಲೆಯಲ್ಲಿಯೇ ರದ್ದುಗೊಳಿಸಿದ್ದು ಎನ್ನುವುದು ಸ್ಪಷ್ಟ.
ಅಮೆರಿಕಕ್ಕೆ ಹಿನ್ನಡೆ?
ಮೋದಿ ಸರ್ಕಾರದ ಸ್ನೇಹಹಸ್ತ ಬಯಸಿರುವ ಅಮೆರಿಕಕ್ಕೆ ಬೇಹುಗಾರಿಕೆ ವರದಿ ತೀವ್ರ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಸರ್ಕಾರದೊಂದಿಗೆ ರಾಜಕೀಯ ಮೈತ್ರಿ ಜತೆ, ಭಾರತದೊಂದಿಗೆ ದ್ವಿಪಕ್ಷೀಯ ವ್ಯಾಪಾರ ಮತ್ತು ರಕ್ಷಣಾ ವಲಯದಲ್ಲಿನ ಹೂಡಿಕೆ ಒಬಾಮ ಸರ್ಕಾರ ಆಸಕ್ತಿ ತೋರಿಸುತ್ತಿದೆ. ಭಾರತದ ವಿಶ್ವಾಸ ಗಳಿಸಿಕೊಳ್ಳುವ ಪ್ರಯತ್ನವಾಗಿ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ ಶೀಘ್ರ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ.